BSF: ಮಿಷನ್ ವಂದೇ ಮಾತರಂ: ಐತಿಹಾಸಿಕ ಮೌಂಟ್ ಎವರೆಸ್ಟ್ ಶಿಖರ ಏರಲು ಸಜ್ಜಾದ ಬಿಎಸ್‌ಎಫ್ ಮಹಿಳಾ ಪರ್ವತಾರೋಹಿಗಳು
ಭಾರತೀಯ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಪ್ರಸ್ತುತ ತನ್ನ ವಜ್ರ ಮಹೋತ್ಸವ ಆಚರಿಸುತ್ತಿದೆ. 1965ರಲ್ಲಿ ಸ್ಥಾಪನೆಯಾದ ಈ ಪಡೆಯು ದೇಶದ ಭದ್ರತೆಗಾಗಿ ತೋರಿರುವ ಶೌರ್ಯ, ತ್ಯಾಗ ಮತ್ತು ಅಚಲ ಬದ್ಧತೆಯ ಭವ್ಯ ಇತಿಹಾಸವನ್ನು ಹೊಂದಿದೆ. ಬಿಎಸ್‌ಎಫ್‌ನ ವಜ್ರ ಮಹೋತ್ಸವದ ಆಚರಣೆಯ ಭಾಗವಾಗಿ ಹಾಗೂ ಭಾರತದ ರಾಷ್ಟ್ರಗೀತೆ "ವಂದೇ ಮಾತರಂ"ನ 150ನೇ ವರ್ಷದ ನೆನಪಿಗಾಗಿ, ಬಿಎಸ್‌ಎಫ್‌ನ ಸಂಪೂರ್ಣ ಮಹಿಳಾ ಪರ್ವತಾರೋಹಿಗಳ ತಂಡವು "ಮಿಷನ್ ವಂದೇ ಮಾತರಂ" ಅಡಿಯಲ್ಲಿ ವಿಶ್ವದ ಅತಿ ಎತ್ತರದ ಮೌಂಟ್ ಎವರೆಸ್ಟ್ ಶಿಖರವನ್ನು ಏರಲು ಐತಿಹಾಸಿಕ ಸಾಹಸಕ್ಕೆ ಸಜ್ಜಾಗಿದೆ.
ಈ ಪರ್ವತಾರೋಹಣ ಅಭಿಯಾನವು ಗಡಿ ಭದ್ರತಾ ಪಡೆಯ ಒಂದು ಮೈಲಿಗಲ್ಲು ಯೋಜನೆಯಾಗಿದ್ದು, ಇದು ರಾಷ್ಟ್ರೀಯ ಹೆಮ್ಮೆ, ಮಹಿಳಾ ಸಬಲೀಕರಣ (ನಾರಿ ಶಕ್ತಿ ವಂದನೆ) ಮತ್ತು ಸಾಹಸ ಮನೋಭಾವವನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. ಬಿಎಸ್‌ಎಫ್‌ನ ಸಂಪೂರ್ಣ ಮಹಿಳಾ ಪರ್ವತಾರೋಹಿಗಳ ತಂಡವೊಂದು ಮೌಂಟ್ ಎವರೆಸ್ಟ್ ಶಿಖರವನ್ನು ಏರಲು ಕೈಗೊಂಡಿರುವ ಇತಿಹಾಸದ ಮೊದಲ ಪ್ರಯತ್ನ ಇದಾಗಿದ್ದರಿಂದ, ಈ ಮಿಷನ್ ಸಾಹಸ ಲೋಕದಲ್ಲಿ ಐತಿಹಾಸಿಕ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಈ ಮಹಾನ್ ಸಾಧನೆಗೆ ರಾಷ್ಟ್ರೀಯತೆಯ ಮತ್ತಷ್ಟು ಕಳೆಯನ್ನು ತುಂಬಲು, ಪರ್ವತಾರೋಹಿಗಳು ವಿಶ್ವದ ಅತ್ಯಂತ ಎತ್ತರದ ಶಿಖರವಾದ ಮೌಂಟ್ ಎವರೆಸ್ಟ್‌ನ ತುತ್ತತುದಿಯಿಂದ "ವಂದೇ ಮಾತರಂ" ಗೀತೆಯನ್ನು ಹಾಡಲಿದ್ದಾರೆ.

