ಅಮರನಾಥ ಯಾತ್ರೆ: ಸಾವಿರಾರು ಯಾತ್ರಿಕರ ನೆರವಿಗೆ ನಿಂತ ಬಿಎಸ್‌ಎಫ್ ತಂಡ
ಅಮರನಾಥ ಯಾತ್ರೆ ವೇಳೆ ಸಾವಿರಾರು ಯಾತ್ರಾರ್ಥಿಗಳಿಗೆ ಸಹಾಯ ಮಾಡುವಲ್ಲಿ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಪ್ರಮುಖ ಪಾತ್ರ ವಹಿಸುತ್ತಿದೆ. ವೈದ್ಯಕೀಯ ಸಹಾಯದಿಂದ ಹಿಡಿದು ರಕ್ಷಣಾ ಕಾರ್ಯಾಚರಣೆಯವರೆಗೆ, ಹಗಲಿರುಳು ಎನ್ನದೇ, ಯಾತ್ರಾರ್ಥಿಗಳೆಲ್ಲರೂ ಸುರಕ್ಷಿತವಾಗಿರುವುದನ್ನು ಖಚಿತಪಡಿಸಿಕೊಳ್ಳಲು ಬಿಎಸ್‌ಎಫ್ ತಂಡಗಳು ಶ್ರಮಿಸುತ್ತಿವೆ.
ಈ ವರ್ಷದ ಯಾತ್ರೆ ಜುಲೈ 3ರಂದು ಪ್ರಾರಂಭವಾಗಿದ್ದು, ಈಗಾಗಲೇ ಸುಮಾರು 1.75 ಲಕ್ಷ ಜನರು ಪವಿತ್ರ ಅಮರನಾಥ ಗುಹೆಗೆ ಭೇಟಿ ನೀಡಿದ್ದಾರೆ. ಈ ಮಾರ್ಗವು ತುಂಬಾ ಕಠಿಣವಾಗಿದೆ. ಕಡಿದಾದ ಬೆಟ್ಟಗಳು, ಅತ್ಯಂತ ಶೀತದ ಹವಾಮಾನ ಅನೇಕ ಯಾತ್ರಾರ್ಥಿಗಳಿಗೆ ತಲೆತಿರುಗುವಿಕೆ, ದಣಿವು ಅಥವಾ ಉಸಿರಾಟದ ತೊಂದರೆ ಉಂಟಾಗುವಂತೆ ಮಾಡಿದೆ. ಆದರೆ, ಬಿಎಸ್‌ಎಫ್ ಮಾತ್ರ ಯಾತ್ರಾರ್ಥಿಗಳ ನೆರವಿಗೆ ನಿಂತು ಚಿಕಿತ್ಸೆ ಕೊಡಿಸುವ ಮೂಲಕ ಸಹಕಾರ ನೀಡಿದೆ.

ಬಿಎಸ್‌ಎಫ್‌ನಿಂದ ತ್ವರಿತ ವೈದ್ಯಕೀಯ ಸಹಾಯ
ಬಿಎಸ್‌ಎಫ್ ಎರಡು ಪ್ರಮುಖ ಮಾರ್ಗಗಳಾದ ಪಹಲ್ಗಾಮ್ ಮತ್ತು ಬಾಲ್ಟಾಲ್ ಹಳಿಗಳಲ್ಲಿ ರಕ್ಷಣಾ ಮತ್ತು ವೈದ್ಯಕೀಯ ತಂಡಗಳನ್ನು ನಿಯೋಜನೆ ಮಾಡಿದೆ. ಈ ತಂಡಗಳು ತುರ್ತು ಪರಿಸ್ಥಿತಿಗಳನ್ನು ನಿರ್ವಹಿಸಲು ತರಬೇತಿ ಪಡೆದಿವೆ. ಆಮ್ಲಜನಕ ಸಿಲಿಂಡರ್‌ಗಳು, ಪ್ರಥಮ ಚಿಕಿತ್ಸಾ ಕಿಟ್‌ಗಳು ಮತ್ತು ಇತರ ವೈದ್ಯಕೀಯ ಸಾಮಗ್ರಿಗಳನ್ನು ಸಾಗಿಸುವ ಕೆಲಸವನ್ನು ಮಾಡುತ್ತಿವೆ. ಈ ಮೂಲಕ ಯತ್ರಾರ್ಥಿಗಳ ಆರೋಗ್ಯ ಸಮಸ್ಯೆಗಳನ್ನು ನಿಭಾಯಿಸುವ ಕೆಲಸ ಮಾಡುತ್ತಿದೆ.
ಈ ಬಗ್ಗೆ ಬಿಎಸ್‌ಎಫ್ ವಕ್ತಾರರೊಬ್ಬರು ಮಾತನಾಡಿದ್ದು, ಪ್ರತಿಯೊಬ್ಬ ಯಾತ್ರಿಕರಿಗೆ ಸಹಾಯ ಮಾಡಲು ನಾವು 24/7ನಲ್ಲಿ ಕಾರ್ಯನಿರ್ವಹಿಸುತ್ತಿದ್ದೇವೆ. ಅವರ ಸುರಕ್ಷತೆಯೇ ನಮ್ಮ ಮುಖ್ಯ ಕಾಳಜಿ ಎಂದು ಹೇಳಿದರು.
