ಭಾರತದಲ್ಲಿ ಶೇ. 50ರಷ್ಟು ಬಾಲ್ಯ ವಿವಾಹಗಳು ಈ 5 ರಾಜ್ಯಗಳಲ್ಲೇ ನಡೆಯುತ್ತಿವೆ: ಆಘಾತಕಾರಿ ಮಾಹಿತಿ ಬಿಚ್ಚಿಟ್ಟ UNICEF ವರದಿ!
ಭಾರತದಲ್ಲಿ 2030ರ ವೇಳೆಗೆ ಬಾಲ್ಯ ವಿವಾಹವನ್ನ ಸಂಪೂರ್ಣವಾಗಿ ನಿರ್ಮೂಲನೆ ಮಾಡುವ ಗುರಿಯನ್ನ ಹೊಂದಲಾಗಿದೆ. 1996ರಲ್ಲಿ ಶೇ. 50ರಷ್ಟಿದ್ದ ಬಾಲ್ಯ ವಿವಾಹ ಪ್ರಕರಣಗಳು ಪ್ರಸ್ತುತ ಶೇ. 20ರ ಆಸುಪಾಸಿಗೆ ಇಳಿಕೆಯಾಗಿವೆ. ಇದು ಉತ್ತಮ ಬೆಳವಣಿಗೆಯಾಗಿದ್ದರೂ ಕೂಡ, ಜಾಗತಿಕ ಮಟ್ಟದಲ್ಲಿ ನೋಡುವುದಾದರೆ ಪ್ರತಿ ಮೂವರು ಬಾಲ್ಯ ವಿವಾಹಕ್ಕೊಳಗಾದವರಲ್ಲಿ ಒಬ್ಬರು ಭಾರತೀಯರು ಎಂಬುದು ಆತಂಕಕಾರಿ ವಿಷಯ.
ಇಂದಿಗೂ ಪ್ರತಿ ಐವರು ಯುವತಿಯರಲ್ಲಿ ಒಬ್ಬರು 18 ವರ್ಷ ತುಂಬುವ ಮುನ್ನವೇ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಅಂತರಾಷ್ಟ್ರೀಯ ಹೆಣ್ಣುಮಕ್ಕಳ ದಿನಾಚರಣೆಯ ಸಂದರ್ಭದಲ್ಲಿ, ಯುನಿಸೆಫ್ (UNICEF) ಮತ್ತು ಇತರ ತಜ್ಞರು ರಾಷ್ಟ್ರೀಯ ಸರಾಸರಿಯನ್ನ ನೋಡಿ ನಿರಾಳರಾಗಬಾರದು, ದೇಶದ ಹಲವು ರಾಜ್ಯಗಳಲ್ಲಿ ಪರಿಸ್ಥಿತಿ ಇನ್ನೂ ಗಂಭೀರವಾಗಿದೆ ಎಂದು ಎಚ್ಚರಿಸಿದ್ದಾರೆ.

ಈ 5 ರಾಜ್ಯಗಳಲ್ಲೇ ಅತಿ ಹೆಚ್ಚು ಬಾಲ್ಯ ವಿವಾಹ ಪ್ರಕರಣಗಳು
ಯುನಿಸೆಫ್ ಮತ್ತು ಸರ್ಕಾರಿ ದತ್ತಾಂಶಗಳ ಪ್ರಕಾರ, ದೇಶದ ಒಟ್ಟು ಬಾಲ್ಯ ವಿವಾಹ ಪ್ರಕರಣಗಳಲ್ಲಿ ಅರ್ಧಕ್ಕಿಂತ ಹೆಚ್ಚು ಪ್ರಕರಣಗಳು ಕೇವಲ ಈ ಐದು ರಾಜ್ಯಗಳಲ್ಲಿ ವರದಿಯಾಗುತ್ತಿವೆ. ಹೌದು ನೋಡಿ, ಉತ್ತರ ಪ್ರದೇಶ, ಬಿಹಾರ, ಪಶ್ಚಿಮ ಬಂಗಾಳ, ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶ ರಾಜ್ಯಗಳಲ್ಲಿ ಈ ಅನಿಷ್ಟ ಪದ್ಧತಿ ಇನ್ನೂ ಹಾಗೆಯೇ ಇದೆ.
