ಕೊರೊನಾ ಏಕಾಏಕಿ ಏರಿಕೆ; ಈ ಎರಡು ರಾಜ್ಯಗಳಿಗೆ ಕೇಂದ್ರದ ಸೂಚನೆ
ನವದೆಹಲಿ, ಆಗಸ್ಟ್ 27: ಗುರುವಾರ ದೇಶದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಏಕಾಏಕಿ ಏರಿಕೆಯಾಗಿದ್ದು, ಕೇರಳ ಹಾಗೂ ಮಹಾರಾಷ್ಟ್ರ ರಾಜ್ಯಗಳಿಂದಲೇ ಅತಿ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಹೀಗಾಗಿ ಸೋಂಕಿತರ ಸಂಪರ್ಕ ಪತ್ತೆ ಕಾರ್ಯ, ಲಸಿಕೆ ಹಾಗೂ ಕೊರೊನಾ ನಿಯಮಗಳ ಮೇಲೆ ಕಣ್ಣಿಡುವ ಮೂಲಕ ಕೊರೊನಾ ಹರಡುವಿಕೆ ತಡೆಯ ಪ್ರಯತ್ನಗಳನ್ನು ತೀವ್ರಗೊಳಿಸಬೇಕು ಎಂದು ಈ ಎರಡೂ ರಾಜ್ಯಗಳಿಗೆ ಸೂಚಿಸಿದೆ.
ಸೋಂಕು ಹೆಚ್ಚಿರುವ ಭೌಗೋಳಿಕ ಪ್ರದೇಶಗಳಲ್ಲಿ ಸಮರ್ಪಕ ಕ್ರಮಗಳನ್ನು ತೆಗದುಕೊಳ್ಳುವ ಕುರಿತು ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ, ಎರಡೂ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು ಹಾಗೂ ಹಿರಿಯ ಆರೋಗ್ಯ ಅಧಿಕಾರಿಗಳೊಂದಿಗಿನ ಸಭೆಯಲ್ಲಿ ತಿಳಿಸಿದರು.

ಸೋಂಕು ಹೆಚ್ಚಳವನ್ನು ನಿಯಂತ್ರಿಸಲು ಇನ್ನೂ ಹೆಚ್ಚಿನ ಪ್ರಯತ್ನಗಳು ಅಗತ್ಯ ಎಂದಿರುವ ಭಲ್ಲಾ, ಹೆಚ್ಚು ಕೊರೊನಾ ಪ್ರಕರಣಗಳಿರುವ ಪ್ರದೇಶಗಳಲ್ಲಿ ರಾತ್ರಿ ಕರ್ಫ್ಯೂ ವಿಧಿಸುವ ಕುರಿತು ರಾಜ್ಯ ಸರ್ಕಾರಗಳು ಆಲೋಚಿಸಬೇಕು ಎಂದು ಸಲಹೆ ನೀಡಿದರು.
ಅಗತ್ಯವಿದ್ದಲ್ಲಿ ಹೆಚ್ಚಿನ ಕೊರೊನಾ ಲಸಿಕೆಗಳನ್ನು ನೀಡಲಾಗುವುದು ಎಂದು ರಾಜ್ಯ ಸರ್ಕಾರಗಳಿಗೆ ಹೇಳಿದ್ದು, ರಾಜ್ಯ ಸರ್ಕಾರಗಳು ಲಸಿಕಾ ಕಾರ್ಯಕ್ರಮವನ್ನು ಚುರುಕುಗೊಳಿಸಬೇಕು ಎಂದು ಹೇಳಿದರು.
ಲಸಿಕೆ ನೀಡುವ ಜೊತೆಗೆ ಜನರಿಗೆ ಕೊರೊನಾ ಸೂಕ್ತ ನಡವಳಿಕೆಗೆ ಪ್ರೋತ್ಸಾಹ ನೀಡಬೇಕು ಹಾಗೂ ಮುಂಬರುವ ಹಬ್ಬಗಳ ಸಮಯದಲ್ಲಿ ಸಾಮೂಹಿಕವಾಗಿ ಜನರು ಸೇರುವುದನ್ನು ತಪ್ಪಿಸಬೇಕು ಎಂಬುದನ್ನು ಒತ್ತಿಹೇಳಿದರು.
ಪಾಸಿಟಿವಿಟಿ ದರ ಹೆಚ್ಚಿರುವ ಕಡೆಗಳಲ್ಲಿ ಪರೀಕ್ಷಾ ಪ್ರಮಾಣವನ್ನು ಚುರುಕುಗೊಳಿಸಬೇಕು ಎಂದು ಸಲಹೆ ನೀಡಲಾಗಿದೆ.
ನೀತಿ ಆಯೋಗದ ಸದಸ್ಯ ವಿ.ಕೆ. ಪೌಲ್, ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್, ಮುಖ್ಯ ಕಾರ್ಯದರ್ಶಿಗಳು, ಕೇರಳ ಹಾಗೂ ಮಹಾರಾಷ್ಟ್ರದ ಡಿಜಿಪಿಗಳು ಸಭೆಯಲ್ಲಿ ಭಾಗವಹಿಸಿದ್ದರು.
ದೇಶದ ದಿನನಿತ್ಯದ ಕೊರೊನಾ ಪ್ರಕರಣಗಳಲ್ಲಿ ಕೇರಳದ ಪಾಲೇ ಹೆಚ್ಚು:
ದೇಶದಲ್ಲಿ ಗುರುವಾರ 46,164 ಹೊಸ ಕೊರೊನಾ ಸೋಂಕಿನ ಪ್ರಕರಣಗಳು ದಾಖಲಾಗಿವೆ. ಈ ದಿನನಿತ್ಯದ ಕೊರೊನಾ ಪ್ರಕರಣದಲ್ಲಿ ಶೇಕಡಾ 68 ರಷ್ಟು ಪ್ರಕರಣಗಳು ಕೇರಳದ್ದೇ ಆಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ವರದಿ ತಿಳಿಸಿದೆ.
ದೇಶದಲ್ಲಿ ಕೊರೊನಾ ಪ್ರಕರಣಗಳ ದೈನಂದಿನ ಸಂಖ್ಯೆಯು 20,000ಕ್ಕಿಂತ ಅಧಿಕ ದಾಖಲಾಗುತ್ತಿದೆ. ಇದಕ್ಕೆ ಮುಖ್ಯ ಕಾರಣ ಕೆಲವೊಂದು ರಾಜ್ಯಗಳಲ್ಲಿ ಕೊರೊನಾ ಸೋಂಕು ಅಧಿಕವಾಗಿರುವುದು. ಮುಖ್ಯವಾಗಿ ಕೇರಳ ರಾಜ್ಯದಲ್ಲಿ ಕೊರೊನಾ ದೈನಂದಿನ ಪ್ರಕರಣಗಳಲ್ಲಿ ತೀವ್ರ ಏರಿಕೆ ಕಂಡಿದೆ ಎಂದು ವರದಿ ವಿಶ್ಲೇಷಿಸಿದೆ.

