ಪಾಕಿಸ್ತಾನಿಯನ್ನು ಮದುವೆಯಾದ ಅಂಜು, ಭಾರತೀಯನನ್ನು ವರಿಸಿದ ಸೀಮಾ: 'ವಿಷಬಾಲೆ'ಯರ ಮೂಲಕ ಪಾಕ್ ಸಂಚು ರೂಪಿಸಿದೆ ಎಂದ ಬಿಜೆಪಿ ಸಂಸದೆ
ನವದೆಹಲಿ, ಜುಲೈ 31: ಭಾರತೀಯ ಪ್ರಜೆ ಅಂಜು ಮತ್ತು ಪಾಕಿಸ್ತಾನಿ ಪ್ರಜೆ ಸೀಮಾ ಹೈದರ್ ಇಬ್ಬರನ್ನೂ 'ವಿಷಬಾಲೆ'ಯರು ಎಂದು ಭೋಪಾಲ್‌ನ ಬಿಜೆಪಿ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಕರೆದಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಪರಿಚಿತವಾದ ಪಾಕಿಸ್ತಾನ ಪ್ರಜೆಯನ್ನು ಅಂಜು ಮದುವೆಯಾಗಿದ್ದಾರೆ. ಇದೇ ರೀತಿಯಾಗಿ ಇನ್‌ಸ್ಟಾಗ್ರಾಮ್‌ನಲ್ಲಿ ಭೇಟಿಯಾದ ಭಾರತೀಯ ಪ್ರಜೆಯನ್ನು ಸೀಮಾ ಹೈದರ್ ವರಿಸಿದ್ದಾರೆ. ಈ ಕುರಿತು ಬಿಜೆಪಿ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್ ಪ್ರತಿಕ್ರಿಯಿಸಿದ್ದಾರೆ.
ಈ ಇಬ್ಬರು ಮಹಿಳೆಯರು ವಿಷಬಾಲೆಯರಾಗಿದ್ದಾರೆ. ಇಬ್ಬರು ಮಹಿಳೆಯರ ಸುತ್ತಲೂ ಸಂಶಯಗಳಿವೆ. ಇದು ಪಾಕಿಸ್ತಾನದ ಪಿತೂರಿಯ ಭಾಗವೆಂದು ಬಿಜೆಪಿ ಸಂಸದೆ ಹೇಳಿದ್ದಾರೆ.

ಸೀಮಾ ಹೈದರ್ ಅವರು ನೇಪಾಳ ಗಡಿಯ ಮೂಲಕ ಭಾರತಕ್ಕೆ ಬಂದಿದ್ದಾರೆ. ಅವರು ಭಾರತೀಯ ಪ್ರಜೆಯಾಗಿರುವ ಸಚಿನ್ ಅವರನ್ನು ಮದುವೆಯಾಗಿದ್ದಾರೆ.
ಭಾರತೀಯ ಪ್ರಜೆ ಅಂಜು ಮಾನ್ಯತೆ ಹೊಂದಿರುವ ವೀಸಾದಲ್ಲಿ ಪಾಕಿಸ್ತಾನಕ್ಕೆ ತೆರಳಿದ್ದಾರೆ. ತಮ್ಮ ಸ್ನೇಹಿತ ಖೈಬರ್ ಪಖ್ತುನ್ಖಾ ಪ್ರದೇಶದ ನಸ್ರುಲ್ಲಾಳನ್ನು ವಿವಾಹವಾಗಿದ್ದಾರೆ.
ಇಬ್ಬರು ಮಹಿಳೆಯರು ಗಡಿ ದಾಟಿ ಅವರ ಕುಟುಂಬವನ್ನು ಧಿಕ್ಕರಿಸಿದ್ದಾರೆ. ಇದು ಪಾಕಿಸ್ತಾನದ ಪಿತೂರಿಯ ಭಾಗವಾಗಿದೆ. ಅವರಿಬ್ಬರು ವಿಷಬಾಲೆಯರು ಇರಬಹುದು ಎಂದು ಬಿಜೆಪಿ ಸಂಸದೆ ಪ್ರಜ್ಞಾ ಠಾಕೂರ್ ಸಂಸತ್ತಿನ ಮುಂಗಾರು ಅಧಿವೇಶನದ ಸಂದರ್ಭದಲ್ಲಿ ಸಂಸತ್ತಿನ ಹೊರಗೆ ಈ ಹೇಳಿಕೆ ನೀಡಿದ್ದಾರೆ.

