ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆರ್ಥಿಕ ಕಾರಿಡಾರ್: ಭಾರತಕ್ಕೆ ಕೀಟಲೆ ಕೊಡಲು ಹೋಗಿ ಮುಗ್ಗರಿಸಿದ ಚೀನಾ

|
Google Oneindia Kannada News

ಗಡಿಯಲ್ಲಿನ ರಕ್ಷಣೆ ಭಾರತಕ್ಕೆ ಎಂದಿಗೂ ಬಹುದೊಡ್ಡ ಸವಾಲು. ವೈರಿಗಳು ಭಾರತದೊಳಗೆ ಪ್ರವೇಶಿಸಲು ಸುತ್ತಲಿನ ಎಲ್ಲ ದಿಕ್ಕುಗಳಿಂದಲೂ ದಾರಿಗಳನ್ನು ಕಂಡುಕೊಳ್ಳುತ್ತಿದ್ದಾರೆ. ಗಡಿ ಭಾಗದ ಸಂಕೀರ್ಣ ಭೌಗೋಳಿಕ ಪ್ರದೇಶದಲ್ಲಿ ಕಾವಲು ಕಾಯುವುದು ಸುಲಭದ ಮಾತಲ್ಲ. ಒಂದೆಡೆ ಕಣಿವೆಗಳು, ಇನ್ನೊಂದೆಡೆ ಹಿಮ, ಮತ್ತೊಂದೆಡೆ ಉಗ್ರರಿಗೆ ಬೆಂಬಲ ನೀಡುವ ದೇಶದೊಳಗಿನ ಘಾತಕ ಶಕ್ತಿಗಳು ಭದ್ರತೆಗೆ ಅಪಾಯಕಾರಿಯಾಗಿವೆ.

ಇಷ್ಟೆಲ್ಲ ಸಂಕಷ್ಟಗಳ ನಡುವೆಯೇ ಭಾರತಕ್ಕೆ ಮತ್ತೊಂದು ಸವಾಲು ಎದುರಾಗಿದೆ. ಈ ಅಪಾಯವನ್ನು ತಂದೊಡ್ಡುತ್ತಿರುವುದು ಪಾಕಿಸ್ತಾನವಲ್ಲ, ಚೀನಾ. ತನ್ನ ವ್ಯಾಪಾರ ವಹಿವಾಟಿನ ವೃದ್ಧಿಯ ನೆಪದಲ್ಲಿ ಚೀನಾ ನಿರ್ಮಿಸುತ್ತಿರುವ ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ ಭಾರತದ ರಾಷ್ಟ್ರೀಯ ಭದ್ರತೆಗೆ ಇನ್ನಷ್ಟು ಅಪಾಯಕಾರಿಯಾಗಿ ಪರಿಣಮಿಸುವ ಸಾಧ್ಯತೆ ಇದೆ.

ಹಲವು ಆಯಾಮಗಳಲ್ಲಿ ಈ ಕಾರಿಡಾರ್ ಭಾರತಕ್ಕೆ ತೊಂದರೆ ನೀಡಲಿದೆ. ಚೀನಾ ತನ್ನ ಸೇನಾ ಸಾಮರ್ಥ್ಯವನ್ನು ಪೂರ್ವ, ಉತ್ತರ ಮತ್ತು ಪಶ್ಚಿಮ ಭಾಗಗಳಲ್ಲಿಯೂ ಏಕಕಾಲಕ್ಕೆ ವೃದ್ಧಿಸಿಕೊಳ್ಳಲು ಈ ಕಾರಿಡಾರ್ ನೆರವಾದರೆ, ಭಾರತದೊಂದಿಗೆ ಇರಾನ್ ಸಂಪರ್ಕವನ್ನು ಸಂಪೂರ್ಣವಾಗಿ ತುಂಡರಿಸಲು ಪಾಕಿಸ್ತಾನಕ್ಕೆ ಸಹಾಯಮಾಡುತ್ತದೆ.

ಅರಬ್ಬಿ ಸಮುದ್ರ ಮತ್ತು ಕೇಂದ್ರ ಏಷ್ಯಾವು ಭಾರತಕ್ಕೆ ತೈಲ ಮತ್ತು ಅನಿಲ ಪೂರೈಕೆಯಾಗುವ ಪ್ರಮುಖ ಮಾರ್ಗಗಳು. ಇಲ್ಲಿ ಚೀನಾದ ನಿಯಂತ್ರಣ ಹೆಚ್ಚುತ್ತಿದೆ. ಇದು ಚೀನಾ ಆಡುತ್ತಿರುವ ಬಹುದೊಡ್ಡ ಆಟಗಳಲ್ಲಿ ಒಂದು. ಪಾಕಿಸ್ತಾನದ ವಿಚಾರದಲ್ಲಿ ಇದು ವಿನಾಶಕಾರಿಯಷ್ಟೇ ಅಲ್ಲ.

