Ayushman Bharat: 70 ವರ್ಷ ಮೇಲ್ಪಟ್ಟವರಿಗೂ ಕೇಂದ್ರದಿಂದ ಗುಡ್‌ನ್ಯೂಸ್
ಕೇಂದ್ರ ಸರ್ಕಾರವು ಆಯುಷ್ಮಾನ್ ಭಾರತ್ ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆಯಲ್ಲಿ ಮಹತ್ವದ ಬದಲಾವಣೆಯನ್ನು ಘೋಷಿಸಿದೆ. ಅದರಂತೆ ಇನ್ನು ಮುಂದೆ 70 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಈ ಯೋಜನೆಯಡಿ 5 ಲಕ್ಷ ರೂಪಾಯಿವರೆಗೆ ಚಿಕಿತ್ಸೆ ಉಚಿತವಾಗಿ ಸಿಗಲಿದೆ. ಈ ಮಹತ್ವದ ನಿರ್ಧಾರವನ್ನು ಕೇಂದ್ರ ಸರ್ಕಾರ ಘೋಷಣೆ ಮಾಡಿದೆ.
ಇಂದು ಸಚಿವ ಸಂಪುಟ ಸಭೆಯ ನಂತರ ಈ ವಿಚಾರವನ್ನು ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ. ಅದರಂತೆ ದೇಶದಲ್ಲಿ 70 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯ ನಾಗರಿಕರನ್ನು ಆಯುಷ್ಮಾನ್ ಭಾರತ್ ಯೋಜನೆ ವ್ಯಾಪ್ತಿಗೆ ಸೇರಿಸಲು ಕೇಂದ್ರ ಸರ್ಕಾರ ನಿರ್ಧರಿಸಿರುವುದಾಗಿ ಹೇಳಿದರು.

ದೇಶದ ಜನರ ಪಾಲಿಗೆ ಇದೊಂದು ದೊಡ್ಡ ನಿರ್ಧಾರ. ಕೇಂದ್ರ ಸರ್ಕಾರದ ಈ ನಿರ್ಧಾರದಲ್ಲಿ ಮಾನವೀಯ ವಿಚಾರವಿದೆ. ಇದರಿಂದ ದೇಶದ ಸುಮಾರು 4.5 ಕೋಟಿ ಕುಟುಂಬಗಳು ಈ ಯೋಜನೆಗೆ ಒಳಪಡಲಿವೆ. ಅಂದಾಜು 6 ಕೋಟಿ ಹಿರಿಯ ನಾಗರಿಕರು ಈ ಯೋಜನೆಯ ವ್ಯಾಪ್ತಿಗೆ ಬರಲಿದ್ದು, 5 ಲಕ್ಷ ರೂಪಾಯಿವರೆಗೆ ಉಚಿತ ಚಿಕಿತ್ಸೆಯ ಸೌಲಭ್ಯ ಪಡೆದುಕೊಳ್ಳಲಿದ್ದಾರೆ ಎಂದರು.
ಇನ್ನು ಹಿರಿಯ ನಾಗರಿಕರ ಆದಾಯ ಎಷ್ಟೇ ಇದ್ದರೂ ಈ ಯೋಜನೆಯ ಪಡೆಯಲು ಅವರು ಅರ್ಹರಾಗಿರುತ್ತಾರೆ. ಅರ್ಹ ಫಲಾನುಭವಿಗಳಿಗೆ ಯೋಜನೆಯ ಅಡಿಯಲ್ಲಿ ಹೊಸದಾಗಿ ಕಾರ್ಡ್ ಒಂದನ್ನು ಸಹ ನೀಡುವುದಾಗಿ ಕೇಂದ್ರ ಸರ್ಕಾರ ಹೇಳಿದೆ.
ಈ ಯೋಜನೆಯ ಆರಂಭಿಕ ವೆಚ್ಚ ಸುಮಾರು 3,437 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಇದೊಂದು ಬೇಡಿಕೆ ಆಧಾರಿತ ಯೋಜನೆಯಾಗಿದ್ದು, ಮುಂದೆ ಇದಕ್ಕೆ ಬೇಡಿಕೆ ಹೆಚ್ಚಿದರೆ, ಅದರ ವ್ಯಾಪ್ತಿಯನ್ನೂ ಹೆಚ್ಚಿಸಲಾಗುವುದು ಎಂದು ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.

ಕೇಂದ್ರದ ಈ ಅನುಮೋದನೆಯಿಂದಾಗಿ 70 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಎಲ್ಲ ಹಿರಿಯ ನಾಗರಿಕರು, ಅವರ ಸಾಮಾಜಿಕ-ಆರ್ಥಿಕ ಸ್ಥಿತಿಯ ಹೊರತಾಗಿಯೂ ಈ ಆಯುಷ್ಮಾನ್ ಭಾರತ್ ಆರೋಗ್ಯ ಯೋಜನೆ ಪ್ರಯೋಜನ ಪಡೆಯಲು ಅರ್ಹರಾಗಿರುತ್ತಾರೆ. ಅದರಂತೆ 70 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಈ ಯೋಜನೆ ಅನ್ವಯಿಸುವುದಿಲ್ಲ.
ಆಯುಷ್ಮಾನ್ ಭಾರತ್ ಪ್ರಧಾನ್ ಮಂತ್ರಿ ಜನ ಆರೋಗ್ಯ ಯೋಜನೆಯು ವಿಶ್ವದ ಅತಿದೊಡ್ಡ ಸಾರ್ವಜನಿಕ ನಿಧಿಯ ಆರೋಗ್ಯ ಭರವಸೆ ಯೋಜನೆ ಎಂದು ಕರೆಯಲಾಗಿದೆ. ದೇಶದ ಸುಮಾರು 12 ಕೋಟಿ ಕುಟುಂಬಗಳಲ್ಲಿರುವ 55 ಕೋಟಿ ಜನರಿಗೆ ಆಸ್ಪತ್ರೆಗಳಲ್ಲಿ ಚಿಕಿತ್ಸೆಗಾಗಿ ಪ್ರತಿ ಕುಟುಂಬಕ್ಕೆ ವಾರ್ಷಿಕ 5 ಲಕ್ಷ ರೂಪಾಯಿ ಆರೋಗ್ಯ ವಿಮೆ ಒದಗಿಸುತ್ತದೆ.
ಇದು ಅರ್ಹ ಕುಟುಂಬಗಳ ಎಲ್ಲ ಸದಸ್ಯರನ್ನು ವಯೋಮಿತಿ ಇಲ್ಲದೆ ಈ ಯೋಜನೆಯ ಫಲಾನುಭವಿಗಳನ್ನಾಗಿ ಸೇರ್ಪಡೆ ಮಾಡಿಕೊಳ್ಳಲಾಗಿದೆ. ಈ ಯೋಜನೆಯಡಿ ಸುಮಾರು 7 ಕೋಟಿಗೂ ಹೆಚ್ಚು ಫಲಾನುಭವಿಗಳು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ಇದೀಗ 70 ವರ್ಷ ಮೇಲ್ಪಟ್ಟವರನ್ನೂ ಈ ಯೋಜನೆಯ ವ್ಯಾಪ್ತಿಗೆ ಸೇರಿಸಿಕೊಳ್ಳುವುದಾಗಿ ಕೇಂದ್ರ ಸರ್ಕಾರ ಹೇಳಿದೆ.












Click it and Unblock the Notifications