ಕಾಶ್ಮೀರದ ಸಭೆಗೆ ಬರೋದಿಲ್ಲ ಅಂತಾ ಚೀನಾ ಕಿರಿಕ್!
ನವದೆಹಲಿ: ಅಂದುಕೊಂಡಂತೆ ನಡೆದೇ ಹೋಗಿದೆ, ಜಿ20ಯ ಪ್ರವಾಸಿ ಕಾರ್ಯಕಾರಿ ಗುಂಪಿನ ಸಭೆಯಿಂದ ಚೀನಾ ಎಸ್ಕೇಪ್ ಆಗಿದೆ. ಕಾಶ್ಮೀರದಲ್ಲಿ ನಡೆಯುತ್ತಿರುವ G20 ಜಾಗತಿಕ ಸಭೆಗೆ ಚೀನಾ ಕೈಕೊಟ್ಟಿರುವುದು ಎರಡೂ ದೇಶದ ನಡುವೆ ಮತ್ತೆ ಕಿಚ್ಚು ಹೊತ್ತಿಸಿದೆ. ಅಲ್ಲದೆ ಪಾಕಿಸ್ತಾನಕ್ಕೆ ಪದೇ ಪದೆ ಬಕೇಟ್ ಹಿಡಿಯುವ ಟರ್ಕಿ ಈ ಸಭೆಯಿಂದ ದೂರ ಉಳಿಯೋದು ಬಹುತೇಕ ಪಕ್ಕಾ ಅಂತೆ.
ಈ ಮೂಲಕ ಕಾಶ್ಮೀರ ವಿಚಾರದಲ್ಲಿ ಕಿರಿಕ್ ಮಾಡುವ ಚೀನಾ ಜಿ20 ಸಭೆಯಲ್ಲೂ ಕಿರಿಕಿರಿ ಮುಂದುವರಿಸಿದೆ. ಮೇ 22ರಿಂದ 25ರವರೆಗೆ ಕಾಶ್ಮೀರದಲ್ಲಿ ನಡೆಯುವ ಜಿ20 ಪ್ರವಾಸಿ ಕಾರ್ಯಕಾರಿ ಗುಂಪಿನ ಸಭೆಯಿಂದ ಚೀನಾ ಗೈರಾಗಿ, ತನ್ನ ಹಠ ಮುಂದುವರಿಸಿದೆ. ಇನ್ನೊಂದು ಗಮನಾರ್ಹ ಸಂಗತಿ ಎಂದರೆ ಪಾಕಿಸ್ತಾನದ ಬಾಲ ಹಿಡಿಯುವ ಈ ಟರ್ಕಿ ಕೂಡ, ಕಾಶ್ಮೀರದಲ್ಲಿ ನಡೆಯುವ ಜಾಗತಿಕ ಜಿ20 ಸಭೆಗೆ ಚಕ್ಕರ್ ಹೊಡೆಯೋದು ಬಹುತೇಕ ಗ್ಯಾರಂಟಿ ಎನ್ನಲಾಗಿದೆ. ಹಾಗೇ ಸೌದಿ ಅರೇಬಿಯಾ ಮತ್ತು ಈಜಿಪ್ಟ್ ಕಥೆ ಕೂಡ ಇದೇ ಹಾದಿ ಹಿಡಿಯುತ್ತಿದೆ.

ಚೀನಾಗೆ ಈ ಕೋಪ ಯಾಕೆ?
ಜಿ20 ಮುಖ್ಯಸಭೆಗೂ ಮೊದಲು ಹಲವು ಉಪ ಸಭೆಗಳು ನಡೆಯುತ್ತವೆ. ಈ ಸಭೆಗಳಲ್ಲಿ ಹಲವು ವಿಭಾಗಗಳಲ್ಲಿ ಚರ್ಚೆ ನಡೆಯುತ್ತದೆ, ಹಾಗೇ ಜಿ20 ಸದಸ್ಯ ರಾಷ್ಟ್ರಗಳ ಅಭಿವೃದ್ಧಿಯ ಬಗ್ಗೆ ಚರ್ಚೆ ನಡೆಸಲಾಗುತ್ತದೆ. ಅದೇ ರೀತಿ ಕಾಶ್ಮೀರದಲ್ಲಿ 22ರಿಂದ 25ರ ವರೆಗೆ ಕಾಶ್ಮೀರದಲ್ಲಿ ಜಿ20 ಪ್ರವಾಸಿ ಕಾರ್ಯಕಾರಿ ಗುಂಪಿನ ಸಭೆ ಆಯೋಜಿಸಿದೆ ಕೇಂದ್ರ ಸರ್ಕಾರ. ಆದರೆ ಚೀನಾ ಇಲ್ಲಿಂದಲೂ ಎಸ್ಕೇಪ್ ಆಗಿದೆ. ಇನ್ನು ಚೀನಾ ಜಿ20 ಸಭೆಗಳ ವಿಚಾರದಲ್ಲಿ ಹೀಗೆ ಹಠ ಮಾಡುತ್ತಿರುವುದು ಇದೇ ಮೊದಲಲ್ಲ. ಬನ್ನಿ ಚೀನಾ ಕಿರಿಕ್‌ಗಳ ಪಟ್ಟಿ ನೋಡೋಣ.
