ಕೇಂದ್ರ ಸಂಪುಟ ಪುನಾರಚನೆ: ಸದಾನಂದ ಗೌಡ, ಅನಂತ್ ಗೆ ಪ್ರಮುಖ ಖಾತೆ?
ಕೇಂದ್ರ ಮಂತ್ರಿ ಮಂಡಲ ಶೀಘ್ರ ಪುನರಾಚನೆ ಸಾಧ್ಯತೆ. ಆ ವೇಳೆಯಲ್ಲಿ, ಹಾಲಿ ಸಚಿವರಾದ ರಾಜ್ಯದ ಸದಾನಂದ ಗೌಡ, ಅನಂತ ಕುಮಾರ್ ಗೆ ಪ್ರಮುಖ ಖಾತೆ. ಅರುಣ್ ಜೇಟ್ಲಿ ಮೇಲಿರುವ ಹೆಚ್ಚಿನ ಹೊರೆ ಇಳಿಸಲು ನಿರ್ಧಾರ.
ನವದೆಹಲಿ, ಜುಲೈ 20: ರಾಷ್ಟ್ರಪತಿ, ಉಪ ರಾಷ್ಟ್ರಪತಿ ಚುನಾವಣೆ ಹಾಗೂ ಫಲಿತಾಂಶಗಳು ಬಂದ ನಂತರ, ಕೇಂದ್ರ ಸಚಿವ ಸಂಪುಟ ಪುನಾರಚನೆ ಆಗುವುದು ಖಾತ್ರಿ ಎಂದು ಹೇಳಲಾಗಿದೆ.
ಈ ಪುನಾರಚನೆ ವೇಳೆ, ರಾಜ್ಯದಿಂದ ಕೇಂದ್ರದಲ್ಲಿ ಸಚಿವ ಸ್ಥಾನ ಪಡೆದಿರುವ ಸದಾನಂದ ಗೌಡ ಹಾಗೂ ಅನಂತ ಕುಮಾರ್ ಅವರಿಗೆ ಪ್ರಮುಖ ಖಾತೆಗಳು ಲಭ್ಯವಾಗಲಿವೆ ಎಂದು ಹೇಳಲಾಗಿದೆ. ಇದರ ಜತೆಯಲ್ಲೇ ರಾಜ್ಯದ ಮತ್ತೊಬ್ಬರಿಗೆ ಸಚಿವ ಸ್ಥಾನ ಸಿಗುವ ಸಾಧ್ಯತೆಗಳೂ ಇವೆ ಎಂದು ಹೇಳಲಾಗಿದೆ. ಆದರೆ, ಅದು ಯಾರೆಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಸದ್ಯಕ್ಕೆ ಸದಾನಂದ ಗೌಡ ಅವರು, ಅಂಕಿ-ಅಂಶ ಇಲಾಖೆಯ ಸಚಿವರಾಗಿದ್ದಾರೆ. ಇನ್ನು, ಅನಂತ್ ಕುಮಾರ್ ಅವರು ಸಂಸದೀಯ ವ್ಯವಹಾರಗಳ ಇಲಾಖೆ ಹಾಗೂ ರಾಸಾಯನಿಕ ಹಾಗೂ ಗೊಬ್ಬರ ಇಲಾಖೆಯ ಸಚಿವರಾಗಿದ್ದಾರೆ. ಕೇಂದ್ರ ಸಂಪುಟ ಪುನಾರಾಚನೆಯಾದಾಗ ಈ ಇಬ್ಬರಿಗೂ ಹೊಸ ಖಾತೆಗಳು ಲಭ್ಯವಾಗಲಿದ್ದು, ಈಗಿರುವ ಖಾತೆಗಳ ಬದಲಿಗೆ ಪ್ರಮುಖವಾದ ಖಾತೆಗಳು ಲಭ್ಯವಾಗುವ ಸಾಧ್ಯತೆಗಳು ಹೆಚ್ಚಿವೆ ಎಂದು ಹೇಳಲಾಗಿದೆ.
ಹಾಗಾದರೆ, ಹೆಚ್ಚು ಹೊರೆ ಹೊತ್ತಿರುವ ಸಚಿವರಾರು, ಯಾವ ಖಾತೆಗಳು ಯಾರಿಂದ ತೆರವಾಗಬಹುದು ಎಂಬಿತ್ಯಾದಿ ಮಾಹಿತಿಗಳು ಇಲ್ಲಿವೆ.

ಸದ್ಯಕ್ಕೆ ಗೌಡರಿಗೆ ಅಂಕಿ-ಅಂಶ ಇಲಾಖೆ
ಸದಾನಂದ ಗೌಡರಿಗೆ ಈಗ ನೀಡಲಾಗಿರುವ ಇಲಾಖೆ ಅಂಥಾ ಮಹತ್ವದ್ದೇನಲ್ಲ. ಈ ಹಿಂದೆ ರೈಲ್ವೇ, ಕಾನೂನು ಇಲಾಖೆ ನಿರ್ವಹಿಸಿರುವ ಇವರಿಗೆ ಮುಂದೆ ಮಹತ್ವದ ಇಲಾಖೆಯನ್ನು ನೀಡಲು ನಿರ್ಧರಿಸಲಾಗಿದೆ. ಕರ್ನಾಟಕದಲ್ಲಿ ಮುಂದಿನ ವರ್ಷದ ವಿಧಾನಸಭೆ ಚುನಾವಣೆ ನಡೆಯಲಿರುವುದರಿಂದ, ದಕ್ಷಿಣ ಕನ್ನಡದಲ್ಲಿ ಮಹತ್ವದ ಪಾತ್ರ ವಹಿಸಬೇಕಿರುವುದರಿಂದ ಆ ಭಾಗದ ನಾಯಕರಾದ ಸದಾನಂದ ಗೌಡರಿಗೆ ಈ ಬಾರಿ ಪ್ರಮುಖ ಖಾತೆ ನೀಡಬಹುದೆಂದು ನಿರೀಕ್ಷಿಸಲಾಗಿದೆ.

