ಭಾರತದ ಜನಸಂಖ್ಯೆ ಬಗ್ಗೆ ಚೀನಾ ಹೇಳಿದ್ದೇನು?
ಬೀಜಿಂಗ್: ಜನಸಂಖ್ಯೆ ವಿಚಾರದಲ್ಲಿ ಭಾರತ ನಂಬರ್ 1 ಆಗುತ್ತಿದ್ದಂತೆ ಚೀನಾಗೆ ಇರಿಸು ಮುರಿಸು ಶುರುವಾದಂತೆ ಕಾಣುತ್ತಿದೆ. ಇದೇ ಕಾರಣಕ್ಕೆ ವ್ಯತಿರಿಕ್ತ ಹೇಳಿಕೆ ನೀಡಿರುವ ಚೀನಾದ ವಿದೇಶಾಂಗ ಸಚಿವಾಲಯ, ವಿವಾದ ಸೃಷ್ಟಿ ಆಗುವಂತೆ ಮಾಡಿದೆ. ಈ ಮೂಲಕ ಮೊದಲೇ ಹಳಸಿರುವ ಭಾರತ ಮತ್ತು ಚೀನಾ ಸಂಬಂಧ ಈಗ ಇನ್ನಷ್ಟು ದೂರಾಗುವಂತೆ ಮಾಡಿದೆ.
ನಿನ್ನೆಯಷ್ಟೇ ಭಾರತ ಜನಸಂಖ್ಯೆ ವಿಚಾರದಲ್ಲಿ ನಂಬರ್ 1 ಪಟ್ಟಕ್ಕೆ ಏರಿತ್ತು. ಇತಿಹಾಸದಲ್ಲೇ ಮೊದಲ ಬಾರಿಗೆ ಭಾರತ ಜನಸಂಖ್ಯೆ ವಿಚಾರದಲ್ಲಿ ಚೀನಾ ದೇಶವನ್ನೇ ಹಿಂದಿಕ್ಕಿತ್ತು. ಇಷ್ಟುದಿನ ಜನಸಂಖ್ಯೆ ವಿಚಾರದಲ್ಲಿ ನಂಬರ್ 1 ಆಗಿದ್ದ ಚೀನಾ, ನಂಬರ್ 2 ಸ್ಥಾನಕ್ಕೆ ಕುಸಿದಿತ್ತು. ಈ ಕುರಿತು ಮಾಹಿತಿ ಬಿಡುಗಡೆ ಮಾಡಿದ್ದ ವಿಶ್ವಸಂಸ್ಥೆ ಭಾರತ ಈಗ ಚೀನಾಗಿಂತ 2.9 ಮಿಲಿಯನ್ ಹೆಚ್ಚಿನ ಜನಸಂಖ್ಯೆ ಹೊಂದಿದೆ ಎಂದು ಘೋಷಿಸಿತ್ತು. ಆದರೆ ವಿಶ್ವಸಂಸ್ಥೆ ಭಾರತದ ಜನಸಂಖ್ಯೆ ಬಗ್ಗೆ ಮಹತ್ವದ ಘೋಷಣೆ ಹೊರಡಿಸಿದ ಮರುದಿನವೇ ಚೀನಾ ಇದಕ್ಕೆ ಪ್ರತಿಕ್ರಿಯೆ ನೀಡಿದೆ.

ನಮ್ಮಲ್ಲಿ ಗುಣಮಟ್ಟವಿದೆ ಎಂದ ಚೀನಾ!
ಹೌದು, ಭಾರತ ಜನಸಂಖ್ಯೆ ವಿಚಾರದಲ್ಲಿ ನಂಬರ್ 1 ಆಗುತ್ತಿದ್ದಂತೆ ಚೀನಾ ರಿಯಾಕ್ಷನ್ ಕೊಟ್ಟಿದೆ. ನಮ್ಮ ಬಳಿ ಗುಣಮಟ್ಟವಿದೆ ಎಂದು ಹೇಳುವ ಮೂಲಕ ಚರ್ಚೆ ಹುಟ್ಟುಹಾಕಿದೆ ಚೀನಾ. ನಮ್ಮ ಬಳಿ 900 ಮಿಲಿಯನ್ ಗುಣಮಟ್ಟದ ಕಾರ್ಯಪಡೆ ಇದೆ ಎಂದು ಚೀನಾ ಹೇಳಿದೆ. ಗುಣಮಟ್ಟದ ಕಾರ್ಯಪಡೆ ಅಭಿವೃದ್ಧಿಗೆ ಬಲವಾದ ಉತ್ತೇಜನ ನೀಡುತ್ತದೆ ಎಂದು ಕೂಡ ಚೀನಾ ತಿಳಿಸಿದೆ. ವಿಶ್ವಸಂಸ್ಥೆ ಜನಸಂಖ್ಯೆ ನಿಧಿ ಪ್ರಕಾರ, ಭಾರತ ಚೀನಾವನ್ನು ಹಿಂದಿಕ್ 142.86 ಕೋಟಿ ಜನಸಂಖ್ಯೆ ಹೊಂದಿದೆ. ಚೀನಾ 142.57 ಕೋಟಿ ಜನಸಂಖ್ಯೆ ಹೊಂದಿ 2ನೇ ಸ್ಥಾನದಲ್ಲಿದೆ.