ಅರುಣಾಚಲ ಬಳಿಕ ಕಾಶ್ಮೀರ ಕಿರಿಕ್!
ಈ ಹಿಂದೆ ಅರುಣಾಚಲ ಸಭೆಯಿಂದ ದೂರವಾಗಿದ್ದ ಚೀನಾ, 22ರಿಂದ 25ರ ವರೆಗೆ ನಡೆಯಲಿರುವ ಜಿ20 ಪ್ರವಾಸಿ ಕಾರ್ಯಕಾರಿ ಗುಂಪಿನ ಸಭೆಯಿಂದಲೂ ದೂರ ಉಳಿಯಲು ನಿರ್ಧರಿಸಿದೆ. ಈ ಸಭೆ ಕಾಶ್ಮೀರದಲ್ಲಿ ನಡೆಯುತ್ತಿರುವ ಕಾರಣ ಪಾಕಿಸ್ತಾನದ ಜೊತೆಗಿನ ಸಂಬಂಧ ಹಾಳಾಗಬಾರದು ಅಂತಾ ಚೀನಾ ಇಂತಹ ನಿರ್ಧಾರ ಕೈಂಡಿದೆ ಎನ್ನುವ ಮಾತು ಕೇಳಿಬಂದಿದೆ. ಮಾರ್ಚ್‌ನಲ್ಲಿ ಅರುಣಾಚಲ ಪ್ರದೇಶದಲ್ಲಿ ನಡೆದ ಜಿ20 ಸಭೆಯಿಂದಲೂ ಚೀನಾ ಹಿಂದೆ ಸರಿದಿತ್ತು. ಈ ನಡೆ ಎರಡೂ ರಾಷ್ಟ್ರಗಳ ಸಂಬಂಧದಲ್ಲಿ ಮತ್ತಷ್ಟು ಹುಳಿ ಹಿಂಡುತ್ತಿದೆ.

ಜಗತ್ತೇ ಭಾರತದ ಕಡೆ ನೋಡುತ್ತಿದೆ
ಜಮ್ಮು & ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿದ್ದ 370ನೇ ವಿಧಿ 2019ರಲ್ಲಿ ಕೇಂದ್ರ ಸರ್ಕಾರ ರದ್ದುಪಡಿಸಿತು. ಆ ಬಳಿಕ ನಡೆಯುತ್ತಿರುವ ಮೊದಲ ಅಂತರರಾಷ್ಟ್ರೀಯ ಕಾರ್ಯಕ್ರಮ ಇದು. ಪಾಕಿಸ್ತಾನ ಮತ್ತು ಚೀನಾ ವಿರೋಧದ ನಡುವೆ ಜಿ20ಗೆ ಸೇರಿದ ಹಲವು ರಾಷ್ಟ್ರಗಳು ಸಭೆಯಲ್ಲಿ ಭಾಗವಹಿಸುವುದಾಗಿ ಘೋಷಿಸಿವೆ. ಈ ನಡೆಯು ಪಾಕಿಗಳಿಗೆ ಹಿನ್ನಡೆ ಉಂಟುಮಾಡಿದ್ದು, ಚೀನಾ ಮಾತ್ರ ಪಾಕಿಸ್ತಾನಕ್ಕೆ ಇಷ್ಟವಾಗುವ ನಿರ್ಧಾರ ಕೈಗೊಂಡಿದೆ. ಹಾಗೇ ಟರ್ಕಿ, ಸೌದಿ ಅರೇಬಿಯಾ ಮತ್ತು ಈಜಿಪ್ಟ್ ಇದೇ ಹಾದಿಯಲ್ಲಿವೆ.
ಶಕ್ತಿಶಾಲಿ ಭಾರತದ ಜಾಗತಿಕ ಸಭೆ!