ಧೋಕ್ಲಾಂನಿಂದ ಪಾಠ ಕಲಿತುಕೊಳ್ಳಿ, ಭಾರತಕ್ಕೆ ಚೀನಾ ತೀಕ್ಷ್ಣ ಪ್ರತಿಕ್ರಿಯೆ ಧೋಕ್ಲಾಂನಿಂದ ಪಾಠ ಕಲಿತುಕೊಳ್ಳಿ, ಭಾರತಕ್ಕೆ ಚೀನಾ ತೀಕ್ಷ್ಣ ಪ್ರತಿಕ್ರಿಯೆ

ಆದರೆ, ಚೀನಾ ಆರಂಭದ ಹಂತದಲ್ಲಿ ಅಂದುಕೊಂಡಂತೆ ಈ ಯೋಜನೆ ಸಾಗುತ್ತಿಲ್ಲ. ಸಾಲದ ಸುಳಿಯಲ್ಲಿರುವ ಪಾಕಿಸ್ತಾನ ಆರ್ಥಿಕವಾಗಿ ತತ್ತರಿಸಿದೆ. ಯೋಜನೆಗೆ ವಿದ್ಯುತ್ ಬಿಲ್ ಪಾವತಿಸಲೂ ಹಣವಿಲ್ಲ. ಇತ್ತ ಭಾರತಕ್ಕೆ ಕೀಟಲೆ ಕೊಟ್ಟು ತನ್ನ ಹಟ ಸಾಧಿಸಿಕೊಳ್ಳುವ ಉತ್ಸಾಹದಲ್ಲಿದ್ದ ಚೀನಾ ಗೊಂದಲದಲ್ಲಿ ಸಿಲುಕಿದೆ. ಇದರಲ್ಲಿ ಭಾರತದ ಚಾಣಾಕ್ಷ ರಾಜತಾಂತ್ರಿಕ ನೀತಿಗಳೂ ದೊಡ್ಡಮಟ್ಟದ ಕೆಲಸ ಮಾಡಿವೆ.

ಭಾರತದ ಹೊಸ ಯೋಜನೆ

ಭಾರತದ ಹೊಸ ಯೋಜನೆ

2016ರ ಮೇ ತಿಂಗಳಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಇರಾನ್‌ಗೆ ಭೇಟಿ ನೀಡಿದ್ದರು. ಚೀನಾದ ಗ್ವಾಡರ್ ಫ್ಲ್ಯಾಗ್‌ಶಿಪ್ ಯೋಜನೆಗೆ ನೇರ ಪ್ರತಿಸ್ಪರ್ಧಿ ಎಂಬಂತೆ ಆಗ್ನೇಯ ಇರಾನ್‌ನ ಸಿಸ್ತಾನ್ ಮತ್ತು ಬಲೂಚಿಸ್ತಾನದ ಪ್ರಾಂತ್ಯಗಳಲ್ಲಿ ಚಾಬಹರ್ ಬಂದರು ನಿರ್ಮಾಣಕ್ಕೆ ಭಾರತ 500 ಮಿಲಿಯನ್ ಡಾಲರ್ ಹೂಡಿಕೆ ಮಾಡಲಿದೆ. ಈ ಬಂದರು ಪಾಕಿಸ್ತಾನದ ಹೊರಭಾಗದಿಂದ ಅಫ್ಘಾನಿಸ್ತಾನ ಮತ್ತು ಕೇಂದ್ರ ಏಷ್ಯಾದ ಮೂಲಕ ಭಾರತಕ್ಕೆ ಸಂಪರ್ಕ ಒದಗಿಸಲು ಅನುವು ಮಾಡಕೊಡಲಿದೆ.