ಬಿಎಸ್‌ಎಫ್‌ನ ಈ ಮಹತ್ವದ ಕಾರ್ಯದಿಂದಾಗಿ ಉಸಿರಾಟದ ತೊಂದರೆ ಇರುವ ಅನೇಕ ಜನರಿಗೆ ಸ್ಥಳದಲ್ಲೇ ಆಮ್ಲಜನಕದ ಬೆಂಬಲ ಸಿಕ್ಕಾಂತಾಗಿದೆ. ಇನ್ನೂ ಉಸಿರಾಟದ ತೊಂದರೆಯಿಂದ ಗಂಭೀರಗೊಂಡವರನ್ನು ಸುರಕ್ಷಿತ ಪ್ರದೇಶಗಳಿಗೆ ಸಾಗಿಸುತ್ತಿದೆ ಹಾಗೂ ಅವರಿಗೆ ಹೆಚ್ಚಿನ ಚಿಕಿತ್ಸೆ ಕೊಡಿಸುವ ಕೆಲಸವನ್ನು ಮಾಡುತ್ತಿದೆ.
ತೀರ್ಥಯಾತ್ರೆಯ ಮಾರ್ಗವನ್ನು ಸ್ವಚ್ಛವಾಗಿಡಲು ಬಿಎಸ್‌ಎಫ್ ತುಂಬಾ ಸಹಾಯ ಮಾಡುತ್ತಿದೆ. ಗ್ರಾಮೀಣ ನೈರ್ಮಲ್ಯ ನಿರ್ದೇಶನಾಲಯದ ಜೊತೆಗೆ, ಕಸವನ್ನು ನಿರ್ವಹಿಸಲು ಮತ್ತು ನೈರ್ಮಲ್ಯವನ್ನು ಕಾಪಾಡಿಕೊಳ್ಳಲು ಮೊಬೈಲ್ ಶೌಚಾಲಯಗಳು, ತ್ಯಾಜ್ಯ ತೊಟ್ಟಿಗಳನ್ನು ಸ್ಥಾಪನೆ ಮಾಡಿದೆ.
ಬಿಎಸ್‌ಎಫ್ ಬೆಂಬಲಕ್ಕೆ ಧನ್ಯವಾದ ಅರ್ಪಿಸಿದ ಯಾತ್ರಿಕರು
ಬಿಎಎಫ್‌ನ ಈ ಮಹತ್ವದ ಕಾತರ್ಯಕ್ಕೆ ಯಾತ್ರಿಕರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಉತ್ತರ ಪ್ರದೇಶದ ಯಾತ್ರಿಕರಾದ ಸುನೀತಾ ದೇವಿ ಎಂಬುವವರು ಮಾತನಾಡಿ, "ಈ ಯಾತ್ರೆ ತುಂಬಾ ಕಠಿಣವಾಗಿತ್ತು. ಜನರು ಅನಾರೋಗ್ಯಕ್ಕೆ ಒಳಗಾಗುವುದನ್ನು ನಾನು ನೋಡಿದೆ. ಆದರೆ, ಬಿಎಸ್‌ಎಫ್ ತಂಡದವರು ಅವರಿಗೆ ಚಿಕಿತ್ಸೆ ಕೊಡಿಸುವಲ್ಲಿ ಸಾಕಷ್ಟು ಶ್ರಮಿಸುತ್ತಿದ್ದಾರೆ. ಇದು ದೇವರ ಕೆಲಸವಾಗಿದೆ," ಎಂದು ಹೇಳಿದರು.
ಮಹಾರಾಷ್ಟ್ರದ ಮತ್ತೊಬ್ಬ ಯಾತ್ರಿಕ ರಾಜೇಶ್ ಮೆಹ್ತಾ ಮಾತನಾಡು, "ನಾನು ಅನೇಕ ಯಾತ್ರೆಗಳನ್ನು ಮಾಡಿದ್ದೇನೆ. ಆದರೆ ಇಷ್ಟು ಉತ್ತಮ ವೈದ್ಯಕೀಯ ಮತ್ತು ರಕ್ಷಣಾ ಸಹಾಯವನ್ನು ನಾನು ಎಂದಿಗೂ ನೋಡಿಲ್ಲ. ಬಿಎಸ್‌ಎಫ್ ನಮಗೆ ದಾರಿಯುದ್ದಕ್ಕೂ ಸುರಕ್ಷತೆಯಿಂದ ನೋಡಿಕೊಂಡಿತು" ಎಂದು ಹೇಳಿದರು.
ಇನ್ನೂ ಈ ಭಾಗದಲ್ಲಿ ಭಾರೀ ಮಳೆ ಮುಂದುವರೆದಿದೆ. ಈ ನಡುವೆಯೂ ಯಾತ್ರೆ ಸರಾಗವಾಗಿ ಮುಂದುವರೆಯುತ್ತಿದೆ. ಕಾಶ್ಮೀರ ಕಣಿವೆಯಲ್ಲಿ ಸ್ವಲ್ಪ ಮಳೆ ಆಗಿದ್ದರೂ, ಯಾತ್ರೆ ಯಾವುದೇ ತೊಂದರೆ ಇಲ್ಲದೆ ನಡೆಯುತ್ತಿದೆ. ಇದಕ್ಕೆಲ್ಲ ಕಾರಣ ಬಿಎಸ್‌ಎಫ್ ಪಡೆ ಆಗಿದ್ದು, ಈ ಮಹತ್ವದ ಕಾರ್ಯದಿಂದ ಸಾವಿರಾರು ಯಾತ್ರಿಕರು ಪ್ರಯಾಣವನ್ನು ಸುರಕ್ಷಿತವಾಗಿ ಪೂರ್ಣಗೊಳಿಸಲು ಸಾಧ್ಯವಾಗಿದೆ ಎಂದರೆ ತಪ್ಪಾಗಲಾರದು.












Click it and Unblock the Notifications