Tirupati Laddu: ತಿರುಪತಿ ಲಡ್ಡು ತುಪ್ಪದ ಕೇಸ್, 4 ಜನರನ್ನು ಬಂಧಿಸಿದ ಸಿಬಿಐ
ಅಮರಾವತಿ, ಫೆಬ್ರವರಿ 10: ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ತಿರುಮಲ ತಿರುಪತಿ ವೆಂಕಟೇಶ್ವರ ದೇವಾಲಯದಲ್ಲಿ ಪ್ರಸಾದ ರೂಪದಲ್ಲಿ ನೀಡುವ ಲಡ್ಡು ತಯಾರಿಕೆ ಬಗ್ಗೆ ಭಾರೀ ವಿವಾದ ಉಂಟಾಗಿತ್ತು. ಕಲಬೆರಕೆ ತುಪ್ಪವನ್ನು ದೇವಾಲಯದ ಲಡ್ಡು ತಯಾರಿಕೆಗೆ ಮಾಡಲು ಬಳಕೆ ಮಾಡಲಾಗಿದೆ ಎಂಬುದು ಆಂಧ್ರ ಪ್ರದೇಶ ರಾಜಕೀಯದಲ್ಲಿ ಭಾರೀ ಸಂಚಲನಕ್ಕೆ ಕಾರಣವಾಗಿತ್ತು. ರಾಜ್ಯ ಸರ್ಕಾರ ಈ ಕುರಿತು ಸಿಬಿಐ ತನಿಖೆಗೆ ಆದೇಶವನ್ನು ನೀಡಿತ್ತು.
ಲಡ್ಡು ತಯಾರಿಕೆಗೆ ಕಲಬೆರಕೆ ತುಪ್ಪ ಬಳಕೆ ಪ್ರಕರಣದ ತನಿಖೆ ಕೈಗೊಂಡಿರುವ ಸಿಬಿಐ ನಾಲ್ವರನ್ನು ಬಂಧಿಸಿದೆ. ಬಂಧಿತರಲ್ಲಿ ಇಬ್ಬರು ಆರೋಪಿಗಳನ್ನು ಪೊಮಿಲ್ ಜೈನ್, ಬಿಪಿನ್ ಜೈನ್ ಎಂದು ಗುರುತಿಸಲಾಗಿದೆ. ಇವರಿಬ್ಬರಿ ಭೋಲೆ ಬಾಬಾ ಸಾವಯವ ಡೈರಿಯ ನಿವೃತ್ತ ನಿರ್ದೇಶಕರು.

ಇನ್ನೊಬ್ಬರು ಬಂಧಿತ ಆರೋಪಿ ಅಪೂರ್ವ ವಿನಯ್ ಕಾಂತ್ ಚಾಡ್ವಾ ವೈಷ್ಣವಿ ಡೈರಿಯ ಸಿಇಒ. ಮತ್ತೊಬ್ಬ ಆರೋಪಿಯನ್ನು ರಾಜು ರಾಜಶೇಖರನ್ ಎಂದು ಗುರುತಿಸಲಾಗಿದ್ದು, ಅವರು ದಿಂಡಿಗಲ್‌ನ ಎಆರ್ ಡೈರಿ ಎಂಡಿಯಾಗಿದ್ದಾರೆ.
ಕಲಬೆರಕೆ ತುಪ್ಪವನ್ನು ತಿರುಮಲ ತಿರುಪತಿ ವೆಂಕಟೇಶ್ವರ ದೇವಾಲಯದ ಪ್ರಸಾದ ಲಡ್ಡು ತಯಾರಿಕೆ ಬಳಕೆ ಮಾಡುವ ಕುರಿತು ಸುಪ್ರೀಂಕೋರ್ಟ್‌ನಲ್ಲಿಯೂ ಅರ್ಜಿ ಸಲ್ಲಿಸಲಾಗಿತ್ತು. ಆದ್ದರಿಂದ ಸುಪ್ರೀಂಕೋರ್ಟ್ ಸೂಚನೆಯಂತೆಯೂ ಸಿಬಿಐ ತನಿಖೆ ನಡೆಯುತ್ತಿದೆ.
ಐವರು ಅಧಿಕಾರಿಗಳಿರುವ ಸಿಬಿಐನ ಎಸ್‌ಐಟಿ ಈ ತುಪ್ಪ ಕಲಬೆರಕೆ ಪ್ರಕರಣದ ತನಿಖೆಯನ್ನು ಕೈಗೊಂಡಿದೆ. ಲಡ್ಡು ಕಲಬೆರಕೆಯಾಗಿದೆ ಎಂಬ ಆರೋಪಗಳ ಹಿನ್ನಲೆಯಲ್ಲಿ ತಿರುಮಲ ಕ್ಷೇತ್ರದ ಪಾವಿತ್ರ್ಯಕ್ಕೆ ಧಕ್ಕೆಯಾಗಿದೆ ಎಂದು ರಾಜ್ಯದ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ 11 ದಿನಗಳ ಪ್ರಾಯಶ್ಚಿತ್ತ ದೀಕ್ಷೆಯಾತ್ರೆ ಕೈಗೊಂಡಿದ್ದರು, ದೇವಾಲಯವನ್ನು ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಶುಚಿಗೊಳಿಸಲಾಗಿತ್ತು.
