ಕೇಂದ್ರ ಬಜೆಟ್ 2021; ಬರಲಿದೆ ಮತ್ತಷ್ಟು ಕೋವಿಡ್ ಲಸಿಕೆ
ನವದೆಹಲಿ, ಫೆಬ್ರವರಿ 01; "ಭಾರತ ಈಗಾಗಲೇ ಎರಡು ಕೋವಿಡ್ ಲಸಿಕೆಗಳನ್ನು ಹೊಂದಿದೆ. ಮತ್ತಷ್ಟು ಲಸಿಕೆಗಳನ್ನು ನಿರೀಕ್ಷಿಸಲಾಗುತ್ತಿದೆ" ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಣೆ ಮಾಡಿದ್ದಾರೆ.
ಸೋಮವಾರ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2021ನೇ ಸಾಲಿನ ಬಜೆಟ್ ಮಂಡನೆ ಮಾಡುತ್ತಿದ್ದಾರೆ. ತಮ್ಮ ಬಜೆಟ್ ಭಾಷಣದಲ್ಲಿ ಅವರು ಕೋವಿಡ್ ಬಗ್ಗೆಯೂ ವಿವರಣೆ ನೀಡಿದ್ದಾರೆ.
"ಕೋವಿಡ್ ಲಸಿಕೆಗಾಗಿ 35,000 ಕೋಟಿ ರೂ. ನೀಡಲಾಗುತ್ತದೆ. ಈಗ ಭಾರತ 2 ಕೋವಿಡ್ ಲಸಿಕೆಗಳನ್ನು ಹೊಂದಿದೆ. ಮತ್ತಷ್ಟು ಲಸಿಕೆಗಳನ್ನು ನಿರೀಕ್ಷಿಸಲಾಗುತ್ತಿದೆ" ಎಂದು ಹೇಳಿದರು.

"ಭಾರತ ಕೋವಿಡ್ ವಿರುದ್ಧ ತನ್ನ ನಾಗರಿಕರನ್ನು ಮಾತ್ರವಲ್ಲದೇ 100 ಅಥವ ಹೆಚ್ಚಿನ ದೇಶಗಳನ್ನು ರಕ್ಷಿಸಲು ನಿಂತಿದೆ" ಎಂದು ನಿರ್ಮಲಾ ಸೀತಾರಾಮನ್ ವಿವರಣೆ ನೀಡಿದರು.
ಆತ್ಮನಿರ್ಭರ ಭಾರತ; ಬಜೆಟ್ ಭಾಷಣದಲ್ಲಿ ಕೋವಿಡ್ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಘೋಷಣೆ ಮಾಡಿದ ಆತ್ಮ ನಿರ್ಭರ ಭಾರತ ಬಗ್ಗೆಯೂ ಪ್ರಸ್ತಾಪಿಸಲಾಯಿತು.
"ಮೇ 2020ರಲ್ಲಿ ಸರ್ಕಾರ ಆತ್ಮ ನಿರ್ಭರ ಭಾರತ ಪ್ಯಾಕೇಜ್ ಘೋಷಣೆ ಮಾಡಿತು. ಆರ್ಥಿಕತೆಗೆ ಚೈತನ್ಯ ತುಂಬಲು ನಾವು ಇನ್ನೂ ಎರಡು ಆತ್ಮ ನಿರ್ಭರ ಪ್ಯಾಕೇಜ್ ಘೋಷಣೆ ಮಾಡಿದೆವು. ಆರ್‌ಬಿಐ ಕೈಗೊಂಡ ಕ್ರಮಗಳು ಸೇರಿದಂತೆ ಎಲ್ಲಾ ಪ್ಯಾಕೇಜ್‌ಗಳ ಅರ್ಥಿಕ ಪರಿಣಾಮಗಳ ಒಟ್ಟು ಮೊತ್ತ ಸುಮಾರು 27.1 ಲಕ್ಷ ಕೋಟಿ ರೂ. ಎಂದು ಅಂದಾಜಿಸಲಾಗಿದೆ" ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.












Click it and Unblock the Notifications