ಭಾರತ, ಇರಾನ್ ಮತ್ತು ಅಫ್ಘಾನಿಸ್ತಾನಗಳು ಚಾಬಹರ್ ನಿಂದ ಭಾರತದ ಸರಕುಗಳನ್ನು ಕೇಂದ್ರ ಏಷ್ಯಾ ಹಾಗೂ ಅಫ್ಘಾನಿಸ್ತಾನದ ಮೂಲಕ ರವಾನಿಸಲು ಆದ್ಯತೆಯ ಅವಕಾಶ ಮತ್ತು ಸುಂಕ ರಿಯಾಯಿತಿಗಳನ್ನು ನೀಡುವ ಸಂಬಂಧ ಒಪ್ಪಂದ ಮಾಡಿಕೊಂಡಿವೆ. 2017ರ ಅಕ್ಟೋಬರ್‌ನಲ್ಲಿ ಚಾಬಹರ್ ಬಂದರಿನಿಂದ ಮೊದಲ ಓಡಾಟವಾಗಿ ಗೋಧಿಯನ್ನು ರವಾನಿಸಲಾಗಿತ್ತು.

ಗಡಿ ವಿವಾದ ಬಳಿಕ ಸೆ.3ರಂದು ಚೀನಾಕ್ಕೆ ಮೋದಿ ಭೇಟಿ ಗಡಿ ವಿವಾದ ಬಳಿಕ ಸೆ.3ರಂದು ಚೀನಾಕ್ಕೆ ಮೋದಿ ಭೇಟಿ

ದೋಖ್ಲಾಮ್ ವಿವಾದ ಕೆರಳಿಸಿದ ಚೀನಾ

ದೋಖ್ಲಾಮ್ ವಿವಾದ ಕೆರಳಿಸಿದ ಚೀನಾ

ಚೀನಾ ಮತ್ತು ಭೂತಾನ್ ನಡುವಿನ ವಿವಾದಿತ ಭೂಪ್ರದೇಶದ ಮೂಲಕ ಚೀನಾ ಪಡೆಗಳು 2017ರ ಜೂನ್‌ನಲ್ಲಿ ರಸ್ತೆ ವಿಸ್ತರಣೆ ಮಾಡುವುದು ಕಂಡುಬಂದಿತ್ತು. ಚೀನಾ ತನ್ನ ಯೋಜನೆಯ ದಿಕ್ಕನ್ನು ಬದಲಿಸಿ ಗಡಿಯನ್ನೂ ದಾಟಿ ಕೆಲಸ ನಡೆಸಿತ್ತು. ಭಾರತದ ಮುಖ್ಯಭೂಮಿಯನ್ನು ತನ್ನ ಈಶಾನ್ಯ ರಾಜ್ಯಗಳಿಂದ ಬೇರ್ಪಡಿಸುವ ಚಿಕ್ಕದಾದ ಭೂಪ್ರದೇಶ ದೋಖ್ಲಾಮ್‌ನಲ್ಲಿ ಚೀನಾ ಭಾರತದ ಸಿಲಿಗುರಿ ಕಾರಿಡಾರ್‌ಗೆ ಅಡ್ಡಿಪಡಿಸಿತ್ತು. ಇದರಿಂದ ಭಾರತವನ್ನು ತನ್ನ ಈಶಾನ್ಯ ರಾಜ್ಯಗಳಿಂದ ಪ್ರತ್ಯೇಕಿಸುವ ಪ್ರಯತ್ನ ನಡೆದಿತ್ತು. ಇದು ಯುದ್ಧಕ್ಕೂ ಆಸ್ಪದ ಕೊಡುವಂತಹ ವಿನಾಶಕಾರಿ ನಡೆ.

ಆಗಸ್ಟ್ 28ರಂದು ದೋಖ್ಲಾಮ್ ವಿವಾದವು ತಾತ್ಕಾಲಿಕ ಅಂತ್ಯಕಂಡಿತು. ಚೀನಾ ರಸ್ತೆ ನಿರ್ಮಾಣ ಕಾರ್ಯವನ್ನು ಸ್ಥಗಿತಗೊಳಿಸಿದೆ. ಭಾರತದ ಅರ್ಧದಷ್ಟು ಭಾಗವನ್ನು ಚೀನಾ ಪ್ರವೇಶಿಸಿತ್ತು. ಚೀನಾ ಇಷ್ಟಕ್ಕೆ ಸುಮ್ಮನಾಗದು. ಭವಿಷ್ಯದಲ್ಲಿ ಮುಂದೊಂದು ದಿನ ಈ ಭಾಗದಲ್ಲಿ ತನ್ನ ಪರಮಾಧಿಕಾರವನ್ನು ಪ್ರದರ್ಶಿಸಿದರೂ ಅಚ್ಚರಿಯಿಲ್ಲ. ಇಲ್ಲಿ ವ್ಯಾವಹಾರಿಕ ಬಿಕ್ಕಟ್ಟು ಮಾತ್ರವಲ್ಲ, ಆಕಸ್ಮಿಕ ಸಂಘರ್ಷಗಳೂ ಉದ್ಭವಿಸಬಹುದು. ಎರಡೂ ದೇಶಗಳ ಸೇನಾ ಪಡೆಗಳು ಈ ಭಾಗದಲ್ಲಿ ಇನ್ನೂ ಬೀಡುಬಿಟ್ಟಿವೆ. ಆದರೆ, ಕೆಲವು ನೂರು ಮೀಟರ್‌ಗಳಷ್ಟು ದೂರದಲ್ಲಿವೆ.

