NDA VS INDIA: ಗೆಲ್ಲುವ ಅಭ್ಯರ್ಥಿಗಳಿಗೆ ಮಾತ್ರ ಟಿಕೆಟ್; ಎನ್‌ಡಿಎ ಕೂಟಕ್ಕೆ ಬಿಜೆಪಿ ಕೊಟ್ಟ ಸೂಚನೆ ಏನು?
ನವದೆಹಲಿ, ಆಗಸ್ಟ್14: 2024 ರ ಲೋಕಸಭಾ ಚುನಾವಣೆ ಹಿನ್ನಲೆ ವಿಪಕ್ಷಗಳ ಇಂಡಿಯಾ ಮೈತ್ರಿಕೂಟ ಎನ್ ಡಿಎ ವಿರುದ್ದ ಹಲವು ತಂತ್ರಗಾರಿಕೆಯನ್ನ ನಡೆಸಿದ್ದು, ಲೋಕಸಭೆ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿ ಪಕ್ಷಗಳಲ್ಲಿ ಯಾವುದೇ ಒಡಕು ಉಂಟಾಗದಂತೆ ಹಾಗೂ ಗೆಲ್ಲುವ ಅಭ್ಯರ್ಥಿಗಳಿಗೆ ಮಾತ್ರ ಮೈತ್ರಿ ಪಕ್ಷಗಳು ಟಿಕೆಟ್ ನೀಡುವಂತೆ ಖುದ್ದು ಬಿಜೆಪಿ ಮುಂದಾಗಿದೆ.
ವಿಪಕ್ಷಗಳು 'ಇಂಡಿಯಾ' ಮೈತ್ರಿಕೂಟ ಮಾಡಿಕೊಂಡು ತನ್ನ ವಿರುದ್ಧ ಹೊರಾಡಲು ತಯಾರಿಯನ್ನ ನಡೆಸಿದ್ದು, ಇದನ್ನ ಎನ್ ಡಿಎ ಗಂಭೀರವಾಗಿ ಪರಿಗಣಿಸಿದ್ದು, ಆ ಹಿನ್ನೆಲೆಯಲ್ಲಿ ಎನ್‌ಡಿಎಯ 39 ಅಂಗಪಕ್ಷಗಳು ಒಗ್ಗಟ್ಟಾಗಿರುವಂತೆ ನೋಡಿಕೊಳ್ಳಲು ನಿರ್ಧರಿಸಿದೆ ಎಂದು ತಿಳಿದು ಬಂದಿದೆ.

ಜುಲೈ 18 ರಂದು ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ದೆಹಲಿಯಲ್ಲಿ ಎನ್‌ಡಿಎಯ 39 ಘಟಕಗಳ ಸಭೆಯನ್ನು ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಎಲ್ಲರೂ ಸಕ್ರಿಯರಾಗಬೇಕೆಂದು ಹೇಳಲಾಗಿದ್ದು, ಆಗಸ್ಟ್ 11 ರಂದು, ಬಿಜೆಪಿಯು ತನ್ನ ಪಕ್ಷ ಸೇರಿದಂತೆ ಎಲ್ಲಾ ಮಿತ್ರಪಕ್ಷಗಳ ವಕ್ತಾರರ ಒಂದು ದಿನದ ಸಭೆಯನ್ನು ಸಂಸತ್ತಿನ ಭವನದ ಸಂಕೀರ್ಣದಲ್ಲಿರುವ ಸಂಸತ್ತಿನ ಅನೆಕ್ಸ್‌ನಲ್ಲಿ ನಡೆಸಿತು ಮತ್ತು ಒಗ್ಗಟ್ಟಿನಲ್ಲಿ ಮಾತನಾಡಲು ಸಲಹೆ ನೀಡಿತು.
ಇನ್ನೂ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಕಣಕ್ಕಿಳಿಸಬೇಕಾದ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಎಂದಿನಂತೆ ರಾಜ್ಯಗಳಿಂದ ವರದಿ ಪಡೆಯುವ ಹಾಗೂ ಸಮೀಕ್ಷೆಗಳನ್ನು ನಡೆಸುವ ಕಾರ್ಯವನ್ನು ಈ ಬಾರಿಯೂ ಪಕ್ಷ ಮಾಡಲಿದೆ. ಅದರ ಜೊತೆಗೆ, ಎನ್‌ಡಿಎ ಮೈತ್ರಿ ಪಕ್ಷಗಳು ಕಣಕ್ಕಿಳಿಸಲು ನಿರ್ಧರಿಸಿರುವ ಅಭ್ಯರ್ಥಿಗಳ ಬಗ್ಗೆಯೂ ವರದಿ ತರಿಸಿಕೊಳ್ಳುವ ಹಾಗೂ ಅವರಿಗೆ ಸಂಬಂಧಿಸಿದ ಕ್ಷೇತ್ರಗಳಲ್ಲೂ ಸಮೀಕ್ಷೆಗಳನ್ನು ನಡೆಸುವ ಕಾರ್ಯತಂತ್ರಕ್ಕೆ ಮುಂದಾಗಿದೆ ಎಂದು ಹೇಳಲಾಗಿದೆ.
