Haryana Assembly Election 2024: ಬಿಜೆಪಿ ಮಾಡಿದ್ದ ಡ್ರಾಮೇಜ್ ಕಂಟ್ರೋಲ್ ಸಕ್ಸಸ್: ಹರಿಯಾಣ ಸಿ.ಎಂ ಹೇಳಿದ್ದೇನು
ಹರಿಯಾಣದಲ್ಲಿ ಬಿಜೆಪಿ ಹ್ಯಾಟ್ರಿಕ್ ಸಾಧನೆ ಮಾಡಲಿದ್ದು, ಮತ್ತೆ ಅಧಿಕಾರ ಉಳಿಸಿಕೊಳ್ಳಲಿದ್ದೇವೆ ಎಂದು ಹರಿಯಾಣದ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ಹೇಳಿದ್ದಾರೆ. ಕಳೆದ ಹತ್ತು ವರ್ಷಗಳಿಂದ ನಾವು ರಾಜ್ಯದಲ್ಲಿ ಅತ್ಯುತ್ತಮ ಆಡಳಿತ ನೀಡಿದ್ದೇವೆ. ಇದು ನಮಗೆ ಸಹಾಯವಾಗಲಿದ್ದು, ನಾವೇ ಮುಂದಿನ ಐದು ವರ್ಷಗಳ ಕಾಲ ಅಧಿಕಾರ ನಡೆಸಲಿದ್ದೇವೆ ಎಂದು ಅವರು ಹೇಳಿದ್ದಾರೆ.
ಹರಿಯಾಣದಲ್ಲಿ ಇಂದು (ಅಕ್ಟೋಬರ್ 8) ಮತ ಎಣಿಕೆ ನಡೆದಿದೆ. ಪ್ರಾರಂಭದಲ್ಲಿ ಇಲ್ಲಿ ಕಾಂಗ್ರೆಸ್ ಹಲವು ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದರೂ, ಕ್ರಮೇಣ ಬಿಜೆಪಿ ಹಲವು ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸುತ್ತಿದೆ. ಹರಿಯಾಣದಲ್ಲಿ ಒಟ್ಟು 90 ವಿಧಾನಸಭಾ ಕ್ಷೇತ್ರಗಳಿದ್ದು, ಮ್ಯಾಜಿಕ್ (ಬಹುಮತ) ಸಂಖ್ಯೆ 46 ಇದೆ. ಇತ್ತೀಚಿನ ಮಾಹಿತಿಯ ಪ್ರಕಾರ ಬಿಜೆಪಿ ಹಲವು ಕ್ಷೇತ್ರಗಳಲ್ಲಿ ಮುನ್ನಡೆ ಕಾಪಾಡಿಕೊಂಡಿದೆ.

ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ ಇಲ್ಲಿಯವರೆಗೆ ಬಿಜೆಪಿಯು 49 ಕ್ಷೇತ್ರಗಳಲ್ಲಿ ಮುನ್ನಡೆ ಕಾಪಾಡಿಕೊಂಡಿದೆ. ಕಾಂಗ್ರೆಸ್ 35 ಕ್ಷೇತ್ರಗಳಲ್ಲಿ ಮುನ್ನಡೆ ಕಾಪಾಡಿಕೊಂಡಿದೆ. ಬಿಜೆಪಿ ಇದೀಗ ಮ್ಯಾಜಿಕ್ ಸಂಖ್ಯೆಯನ್ನು ದಾಟಿ ಮುನ್ನಡೆಯುತ್ತಿದ್ದು, ಕಾಂಗ್ರೆಸ್‌ನ ಲೆಕ್ಕಾಚಾರ ತಲೆಕೆಳಗಾಗಿದೆ. ಈ ಬಾರಿ ಹರಿಯಾಣದಲ್ಲಿ ಅಧಿಕಾರಕ್ಕೆ ಬರಲಿದ್ದೇವೆ ಎಂದು ಕಾಂಗ್ರೆಸ್ ಕನಸು ಕಂಡಿತ್ತು. ಆದರೆ, ಆ ಕನಸು ನನಸಾಗುವ ಲಕ್ಷಣ ಕಾಣಿಸುತ್ತಿಲ್ಲ. ಬಿಜೆಪಿಯ ಹ್ಯಾಟ್ರಿಕ್ ಕನಸು ನನಸಾಗುವ ಸಾಧ್ಯತೆ ದಟ್ಟವಾಗಿದೆ.
ಇದೀಗ ಮಾತನಾಡಿರುವ ಹರಿಯಾಣದ ಮುಖ್ಯಮಂತ್ರಿ ನಯಾಬ್ ಸಿಂಗ್ ಅವರು ಈ ಬಾರಿಯೂ ರಾಜ್ಯದಲ್ಲಿ ನಾವೇ ಅಧಿಕಾರಕ್ಕೆ ಬರಲಿದ್ದೇವೆ. ಹರಿಯಾಣದಲ್ಲಿ ಹ್ಯಾಟ್ರಿಕ್ ಗೆಲುವ ದಾಖಲಿಸುವ ಮೂಲಕ ಬಿಜೆಪಿ ಹೊಸ ಇತಿಹಾಸವನ್ನೇ ಸೃಷ್ಟಿ ಮಾಡಲಿದೆ ಎಂದು ಅವರು ಹೇಳಿದ್ದಾರೆ. ಹರಿಯಾಣದಲ್ಲಿ ಕಳೆದ ಎರಡು ಅವಧಿಯಲ್ಲಿ ಅಂದರೆ 10 ವರ್ಷಗಳಲ್ಲಿ ಬಿಜೆಪಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದೆ. ಈ ಹಿಂದೆ ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿದ್ದ ಮನೋಹರ್ ಲಾಲ್ ಖಟ್ಟರ್ ಅವರು ಹಲವು ಹೊಸ ಯೋಜನೆಗಳನ್ನು ಪರಿಚಯಿಸಿದ್ದರು.

