ಸೈಕಲ್ ಗೆ 'ಆನೆ' ಬಲ, ಉತ್ತರ ಪ್ರದೇಶದಲ್ಲಿ ಕಮಲ ಅಪ್ಪಚ್ಚಿ

Subscribe to Oneindia Kannada

ಲಕ್ನೋ, ಮಾರ್ಚ್ 13: ಕೇಂದ್ರ ಮತ್ತು ಉತ್ತರ ಪ್ರದೇಶದಲ್ಲಿ ಆಡಳಿತದಲ್ಲಿರುವ ಬಿಜೆಪಿ ಪಕ್ಷ ಗೋರಖ್ ಪುರ್ ಮತ್ತು ಫುಲ್ಪುರ್ ಲೋಕಸಭಾ ಸ್ಥಾನಗಳಿಗೆ ನಡೆದ ಉಪಚುನಾವಣೆಯಲ್ಲಿ ಹೀನಾಯವಾಗಿ ಸೊಲೊಪ್ಪಿಕೊಂಡಿದೆ. ಸೈಕಲ್-ಆನೆ ನಾಗಾಲೋಟದ ಮುಂದೆ ಕಾಲಡಿಗೆ ಬಿದ್ದು ಕಮಲದ ದಳಗಳು ಚಿಂದಿಯಾಗಿವೆ.

ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಕಳೆದ ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ 80ಕ್ಕೆ 71 ಸ್ಥಾನಗಳಲ್ಲಿ ಬಿಜಪಿ ಜಯಗಳಿಸಿತ್ತು. ಕಳೆದ ವರ್ಷ ನಡೆದ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿಯೂ 403ಕ್ಕೆ 312 ಸ್ಥಾನಗಳನ್ನು ಕೇಸರಿ ಪಕ್ಷ ಗೆದ್ದುಕೊಂಡಿತ್ತು. ಈ ರೀತಿ ಭರ್ಜರಿ ಜಯ ಸಾಧಿಸಿದ್ದ ಬಿಜೆಪಿಯ ನಡೆ ಕಂಡು ವಿರೋಧ ಪಕ್ಷಗಳಾದ ಬಿಎಸ್ಪಿ ಮತ್ತು ಎಸ್ಪಿ ಗಾಬರಿಗೊಂಡಿದ್ದವು.

ಉ.ಪ್ರ. ಉಪಚುನಾವಣೆ: ಎರಡೂ ಕ್ಷೇತ್ರಗಳಲ್ಲಿ ಎಸ್ ಪಿ ಮುನ್ನಡೆ, ಗದ್ದಲ

ಹಾಗಾಗಿ ಏಕಾಂಗಿಯಾಗಿ ಸ್ಪರ್ಧೆ ಮಾಡುವುದು ಸೋಲಿಗೆ ದಾರಿ ಎಂದು ಅರಿತುಕೊಂಡ ಎಸ್ಪಿ ಮತ್ತು ಬಿಎಸ್ಪಿ ಪಕ್ಷಗಳು ಈ ಬಾರಿ ಉಪಚುನಾವಣೆಯಲ್ಲಿ ಜೊತೆಯಾಗಿ ಕಣಕ್ಕಿಳಿಯುವ ತೀರ್ಮಾನಕ್ಕೆ ಬಂದಿದ್ದವು. ಆಜನ್ಮ ವೈರಿಗಳಾಗಿದ್ದ ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜವಾದಿ ಪಕ್ಷಗಳು ಈ ತೀರ್ಮಾನಕ್ಕೆ ಬಂದಿದ್ದೇ ಹಲವರನ್ನು ಅಚ್ಚರಿಗೆ ದೂಡಿತ್ತು.

LIVE: ಬಿಹಾರದಲ್ಲಿ ಮುನ್ನಡೆ ಕಾಯ್ದುಕೊಂಡ ಆರ್ ಜೆಡಿ

ಆದರೆ ಎಲ್ಲಾ ಹಮ್ಮು-ಬಿಮ್ಮು, ಬಿಗುಮಾನಗಳನ್ನು ಬಿಟ್ಟು ಸಮಾನ ಎದುರಾಳಿ ಬಿಜೆಪಿಯನ್ನು ಸೋಲಿಸಲು ಮಾಯಾವತಿ ಮತ್ತು ಅಖಿಲೇಶ್ ಯಾದವ್ ಒಟ್ಟಾಗಿದ್ದರು. ಪರಿಣಾಮ ಇದೀಗ ಮೈತ್ರಿ ಯಶಸ್ವಿಯಾಗಿದ್ದು ಎರಡೂ ಕ್ಷೇತ್ರಗಳಲ್ಲಿ ಆನೆ-ಸೈಕಲ್ ದೋಸ್ತಿ ಗೆಲುವಿನ ನಗೆ ಬೀರಿದೆ.