ಸದ್ಯಕ್ಕೆ ತೋಮರ್ ಮಡಿಲಲ್ಲಿದೆ ನಗರಾಭಿವೃದ್ಧಿ ಸಚಿವಾಲಯ
ಸಂಸದೀಯ ವ್ಯವಹಾರಗಳನ್ನು ನೋಡಿಕೊಳ್ಳುತ್ತಿರುವ ಅನಂತ್ ಕುಮಾರ್ ಅವರಿಗೆ ಪುನಾರಚನೆ ವೇಳೆ ಪ್ರಮುಖ ಖಾತೆ ಸಿಗಲಿದೆ. ಅದು, ಈ ಹಿಂದೆ ವೆಂಕಯ್ಯ ನಾಯ್ಡು ಅವರು ನೋಡಿಕೊಳ್ಳುತ್ತಿದ್ದ ನಗರಾಭಿವೃದ್ಧಿ ಖಾತೆ ಇರಬಹುದು ಎಂದು ಊಹಿಸಲಾಗಿದೆ. ಈ ಖಾತೆಯನ್ನು ಸದ್ಯಕ್ಕೆ ಕೇಂದ್ರ ಗಣಿಗಾರಿಕೆ ಸಚಿವರಾದ ನರೇಂದ್ರ ಸಿಂಗ್ ತೋಮರ್ ಅವರು ನೋಡಿಕೊಳ್ಳುತ್ತಿದ್ದಾರೆ.

ಅರುಣ್ ಹೆಗಲಿನಿಂದ ರಕ್ಷಣೆ, ಕಾರ್ಪೊರೇಟ್ ಇಲಾಖೆ ತೆರವು?
ಅರುಣ್ ಜೇಟ್ಲಿಯವರಿಗೆ ಈಗಾಗಲೇ ಮೂರು ಪ್ರಮುಖ ಖಾತೆಗಳಿವೆ. ಹಣಕಾಸು ಇಲಾಖೆಯನ್ನು ನಿರ್ವಹಿಸುತ್ತಿರುವ ಅವರಿಗೆ ಹೆಚ್ಚುವರಿಯಾಗಿ ರಕ್ಷಣಾ ಇಲಾಖೆ (ಮನೋಹರ್ ಪರಿಕ್ಕರ್ ಅವರಿಂದ ತೆರವಾಗಿರುವ ಸ್ಥಾನ), ಕಾರ್ಪೊರೇಟ್ ವ್ಯವಹಾರಗಳ ಖಾತೆಗಳಿವೆ. ಇದೀಗ ಜಿಎಸ್ ಟಿ ಜಾರಿಯಾದ ಮೇಲೆ ಇವರ ಮೇಲಿನ ಭಾರ ಹೆಚ್ಚಾಗಿದೆ. ಹಾಗಾಗಿ, ರಕ್ಷಣಾ ಖಾತೆ, ಕಾರ್ಪೊರೇಟ್ ವ್ಯವಹಾರಗಳಿಗೆ ಹೊಸ ಸಚಿವರನ್ನು ನೇಮಿಸಲು ನಿರ್ಧರಿಸಲಾಗಿದೆ.

ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆ ಬೇರೆಯವರಿಗೆ?
ಇನ್ನು, ಉಪ ರಾಷ್ಟ್ರಪತಿ ಚುನಾವಣೆಗೆ ವೆಂಕಯ್ಯ ನಾಯ್ಡು ಅವರು ಕಣಕ್ಕಿಳಿಯುತ್ತಿದ್ದಂತೆ ಅವರಿಂದ ತೆರವಾದ ಎರಡು ಖಾತೆಗಳು ಬೇರೆ ಬೇರೆ ಸಚಿವರಿಗೆ ವರ್ಗಾವಣೆಯಾಗಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಅವರು ನೋಡಿಕೊಳ್ಳುತ್ತಿದ್ದ ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆಯು ಕೇಂದ್ರ ಜವಳಿ ಖಾತೆ ಸಚಿವೆ ಸ್ಮೃತಿ ಇರಾನಿ ಅವರ ಜವಾಬ್ದಾರಿಗೆ ಬಂದಿತ್ತು.

ತೋಮರ್ ಹೆಚ್ಚಿನ ಹೊರೆ ಇಳಿಕೆಗೆ ನಿರ್ಧಾರ
ವೆಂಕಯ್ಯ ನಾಯ್ಡು ಅವರೇ ನೋಡಿಕೊಳ್ಳುತ್ತಿದ್ದ ಗ್ರಾಮೀಣಾಭಿವೃದ್ಧಿ ಇಲಾಖೆಯು ಕೇಂದ್ರ ಗಣಿಗಾರಿಕೆ ಇಲಾಖೆಯ ಸಚಿವ ನರೇಂದ್ರ ಸಿಂಗ್ ತೋಮರ್ ಅವರಿಗೆ ಸಂದಿತ್ತು. ಈ ಸಚಿವರುಗಳಿಗೆ ಇರುವ ಹೆಚ್ಚಿನ ಹೊರೆಯನ್ನು ಕಡಿಮೆ ಮಾಡಲೂ ಕೇಂದ್ರ ನಿರ್ಧರಿಸಿದ್ದು, ಅವರ ಹೆಚ್ಚುವರಿ ಖಾತೆಗಳನ್ನು ಇತರರರಿಗೆ ಹಂಚಲು ನಿರ್ಧರಿಸಲಾಗಿದೆ.












Click it and Unblock the Notifications