ಭಾರತ- ಚೀನಾ ವಿರಸದ ವೇಳೆಯಲ್ಲಿ 'ಶಕುನಿ' ವೇಷ ಹಾಕಿದ ಪಾಕ್ ಭಾರತ- ಚೀನಾ ವಿರಸದ ವೇಳೆಯಲ್ಲಿ 'ಶಕುನಿ' ವೇಷ ಹಾಕಿದ ಪಾಕ್

ಚೀನಾಕ್ಕೆ ಖಡಕ್ ಸಂದೇಶ ರವಾನಿಸಿದ್ದ ಭಾರತ

ಚೀನಾಕ್ಕೆ ಖಡಕ್ ಸಂದೇಶ ರವಾನಿಸಿದ್ದ ಭಾರತ

ಚೀನಾದ ಬೆಲ್ಟ್ ಆಂಡ್ ರೋಡ್ ಇನಿಷಿಯೇಟಿವ್‌ಗೆ (ಬಿಆರ್‌ಐ) ಭಾರತದ ವಿರೋಧ ಈ ದೇಶಗಳ ನಡುವಿನ ಸಂಬಂಧವನ್ನು ವಿಷಮಗೊಳಿಸಿದೆ. ದೋಖ್ಲಾಮ್ ವಿವಾದ ಹುಟ್ಟಿಕೊಳ್ಳುವುದಕ್ಕೂ ಒಂದು ತಿಂಗಳು ಮುನ್ನ ಚೀನಾ, ಬಿಆರ್‌ಐಗೆ ಮಾರ್ಗದರ್ಶನ ನೀಡುವ ಸಂಬಂಧ ನಡೆಸಿದ ಮೊದಲ ಸಮ್ಮೇಳನದಲ್ಲಿ ಸುಮಾರು 30 ದೇಶಗಳ ನಾಯಕರು ಭಾಗವಹಿಸಿದ್ದರು. ಆದರೆ, ಸಮ್ಮೇಳನದ ಒಂದು ದಿನ ಮುನ್ನವಷ್ಟೇ ಇದರಲ್ಲಿ ತಾನು ಭಾಗವಹಿಸುವುದಿಲ್ಲ ಎಂದು ಭಾರತ ಪ್ರಕಟಿಸಿತ್ತು. ಈ ಬಿಆರ್‌ಐ ಯೋಜನೆಯಲ್ಲಿ, ಚೀನಾ ಮತ್ತು ಪಾಕಿಸ್ತಾನವನ್ನು ಸಂಪರ್ಕಿಸುವ ಆರ್ಥಿಕ ಕಾರಿಡಾರ್ ಪಾಕ್ ಆಕ್ರಮಿತ ಕಾಶ್ಮೀರದ ಗಿಲ್ಗಿಟ್-ಬಾಲ್ಟಿಸ್ತಾನ್‌ ವಿವಾದಿತ ಪ್ರದೇಶಗಳನ್ನು ಹಾದುಹೋಗಲಿದೆ. ಹೀಗಾಗಿ ಈ ಯೋಜನೆಯು ತನ್ನ ಸಾರ್ವಭೌಮತೆ ಮತ್ತು ಪ್ರಾದೇಶಿಕ ಸಮಗ್ರತೆಯ ಕುರಿತಾದ ಕಳವಳವನ್ನು ನಿರ್ಲಕ್ಷಿಸಿದೆ ಎನ್ನುವುದು ಭಾರತದ ಆರೋಪ.