ಆದರೆ, ಕೇರಳ ಮತ್ತು ಲಕ್ಷದ್ವೀಪದಂತಹ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಈ ಪ್ರಮಾಣ ತೀರಾ ಕಡಿಮೆಯಿದ್ದು, ಅತ್ಯುತ್ತಮ ಸಾಧನೆ ತೋರಿವೆ. ಬಡತನವೇ ಈ ಪಿಡುಗಿಗೆ ಪ್ರಮುಖ ಕಾರಣವಾಗಿದ್ದು, ಹೆಣ್ಣುಮಕ್ಕಳನ್ನ ಸಾಕಲು ಕಷ್ಟಪಡುವ ಬಡ ಕುಟುಂಬಗಳು ಬೇಗನೆ ಮದುವೆ ಮಾಡಿ ತಮ್ಮ ಜವಾಬ್ದಾರಿಯಿಂದ ಹಿಂದೆ ರಿಯಲು ಪ್ರಯತ್ನಿಸುತ್ತವೆ ಎನ್ನುತ್ತಾರೆ ತಜ್ಞರು. ಹೀಗಾಗಿ ಸರ್ಕಾರಿ ಯೋಜನೆಗಳ ಯಶಸ್ವಿ ಅನುಷ್ಠಾನ ಇಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತದೆ.
ಯುನಿಸೆಫ್ ವರದಿ: ಆಘಾತಕಾರಿ ಅಂಕಿ-ಅಂಶಗಳು
ಯುನಿಸೆಫ್ ಅಂದಾಜಿನ ಪ್ರಕಾರ, ಭಾರತದಲ್ಲಿ 20-24 ವರ್ಷ ವಯಸ್ಸಿನ 224 ದಶಲಕ್ಷಕ್ಕೂ ಹೆಚ್ಚು ಮಹಿಳೆಯರು 17 ವರ್ಷ ತುಂಬುವ ಮುನ್ನವೇ ವಿವಾಹವಾಗಿದ್ದಾರೆ. ಇವರಲ್ಲಿ 90 ದಶಲಕ್ಷಕ್ಕೂ ಹೆಚ್ಚು ಯುವತಿಯರು 15 ವರ್ಷಕ್ಕೂ ಮುನ್ನವೇ ಮದುವೆಯಾಗಿದ್ದಾರೆ.
ಜಗತ್ತಿನಾದ್ಯಂತ ಪ್ರತಿ 3 ಸೆಕೆಂಡಿಗೆ ಒಬ್ಬ ಹೆಣ್ಣುಮಗು ಬಾಲ್ಯ ವಿವಾಹಕ್ಕೆ ಬಲಿಯಾಗುತ್ತಿದ್ದಾಳೆ ಅಂದರೆ ದಿನಕ್ಕೆ ಸುಮಾರು 1,500 ವಿವಾಹಗಳು ಎಂದರೆ ಪರಿಸ್ಥಿತಿಯ ಗಂಭೀರತೆಯನ್ನ ಅರ್ಥಮಾಡಿಕೊಳ್ಳಬಹುದು.
ಭಾರತದಲ್ಲಿ ಬಾಲ್ಯ ವಿವಾಹದ ಪ್ರಮಾಣ ಇಳಿಕೆಯಾಗಿರುವುದು ಆಶಾದಾಯಕವಾದರೂ, ಗ್ರಾಮೀಣ ಮತ್ತು ನಗರ ಪ್ರದೇಶಗಳ ನಡುವಿನ ಅಂತರವು ಈ ಅಂಕಿ-ಅಂಶಗಳ ಹಿಂದೆ ಮರೆಯಾಗಿದೆ ಎಂದು 'ಕ್ರೈ' ಸಂಸ್ಥೆಯ ಸಿಇಒ ಪೂಜಾ ಮಾರ್ವಾಹ ಕಳವಳ ವ್ಯಕ್ತಪಡಿಸಿದ್ದಾರೆ.