543 ಲೋಕಸಭಾ ಕ್ಷೇತ್ರಗಳಿಂದಲೂ ಬಿಜೆಪಿ ವರಿಷ್ಠರು ವರದಿ ತರಿಸಿಕೊಳ್ಳುತ್ತಿದ್ದಾರೆ. ಅಗತ್ಯಬಿದ್ದರೆ ಅದರ ಮಾಹಿತಿಯನ್ನು ಮೈತ್ರಿ ಪಕ್ಷಗಳ ಜೊತೆಗೂ ಹಂಚಿಕೊಳ್ಳಲಿದ್ದಾರೆ. ಎನ್‌ಡಿಎ ಕೋಟಾದಲ್ಲಿ ನಿರ್ದಿಷ್ಟ ಕ್ಷೇತ್ರದ ಟಿಕೆಟ್ ಅನ್ನು ಮೈತ್ರಿ ಪಕ್ಷಕ್ಕೆ ನೀಡುವುದಾದರೆ ಆ ಪಕ್ಷವು ಯಾವ ಅಭ್ಯರ್ಥಿಯನ್ನು ಕಣಕ್ಕಿಳಿಸಲಿದೆ ಎಂಬುದನ್ನು ಬಿಜೆಪಿ ಮೊದಲೇ ಕೇಳಿ ತಿಳಿದುಕೊಂಡು, ಅಂತಿಮ ನಿರ್ಧಾರವನ್ನು ತಾನೇ ತೆಗೆದುಕೊಳ್ಳಲು ಬಯಸಿದೆ ಎಂದು ಹೇಳಲಾಗಿದೆ.

ಇನ್ನೂ ಟಿಕೆಟ್ ವಿಚಾರವಾಗಿ ಯಾವುದಾದರೂ ರಾಜ್ಯದಲ್ಲಿ ಎನ್‌ಡಿಎ ಅಂಗ ಪಕ್ಷಗಳ ನಡುವೆ ಭಿನ್ನಮತ ಬಂದರೆ ತಾನೇ ಮಧ್ಯಸ್ಥಿಕೆ ವಹಿಸುವುದಕ್ಕೂ ಬಿಜೆಪಿ ನಿರ್ಧರಿಸಿದೆ. ಬಿಹಾರದಲ್ಲಿ ಪಶುಪತಿ ಪಾರಸ್ ಹಾಗೂ ಚಿರಾಗ್ ಪಾಸ್ವಾನ್ ನಡುವೆ ಹಾಜಿಪುರ ಕ್ಷೇತ್ರದ ಬಗ್ಗೆ ಭಿನ್ನಮತ ಬರಬಹುದು. ಮಹಾರಾಷ್ಟ್ರದಲ್ಲಿ ಶಿವಸೇನೆಯ ಶಿಂಧೆ ಬಣ ಹಾಗೂ ಎನ್‌ಸಿಪಿಯ ಅಜಿತ್ ಪವಾರ್ ಬಣದ ನಡುವೆ ವಿವಿಧ ಸೀಟುಗಳ ವಿಷಯದಲ್ಲಿ ಹಗ್ಗಜಗ್ಗಾಟ ನಡೆಯಬಹುದು. ಇಂತಹ ಪರಿಸ್ಥಿತಿಯಲ್ಲಿ ಬಿಜೆಪಿ ಉಭಯ ಪಕ್ಷಗಳ ಸಭೆ ಕರೆದು ನಿರ್ಧಾರ ಕೈಗೊಳ್ಳಲಿದೆ ಎನ್ನಲಾಗಿದೆ.
