ಗೌರವದೊಂದಿಗೆ ಹಿಂದಿರುಗಿದ ಬಿಎಸ್ಎಫ್ ಸೈನಿಕ: ಪಾಕಿಸ್ತಾನದ ಸುಳ್ಳು ಪ್ರಚಾರ ಟೀಕಿಸಿದ ಪ್ರಧಾನಿ ನರೇಂದ್ರ ಮೋದಿ
ಲೋಕಸಭೆ ಅಧಿವೇಶನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಾತನಾಡಿದ್ದು ಭಾರತೀಯ ಸೇನೆಯ ಶೌರ್ಯವನ್ನು ಕೊಂಡಾಡಿದ್ದಾರೆ. ಪಾಕಿಸ್ತಾನದಿಂದ ಬಿಎಸ್‌ಎಫ್ ಸೈನಿಕ ಪೂರ್ಣಮ್ ಕುಮಾರ್ ಶಾ ಅವರು ಗೌರವಯುತವಾಗಿ ಹಿಂದಿರುವ ಬಗ್ಗೆ ಮಾತನಾಡಿದ್ದಾರೆ. ಇದು ಭಾರತದ ರಾಜತಾಂತ್ರಿಕ ಶಕ್ತಿ ಹಾಗೂ ಭಾರತೀಯ ಸಶಸ್ತ್ರ ಪಡೆಗಳ ನೈತಿಕತೆಗೆ ಸಾಕ್ಷಿಯಾಗಿದೆ ಎಂದು ಶ್ಲಾಘಿಸಿದ್ದಾರೆ. ಲೋಕಸಭೆ ವಿಶೇಷ ಅಧಿವೇಶನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು, ಆಪರೇಷನ್ ಸಿಂಧೂರ ಕಾರ್ಯಾಚರಣೆಯ ಬಗ್ಗೆ ಮಾತನಾಡಿದ್ದಾರೆ.
ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ಒಂದು ದಿನದ ನಂತರ ಏಪ್ರಿಲ್ 23 ರಂದು ಪೂರ್ಣಮ್ ಅವರು ಆಕಸ್ಮಿಕವಾಗಿ ಪಾಕಿಸ್ತಾನದ ಗಡಿ ದಾಟಿದ್ದರು. ಅವರನ್ನು ಪಾಕಿಸ್ತಾನಿ ರೇಂಜರ್‌ಗಳು ಸೆರೆಹಿಡಿದಿದ್ದರು. ಭಾರತೀಯ ಸೈನಿಕನ ಕಣ್ಣುಗಳಿಗೆ ಬಟ್ಟೆ ಕಟ್ಟಿರುವ ಚಿತ್ರಗಳನ್ನು ಆನ್‌ಲೈನ್‌ನಲ್ಲಿ ಬಿಡುಗಡೆ ಮಾಡಲಾಗಿತ್ತು. ಇದು ಭಾರತದಲ್ಲಿ ಸಾರ್ವಜನಿಕರ ಕಳವಳ ಹಾಗೂ ಊಹಾಪೋಹಗಳಿಗೆ ಕಾರಣವಾಗಿತ್ತು. ಆದಾಗ್ಯೂ, ಡಿಜಿಎಂಒ (ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರು) ಮಟ್ಟದಲ್ಲಿ ನಿರಂತರ ರಾಜತಾಂತ್ರಿಕ ಚರ್ಚೆಗಳು ನಡೆದಿದ್ದವು. ಪೂರ್ಣಮ್ ಅವರನ್ನು ಸೆರೆಹಿಡಿದ ನಂತರ 14 ರಿಂದ 20 ದಿನಗಳಲ್ಲಿ ಅಟ್ಟಾರಿ-ವಾಘಾ ಗಡಿಯ ಮೂಲಕ ಸುರಕ್ಷಿತವಾಗಿ ಸ್ವದೇಶಕ್ಕೆ ಕಳುಹಿಸಿ ಕೊಡಲಾಗಿದೆ.

ಪ್ರಚಾರದ ಉದ್ದೇಶದಿಂದ ಈ ಘಟನೆಯನ್ನು ದುರುಪಯೋಗಪಡಿಸಿಕೊಳ್ಳುವುದಕ್ಕೆ ಪಾಕಿಸ್ತಾನ ಪ್ರಯತ್ನಿಸಿತ್ತು. ಇದರ ಹೊರತಾಗಿಯೂ ನಮ್ಮ ಸೈನಿಕ ಪೂರ್ಣ ಘನತೆ ಹಾಗೂ ಗೌರವದಿಂದ ಹಿಂದಿರುಗಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ. ಭಾರತದ ದೃಢ ರಾಜತಾಂತ್ರಿಕತೆ ಹಾಗೂ ಅದರ ಭದ್ರತಾ ಪಡೆಗಳ ಮಾತುಕತೆಯಿಂದಾಗಿ ಭಾರತೀಯ ಸೈನಿಕ ಗೌರವಯುತ ಹಿಂದಿರುಗುವುದನ್ನು ಖಚಿತಪಡಿಸುತ್ತದೆ ಎಂದು ಅವರು ಹೇಳಿದ್ದಾರೆ.