'ಜನಸಂಖ್ಯೆಯಷ್ಟೇ ಪ್ರತಿಭೆ ಸಹ ಮುಖ್ಯ'
ಅಂದಹಾಗೆ ಈ ರೀತಿ ಪ್ರತಿಕ್ರಿಯೆ ನೀಡಿರುವುದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ವಾಂಗ್ ವೆನ್ಬಿನ್. ಜನಸಂಖ್ಯೆಯ ಲಾಭಾಂಶ ಕೇವಲ ಸಂಖ್ಯೆಯಲ್ಲಿ ನಿರ್ಧಾರವಾಗುವುದಿಲ್ಲ ಎಂದಿದ್ದಾರೆ ವಾಂಗ್ ವೆನ್ಬಿನ್. ಜನಸಂಖ್ಯೆ ಗುಣಮಟ್ಟವೂ ಮುಖ್ಯವಾಗಿರುತ್ತದೆ. ಜನಸಂಖ್ಯೆಯಷ್ಟೇ ಪ್ರತಿಭೆ ಸಹ ಬಹುಮುಖ್ಯ. ನಮ್ಮಲ್ಲಿ ಕೆಲಸ ಮಾಡುವ ವಯಸ್ಸಿನವರು 900 ಮಿಲಿಯನ್ ಇದ್ದಾರೆ ಎಂದಿದೆ ಚೀನಾ. ಭಾರತ ಜನಸಂಖ್ಯೆ ವಿಚಾರದಲ್ಲಿ ನಂಬರ್ 1 ಪಟ್ಟ ಅಲಂಕರಿಸಿದ ಮರುದಿನವೇ ಈ ಹೇಳಿಕೆ ಬಿಡುಗಡೆ ಆಗಿರುವುದು ಮಹತ್ವ ಪಡೆದಿದೆ.
ಭಾರತದ ಈಗಿನ ಜನಸಂಖ್ಯೆ ಎಷ್ಟು?
ವಿಶ್ವಸಂಸ್ಥೆ ನೀಡಿರುವ ಲೆಕ್ಕಾಚಾರದ ಪ್ರಕಾರ ಈಗ ಭಾರತದಲ್ಲಿ ಒಟ್ಟು 1,428.6 ಮಿಲಿಯನ್ ಜನಸಂಖ್ಯೆ ಇದೆ. ಆದರೆ ಚೀನಾದಲ್ಲಿ ಜನಸಂಖ್ಯೆ 1,425.7 ಮಿಲಿಯನ್‌ಗೆ ಕುಸಿತ ಕಂಡಿದೆ. ಈ ಮೂಲಕ 2.9 ಮಿಲಿಯನ್ ಅಂದರೆ 29 ಲಕ್ಷ ಜನಸಂಖ್ಯೆ ವ್ಯತ್ಯಾಸದ ಆಧಾರದಲ್ಲಿ ಭಾರತವೇ ಜಗತ್ತಿನ ನಂಬರ್ 1 ದೇಶ ಎಂಬ ಪಟ್ಟ ಗಿಟ್ಟಿಸಿಕೊಂಡಿದೆ. ಈ ಮೂಲಕ ಹೊಸ ಇತಿಹಾಸ ನಿರ್ಮಾಣ ಮಾಡಿದೆ ಭಾರತ. ನೆರೆಯ ಚೀನಾ ಜನಸಂಖ್ಯೆ ಕುಸಿತದ ವಿಚಾರದಲ್ಲಿ ಮತ್ತೆ ಕುಗ್ಗಿ ಹೋಗುವ ಪರಿಸ್ಥಿತಿ ನಿರ್ಮಾಣ ಆಗಿದೆ.

ಚೀನಾ ತಪ್ಪು, ಚೀನಾಗೆ ಕಂಟಕ!