ಅಷ್ಟಕ್ಕೂ ಶ್ರೀನಗರದಲ್ಲಿ ಈ ಸಭೆ ಆಯೋಜಿಸಿರುವುದಕ್ಕೆ ಪಾಕಿಸ್ತಾನ ಆಕ್ಷೇಪ ವ್ಯಕ್ತಪಡಿಸಿತ್ತು. ಬೇಜವಾಬ್ದಾರಿಯುತ ನಡೆ ಎಂದು ಭಾರತದ ವಿರುದ್ಧ ಟೀಕಿಸಿತ್ತು ಉಗ್ರರ ಪೋಷಕ ಪಾಕಿಸ್ತಾನ. ಪಾಕಿಸ್ತಾನದ ಇಂತಹ ಮಾತಿಗೆ ಸರಿಯಾದ ಉತ್ತರವೂ ಸಿಕ್ಕಿತ್ತು. ಜಮ್ಮು & ಕಾಶ್ಮೀರ ಭಾರತದ ಅವಿಭಾಜ್ಯ ಅಂಗ. ಶ್ರೀನಗರದಲ್ಲಿ ಸಭೆ ನಡೆಸುವುದು ನಮ್ಮ ಹಕ್ಕು ಎಂದು ಕೇಂದ್ರ ಸರ್ಕಾರ ಪ್ರತಿಪಾದಿಸಿ, ಪಾಕಿಸ್ತಾನದ ಬಾಯಿ ಮುಚ್ಚಿಸಿತ್ತು. ಈಗ ನೋಡಿದರೆ ಚೀನಾ ಕೂಡ ಪಾಕಿಸ್ತಾನಕ್ಕೆ ಬೆಂಬಲ ನೀಡುವ ರೀತಿ ಸಭೆಯಿಂದ ಎಸ್ಕೇಪ್ ಆಗಿದೆ.

ಜಿ20 ಒಕ್ಕೂಟದಲ್ಲಿ ಯಾವೆಲ್ಲಾ ರಾಷ್ಟ್ರಗಳು ಇವೆ?
ಜಗತ್ತಿನ ಅತ್ಯಂತ ಶಕ್ತಿಶಾಲಿ ಒಕ್ಕೂಟಗಳ ಪೈಕಿ ಜಿ20 ಗುಂಪು ಕೂಡ ಒಂದು. ಭಾರತ ಸೇರಿದಂತೆ ಅರ್ಜೆಂಟೀನಾ, ಆಸ್ಟ್ರೇಲಿಯಾ, ಬ್ರೆಜಿಲ್, ಕೆನಡಾ, ಚೀನಾ, ಫ್ರಾನ್ಸ್, ಜರ್ಮನಿ, ಇಂಡೊನೇಷ್ಯಾ, ಇಟಲಿ, ಜಪಾನ್, ಸೌತ್ ಕೊರಿಯಾ, ಮೆಕ್ಸಿಕೊ, ರಷ್ಯಾ, ಸೌದಿ ಅರೇಬಿಯಾ, ದಕ್ಷಿಣ ಆಫ್ರಿಕಾ, ಟರ್ಕಿ, ಇಂಗ್ಲೆಂಡ್, ಅಮೆರಿಕ ಮತ್ತು ಐರೋಪ್ಯ ಒಕ್ಕೂಟ ಜಿ20 ಭಾಗವಾಗಿವೆ. ಹೀಗಾಗಿ ಇಡೀ ಜಗತ್ತಿನ ಗಮನ ಈಗ ಭಾರತದ ಮೇಲೆ ನೆಟ್ಟಿದೆ.
ಒಟ್ನಲ್ಲಿ 3 ದಿನ ನಡೆಯುವ ಕಾರ್ಯಕ್ರಮದಲ್ಲಿ ಕೇಂದ್ರ ಸರ್ಕಾರ, ಕೇಂದ್ರಾಡಳಿತ ಪ್ರದೇಶದಲ್ಲಿ ಪ್ರವಾಸೋದ್ಯಮ ಚಟುವಟಿಕೆ ಅಭಿವೃದ್ಧಿಗೆ ಕೈಗೊಂಡಿರುವ ಕ್ರಮಗಳ ಮೇಲೆ ಬೆಳಕು ಚೆಲ್ಲಬಹುದು ಎನ್ನಲಾಗಿದೆ. ಮತ್ತೊಂದ್ಕಡೆ ನೆರೆ ದೇಶಗಳು ಕಾಶ್ಮೀರದ ಮೇಲೆ ಕಣ್ಣುಹಾಕಿ ಕೂತಿರುವ ಸಂದರ್ಭದಲ್ಲಿ ಇಂತಹ ಸಭೆ ಆಯೋಜನೆ ಮಾಡಿದ್ದು ಕೂಡ ಭಾರತದ ಶಕ್ತಿ ಪ್ರದರ್ಶನಕ್ಕೆ ವೇದಿಕೆಯಾಗಲಿದೆ.












Click it and Unblock the Notifications