ಚುನಾವಣೆ ಖರ್ಚು ವೆಚ್ಚ: ಕಾಂಗ್ರೆಸ್ಸಿಗಿಂತ ಬಿಜೆಪಿ ಕೈ ಮೇಲು
ನವದೆಹಲಿ, ಅ.7: ಚುನಾವಣೆ ಸಂದರ್ಭದಲ್ಲಿ ಯಾವ ಪಕ್ಷ ಎಷ್ಟು ಹಣ ಖರ್ಚು ಮಾಡಿದೆ ಎಂಬ ಲೆಕ್ಕಾಚಾರ ಈಗ ಚುನಾವಣಾ ಆಯೋಗಕ್ಕೆ ಸಿಕ್ಕಿದೆ. ವಿವಿಧ ಪಕ್ಷಗಳು ತಮ್ಮ ಚುನಾವಣಾ ಖರ್ಚು ವೆಚ್ಚಗಳ ಪಟ್ಟಿಯನ್ನು ಆಯೋಗಕ್ಕೆ ಸಲ್ಲಿಸಿವೆ. ಅಂಕಿ ಅಂಶಗಳ ಪ್ರಕಾರ ಕಾಂಗ್ರೆಸ್ ಪಕ್ಷಕ್ಕಿಂತ ಬಿಜೆಪಿ ಮುಂದಿದೆ.
2009ರ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಹಾಗೂ ಇತರೆ ಯಾವುದೇ ಪಕ್ಷಗಳಿಂಗಿತ ಬಿಜೆಪಿ ಖರ್ಚು ಮಾಡಿದ ಮೊತ್ತ ಅಧಿಕವಾಗಿದೆ ಎಂಬ ಅಂಶ ಬೆಳಕಿಗೆ ಬಂದಿದೆ. ಚುನಾವಣಾ ಆಯೋಗಕ್ಕೆ ಸಲ್ಲಿಸಲಾಗಿರುವ ಅಂಕಿ ಅಂಶದ ಪ್ರಕಾರ ಬಿಜೆಪಿ ಕಳೆದ ಚುನಾವಣೆಯಲ್ಲಿ ಅಧಿಕಾರ ಪಡೆಯಲು ವಿಫಲವಾದರೂ ಸುಮಾರು 448.66 ಕೋಟಿ ರು ಖರ್ಚು ಮಾಡಿದೆ. ಇದಕ್ಕೆ ಹೋಲಿಸಿದರೆ ಕಾಂಗ್ರೆಸ್ ಪಕ್ಷ 380.04 ಕೋಟಿ ರು ವ್ಯಯಿಸಿದೆ. ಬಿಜೆಪಿಗಿಂತಲೂ ಕಾಂಗ್ರೆಸ್ ಪಕ್ಷ 68.62 ಕೋಟಿ ರು ಕಡಿಮೆ ಖರ್ಚು ಮಾಡಿದೆ.

ಬಿಜೆಪಿಯ ಒಟ್ಟು ಚುನಾವಣಾ ವೆಚ್ಚದ ಪೈಕಿ 162.68 ಕೋಟಿ ರು ಪಕ್ಷದ ಕೇಂದ್ರ ಕಚೇರಿಯಿಂದಲೇ ಖರ್ಚಾಗಿದೆ.ಕಾಂಗ್ರೆಸ್ ಪಕ್ಷ ಗಳಿಸಿದ ಒಟ್ಟಾರೆ ಚುನಾವಣೆ ಫಂಡ್ ನ ಶೇ 24 ರಷ್ಟು ಚೆಕ್ ಹಾಗೂ ಡಿಮ್ಯಾಂಡ್ ಡ್ರಾಫ್ಟ್ ಮೂಲಕ ಬಂದಿದೆ. ಅದೇ ಬಿಜೆಪಿ ಪಕ್ಷಕ್ಕೆ ಶೇ 49 ರಷ್ಟು ಬಹುತೇಕ ಅರ್ಧದಷ್ಟು ದೇಣಿಗೆ ಚೆಕ್ ಹಾಗೂ ಡಿಡಿ ಮೂಲಕ ಬಂದಿದೆ.
ಬಹುಜನ ಸಮಾಜವಾದಿ ಪಕ್ಷ 21.23 ಕೋಟಿ ರು ಖರ್ಚು ಮಾಡಿದ್ದು ಒಟ್ಟಾರೆ 33.16 ಕೋಟಿ ದೇಣಿಗೆ ಪಡೆದ ದಾಖಲೆ ಸಿಕ್ಕಿದೆ. 20000 ರು ಮಾತ್ರ ಚೆಕ್ ಹಾಗೂ ಡಿಡಿ ಮೂಲಕ ಪಡೆದಿದೆ. ಉಳಿದಿದ್ದು ನಗದು ರೂಪದಲ್ಲಿ ಸಿಕ್ಕಿದೆ.
ಶರದ್ ಪವಾರ್ ಅವರ ನ್ಯಾಷಲಿಸ್ಟ್ ಕಾಂಗ್ರೆಸ್ ಪಕ್ಷ ಒಟ್ಟಾರೆ 26.17 ಕೋಟಿ ರು ಖರ್ಚು ಮಾಡಿದ್ದು 18.26 ರಾಜ್ಯಮಟ್ಟದಲ್ಲಿ ಹಾಗೂ 7.91 ಕೋಟಿರು ಕೇಂದ್ರ ಮಟ್ಟದಲ್ಲಿ ಖರ್ಚಾಗಿದೆ.
ಕೇಂದ್ರದಲ್ಲಿ 8.38 ಕೋಟಿ ರು ಪಡೆದರೆ, 1.89 ಕೋಟಿ ರು ನಗದು ರೂಪದಲ್ಲಿ ದೇಣಿಗೆ ಸಿಕ್ಕಿದೆ. ಉಳಿದಂತೆ ಸಿಪಿಐ 10.26 ಕೋಟೀ ರು ಖರ್ಚು ಮಾಡಿದೆ. ಕೇಂದ್ರ ಮಟ್ಟದಲ್ಲಿ 57.35 ಲಕ್ಷ ರು ಖರ್ಚು ಮಾಡಿದೆಯಂತೆ.
ಸಮಾಜವಾದಿ ಪಕ್ಷ 21.49 ಕೋಟಿ ರು ವ್ಯಯಿಸಿದೆ. ತೃಣಮೂಲ ಕಾಂಗ್ರೆಸ್ ಒಟ್ಟಾರೆ 89.97 ಲಕ್ಷ ರು ವ್ಯಯಿಸಿದೆ. ಜೆ ಜಯಲಲಿತಾ ಅವರ ಪಕ್ಷ ಎಐಎಡಿಎಂಕೆ 12.48 ಕೋಟಿ ರು ನಗದು ಹಣ ದೇಣಿಗೆ ಪಡೆದಿದೆ. ಡಿಎಂಕೆ ಪಕ್ಷ 7.77 ಕೋಟಿ ರು ಖರ್ಚು ಮಾಡಿದೆ. (ಪಿಟಿಐ)












Click it and Unblock the Notifications