ಯೋಗಿ ನಾಡಲ್ಲಿ ಬಿಜೆಪಿ ಚಿಂದಿ

ಯೋಗಿ ನಾಡಲ್ಲಿ ಬಿಜೆಪಿ ಚಿಂದಿ

ಅದರಲ್ಲೂ ಗೋರಖ್ ಪುರ್ ಕ್ಷೇತ್ರವನ್ನು ಹಾಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪ್ರತಿನಿಧಿಸುತ್ತಿದ್ದರು. ಕ್ಷೇತ್ರದಲ್ಲಿ ಸತತ ಐದು ಬಾರಿ ಅವರು ಜಯಶಾಲಿಯಾಗಿದ್ದರು. 2014ರ ಚುನಾವಣೆಯಲ್ಲಂತೂ ಅವರು 3.12 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಇಲ್ಲಿ ಜಯ ಸಾಧಿಸಿದ್ದರು. ಈ ಚುನಾವಣೆಯಲ್ಲಿ ಯೋಗಿ 5,39,127 ಮತಗಳನ್ನು ಪಡೆದರೆ ಎಸ್ಪಿ, ಬಿಎಸ್ಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳು ಕ್ರಮವಾಗಿ 2,26,344, 1,76,412 ಮತ್ತು 45,719 ಮತಗಳನ್ನು ಪಡೆದಿದ್ದರು.

ಇವತ್ತು ಯೋಗಿ ಆದಿತ್ಯನಾಥ್ ಮುಖ್ಯಮಂತ್ರಿಯಾಗಿದ್ದಾರೆ. ಆಡಳಿತ ಪಕ್ಷಕ್ಕೆ ಸಾಮಾನ್ಯವಾಗಿ ಅನುಕೂಲಗಳು ಹೆಚ್ಚಾಗಿರುತ್ತವೆ. ಈ ಎಲ್ಲಾ ಹಿನ್ನಲೆಯಲ್ಲಿ 3.12 ಲಕ್ಷಗಳ ಭಾರೀ ಅಂತರವನ್ನು ಮೆಟ್ಟಿ ನಿಂತು ಸಮಾಜವಾದಿ ಪಕ್ಷ ಜಯ ಸಾಧಿಸುವುದು ಅಸಾಧ್ಯ ಎಂದೇ ಪರಿಗಣಿಸಲಾಗಿತ್ತು.

ಆದರೆ ನಿರೀಕ್ಷೆ ಮೀರಿ ಕ್ಷೇತ್ರದಲ್ಲಿ ಸಮಾಜವಾದಿ ಪಕ್ಷ ಗೆಲುವಿನ ನಗೆ ಬೀರಿದೆ. ಎಸ್ಪಿ ಅಭ್ಯರ್ಥಿ ಪ್ರವೀಣ್ ಕುಮಾರ್ ನಿಶಾದ್ ಭರ್ಜರಿ ಗೆಲುವು ಸಾಧಿಸಿದ್ದಾರೆ. ಬಿಜೆಪಿಯ ಉಪೇಂದ್ರ ದತ್ ಶುಕ್ಲಾ ಇಲ್ಲಿ ಸೋಲೊಪ್ಪಿಕೊಂಡಿದ್ದಾರೆ. ಉಪಚುನಾವಣೆಯಲ್ಲಿ ಎಸ್ಪಿಗೆ ಬೆಂಬಲ ನೀಡಿದ್ದ ಬಿಎಸ್ಪಿ ಕೂಡ ಈ ಜಯದಲ್ಲಿ ಸಮಾನ ಪಾಲು ಪಡೆದಿದೆ.