ಈ ಯೋಜನೆಗಳು ಹರಿಯಾಣದ ದೀರ್ಘಾವಧಿಯ ಬೆಳವಣಿಗೆಗೆ ಸಹಕಾರಿಯಾಗಿವೆ. ಅವರು ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ನಾವು ಮುಂದುವರಿಸಿಕೊಂಡು ಹೋಗುತ್ತಿದ್ದೇವೆ. ಹರಿಯಾಣದ ಮತದಾರರು ಈ ಬಾರಿಯೂ ನಮಗೆ ಆಶೀರ್ವಾದ ಮಾಡಲಿದ್ದಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಹರಿಯಾಣದಲ್ಲಿ ಬಿಜೆಪಿ ಬಹುಮತದ ಸಂಖ್ಯೆಯನ್ನು ದಾಟಿ ಮುನ್ನಡೆ ಕಾಪಾಡಿಕೊಂಡಿದೆ.
ಡ್ಯಾಮೇಜ್ ಕಂಟ್ರೋಲ್ ಮಾಡಿದ್ದ ಬಿಜೆಪಿ: ಕಳೆದ 10 ವರ್ಷಗಳಿಂದ ರಾಜ್ಯದಲ್ಲಿ ಅಧಿಕಾರದಲ್ಲಿ ಇರುವ ಬಿಜೆಪಿ ಜನರ ನಾಡಿ ಮಿಡಿತವನ್ನು ಚೆನ್ನಾಗಿಯೇ ಅರ್ಥ ಮಾಡಿಕೊಂಡಿದೆ. ಈ ಬಾರಿಯೂ ಅಧಿಕಾರವನ್ನು ಮುಂದುವರಿಸಿಕೊಂಡು ಹ್ಯಾಟ್ರಿಕ್ ಗೆಲುವು ಸಾಧಿಸಬೇಕು ಎನ್ನುವ ನಿಟ್ಟಿನಲ್ಲಿ ಬಿಜೆಪಿ ಎರಡು ವರ್ಷಗಳ ಮುಂಚೆಯೇ ಪ್ಲಾನ್ ಮಾಡಿಕೊಂಡಿತ್ತು.
2024ನೇ ಸಾಲಿನಲ್ಲಿ ಹರಿಯಾಣ ಚುನಾವಣೆ ನಡೆಯಲಿದೆ, ಆಗ ಯಾವೆಲ್ಲ ಅಂಶಗಳು ಪರಿಣಾಮ ಬೀರಲಿದೆ ಎಂದು ಬಿಜೆಪಿ ಎರಡು ವರ್ಷಗಳ ಮುಂಚೆಯೇ ಲೆಕ್ಕಾಚಾರ ಹಾಕಿಕೊಂಡಿತ್ತು. ಹೀಗಾಗಿ, ಎರಡು ವರ್ಷಗಳ ಹಿಂದೆಯೇ ಬಿಜೆಪಿ ಡ್ಯಾಮೇಜ್ ಕಂಟ್ರೋಲ್‌ಗೆ ಮುಂದಾಗಿತ್ತು. ಲೋಕಸಭೆ ಚುನಾವಣೆ ಪೂರ್ವದಲ್ಲೇ ಆಡಳಿತ ವಿರೋಧ ಅಲೆಗೆ ಬಿಜೆಪಿ ಕಡಿವಾಣ ಹಾಕಿತ್ತು. ಹರಿಯಾಣದಲ್ಲಿ ಬಿಜೆಪಿ ಮುಖ್ಯಮಂತ್ರಿಯಾಗಿದ್ದ ಮನೋಹರ್ ಲಾಲ್ ಖಟ್ಟರ್ ಅವರನ್ನು ಅಧಿಕಾರದಿಂದ ಕೆಳಗೆ ಇಳಿಸಿ, ಲೋಕಸಭೆ ಚುನಾವಣೆಗೆ ಸ್ಪರ್ಧೆ ಮಾಡುವಂತೆ ಮಾಡಿತ್ತು.












Click it and Unblock the Notifications