ಐಟಿ ಕಾಯ್ದೆ- ಸೆಕ್ಷನ್ 66A ಅಡಿ ಪ್ರಕರಣ ದಾಖಲಿಸದಂತೆ ರಾಜ್ಯಗಳಿಗೆ ಸೂಚನೆ
ನವದೆಹಲಿ, ಜುಲೈ 14: ರದ್ದಾಗಿರುವ ಕಾಯ್ದೆಯಡಿ ಪ್ರಕರಣಗಳನ್ನು ದಾಖಲಿಸುತ್ತಿರುವ ಕುರಿತು ಸುಪ್ರೀಂ ಕೋರ್ಟ್ ಅಚ್ಚರಿ ವ್ಯಕ್ತಪಡಿಸಿರುವ ಬೆನ್ನಲ್ಲೇ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 66A ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸದಂತೆ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಗೃಹ ಸಚಿವಾಲಯ ಬುಧವಾರ ಸೂಚನೆ ನೀಡಿದೆ.
ಸೆಕ್ಷನ್ 66A ರದ್ದಾಗಿರುವ ಕಾರಣ ಈ ಸೆಕ್ಷನ್ ಅಡಿ ಪ್ರಕರಣ ದಾಖಲಿಸಬಾರದು. ಜೊತೆಗೆ ಈ ಸೆಕ್ಷನ್ ಅಡಿ ದಾಖಲಾಗಿರುವ ಪ್ರಕರಣಗಳನ್ನು ಕೂಡಲೇ ಹಿಂತೆಗದುಕೊಳ್ಳಬೇಕು ಎಂದು ಕೇಂದ್ರ ಗೃಹ ಸಚಿವಾಲಯ ಕಾರ್ಯದರ್ಶಿ ಅಜಯ್ ಭಲ್ಲಾ ಎಲ್ಲಾ ರಾಜ್ಯಗಳಿಗೆ ಸೂಚಿಸಿದ್ದಾರೆ.

ಆನ್‌ಲೈನ್ ಸಂವಹನ ಸಂಬಂಧ ಶಿಕ್ಷೆ ನೀಡಲು ಈ ಸೆಕ್ಷನ್ ಅಡಿ ಪ್ರಕರಣ ದಾಖಲಿಸಲಾಗುತ್ತಿತ್ತು. ಆನ್‌ಲೈನ್‌ನಲ್ಲಿ ಆಕ್ರಮಣಕಾರಿ, ಭೀತಿಗೊಳಿಸುವ, ಕಿರಿಕಿರಿ, ಅಡಚಣೆ, ಅವಮಾನ, ಬೆದರಿಕೆ, ದ್ವೇಷದ ಉದ್ದೇಶವಿರುವ ಸಂವಹನದ ವಿರುದ್ಧ ಈ ಸೆಕ್ಷನ್ ಅಡಿ ಪ್ರಕರಣ ದಾಖಲಿಸಲಾಗುತ್ತಿತ್ತು.
ಆದರೆ ಐಟಿ ಕಾಯ್ದೆ 2000, ಸೆಕ್ಷನ್ 66 A ಅನ್ನು ಅಸಾಂವಿಧಾಯಕ ಎಂದು ಅಭಿಪ್ರಾಯಪಟ್ಟಿದ್ದ ಸುಪ್ರೀಂ ಕೋರ್ಟ್, 2015ರ ಮಾರ್ಚ್ 23ರಂದು ಈ ಸೆಕ್ಷನ್ ರದ್ದುಗೊಳಿಸಿತ್ತು.
ಸೆಕ್ಷನ್ ರದ್ದಾಗಿ ಇಷ್ಟು ವರ್ಷಗಳು ಕಳೆದಿದ್ದರೂ ಇದರಡಿ ಪ್ರಕರಣ ದಾಖಲಿಸುತ್ತಿರುವುದಕ್ಕೆ ಸುಪ್ರೀಂ ಕೋರ್ಟ್ ಈಚೆಗೆ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತ್ತು.












Click it and Unblock the Notifications