ಭ್ರಷ್ಟಾಚಾರ ಆರೋಪ: ಉದ್ಯೋಗ ಕಳೆದುಕೊಂಡ 36,000 ಶಿಕ್ಷಕರು
ನೇಮಕಾತಿ ನಡೆದ ಸಂದರ್ಭದಲ್ಲಿ ಶಿಕ್ಷಕರಿಗೆ ಸರಿಯಾದ ತರಬೇತಿಯನ್ನು ನೀಡಲಾಗಿಲ್ಲ ಎಂಬ ಕಾರಣದಿಂದಾಗಿ ಕೋಲ್ಕತ್ತಾ ಹೈಕೋರ್ಟ್ ಸುಮಾರು 36000 ಶಿಕ್ಷಕರ ನೇಮಕಾತಿಯನ್ನು ರದ್ದುಗೊಳಿಸಿದೆ. ಪಶ್ಚಿಮ ಬಂಗಾಳ ಸರ್ಕಾರಿ ಬೆಂಬಲಿತ ಮತ್ತು ಅನುದಾನಿತ ಶಾಲೆಗಳಲ್ಲಿ ಶಿಕ್ಷಕರ ನೇಮಕಾತಿ ವೇಳೆ ಸರಿಯಾಗಿ ನೇಮಕಾತಿ ಪ್ರಕ್ರಿಯೆಯನ್ನು ನಡೆಸಲಾಗಿಲ್ಲ ಎಂದು ಆರೋಪ ಮಾಡಲಾಗಿದೆ.
ಈ ಬಗ್ಗೆ ಆದೇಶವನ್ನು ಹೊರಡಿಸಿದ ಕೋಲ್ಕತ್ತಾ ಹೈಕೋರ್ಟ್‌ನ ನ್ಯಾಯಮೂರ್ತಿ ಅಬಿಜಿತ್ ಗಣಗೋಪದ್ಯಾಯ, "ಭ್ರಷ್ಟಾಚಾರವು ಅಗಾಧ ಪ್ರಮಾಣದಲ್ಲಿ ನಡೆದಿದೆ. ಪಶ್ಚಿಮ ಬಂಗಾಳದಲ್ಲಿ ಈವರೆಗೆ ಕಾಣದ ಭಾರೀ ಪ್ರಮಾಣದ ಭ್ರಷ್ಟಾಚಾರ ಪ್ರಕರಣ ಇದಾಗಿದೆ," ಎಂದು ತಿಳಿಸಿದ್ದಾರೆ. ಹಾಗೆಯೇ ಈ ಸಂದರ್ಭದಲ್ಲಿ ನೇಮಕಾತಿ ಪ್ರಕ್ರಿಯೆ ರದ್ಧತಿಗೆ ಘೋಷಣೆ ಮಾಡಿದ್ದಾರೆ.

ಒಟ್ಟು 17 ಪುಟಗಳ ಆದೇಶ ನೀಡಿದ ಕೋರ್ಟ್
"ಸುಮಾರು 36000 ಶಿಕ್ಷಕರನ್ನು 2016ರಲ್ಲಿ ನೇಮಕಾತಿ ಮಾಡಲಾಗಿದೆ. ಈ ನೇಮಕಾತಿ ಪ್ರಕ್ರಿಯೆ ವೇಳೆ ಈ ಶಿಕ್ಷಕರು ಯಾವುದೇ ತರಬೇತಿಯನ್ನು ಪಡೆದಿರಲಿಲ್ಲ. ಅದರಿಂದಾಗಿ ಈ ಶಿಕ್ಷಕರ ನೇಮಕಾತಿಯನ್ನೇ ರದ್ದು ಮಾಡಲಾಗುತ್ತದೆ," ಎಂದು ಗಣಗೋಪದ್ಯಾಯ ಹೇಳಿದ್ದಾರೆ. ಹಾಗೆಯೇ ಸುಮಾರು 17 ಪುಟಗಳ ಆದೇಶವನ್ನು ಹೊರಡಿಸಿದ್ದಾರೆ.
ಶಿಕ್ಷಕರ ನೇಮಕಾತಿ ಮಾಡುವ ಸಂದರ್ಭದಲ್ಲಿ ಯಾವುದೇ ಸಂದರ್ಶನವನ್ನು ಸರಿಯಾದ ರೀತಿಯಲ್ಲಿ ಮಾಡಲಾಗಿಲ್ಲ, ತರಬೇತಿಯನ್ನು ಕೂಡಾ ನೀಡಲಾಗಿಲ್ಲ ಎಂಬ ಅಂಶಗಳನ್ನು ಒಳಗೊಂಡ ಒಟ್ಟು 17 ಪುಟಗಳ ಆದೇಶವನ್ನು ನ್ಯಾಯಮೂರ್ತಿಗಳು ನೀಡಿದ್ದಾರೆ. ಈ ಪ್ರಕರಣವನ್ನು ನಾವು ಪರಿಶೀಲನೆ ಮಾಡಿದಾಗ ಭಾರೀ ಪ್ರಮಾಣದ ಭ್ರಷ್ಟಾಚಾರ ನಡೆದಿದೆ ಎಂಬುವುದು ಸಾಬೀತಾಗುತ್ತದೆ ಎಂದಿದ್ದಾರೆ.