ಕೇರಳದಲ್ಲಿ ಸೋಂಕಿನ ಪಾಸಿಟಿವಿಟಿ ದರ:
ಕೇರಳದಲ್ಲಿ ಪಾಸಿಟಿವಿಟಿ ದರ ಶೇ.18.03ರಷ್ಟಿದೆ. ಗುರುವಾರ ರಾಜ್ಯದಲ್ಲಿ 30,007 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಇದೇ ಅವಧಿಯಲ್ಲಿ 18,997 ಸೋಂಕಿತರು ಗುಣಮುಖರಾಗಿದ್ದಾರೆ. 162 ಮಂದಿ ಕೊರೊನಾ ಸೋಂಕಿನಿಂದಲೇ ಸಾವನ್ನಪ್ಪಿದ್ದು, ಈವರೆಗೂ 20,134 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ 1,81,209 ಕೊವಿಡ್-19 ಸಕ್ರಿಯ ಪ್ರಕರಣಗಳಿವೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
ಕೇರಳದಲ್ಲಿ ಓಣಂ ಹಬ್ಬದ ಆಚರಣೆ ಬೆನ್ನಲ್ಲೇ ಕೊರೊನಾ ಸೋಂಕಿನ ಪ್ರಕರಣಗಳ ಸಂಖ್ಯೆಯಲ್ಲಿ ಶೇ.30ರಷ್ಟು ಏರಿಕೆ ಕಂಡು ಬಂದಿದೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
ದೇಶದ ಕೊರೊನಾ ಸ್ಥಿತಿಗತಿ: ಭಾರತದಲ್ಲಿ ಗುರುವಾರ 46,164 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. 34,159 ಕೊರೊನಾ ಸೋಂಕಿತರು ಗುಣಮುಖರಾಗಿದ್ದಾರೆ. ದೇಶದಲ್ಲಿ ಕೊವಿಡ್-19 ಸೋಂಕಿನಿಂದ ಗುಣಮುಖರಾದವರ ಶೇಕಡಾವಾರು ಪ್ರಮಾಣ 97.63ರಷ್ಟಿದ್ದು, ಇದರ ಹೊರತಾಗಿ 3,33,725 ಸಕ್ರಿಯ ಪ್ರಕರಣಗಳಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.












Click it and Unblock the Notifications