5,000 ರೂ. ಲಂಚದ ಹಣವನ್ನೇ ನುಂಗಿದ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಮಧ್ಯಪ್ರದೇಶ ಅಧಿಕಾರಿ!
ಭೋಪಾಲ್ ಜುಲೈ 25: ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಅಧಿಕಾರಿಯೊಬ್ಬ ಲಂಚದ ಹಣವನ್ನೇ ನುಂಗಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. 5,000 ರೂಪಾಯಿ ಲಂಚ ಪಡೆಯುತ್ತಿದ್ದ ವೇಳೆ ಅಧಿಕಾರಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ. ಈ ವೇಳೆ ತಡ ಮಾಡದೆ ಹಣವನ್ನು ತನ್ನ ಬಾಯಿಗೆ ಹಾಕಿಕೊಂಡು ನುಂಗಿದ್ದಾರೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ಮಧ್ಯಪ್ರದೇಶದ ಕಟ್ನಿಯಲ್ಲಿ ಕಂದಾಯ ಇಲಾಖೆಯ ಪಟ್ವಾರಿಯೊಬ್ಬರು ಸೋಮವಾರ ಜಬಲ್‌ಪುರ ಲೋಕಾಯುಕ್ತ ವಿಶೇಷ ಪೊಲೀಸ್ ಘಟಕದ (ಎಸ್‌ಪಿಇ) ತಂಡದಿಂದ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದಾರೆ. ಮಧ್ಯಪ್ರದೇಶದ ಕಟ್ನಿ ಜಿಲ್ಲೆಯಲ್ಲಿ ನಿಯೋಜಿಸಲಾದ ಪಟ್ವಾರಿ ಗಜೇಂದ್ರ ಸಿಂಗ್ ಲಂಚದ ಹಣವನ್ನು ಜಗಿದು ನುಂಗಿದ ಆರೋಪಿ.

ಪಟ್ವಾರಿ ಗಜೇಂದ್ರ ಸಿಂಗ್ ಅವರು ಭೂ ಪ್ರಕರಣದಲ್ಲಿ ದೂರುದಾರ ಚಂದನ್ ಸಿಂಗ್ ಲೋಧಿ ಅವರಿಂದ 5,000 ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ನಂತರ ಲೋಧಿ ಲೋಕಾಯುಕ್ತ ಜಬಲ್‌ಪುರ್‌ಗೆ ವಿಷಯದ ಬಗ್ಗೆ ದೂರು ನೀಡಿದ್ದರು. ತನಿಖೆಯ ನಂತರ, ಲೋಕಾಯುಕ್ತ ಜಬಲ್ಪುರದ ತಂಡವು ಬಿಲಹರಿಗೆ ತಲುಪಿತು. ಪಟ್ವಾರಿ ಗಜೇಂದ್ರ ಸಿಂಗ್ ಅವರ ಖಾಸಗಿ ಕಚೇರಿಯಲ್ಲಿ 4,500 ರೂಪಾಯಿ ಲಂಚವನ್ನು ಸ್ವೀಕರಿಸುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದರು.
ಪಟ್ವಾರಿ ಗಜೇಂದ್ರ ಸಿಂಗ್ ನನ್ನು ಬಂಧಿಸಿದ ಕೂಡಲೇ ಲಂಚದ ಹಣವನ್ನು ಆತ ನುಂಗಿದ್ದಾನೆ. ನಂತರ ಜಿಲ್ಲಾಸ್ಪತ್ರೆಗೆ ಕರೆತರಲಾಯಿತು. ಸಾಕಷ್ಟು ಪ್ರಯತ್ನಗಳ ನಂತರ, ಲಂಚದ ನೋಟುಗಳನ್ನು ಅಂತಿಮವಾಗಿ ಅವರ ಬಾಯಿಯಿಂದ ತಿರುಳಿನ ರೂಪದಲ್ಲಿ ಹೊರತೆಗೆಯಲಾಯಿತು.

"ಸಿಂಗ್ ಲಂಚ ಕೇಳುತ್ತಿದ್ದಾರೆಂದು ಬರ್ಖೇಡಾ ಗ್ರಾಮದ ವ್ಯಕ್ತಿಯೊಬ್ಬರು ನಮಗೆ ದೂರು ನೀಡಿದ್ದರು. ಅವರು ಹಣವನ್ನು ಸ್ವೀಕರಿಸಿದ್ದನ್ನು ನಮ್ಮ ತಂಡ ನೋಡುತ್ತಿದ್ದಂತೆ ಪಟ್ವಾರಿ ಎಸ್‌ಪಿಇ ತಂಡವನ್ನು ಗುರುತಿಸಿ ಹಣವನ್ನು ನುಂಗಿದರು. ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು, ಅಲ್ಲಿ ಅವರು ಆರೋಗ್ಯವಾಗಿದ್ದಾರೆ ಎಂದು ತಿಳಿದುಬಂದಿದೆ'' ಎಂದು ಎಸ್‌ಪಿಇ ಪೊಲೀಸ್ ವರಿಷ್ಠಾಧಿಕಾರಿ ಸಂಜಯ್ ಸಾಹು ತಿಳಿಸಿದ್ದಾರೆ. ಆತನ ವಿರುದ್ಧ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಸಲಾಗುತ್ತಿದೆ ಎಂದು ಎಸ್ಪಿ ತಿಳಿಸಿದ್ದಾರೆ.












Click it and Unblock the Notifications