ಬಿಆರ್‌ಐನಲ್ಲಿ ಯಾವುದೇ ದೇಶ ಭಾಗವಹಿಸಬೇಕು ಎಂದು ಚೀನಾ ಒತ್ತಾಯಿಸುವುದಿಲ್ಲ. ಕಾರಿಡಾರ್ ಕಾರಣಕ್ಕೆ ಕಾಶ್ಮೀರ ವಿವಾದದ ಕುರಿತಾದ ಚೀನಾದ ನಿಲುವಿನಲ್ಲಿ ಬದಲಾವಣೆ ಇಲ್ಲವೆಂದು ನಿರಂತರವಾಗಿ ಪ್ರತಿಪಾದಿಸಿದ ಬಳಿಕವೂ ಭಾರತವು ಬಿಆರ್‌ಐಗೆ ವಿರೋಧ ಮುಂದುವರಿಸಿರುವುದು ಖೇದನೀಯ, ಆದರೆ ಸಮಸ್ಯೆಯೇನಲ್ಲ ಎಂದು ಚೀನಾ ಪ್ರತಿಕ್ರಿಯೆ ನೀಡಿತ್ತು.

ಚೀನಾದ ಯೋಜನೆ ತಲೆಕೆಳಗೆ

ಈ ಪ್ರದೇಶದ ಚೀನಾಕ್ಕೆ ಪ್ರಮುಖ ಕಾರಿಡಾರ್ ಆಗಿ ಪರಿವರ್ತನೆಯಾದರೆ ಪ್ರಾದೇಶಿಕ ಸಂಘರ್ಷವನ್ನು ಪಾಕಿಸ್ತಾನದೊಂದಿಗಿನ ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಲು ಭಾರತಕ್ಕೆ ಸಾಧ್ಯವಾಗದು. ಅದಕ್ಕೆ ಚೀನಾ ಕೂಡ ಸೇರ್ಪಡೆಯಾಗಬೇಕಾಗುತ್ತದೆ.

ರಷ್ಯಾವು ಈ ಯೋಜನೆಗೆ ಕೈಜೋಡಿಸಿದ ಬಳಿಕ ದಕ್ಷಿಣದಲ್ಲಿನ ದೇಶಗಳು ಮತ್ತು ದಕ್ಷಿಣ ಏಷ್ಯಾದ ದೇಶಗಳು ಇದಕ್ಕೆ ಬದ್ಧರಾಗುತ್ತವೆ. ಭಾರತಕ್ಕೂ ಅನ್ಯಮಾರ್ಗವಿಲ್ಲದೆ ಈ ಯೋಜನೆಗೆ ಒಪ್ಪಿಗೆ ನೀಡುತ್ತದೆ. ಆಗ ಚೀನಾ ಇವೆಲ್ಲವನ್ನೂ ನಿರ್ದೇಶಿಸುವ ಸ್ಥಾನದಲ್ಲಿ ನಿಲ್ಲಬಹುದು ಎನ್ನುವುದು ಚೀನಾದ ಲೆಕ್ಕಾಚಾರವಾಗಿತ್ತು. ಆದರೆ, ಅದು ತಲೆಕೆಳಗಾಗಿದೆ.

ಇತ್ತ ಭಾರತ ಇತರೆ ದೇಶಗಳ ಮೇಲೆ ಈ ವಿಚಾರವಾಗಿ ಪ್ರಭಾವ ಬೀರುವಲ್ಲಿ ಯಶಸ್ವಿಯಾಗಿದೆ. ತನ್ನ ನಿಲುವನ್ನು ಆ ದೇಶಗಳಿಗೆ ಅರ್ಥಮಾಡಿಸಿದೆ. ಇಷ್ಟಾದರೂ ಚೀನಾ ಭಾರತದ ಹಿತಾಸಕ್ತಿ ಮತ್ತು ನಿಲುವನ್ನು ಕಡೆಗಣಿಸಿ ಮುಂದುವರಿಯುತ್ತಿದೆ.

ಚೀನಾಕ್ಕೆ ಎದುರಾಗಿದೆ ಸವಾಲು

ಚೀನಾಕ್ಕೆ ಎದುರಾಗಿದೆ ಸವಾಲು

ಸ್ಪರ್ಧಾತ್ಮಕ ಜಾಗತಿಕ ಮಾರುಕಟ್ಟೆಯಲ್ಲಿ ಅಮೆರಿಕ ಮತ್ತು ಯುರೋಪಿನ ಪ್ರತಿಸ್ಪರ್ಧಿ ವ್ಯಾಪಾರವನ್ನು ಎದುರಿಸಲು ಚೀನಾವು ಭಾರತದ ಗ್ರಾಹಕರಿಗೆ ಅಗ್ಗದ ಬೆಲೆಯಲ್ಲಿ ಸರಕುಗಳ ಆಫರ್ ನೀಡುತ್ತಿದೆ. ಅತ್ತ ಪಾಕಿಸ್ತಾನವು ಸ್ಥಿರತೆ ಸಾಧಿಸಲು ಭಾರತದ ಸಹಕಾರ ಕ್ರಮಗಳಿಲ್ಲದೆ ಸಾಧ್ಯವಾಗದು.