ಹೆಣ್ಣುಮಕ್ಕಳ ಹಕ್ಕುಗಳು ಮತ್ತು ಕಾನೂನು ಕ್ರಮಗಳು
ಬಾಲ್ಯ ವಿವಾಹ ನಿಷೇಧ ಕಾಯ್ದೆಯ ಪ್ರಕಾರ, 18 ವರ್ಷದೊಳಗಿನ ಹೆಣ್ಣು ಮತ್ತು 21 ವರ್ಷದೊಳಗಿನ ಗಂಡು ವಿವಾಹವಾಗುವುದು ಕಾನೂನುಬಾಹಿರ ಹಾಗೂ ಶಿಕ್ಷಾರ್ಹ ಅಪರಾಧ. ಆದರೂ, ಗ್ರಾಮೀಣ ಮತ್ತು ಬುಡಕಟ್ಟು ಪ್ರದೇಶಗಳಲ್ಲಿ ಈ ಪದ್ಧತಿ ಇನ್ನೂ ಜೀವಂತವಾಗಿದೆ.
ಬಾಲ್ಯ ವಿವಾಹದಿಂದ ಹೆಣ್ಣುಮಕ್ಕಳು ಚಿಕ್ಕ ವಯಸ್ಸಿನಲ್ಲಿಯೇ ಗರ್ಭಿಣಿಯಾಗುವ ಅಪಾಯ, ಕೌಟುಂಬಿಕ ದೌರ್ಜನ್ಯ ಮತ್ತು ಬಡತನದ ಸುಳಿಗೆ ಸಿಲುಕುತ್ತಾರೆ. ಗಮನಾರ್ಹ ಅಂಶವೆಂದರೆ, ಭಾರತೀಯ ನ್ಯಾಯ ಸಂಹಿತೆ (BNS) 2023ರ ಪ್ರಕಾರ, 18 ವರ್ಷದೊಳಗಿನ ಪತ್ನಿಯೊಂದಿಗೆ ಪತಿ ಲೈಂಗಿಕ ಸಂಪರ್ಕ ಬೆಳೆಸಿದರೂ ಅದು 'ಅತ್ಯಾಚಾರ' ಎಂದೇ ಪರಿಗಣಿಸಲ್ಪಡುತ್ತದೆ.
ಭಾರತದಲ್ಲಿ 19ನೇ ಶತಮಾನದಿಂದಲೇ ರಾಜಾ ರಾಮಮೋಹನ್ ರಾಯ್, ಈಶ್ವರ ಚಂದ್ರ ವಿದ್ಯಾಸಾಗರ್ ಅವರಂತಹ ಸಮಾಜ ಸುಧಾರಕರು ಬಾಲ್ಯ ವಿವಾಹದ ವಿರುದ್ಧ ಹೋರಾಡಿದ್ದರು. 1929ರ ಶಾರದಾ ಕಾಯ್ದೆಯಿಂದ ಹಿಡಿದು ಇಂದಿನವರೆಗೂ ಹಲವು ಕಾನೂನುಗಳು ಜಾರಿಯಲ್ಲಿವೆ.
2024ರಲ್ಲಿ ಕೇಂದ್ರ ಸರ್ಕಾರವು ಬಾಲ್ಯ ವಿವಾಹ ಮುಕ್ತ ಭಾರತ ಅಭಿಯಾನವನ್ನ ಪ್ರಾರಂಭಿಸಿದ್ದು, 2030ರ ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ತಲುಪಲು ಶ್ರಮಿಸುತ್ತಿದೆ. ಕೇವಲ ಕಠಿಣ ಕಾನೂನುಗಳಿದ್ದರೆ ಸಾಲದು, ಅವುಗಳನ್ನ ಜಾರಿಗೆ ತಂದು ಜನರಲ್ಲಿ ಅರಿವು ಮೂಡಿಸಿದರೆ ಮಾತ್ರ ಹೆಣ್ಣುಮಕ್ಕಳ ಹಕ್ಕುಗಳು, ಅವರ ಬಾಲ್ಯ ಮತ್ತು ಭವಿಷ್ಯವನ್ನ ರಕ್ಷಿಸಲು ಸಾಧ್ಯ.


Click it and Unblock the Notifications