2016ರಲ್ಲಿ ಈ ಯಾವುದೇ ತರಬೇತಿ ಇಲ್ಲದ 36000 ಮಂದಿಯನ್ನು ಪಶ್ಚಿಮ ಬಂಗಾಳ ಪ್ರಾಥಮಿಕ ಶಿಕ್ಷಣ ಮಂಡಳಿಯು ನೇಮಕಾತಿ ಮಾಡಿದೆ. ಈ ಬೋರ್ಡ್‌ನ ಮಾಜಿ ಅಧ್ಯಕ್ಷರು ಮಾಣಿಕ್ ಭಟ್ಟಾಚಾರ್ಯ ಆಗಿದ್ದರು. ಪ್ರಸ್ತುತ ಮಾಣಿಕ್ ಭಟ್ಟಾಚಾರ್ಯ ದಾಖಲಾತಿ ಪ್ರಕ್ರಿಯೆ ವೇಳೆ ಭ್ರಷ್ಟಾಚಾರ ಮಾಡಲಾಗಿದೆ ಎಂಬ ಆರೋಪದಲ್ಲಿ ಇಡಿ ವಶದಲ್ಲಿದ್ದಾರೆ.
2016ರಲ್ಲಿ ನೇಮಕಾತಿ ಪ್ರಕ್ರಿಯೆಯಲ್ಲಿ ಭಾಗಿಯಾದ ಅಭ್ಯರ್ಥಿಗಳಿಗೆ ಮೂರು ತಿಂಗಳ ಒಳಗಾಗಿ ತರಬೇತಿ ನೀಡಿ ನೇಮಕಾತಿ ಪ್ರಕ್ರಿಯೆಯನ್ನು ನಡೆಸಬೇಕು ಎಂದು ಪಶ್ಚಿಮ ಬಂಗಾಳ ಪ್ರಾಥಮಿಕ ಶಿಕ್ಷಣ ಮಂಡಳಿ ಗೆ ಕೋರ್ಟ್ ಆದೇಶ ನೀಡಿದೆ. ಇನ್ನು ಯಾರೆಲ್ಲ ತರಬೇತಿಯನ್ನು ಪಡೆದಿದ್ದಾರೆ ಅವರು ಕೂಡಾ ಈ ಪ್ರಕ್ರಿಯೆಗೆ ಒಳಗಾಗಲಿದ್ದಾರೆ.
ಕೋರ್ಟ್ ಸಂದರ್ಶನ ಹಾಗೂ ಪರೀಕ್ಷೆ ಸೇರಿದಂತೆ ಎರಡು ರೀತಿಯ ಪ್ರಕ್ರಿಯೆಯನ್ನು ನಡೆಸುವಂತೆ ಹೇಳಿದೆ. ಸಂಪೂರ್ಣ ಸಂದರ್ಶನ ಪ್ರಕ್ರಿಯೆದ ವಿಡಿಯೋ ಮಾಡುವುದು ಕಡ್ಡಾಯವಾಗಿದೆ. 2016ರಲ್ಲಿ ನೇಮಕಾತಿ ಪ್ರಕ್ರಿಯೆ ನಡೆಸಿದಾಗ ಇದ್ದ ನಿಮಯದಂತೆಯೇ ನೇಮಕಾತಿ ಪ್ರಕ್ರಿಯೆಯನ್ನು ನಡೆಸಲು ಕೋರ್ಟ್ ಆದೇಶ ನೀಡಿದೆ. ಹಾಗೆಯೇ ಈ ಪ್ರಕ್ರಿಯೆಗೆ ಯಾವದೇ ಹೊಸ ಅಭ್ಯರ್ಥಿಗಳ ಸೇರ್ಪಡೆ ಮಾಡುವಂತಿಲ್ಲ ಎಂದು ತಿಳಿಸಲಾಗಿದೆ.
2016ರಲ್ಲಿ ನೇಮಕಾತಿಯಾದ ಪ್ರಾಥಮಿಕ ಶಾಲಾ ಶಿಕ್ಷಕರು ಮುಂದಿನ ನಾಲ್ಕು ತಿಂಗಳ ಕಾಲ ಶಿಕ್ಷಕರಾಗಿ ಉಳಿಯಲಿದ್ದಾರೆ. 2016ರಲ್ಲಿ ನಡೆದ ನೇಮಕಾತಿ ಪ್ರಕ್ರಿಯೆ ಸರಿ ಇಲ್ಲದ ಕಾರಣ ಈಗ ಮತ್ತೆ ಹೊಸದಾಗಿ ನೇಮಕಾತಿ ಪ್ರಕ್ರಿಯೆ ನಡೆಸಲಾಗುತ್ತದೆ. ಇದರಲ್ಲಿ ಹಳೆಯ ಅಭ್ಯರ್ಥಿಗಳೇ ಇರುತ್ತಾರೆ. ಈ ಸಂದರ್ಭದಲ್ಲಿ ಮಂಡಳಿಯು ಅದೇ ಶಿಕ್ಷಕರನ್ನು ಶಿಫಾರಸು ಮಾಡಿದರೆ, ಅವರು ಅದೇ ಶಾಲೆಯಲ್ಲಿ ಎಂದಿನಂತೆ ಕಾರ್ಯನಿರ್ವಹಣೆ ಮುಂದುವರಿಸಲಿದ್ದಾರೆ. ಆದರೆ ನಾಲ್ಕು ತಿಂಗಳ ವೇತನ ಲಭ್ಯವಾಗುವುದಿಲ್ಲ.












Click it and Unblock the Notifications