'ಭಾರತದೊಂದಿಗೆ ಪಾಕಿಸ್ತಾನ ಏನು ಮಾಡುತ್ತದೆ ಎಂಬುದು ಎಲ್ಲರಿಗೂ ತಿಳಿದಿದೆ. ಇದು (ಅಂಜು ಮತ್ತು ಸೀಮಾ ಹೈದರ್ ಪ್ರಕರಣ) ಪಾಕಿಸ್ತಾನದ ಪಿತೂರಿ. ಅವರು ವಿಷಬಾಲೆಯರನ್ನು ಕರೆಸಿಕೊಳ್ಳುತ್ತಿರುವುದು ಮತ್ತು ಕಳಿಸುತ್ತಿರುವುದನ್ನು ನೋಡಿದರೆ, ಇದೊಂದು ದೊಡ್ಡ ಪಿತೂರಿಯಾಗಿದೆ. ಶೀಘ್ರದಲ್ಲೇ ಈ ಪಿತೂರಿಯನ್ನು ನಾವು ಬಹಿರಂಗಪಡಿಸುತ್ತೇವೆ' ಎಂದು ಸಾಧ್ವಿ ಪ್ರಜ್ಞಾ ಹೇಳಿದ್ದಾರೆ.
'ಇದು ಹಳೆಯ ಭಾರತವಲ್ಲ. ವಿದೇಶದಿಂದ ಬಂದವರು ಭಯೋತ್ಪಾದನೆಯನ್ನು ಹರಡಲು ಈಗ ಸಾಧ್ಯವಿಲ್ಲ. ಇದು ಮೋದಿಯವರ ಭಾರತವಾಗಿದ್ದು, ನಾವು ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡುತ್ತೇವೆ' ಎಂದು ತಿಳಿಸಿದ್ದಾರೆ.
ಈ ಮೂಲಕ, ಅಂಜು ಹಾಗೂ ಸೀಮಾ ಪ್ರಕರಣಗಳಿಗೆ ಬಿಜೆಪಿ ಸಂಸದೆ ಹೊಸ ತಿರುವೊಂದನ್ನು ನೀಡಲು ಯತ್ನಿಸಿದ್ದಾರೆ.
ಈ ಹಿಂದೆ, ಪ್ರಜ್ಞಾ ಅವರು ಮಹಾತ್ಮ ಗಾಂಧಿಯವರ ಹಂತಕ ನಾಥೂರಾಂ ಗೋಡ್ಸೆಯನ್ನು 'ದೇಶಭಕ್ತ' ಎಂದು ಕರೆದು ವಿವಾದವನ್ನು ಹುಟ್ಟುಹಾಕಿದ್ದರು.

2019 ರಲ್ಲಿ ಲೋಕಸಭೆ ಚುನಾವಣೆಗೆ ಮುನ್ನ, ಪ್ರಜ್ಞಾ ಸಿಂಗ್ ಠಾಕೂರ್ ಅವರು ಮಹಾರಾಷ್ಟ್ರದ ಭಯೋತ್ಪಾದನಾ ನಿಗ್ರಹ ದಳದ ಅಧಿಕಾರಿ (ಎಟಿಎಸ್) ದಿವಂಗತ ಹೇಮಂತ್ ಕರ್ಕರೆ ಅವರನ್ನು ರಾವಣನಿಗೆ ಹೋಲಿಸಿದ್ದರು. ಇದು ಭಾರೀ ವಿವಾದವನ್ನು ಸೃಷ್ಟಿಸಿತ್ತು.
ಆಪ್ ನಾಯಕರು ಬಿಜೆಪಿಯ ಉನ್ನತ ನಾಯಕರ ವಿರುದ್ಧ ಮಾಟಮಂತ್ರವನ್ನು ಮಾಡಿಸಿರಬಹುದು ಎಂದು ಪ್ರಜ್ಞಾ ಸಿಂಗ್ ಹೇಳಿಕೆ ನೀಡಿದ್ದರು. ಅರುಣ್ ಜೇಟ್ಲಿ ಮತ್ತು ಸುಷ್ಮಾ ಸ್ವರಾಜ್ ಸೇರಿದಂತೆ ಇಬ್ಬರು ಬಿಜೆಪಿ ನಾಯಕರ ನಿಧನದ ಹಿನ್ನೆಲೆಯಲ್ಲಿ ಅವರು ಈ ಹೇಳಿಕೆ ನೀಡಿದ್ದರು. ಇದು ದೊಡ್ಡ ವಿವಾದವನ್ನೇ ಸೃಷ್ಟಿ ಮಾಡಿತ್ತು.












Click it and Unblock the Notifications