ಇನ್ನು ಲೋಕಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು, ಪಾಕಿಸ್ತಾನದಿಂದ ಬಿಎಸ್‌ಎಫ್ ಸೈನಿಕ ಪೂರ್ಣಮ್ ಕುಮಾರ್ ಶಾ ಅವರು ಸುರಕ್ಷಿತವಾಗಿ ಹಿಂದಿರುಗಿರುವುದನ್ನು ಖಚಿತಪಡಿಸಿದ್ದಾರೆ. ಅವರು ಗಡಿಯನ್ನು ದಾಟಿದ್ದರು. ಮೇ 14 ರಂದು ರಾಜತಾಂತ್ರಿಕ ಪ್ರಯತ್ನಗಳ ನಂತರ ಸ್ವದೇಶಕ್ಕೆ ಮರಳಿದ್ದಾರೆ. ಅದಮ್‌ಪುರ ವಾಯುನೆಲೆಯ ಬಗ್ಗೆ ಪಾಕಿಸ್ತಾನದ ತಪ್ಪು ಮಾಹಿತಿಯನ್ನು ಸಹ ಮೋದಿ ಅವರು ಇದೇ ಸಂದರ್ಭದಲ್ಲಿ ಉಲ್ಲೇಖಿಸಿದ್ದಾರೆ.
ಬಲವಾದ ರಕ್ಷಣೆ ವ್ಯವಸ್ಥೆ: ಇನ್ನು ಭಾರತದ ಪಂಜಾಬ್‌ನ ಅದಮ್‌ಪುರ ವಾಯುನೆಲೆಯ ಬಗ್ಗೆ ಪಾಕಿಸ್ತಾನವು ಇತ್ತೀಚೆಗೆ ಹರಡಿದ ಸುಳ್ಳು ಮಾಹಿತಿಯ ಬಗ್ಗೆಯೂ ಪ್ರಧಾನಿ ಮೋದಿ ಅವರು ಸಂಸತ್‌ನಲ್ಲಿ ಉಲ್ಲೇಖಿಸಿದ್ದಾರೆ. ಪಾಕಿಸ್ತಾನವು ನಮ್ಮ ವಾಯುನೆಲೆಯ ಬಗ್ಗೆ ಅಜೆಂಡ್ ರೂಪಿಸಲು ಪ್ರಯತ್ನಿಸುತ್ತಿದೆ ಎಂದು ಹೇಳಿದ್ದಾರೆ. ಮುಂದುವರಿದು ಈ ವಂಚನೆಯನ್ನು ಎದುರಿಸಲು, ನಮ್ಮ ಸೈನಿಕರ ನೈತಿಕತೆಯನ್ನು ಹೆಚ್ಚಿಸಲು ಹಾಗೂ ಸುಳ್ಳುಗಳನ್ನು ಬಹಿರಂಗಪಡಿಸುವ ಉದ್ದೇಶದಿಂದಲೇ ನಾನು ಮರುದಿನ ಅಂದರೆ ಮೇ 13 ರಂದು ಆದಮ್‌ಪುರಕ್ಕೆ ಭೇಟಿ ನೀಡಿದ್ದೆ ಎಂದಿದ್ದಾರೆ.
ಭಾರತೀಯ ಸೇನೆಯ ವಾಯು ನೆಲೆಗಳನ್ನು ಧ್ವಂಸ ಮಾಡಿದ್ದೇವೆ ಎಂದು ಪಾಕಿಸ್ತಾನ ಹೇಳಿತ್ತು. ಅಲ್ಲದೇ ಭಾರತೀಯ ವಾಯು ಸೇನೆಯ ವಿಮಾನಗಳಿಗೆ ಹಾನಿಯಾಗಿದೆ ಎಂದೂ ಆಪರೇಷನ್ ಸಿಂಧೂರ ಕಾರ್ಯಾಚರಣೆಯ ಸಂದರ್ಭದಲ್ಲಿ ಹೇಳಲಾಗಿತ್ತು. ಆದರೆ ಅದೆಲ್ಲವೂ ಸುಳ್ಳು ಎಂದು ಮೋದಿ ಸಾಬೀತು ಮಾಡಿದ್ದರು. ಇದೇ ವಿಚಾರವನ್ನು ಮೋದಿ ಪುನರುಚ್ಚರಿಸಿದ್ದಾರೆ.
ತನ್ನ ಗಡಿಗಳನ್ನು ರಕ್ಷಿಸಿಕೊಳ್ಳಲು ಮತ್ತು ಯಾವುದೇ ಪ್ರತಿಕೂಲ ದಾಳಿಗಳ ವಿರುದ್ಧ ದೃಢವಾಗಿ ನಿಲ್ಲುವ ಭಾರತದ ಅಚಲ ಬದ್ಧತೆಯನ್ನು ಅವರು ಪುನರುಚ್ಚರಿಸಿದ್ದಾರೆ. ಭಾರತದ ಬೆಳೆಯುತ್ತಿರುವ ರಕ್ಷಣಾ ಸಾಮರ್ಥ್ಯಗಳು ಮತ್ತು ನಮ್ಮ ಸೇನೆಯ ಏಕತೆ ನಮ್ಮ ದೊಡ್ಡ ಶಕ್ತಿ ಎಂದು ಅವರು ಹೇಳಿದ್ದಾರೆ.
ಈ ಹೇಳಿಕೆಗಳನ್ನು ವಿರೋಧಿಗಳಿಗೆ ನೇರ ಸಂದೇಶವಾಗಿದೆ. ಅಲ್ಲದೇ ರಾಷ್ಟ್ರೀಯ ಭದ್ರತೆಯನ್ನು ಕಾಪಾಡುವಲ್ಲಿ ಸರ್ಕಾರದ ಪೂರ್ವಭಾವಿ ಸಿದ್ಧತೆಯ ಬಗ್ಗೆ ರಾಷ್ಟ್ರಕ್ಕೆ ಭರವಸೆಯನ್ನು ನೀಡಿದೆ ಎಂದೇ ಹೇಳಲಾಗುತ್ತಿದೆ.












Click it and Unblock the Notifications