ಭಾರತ ಮತ್ತು ಪಾಕಿಸ್ತಾನಗಳ ನಡುವೆ ಈ ವೈಷಮ್ಯ ಇದೇ ರೀತಿ ಇದ್ದರೆ ಚೀನಾಕ್ಕೆ ಸಮಸ್ಯೆ ಹೆಚ್ಚು. ಭಾರತವಿಲ್ಲದೆ, ಅಮೆರಿಕ ಕೂಡ ಏಷ್ಯಾದಲ್ಲಿ ಮೈತ್ರಿಗಳನ್ನು ಮುಂದುವರಿಸಲಾರದು. ನೇಪಾಳ, ಬಾಂಗ್ಲಾದೇಶ, ಶ್ರೀಲಂಕಾ ಮತ್ತು ಮಾಲ್ಡೀವ್ಸ್‌ನಂತಹ ನೆರೆಯ ದೇಶಗಳು ಭಾರತದೊಂದಿಗೆ ಸಾಂಸ್ಕೃತಿಕ, ಸಾಂಪ್ರದಾಯಿಕ ಮತ್ತು ಐತಿಹಾಸಿಕ ಬಾಂಧವ್ಯ ಹೊಂದಿವೆ. ಅಂದರೆ, ಈ ಭಾಗದಲ್ಲಿ ಚೀನಾ ಏಕಾಂಗಿಯಾಗುತ್ತದೆ.

ಈಗ ಬಿಆರ್‌ಐ ಯೋಜನೆ ವಿಚಾರದಲ್ಲಿ ಚೀನಾಕ್ಕೆ ಸೂಕ್ತ ಬೆಂಬಲವಿಲ್ಲ. 2018ರ ಏಪ್ರಿಲ್‌ನಲ್ಲಿ ಮೋದಿ ಮತ್ತು ಚೀನಾ ಅಧ್ಯಕ್ಷ ಜಿನ್‌ಪಿಂಗ್ ಎರಡೂ ದೇಶಗಳ ಬಾಂಧವ್ಯ ಸರಿಪಡಿಸುವ ನಿಟ್ಟಿನಲ್ಲಿ ಹಾಗೂ ಅಫ್ಘಾನಿಸ್ತಾನದಲ್ಲಿ ಜಂಟಿ ಅಭಿವೃದ್ಧಿ ಚಟುವಟಿಕೆ ನಡೆಸಲು ಚರ್ಚಿಸಿದ್ದರು. ಇಲ್ಲಿಯೂ ಬಿಆರ್‌ಐ ಬಗ್ಗೆ ಯಾವುದೇ ಚರ್ಚೆ ನಡೆದಿರಲಿಲ್ಲ.

ಬಿಲ್ ಕಟ್ಟದ ಪಾಕಿಸ್ತಾನ

ಪಾಕಿಸ್ತಾನ ಈ ಯೋಜನೆ ಬಗ್ಗೆ ಹೊರಗೆ ಸಂಭ್ರಮಿಸುತ್ತಿದ್ದರೂ, ಅದಕ್ಕೆ ನೆರವು ನೀಡುವ ಸ್ಥಿತಿಯಲ್ಲಿ ಇಲ್ಲ. ಚೀನಾದ ನೂತನ ಪವರ್ ಪ್ರಾಜೆಕ್ಟ್‌ಗಳಿಗೆ ವಿದ್ಯುತ್ ಪಡೆದುಕೊಂಡ ಪಾಕಿಸ್ತಾನಿಯರು ವಿದ್ಯುತ್ ಬಿಲ್ ಪಾವತಿ ಮಾಡಿಲ್ಲ. ಪಾಕ್ ಆಡಳಿತ ಕೂಡ ಬಿಲ್ ಪಾವತಿ ಮಾಡಿಲ್ಲ. ಇದರಿಂದ ಬಿಆರ್‌ಐಗೆ ಹಣಕಾಸಿನ ಕೊರತೆ ಎದುರಾಗುತ್ತಿದೆ. ಕಟ್ಟಡ, ಸೇತುವೆ ಮತ್ತು ರಸ್ತೆಗಳ ನಿರ್ಮಾಣಕ್ಕೆ ಅಗತ್ಯವಾದ ಕಚ್ಚಾ ಸಾಮಗ್ರಿಗಳನ್ನು ಪಾಕಿಸ್ತಾನವೇ ವಿದೇಶಗಳಿಂದ ತರಿಸಿಕೊಳ್ಳಬೇಕಿದೆ. ಅದೇ ರೀತಿ ಭಾರಿ ಯಂತ್ರಗಳನ್ನೂ ತರಿಸಬೇಕಿದೆ. 2021ರ ವೇಳೆಗೆ 27 ಬಿಲಿಯನ್ ಡಾಲರ್ ವೆಚ್ಚದ ಆಮದು ಮಾಡಿಕೊಳ್ಳಬೇಕಿದೆ.