ಬಿಹಾರದಲ್ಲಿ ಉಪೇಂದ್ರ ಕುಶ್ವಾಹ ಮತ್ತು ಜಿತನ್ ರಾಮ್ ಮಾಂಝಿ, ಉತ್ತರ ಪ್ರದೇಶದಲ್ಲಿ ಓಂ ಪ್ರಕಾಶ್ ರಾಜ್‌ಭರ್ ಮತ್ತು ಸಂಜಯ್ ನಿಶಾದ್, ಪಂಜಾಬ್‌ನ ಸುಖದೇವ್ ಸಿಂಗ್ ಧಿಂಡ್ಸಾ ಸೇರಿದಂತೆ ಹಲವು ರಾಜ್ಯಗಳ ಬಿಜೆಪಿ ಮಿತ್ರರು ಕೂಡ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಬಿಜೆಪಿಯ ಮುಂದೆ ತಮ್ಮ ಬೇಡಿಕೆಗಳನ್ನು ಮಂಡಿಸಿದ್ದಾರೆ ಎಂದು ತಿಳಿದು ಬಂದಿದೆ.
ಎನ್‌ಡಿಎಯ ಎಲ್ಲಾ ಮೈತ್ರಿ ಪಕ್ಷಗಳಿಂದಲೂ ಅವು ಕಣಕ್ಕಿಳಿಸುವ ಅಭ್ಯರ್ಥಿಗಳ ಪಟ್ಟಿಯನ್ನು ಮೊದಲೇ ತರಿಸಿಕೊಂಡು, ಅಂತಹ ಅಭ್ಯರ್ಥಿಗಳು ಗೆಲ್ಲುವ ಸಾಧ್ಯತೆಯಿದ್ದರೆ ಮಾತ್ರ ಅವರಿಗೆ ಟಿಕೆಟ್ ನೀಡಲು ಬಿಜೆಪಿ ಮುಂದಾಗಬಹುದು ಎಂದು ಮೂಲಗಳಿಂದ ತಿಳಿದು ಬಂದಿದೆ.
2019 ರ ಲೋಕಸಭೆ ಚುನಾವಣೆಯಲ್ಲಿ ದೇಶದ 543 ಲೋಕಸಭಾ ಸ್ಥಾನಗಳ ಪೈಕಿ ಬಿಜೆಪಿ ಏಕಾಂಗಿಯಾಗಿ 436 ಲೋಕಸಭಾ ಸ್ಥಾನಗಳಲ್ಲಿ ಸ್ಪರ್ಧಿಸಿತ್ತು ಮತ್ತು ಉಳಿದ ಸ್ಥಾನಗಳನ್ನು ಪಕ್ಷವು ತನ್ನ ಮಿತ್ರಪಕ್ಷಗಳಿಗೆ ನೀಡಿತು. ಈ ಬಾರಿಯೂ ಪಕ್ಷವು 425-450 ಲೋಕಸಭಾ ಸ್ಥಾನಗಳಲ್ಲಿ ಏಕಾಂಗಿಯಾಗಿ ಸ್ಪರ್ಧಿಸಲು ಬಯಸಿದೆ. ಆ ಸಂದರ್ಭದಲ್ಲಿ, ಬಿಜೆಪಿಯು ಸುಮಾರು 39 ಮಿತ್ರಪಕ್ಷಗಳ ಪೈಕಿ 10-12 ರಾಜಕೀಯ ಪಕ್ಷಗಳಿಗೆ ಲೋಕಸಭಾ ಸ್ಥಾನಗಳನ್ನು ನೀಡಲು ಒಪ್ಪಿಗೆ ನೀಡಬಹುದು ಮತ್ತು ಉಳಿದ ಮಿತ್ರಪಕ್ಷಗಳಿಗೆ ಎಂಎಲ್‌ಎ ಅಥವಾ ಎಂಎಲ್‌ಸಿ ಸ್ಥಾನಗಳನ್ನು ಭರವಸೆ ನೀಡಬಹುದು ಎನ್ನಲಾಗಿದೆ.
ಒಟ್ನಲಿ ಈ ಬಾರಿ ಬಿಜೆಪಿಯ ಆಕಾಂಕ್ಷಿಗಳು ಮಾತ್ರವಲ್ಲ, ಎನ್‌ಡಿಎ ಮೈತ್ರಿಕೂಟದಿಂದ ಟಿಕೆಟ್ ಬಯಸಿರುವ ನಾಯಕರೂ ಬಿಜೆಪಿಯ ಆಯ್ಕೆ ಪ್ರಕ್ರಿಯೆಯಲ್ಲಿ ಪಾಸಾಗಬೇಕು ಎಂದು ತಿಳಿದು ಬಂದಿದೆ.












Click it and Unblock the Notifications