ಈ ಬಿಎಸ್‌ಎಫ್ ಎವರೆಸ್ಟ್ ತಂಡದಲ್ಲಿ ಲಡಾಖ್‌ನ ಕೌಸರ್ ಫಾತಿಮಾ, ಪಶ್ಚಿಮ ಬಂಗಾಳದ ಮುನ್ಮುನ್ ಘೋಷ್, ಉತ್ತರಾಖಂಡದ ರಬೇಕಾ ಸಿಂಗ್ ಮತ್ತು ಲಡಾಖ್/ಕಾರ್ಗಿಲ್‌ನ ತ್ಸೆರಿಂಗ್ ಚೋರೊಲ್ ಸೇರಿದ್ದಾರೆ. ದೇಶದ ವಿವಿಧ ಪ್ರದೇಶಗಳನ್ನು ಪ್ರತಿನಿಧಿಸುವ ಮತ್ತು ಅತ್ಯಂತ ಸಾಮಾನ್ಯ ಹಿನ್ನೆಲೆಯಿಂದ ಬಂದಿರುವ ಈ ನಾಲ್ವರು ಪರ್ವತಾರೋಹಿಗಳು ಧೈರ್ಯ, ದೃಢಸಂಕಲ್ಪ, ಶಿಸ್ತು ಮತ್ತು ರಾಷ್ಟ್ರ ಸೇವೆಯ ಬದ್ಧತೆಯ ಸಾಕಾರ ರೂಪದಂತಿದ್ದಾರೆ. ಈ ಪ್ರತಿಷ್ಠಿತ ಸಾಹಸಯಾತ್ರೆಯಲ್ಲಿ ಇವರು ಭಾಗವಹಿಸಿರುವುದು, ಗಡಿ ಭದ್ರತಾ ಪಡೆಯ ಮಹಿಳಾ ಸಿಬ್ಬಂದಿಯ ಹೆಚ್ಚುತ್ತಿರುವ ಸಾಮರ್ಥ್ಯ ಹಾಗೂ ಸವಾಲಿನ ಕಾರ್ಯಾಚರಣೆ ಮತ್ತು ಸಾಹಸಮಯ ಚಟುವಟಿಕೆಗಳಲ್ಲಿ ಅವರ ಸಕ್ರಿಯ ಪಾತ್ರವನ್ನು ಪ್ರತಿಬಿಂಬಿಸುತ್ತದೆ.
ಈಗಾಗಲೇ ತಂಡವು ಹವಾಮಾನಕ್ಕೆ ಹೊಂದಿಕೊಳ್ಳುವ (Acclimatisation) ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದು, ಪ್ರಸ್ತುತ 'ಸೌತ್ ಕೋಲ್' (South Col) ಬೇಸ್ ಕ್ಯಾಂಪ್‌ನಲ್ಲಿ ಬೀಡುಬಿಟ್ಟಿದೆ. ಹವಾಮಾನ ಪರಿಸ್ಥಿತಿಗಳು ಅನುಕೂಲಕರವಾಗಿದ್ದರೆ, ಮೇ 21ರ (ನಾಳೆ) ಮುಂಜಾನೆ ಶಿಖರದ ತುತ್ತತುದಿಯನ್ನು ತಲುಪಲು ಅಂತಿಮ ಸಾಹಸವನ್ನು ಯೋಜಿಸಲಾಗಿದೆ.
ಈ "ಮಿಷನ್ ವಂದೇ ಮಾತರಂ" ಮೂಲಕ ಗಡಿ ಭದ್ರತಾ ಪಡೆಯು (BSF) ರಾಷ್ಟ್ರೀಯ ಭಾವೈಕ್ಯತೆ, ಮಹಿಳಾ ಸಬಲೀಕರಣ, ದೇಶಭಕ್ತಿಯ ಬದ್ಧತೆ ಮತ್ತು ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯ ಸಂದೇಶವನ್ನು ಸಾರಲು ಬಯಸಿದೆ. ಇದರೊಂದಿಗೆ ದೇಶದ ಯುವ ಪೀಳಿಗೆಗೆ ಶ್ರೇಷ್ಠತೆ, ಧೈರ್ಯ ಮತ್ತು ಮಾತೃಭೂಮಿಯ ಸೇವೆಗೆ ಪ್ರೇರಣೆ ನೀಡುವ ಗುರಿಯನ್ನು ಹೊಂದಿದೆ.












Click it and Unblock the Notifications