ಉಪಮುಖ್ಯಮಂತ್ರಿ ಕ್ಷೇತ್ರದಲ್ಲೂ ಸೋಲು

ಉಪಮುಖ್ಯಮಂತ್ರಿ ಕ್ಷೇತ್ರದಲ್ಲೂ ಸೋಲು

ಫುಲ್ಪುರ್ ಕ್ಷೇತ್ರವನ್ನು ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಪ್ರತಿನಿಧಿಸುತ್ತಿದ್ದರು. 2014ರಲ್ಲಿ ಇಲ್ಲಿ ಚುನಾವಣೆ ನಡೆದಾಗ ಮೌರ್ಯ ಸುಮಾರು 3.08 ಲಕ್ಷಕ್ಕೂ ಅಧಿಕ ಮತಗಳಿಂದ ಜಯ ಸಾಧಿಸಿದ್ದರು. ಈ ಚುನಾವಣೆಯಲ್ಲಿ ಎಸ್ಪಿ ಅಭ್ಯರ್ಥಿ 1,95,256 ಮತಗಳನ್ನು ಹಾಗೂ ಬಿಎಸ್ಪಿ ಅಭ್ಯರ್ಥಿ 1,63,710 ಹಾಗೂ ಕಾಂಗ್ರೆಸ್ ಅಭ್ಯರ್ಥಿ 58,127 ಮತಗಳನ್ನು ಪಡೆದಿದ್ದರು.

ಇಲ್ಲೂ ಅಷ್ಟೇ, ಎಸ್ಪಿ ಮತ್ತು ಬಿಎಸ್ಪಿ ಮೈತ್ರಿ ಮಾಡಿಕೊಂಡಿದ್ದವು. ಹೀಗಿದ್ದೂ 3 ಲಕ್ಷಕ್ಕೂ ಅಧಿಕ ಮತಗಳಿಂದ ಗೆದ್ದಿದ್ದ, ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿಯನ್ನು ಸೋಲಿಸುವುದು ಸಾಧ್ಯವಿಲ್ಲ ಎಂದುಕೊಳ್ಳಲಾಗಿತ್ತು. ಆದರೆ ಬಿಜೆಪಿ ಸೋಲಿಗೆ ಆನೆ-ಸೈಕಲ್ ಒಟ್ಟಾಗಿ ಮುನ್ನುಡಿ ಬರೆದಿವೆ.

ಇಲ್ಲೂ ಎಸ್ಪಿ ಅಭ್ಯರ್ಥಿ ನಾಗೇಂದ್ರ ಪ್ರತಾಪ್ ಸಿಂಗ್ ಪಟೇಲ್ ಗೆಲುವು ಸಾಧಿಸಿದ್ದಾರೆ. ಬಿಜೆಪಿಯ ಕೌಶಲೇಂದ್ರ ಸಿಂಗ್ ಪಟೇಲ್ ಇಲ್ಲಿ ಸೋಲೊಪ್ಪಿಕೊಂಡಿದ್ದಾರೆ.

ಈ ಗೆಲುವಿನೊಂದಿಗೆ ಬಿಜೆಪಿ ವಿರೋಧಿ ಪಕ್ಷಗಳಲ್ಲಿ ಹೊಸ ಉತ್ಸಾಹ ಮೂಡಿದೆ.

ಟ್ಟಿಟ್ಟರ್ ನಲ್ಲಿ ದೀದಿ ಅಭಿನಂದನೆ

ಟ್ಟಿಟ್ಟರ್ ನಲ್ಲಿ ದೀದಿ ಅಭಿನಂದನೆ

ಈ ಬಗ್ಗೆ ಟ್ಟೀಟ್ ಮಾಡಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, "ಉತ್ತರ ಪ್ರದೇಶ ಉಪಚುನಾವಣೆ ಸಂಬಂಧಿಸಿದಂತೆ ಅಖಿಲೇಶ್ ಯಾದವ್ ಮತ್ತು ಮಾಯಾವತಿಯವರಿಗೆ ಅಭಿನಂದನೆಗಳು. ಅಂತ್ಯದ ಆರಂಭ ಚಾಲನೆ ಪಡೆದುಕೊಂಡಿದೆ," ಎಂದಿದ್ದಾರೆ.