2024ರ ಅಕ್ಟೋಬರ್‌ನಲ್ಲಿ ತಿರುಪತಿ ಲಡ್ಡು ತಯಾರಿಕೆಗೆ ಬಳಕೆ ಮಾಡುವ ತುಪ್ಪದಲ್ಲಿ ದನದ ಕೊಬ್ಬು, ಮೀನಿನ ಎಣ್ಣೆ ಬಳಕೆ ಮಾಡಲಾಗುತ್ತಿದೆ ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಆರೋಪ ಮಾಡಿದ್ದರು. ಈ ಆರೋಪ ಆಂಧ್ರ ಪ್ರದೇಶ ರಾಜಕೀಯದಲ್ಲಿ ಸಂಚಲನ ಉಂಟು ಮಾಡಿತ್ತು.
ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಆಂಧ್ರ ಪ್ರದೇಶದ ಹಿಂದಿನ ಸರ್ಕಾರವಾದ ವೈ. ಎಸ್. ಜಗನ್‌ಮೋಹನ್ ರೆಡ್ಡಿ ವಿರುದ್ಧ ಆರೋಪಗಳನ್ನು ಮಾಡಿ ತಿರುಪತಿ ದೇವಾಲಯವನ್ನು ಅಪವಿತ್ರಗೊಳಿಸಿದ್ದಾರೆ ಎಂದು ದೂರಿದ್ದರು. ದೇವಾಲಯವನ್ನು ಶುದ್ಧೀಕರಣ ಮಾಡಲಾಗುತ್ತದೆ ಎಂದು ಹೇಳಿದ್ದರು.
ತುಪ್ಪ ಖರೀದಿ ಟೆಂಡರ್‌ನಲ್ಲಿ ಅವ್ಯವಹಾರ ನಡೆದಿದೆ. ಕಳಪೆ ಗುಣಮಟ್ಟ, ಕಲಬೆರಕೆ ತುಪ್ಪವನ್ನು ಪೂರೈಕೆ ಮಾಡಲಾಗಿದೆ. ಪ್ರತಿದಿನ ಸುಮಾರು 3 ಲಕ್ಷ ಲಡ್ಡು ಬೇಡಿಕೆ ಇರುವ ದೇವಾಲಯಕ್ಕೆ ಕಲಬೆರಕೆ ತುಪ್ಪವನ್ನು ಪೂರೈಕೆ ಮಾಡಿ ಕೋಟ್ಯಾಂತರ ಭಕ್ತರ ಭಾವನೆಗೆ ಧಕ್ಕೆ ತರಲಾಗಿದೆ ಎಂದು ಮುಖ್ಯಮಂತ್ರಿಗಳು ಆರೋಪಿಸಿದ್ದರು.
ತುಪ್ಪದ ಕಲಬೆರಕೆ ಪತ್ತೆಗೆ ಪರೀಕ್ಷಾ ಸೌಲಭ್ಯದ ಕೊರತೆ ಇದೆ. ದೇವಾಲಯಕ್ಕೆ ತುಪ್ಪ ಪೂರೈಕೆ ಮಾಡುತ್ತಿದ್ದವರು ಪರಿಸ್ಥಿತಿಯ ಲಾಭ ಪಡೆದುಕೊಂಡು, ತುಪ್ಪದ ಮಾದರಿಯಲ್ಲಿ ಮೀನಿನ ಎಣ್ಣೆ, ಗೋಮಾಂಸದ ಚರ್ಬಿ, ಹಂದಿಯ ಕೊಬ್ಬಿನ ಅಂಶಗಳನ್ನು ಸೇರಿಸಿರುವುದು ಬಹಿರಂಗವಾಗಿದೆ ಎಂದು ಮುಖ್ಯಮಂತ್ರಿಗಳು ದೂರಿದ್ದರು. ಬಳಿಕ ತುಪ್ಪದ ಮಾದರಿಯನ್ನು ಸಂಗ್ರಹ ಮಾಡಿ ಗುಜರಾತ್‌ನ ಪ್ರಯೋಗಾಲಯಕ್ಕೆ ಕಳಿಸಲಾಗಿತ್ತು.
ತಿರುಪತಿ ಲಡ್ಡು ತಯಾರಿಕೆ ತುಪ್ಪದ ವಿವಾದದ ನಡುವೆಯೇ ದೇವಾಲಯಕ್ಕೆ ತುಪ್ಪ ಪೂರೈಕೆಗಾಗಿ 25,000 ಹಸುಗಳ ಗೋಶಾಲೆ ತೆರೆಯುವಂತೆ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರಿಗೆ ವಿಎಚ್‌ಪಿ ಒತ್ತಾಯಿಸಿತ್ತು.












Click it and Unblock the Notifications