ಸಾವಿರಾರು ಉದ್ಯೋಗ ಕಡಿತಗೊಳಿಸುತ್ತಿದೆ ಬಾಷ್ ಇಂಡಿಯಾ ಸಂಸ್ಥೆ
ನವದೆಹಲಿ, ಜನವರಿ 03: ಪ್ರತಿಷ್ಠಿತ ಬಾಷ್ ಸಂಸ್ಥೆ ಭಾರತದಲ್ಲಿ ಸಾವಿರಾರು ಉದ್ಯೋಗಿಗಳನ್ನು ಮನೆಗೆ ಕಳಿಸುತ್ತಿದೆ.
ಹೌದು, ಭಾರತದಲ್ಲಿ ಗಟ್ಟಿಯಾಗಿ ನೆಲೆಯೂರಿರುವ ಬಾಷ್ ಸಂಸ್ಥೆ ಉದ್ಯೋಗ ಕಡಿತ ಮಾಡುತ್ತಿದೆ. ಭಾರತದಲ್ಲಿ ಕುಸಿದಿರುವ ಆಟೋ ಉದ್ಯಮದಿಂದಾಗಿ ಬಾಷ್ ಸಂಸ್ಥೆ ಈ ನಿರ್ಧಾರ ತಳೆದಿದೆ.
ಬಾಷ್ ಸಂಸ್ಥೆಯು ವಿಶ್ವದ ಪ್ರಮುಖ ಮೋಟಾರು ಬಿಡಿ ಭಾಗ ನಿರ್ಮಾಣ ಸಂಸ್ಥೆಯಾಗಿದ್ದು, ಭಾರತದಲ್ಲಿ ಕುಸಿದಿರುವ ಮೋಟಾರು ಉದ್ಯಮದಿಂದಾಗಿ ಸಂಸ್ಥೆಯ ಉದ್ಯೋಗದಲ್ಲಿ ಕಡಿತ ಮಾಡುತ್ತಿದ್ದು, 370 ಕ್ಕೂ ಅಧಿಕ ಆಡಳಿತಾಧಿಕಾರಿಗಳು ಹಾಗೂ ಕೆಲವು ಸಾವಿರ ಕಾರ್ಮಿಕ ವರ್ಗದವರನ್ನು ಉದ್ಯೋಗದಿಂದ ತೆಗೆದುಹಾಕಲಾಗುವುದು ಎಂದು ಬಾಶ್ ಇಂಡಿಯಾ ಸಂಸ್ಥೆಯ ಎಂಡಿ ಸೌಮಿತ್ರ ಭಟ್ಟಾಚಾರ್ಯ ಹೇಳಿದ್ದಾರೆ.

ಆಟೋ ಉದ್ಯಮ ರೂಪಾಂತರ ಹೊಂದುತ್ತಿದ್ದು, ಸಂಸ್ಥೆಯು ಕೆಟ್ಟ ಸ್ಥಿತಿಯನ್ನು ತಲುಪುವ ಮುನ್ನವೇ ನಾವು ಅದಕ್ಕೆ ಹೊಂದಿಕೊಳ್ಳಬೇಕಾಗಿದೆ ಹಾಗಾಗಿ ಈ ಉದ್ಯೋಗ ಕಡಿತ ಅನಿವಾರ್ಯವಾಗಿದೆ ಎಂದಿದ್ದಾರೆ. ಮುಂದಿನ ನಾಲ್ಕು ವರ್ಷಗಳಲ್ಲಿ ಕೆಲವು ಸಾವಿರ ಮಂದಿ ಸಂಸ್ಥೆಯ ನೌಕರರು ಉದ್ಯೋಗ ಕಳೆದುಕೊಳ್ಳಲಿದ್ದಾರೆ ಎಂದು ಭಟ್ಟಾಚಾರ್ಯ ಮಾಹಿತಿ ನೀಡಿದ್ದಾರೆ.
ಈ ತ್ರೈಮಾಸಿಕ ಹಣಕಾಸು ವರ್ಷದಲ್ಲಿ ಬಾಷ್ ಇಂಡಿಯಾದ ಆದಾಯ 66% ಕುಸಿತವಾಗಿದೆ. ಕಳೆದ ವರ್ಷಕ್ಕಿಂತಲೂ 22% ಹೆಚ್ಚಿನ ಕುಸಿತವನ್ನು ಬಾಷ್ ಈ ಬಾರಿ ಕಂಡಿದೆ.
ಬಾಷ್ ಇಂಡಿಯಾ ಎಂಡಿ ಭಟ್ಟಾಚಾರ್ಯ ಹೇಳುವಂತೆ, ಆಟೋ ಉದ್ಯಮ ಮತ್ತೆ ಸುಧಾರಿಸಿಕೊಳ್ಳಲು ಕನಿಷ್ಟ 2-3 ವರ್ಷ ಬೇಕಾಗಬಹುದು ಹಾಗಾಗಿ ಉದ್ಯೋಗ ಕಡಿತ ಸೇರಿದಂತೆ ಕೆಲವು ಕಠಿಣ ನಿರ್ಧಾರಗಳು ಅವಶ್ಯಕ ಎಂದಿದ್ದಾರೆ.












Click it and Unblock the Notifications