ಉಪಚುನಾವಣೆಯಲ್ಲಿ ಬಿಜೆಪಿಗೆ ಸೋಲಾಗುತ್ತಿದ್ದಂತೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯೂ ಟ್ಟೀಟ್ ಮಾಡಿದ್ದಾರೆ. "ಉಪಚುನಾವಣೆಯ ಫಲಿತಾಂಶದಿಂದ ಜನರು ಬಿಜೆಪಿ ಬಗ್ಗೆ ಆಕ್ರೋಶಿತರಾಗಿದ್ದಾರೆ ಎಂಬುದು ಸ್ಪಷ್ಟವಾಗಿದೆ. ಗೆಲುವಿನ ಸಾಧ್ಯತೆ ಇದ್ದ ಬಿಜೆಪಿಯೇತರ ಅಭ್ಯರ್ಥಿಗೆ ಅವರು ಮತ ಹಾಕಿದ್ದಾರೆ. ಕಾಂಗ್ರೆಸ್ ನ ವಿಚಾರಕ್ಕೆ ಬಂದಾಗ ನಾವು ಉತ್ತರ ಪ್ರದೇಶದಲ್ಲಿ ಪಕ್ಷವನ್ನು ಕಟ್ಟುವಲ್ಲಿ ನಿರತರಾಗಿದ್ದೇವೆ. ಇದು ಒಂದು ರಾತ್ರಿಯಲ್ಲಿ ನಡೆಯುವ ಕೆಲಸವಲ್ಲ," ಎಂದು ಹೇಳಿದ್ದಾರೆ.

ದಿಕ್ಕೆಟ್ಟ ಬಿಜೆಪಿ

ಸೋಲಿನಿಂದ ಕಂಗೆಟ್ಟಿರುವ ಉತ್ತರ ಪ್ರದೇಶ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ, "ಇಷ್ಟು ದೊಡ್ಡ ಮಟ್ಟಕ್ಕೆ ಬಿಎಸ್ಪಿಯ ಮತಗಳು ಎಸ್ಪಿಗೆ ವರ್ಗಾವಣೆಯಾಗುತ್ತವೆ ಎಂದು ನಾವು ಅಂದುಕೊಂಡಿರಲಿಲ್ಲ. ಅಂತಿಮ ಫಲಿತಾಂಶ ನೋಡಿದ ನಂತರ ನಾವು ಈ ಬಗ್ಗೆ ವಿಶ್ಲೇಷಣೆ ನಡೆಸಲಿದ್ದೇವೆ. ಮತ್ತು ಭವಿಷ್ಯದಲ್ಲಿ ಬಿಎಸ್ಪಿ, ಎಸ್ಪಿ ಮತ್ತು ಕಾಂಗ್ರೆಸ್ ಒಟ್ಟಾದರೆ ಎದುರಿಸಲು ತಯಾರಿ ನಡೆಸಲಿದ್ದೇವೆ. ಇದಲ್ಲದೆ 2019ರ ಚುನಾವಣೆ ಗೆಲ್ಲಲು ರಣತಂತ್ರ ಹೆಣೆಯಲಿದ್ದೇವೆ," ಎಂದಿದ್ದಾರೆ.

ಸೋಲಿನಿಂದ ಕಂಗೆಟ್ಟಿರುವ ಬಿಜೆಪಿ ನಾಯಕರು ಹೇಳಿಕೆಗಳನ್ನು ನೀಡಲೂ ಸಿಗುತ್ತಿಲ್ಲ. ಎಲ್ಲರೂ ನಾಪತ್ತೆಯಾಗಿದ್ದಾರೆ.

ಇನ್ನು ಗೆಲುವಿನ ಬೆನ್ನಿಗೆ ಉತ್ತರ ಪ್ರದೇಶ ವಿಪಕ್ಷ ನಾಯಕ ಹಾಗೂ ಸಮಾಜವಾದಿ ಪಕ್ಷದ ನಾಯಕ ರಾಮ್ ಗೋವಿಂದ್ ಚೌಧರಿ ಮಾಯಾವತಿಯವರನ್ನು ಭೇಟಿಯಾಗಿ ಅಭಿನಂದನೆ ಸಲ್ಲಿಸಿದ್ದಾರೆ. ಎರಡೂ ಪಕ್ಷಗಳ ನಡವಳಿಕೆ ನೋಡಿದರೆ ಮುಂದಿನ ದಿನಗಳಲ್ಲಿಯೂ ಪರೋಕ್ಷ ಮೈತ್ರಿ ಮುಂದುವರಿಯುವ ಸಾಧ್ಯತೆ ಇದೆ. ಒಂದೊಮ್ಮೆ ಮೈತ್ರಿ ಮುಂದುವರಿದರೆ ಬಿಜೆಪಿ ಸಂಕಷ್ಟ ಹೆಚ್ಚಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Bharatiya Janata Party lost both the Gorakhpur andh Phulpur bypoll to Samajwadi Party. In both the lok sabha constituencies SP won the election with the help of BSP.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