ಚೀನಾದ ಯಂತ್ರಗಳಿಗೆ ಚೀನಾದಿಂದಲೇ ಸಾಲ ಪಡೆದು ಹಣ ಪಾವತಿಸಬಹುದು. ಆದರೆ, ಈ ಸಾಲಗಳು ಬಾಕಿ ಇರುವ ಆರ್ಥಿಕ ಪಾವತಿಗಳೊಂದಿಗೆ ಸರಿದೂಗಿಸಲಾಗುತ್ತದೆ. ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) 1988ರಿಂದ ಹನ್ನೆರಡು ಬಾರಿ ಪಾಕಿಸ್ತಾನಕ್ಕೆ ಬೇಲ್ ಔಟ್ ನೀಡಿದೆ. ಈಗಲೂ ಪಾಕಿಸ್ತಾನಕ್ಕೆ ಬೇಲ್ ಔಟ್ ಅನಿವಾರ್ಯವಾಗಿದೆ. ಆದರೆ, ಆರ್ಥಿಕ ಕಾರಿಡಾರ್ (ಸಿಪೆಕ್) ಕಾರ್ಯಾಚರಣೆಗೆ ಅನೇಕ ಸಮಸ್ಯೆಗಳನ್ನೂ ಅದು ಸೃಷ್ಟಿಸಲಿದೆ. ಇದರಿಂದ ಪ್ರಸ್ತುತ ಚೀನಾದಿಂದ ಪಡೆದ ಸಾಲ ಮತ್ತು ಯೋಜನೆಗಳಿಗಾಗಿ ಆರ್ಥಿಕ ನೆರವು ಪಡೆದುಕೊಳ್ಳುವ ಮತ್ತು ವ್ಯಯ ಮಾಡುವ ಹಾಗೂ ಪಾರದರ್ಶಕತೆಯನ್ನು ಕಾಪಾಡುವ ಕಠಿಣ ನಿಯಂತ್ರಣಗಳಿಗೆ ಒಳಪಡಬೇಕಾಗುತ್ತದೆ.

ಬಿಆರ್‌ಐ ಮತ್ತು ಸಾಲ ಬಿಕ್ಕಟ್ಟಿನ ಬಗ್ಗೆ ಇಸ್ಲಾಮಾಬಾದ್‌ನಲ್ಲಿನ ಚೀನಾ ರಾಯಭಾರ ಕಚೇರಿ 2018ರ ಜುಲೈನಲ್ಲಿ ಹೇಳಿಕೆ ನೀಡಿತ್ತು. ಶೇ 42 ರಷ್ಟು ಪಾಕಿಸ್ತಾನದ ವಿದೇಶಿ ಸಾಲಗಳು ಬಹುರಾಷ್ಟ್ರೀಯ ಹಣಕಾಸು ಸಂಸ್ಥೆಗಳಿಂದ ಪಡೆದುಕೊಂಡಿರುವಂಥಹದ್ದು. ಒಟ್ಟಾರೆ ಸಾಲದಲ್ಲಿ ಶೇ 10ರಷ್ಟನ್ನು ಮಾತ್ರ ಚೀನಾ ಹೊಂದಿದೆ. ಸಾಲದ ಸುಳಿಯಿದ್ದರೂ ಅದರ ಆರಂಭಕ ಚೀನಾವಲ್ಲ ಎಂದು ತಿಳಿಸಿತ್ತು.

ಪಾಕ್‌ಗೆ ಸಾಲ ಸಿಗುವುದು ಕಷ್ಟ

ಪಾಕಿಸ್ತಾನಕ್ಕೆ ಸಾಲ ನೀಡುವ ವಿಚಾರವಾಗಿ ಐಎಂಎಫ್‌ ಚೀನಾದ ನೀತಿ ನಿರೂಪಕರನ್ನು ಎಚ್ಚರಿಸಿದೆ. ತೀವ್ರ ಸಾಲದ ಸುಳಿಯಲ್ಲಿರುವ ದೇಶಗಳಲ್ಲಿ ಅನಗತ್ಯವಾದ ಮತ್ತು ಅಸ್ಥಿರವಾದ ಯೋಜನೆಗಳಿಗೆ ಹಣ ಹೂಡುವಾಗ ಎಚ್ಚರಿಕೆ ವಹಿಸಿ ಎಂದು ಕಳೆದ ವರ್ಷ ಐಎಂಎಫ್ ವ್ಯವಸ್ಥಾಪಕ ನಿರ್ದೇಶಕಿ ಕ್ರಿಸ್ಟೀನ್ ಲಗಾರ್ಡೆ ಹೇಳಿದ್ದರು.