ಚೀನಾದಲ್ಲಿ ಹೀಗೆ ದಿಢೀರ್ ಇಷ್ಟು ಪ್ರಮಾಣದಲ್ಲಿ ಜನಸಂಖ್ಯೆ ಕುಸಿತ ಕಾಣಲು ಕಾರಣ ತಾನೇ ಕೈಗೊಂಡಿದ್ದ ನಿರ್ಧಾರ. ಚೀನಾದಲ್ಲಿ ಒಂದು ಜೋಡಿಗೆ ಒಂದೇ ಮಗು ಎಂಬ ನಿಯಮ ಇತ್ತು. ಹೀಗಾಗಿ ಹಲವು ದಶಕಗಳ ಕಾಲ ಇಲ್ಲಿ ಒಂದು ಕುಟುಂಬಕ್ಕೆ ಒಂದೇ ಮಗು ಎಂಬ ನಿಯಮ ಇತ್ತು. ಈ ಕಾರಣಕ್ಕೆ ಭಾರಿ ಪ್ರಮಾಣದಲ್ಲಿ ಜನಸಂಖ್ಯೆ ಕುಸಿತ ದಾಖಲಿಸಿತ್ತು ಚೀನಾ. ಈ ಸತ್ಯ ಅರ್ಥವಾಗಿದ್ದೇ ತಡ ಎಚ್ಚೆತ್ತ ಚೀನಾ, ಕೆಲವು ವರ್ಷಗಳ ಹಿಂದೆ ತನ್ನ 'ಒಂದು ಮಗು' ನೀತಿ ಬದಲಿಸಿ ಜನಸಂಖ್ಯೆ ಹೆಚ್ಚಿಸಿಕೊಳ್ಳಲು ಮುಂದಾಗಿತ್ತು.
ಹಿಂದೆಯೂ ಇದೇ ಸ್ಥಿತಿ ಬಂದಿತ್ತು!
ಇನ್ನೊಂದು ಕಡೆ ಚೀನಿಯರ ನಾಡಲ್ಲಿ ಜನಸಂಖ್ಯೆ ಕುಸಿತಕ್ಕೆ ಮುಖ್ಯ ಅಂಶ ವೃದ್ಧರ ಸಂಖ್ಯೆ ಹೆಚ್ಚಾಗಿರುವುದು. ಜನನ ದರದಲ್ಲಿ ಭಾರಿ ಇಳಿಕೆ ಕಂಡಿರುವುದು ಕೂಡ ಚೀನಾಗೆ ಭಯ ಹುಟ್ಟಿಸಿದೆ. ಸಾಮೂಹಿಕ ಕೃಷಿ ಹಾಗೂ ಕೈಗಾರಿಕೀಕರಣಕ್ಕಾಗಿ ಮಾವೋ ಅಭಿಯಾನವು ಪ್ರಾರಂಭವಾದಾಗ 1950ರ ದಶಕದ ಉತ್ತರಾರ್ಧದಲ್ಲಿ ಗ್ರೇಟ್ ಲೀಪ್ ಫಾರ್ವರ್ಡ್ ಸಮಯದಲ್ಲಿ ಚೀನಾ ಜನಸಂಖ್ಯೆ ಕುಸಿತ ದಾಖಲಿಸಿತ್ತು ಎನ್ನಲಾಗಿದೆ. ಅದನ್ನ ಬಿಟ್ಟರೆ ಈಗ ಮತ್ತೆ ಅದೇ ಪರಿಸ್ಥಿತಿ ಎದುರಾಗಿದ್ದು, ಚೀನಾ ಭವಿಷ್ಯ ಡೋಲಾಯಮಾನ ಪರಿಸ್ಥಿತಿ ತಲುಪಿದೆ.
ಚೀನಾ ಆರ್ಥಿಕತೆಗೆ ಪೆಟ್ಟು?
ಯಾವುದೇ ದೇಶದ ಆರ್ಥಿಕತೆ ನಿರ್ಧರಿಸುವುದು ಆ ದೇಶದ ನೈಸರ್ಗಿಕ ಸಂಪತ್ತು ಮತ್ತು ಶ್ರಮಿಕ ವರ್ಗದ ಆಧಾರದ ಮೇಲೆ. ಜನಸಂಖ್ಯೆ ಅಗತ್ಯಕ್ಕೆ ತಕ್ಕಷ್ಟು ಇರಬೇಕೆ, ಹೆಚ್ಚು-ಕಮ್ಮಿ ಆದರೆ ಆರ್ಥಿಕತೆಗೆ ಅದರ ನೇರ ಪೆಟ್ಟು ಪಕ್ಕಾ. ಈ ಹಿಂದೆ ಚೀನಾದಲ್ಲಿ ಭಾರಿ ಜನಸಂಖ್ಯೆ ಇತ್ತು. ಆದರೆ ದಿಢೀರ್ ಕುಸಿತ ಕಾಣುತ್ತಿರುವುದು ಮುಂಬರುವ ದಿನಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಕಾರ್ಮಿಕರು ಹಾಗೂ ಬಳಕೆದಾರರ ಕೊರತೆ ಎದುರಾಗುವ ಮುನ್ಸೂಚನೆ ನೀಡುತ್ತಿದೆ. 2ನೇ ಅತಿದೊಡ್ಡ ಆರ್ಥಿಕತೆ ಹೊಂದಿರುವ ರಾಷ್ಟ್ರಕ್ಕೆ ಇದು ತಲೆನೋವು ತರಿಸಿದೆ.












Click it and Unblock the Notifications