ಬಿಆರ್‌ಐಅನ್ನು ಚುರಕುಗೊಳಿಸುವ ಸಲುವಾಗಿ ಚೀನಾ ಸಾಧ್ಯವಿರುವ ಎಲ್ಲ ಹಣಕಾಸು ಮೂಲಗಳನ್ನು ತಡಕಾಡುತ್ತಿದೆ. ಏಕೆಂದರೆ ಅದಕ್ಕೆ ಸಂಪೂರ್ಣ ವೆಚ್ಚವನ್ನು ಸ್ವತಃ ಒದಗಿಸಲು ಸಾಧ್ಯವಿಲ್ಲ. ಈ ಕೊರತೆಯನ್ನು ತುಂಬುವ ಪ್ರಯತ್ನಕ್ಕೆ ಮುಂದಾದರೆ ಚೀನಾದ ಬ್ಯಾಂಕುಗಳು ಕೆಟ್ಟಸಾಲಕ್ಕೆ ಒಳಗಾಗುವುದರ ಜತೆಗೆ ಆರ್ಥಿಕತೆಗೆ ಹೊಡೆತ ಬೀಳುತ್ತದೆ. ಹೀಗಾಗಿ ತನ್ನ ಆಂತರಿಕ ಮಾರುಕಟ್ಟೆಯ ಜತೆಗೆ ಜಾಗತಿಕ ಹಣಕಾಸು ಮಾರುಕಟ್ಟೆಗಳಿಗೆ ಲಗ್ಗೆ ಇಡುವುದು ಚೀನಾಕ್ಕೆ ಅಗತ್ಯವಾಗಿದೆ.

ಈ ಕಾರಣದಿಂದಾಗಿ ಬಿಆರ್‌ಐ ಚೀನಾ ಕೇಂದ್ರಿತವಾಗದೆ ವಿಕೇಂದ್ರೀಕೃತ ಆಗುವುದು ಅನಿವಾರ್ಯವಾಗಿದೆ. ಹೀಗಾದಲ್ಲಿ ಯೋಜನೆಯ ವಿವಿಧ ಹಂತಗಳಲ್ಲಿ ಬೇರೆ ಬೇರೆ ದೇಶಗಳು ತಮ್ಮ ಅಧಿಕಾರ ಸ್ಥಾಪಿಸುತ್ತವೆ. ಜತೆಗೆ ಅದರ ನಿರ್ವಹಣೆಯ ಹಕ್ಕುಗಳನ್ನೂ ಪ್ರತಿಪಾದಿಸುತ್ತವೆ.

ಈ ಎಲ್ಲ ಸಂಕಟಗಳು ಚೀನಾವನ್ನು ಸುತ್ತಿಕೊಂಡಿವೆ. ಒಂದು ವೇಳೆ ಈ ಯೋಜನೆ ಪೂರ್ಣಗೊಂಡರೆ ಭಾರತಕ್ಕೆ ಕಂಟಕವಾಗುವುದರಲ್ಲಿ ಎರಡು ಮಾತಿಲ್ಲ. ಪಾಕಿಸ್ತಾನ ಹಣಕಾಸಿನ ಸೌಲಭ್ಯ ಪಡೆದುಕೊಳ್ಳುವುದರಲ್ಲಿ ಯಶಸ್ವಿಯಾಗದೆ ಇದ್ದರೆ ಮತ್ತು ಚೀನಾಕ್ಕೆ ಇತರೆ ದೇಶಗಳ ಸಹಕಾರ ದೊರಕದೆ ಇದ್ದರೆ ಚೀನಾದ ವಿರುದ್ಧ ಭಾರತದ ಬಹುದೊಡ್ಡ ಗೆಲುವಾಗಲಿದೆ.

English summary
China's Belt and Road initiative (BRI) in a deadlock as the Pakistan is in high debt, China cannot provide financial support to Pakistan. Here is an analytical story of corrent senario of the China Pakistan Economic Corridor.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X