ಕೇಂದ್ರ ಸರ್ಕಾರದಿಂದ ಮಹತ್ವದ ನಿರ್ಧಾರ: 2026ರ ಸೆಪ್ಟೆಂಬರ್ 30ರವರೆಗೆ ಸಕ್ಕರೆ ರಫ್ತು ಸಂಪೂರ್ಣ ನಿಷೇಧ
ನವದೆಹಲಿ: ದೇಶೀಯ ಮಾರುಕಟ್ಟೆಯಲ್ಲಿ ಸಕ್ಕರೆ ಬೆಲೆ ಏರಿಕೆಯನ್ನು ನಿಯಂತ್ರಿಸುವ ಮತ್ತು ಸಮರ್ಪಕ ಲಭ್ಯತೆಯನ್ನು ಖಚಿತಪಡಿಸಿಕೊಳ್ಳುವ ಉದ್ದೇಶದಿಂದ ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆಯಿಟ್ಟಿದೆ. ತಕ್ಷಣದಿಂದ ಜಾರಿಗೆ ಬರುವಂತೆ ಸಕ್ಕರೆ ರಫ್ತಿನ ಮೇಲೆ ಸರ್ಕಾರ ಸಂಪೂರ್ಣ ನಿಷೇಧ ಹೇರಿದೆ. 2026ರ ಸೆಪ್ಟೆಂಬರ್ 30ರವರೆಗೆ ಅಥವಾ ಮುಂದಿನ ಆದೇಶದವರೆಗೆ ಈ ನಿಷೇಧ ಜಾರಿಯಲ್ಲಿರಲಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಅಡಿ ಬರುವ ವಿದೇಶಿ ವ್ಯಾಪಾರ ಮಹಾನಿರ್ದೇಶನಾಲಯ (ಡಿಜಿಎಫ್ಟಿ ) ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದೆ.
ಈ ಹಿಂದೆ ಸಕ್ಕರೆ ರಫ್ತು ನೀತಿಯನ್ನು 'ನಿರ್ಬಂಧಿತ' ವರ್ಗದಲ್ಲಿ ಇರಿಸಲಾಗಿತ್ತು. ಆದರೆ, ಇದೀಗ ಬಿಡುಗಡೆಯಾಗಿರುವ ಹೊಸ ಅಧಿಸೂಚನೆಯಲ್ಲಿ ಸಕ್ಕರೆ ರಫ್ತು ನೀತಿಯನ್ನು 'ನಿಷೇಧಿತ' ವರ್ಗಕ್ಕೆ ಬದಲಾಯಿಸಲಾಗಿದೆ. ಕಚ್ಚಾ ಸಕ್ಕರೆ, ಸಂಸ್ಕರಿಸಿದ ಸಕ್ಕರೆ ಮತ್ತು ಬಿಳಿ ಸಕ್ಕರೆ ಸೇರಿದಂತೆ ಎಲ್ಲಾ ರೀತಿಯ ಸಕ್ಕರೆಯ ರಫ್ತಿಗೆ ಈ ನಿಷೇಧ ಅನ್ವಯವಾಗುತ್ತದೆ ಎಂದು ಡಿಜಿಎಫ್ಟಿ ಸ್ಪಷ್ಟಪಡಿಸಿದೆ. ದೇಶದಲ್ಲಿ ಮುಂಬರುವ ದಿನಗಳಲ್ಲಿ ಹಬ್ಬದ ಸೀಸನ್ ಶುರುವಾಗಲಿದ್ದು, ಸಕ್ಕರೆಗೆ ಬೇಡಿಕೆ ಹೆಚ್ಚಾಗುವ ಸಾಧ್ಯತೆ ಇದೆ. ಬೆಲೆ ಏರಿಕೆಯ ಬಿಸಿ ಜನಸಾಮಾನ್ಯರಿಗೆ ತಟ್ಟಬಾರದು ಎಂಬ ಕಾರಣಕ್ಕೆ ಈ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ.

ರಫ್ತು ನಿಷೇಧದಿಂದ ವಿನಾಯಿತಿಗಳು
ಸಕ್ಕರೆ ರಫ್ತಿನ ಮೇಲೆ ನಿಷೇಧ ಹೇರಿದ್ದರೂ, ಕೆಲವು ನಿರ್ದಿಷ್ಟ ಷರತ್ತುಗಳ ಅಡಿಯಲ್ಲಿ ವಿನಾಯಿತಿಗಳನ್ನು ನೀಡಲಾಗಿದೆ. ಸಿಎಕ್ಸ್ಎಲ್ (CXL) ಮತ್ತು ಟಿಆರ್ಕ್ಯೂ (TRQ) ಕೋಟಾಗಳ ಅಡಿಯಲ್ಲಿ ಯುರೋಪಿಯನ್ ಒಕ್ಕೂಟ (EU) ಮತ್ತು ಅಮೆರಿಕ (USA) ದೇಶಗಳಿಗೆ ನಡೆಯುವ ಸಕ್ಕರೆ ರಫ್ತಿಗೆ ಈ ನಿಷೇಧ ಅನ್ವಯಿಸುವುದಿಲ್ಲ. ಈ ಕೋಟಾಗಳ ಅಡಿಯಲ್ಲಿ ನಿಗದಿಯಾಗಿರುವ ಪ್ರಮಾಣದ ಸಕ್ಕರೆಯನ್ನು ರಫ್ತು ಮಾಡಲು ಯಾವುದೇ ಅಡ್ಡಿಯಿಲ್ಲ ಎಂದು ಸರ್ಕಾರ ತಿಳಿಸಿದೆ.
ಇದರ ಜೊತೆಗೆ, ಅಡ್ವಾನ್ಸ್ ಆಥರೈಸೇಶನ್ ಸ್ಕೀಮ್ (AAS) ಅಡಿಯಲ್ಲಿ ನಡೆಯುವ ರಫ್ತುಗಳಿಗೂ ವಿನಾಯಿತಿ ನೀಡಲಾಗಿದೆ. ಇತರ ದೇಶಗಳ ಆಹಾರ ಭದ್ರತೆಯ ಅಗತ್ಯತೆಗಳನ್ನು ಪೂರೈಸಲು, ಸರ್ಕಾರದಿಂದ ಸರ್ಕಾರಕ್ಕೆ (G2G) ಮಾಡುವ ಸಾಗಣೆಗಳಿಗೂ ಈ ನಿಷೇಧದಿಂದ ವಿನಾಯಿತಿ ಇರಲಿದೆ. ಕಸ್ಟಮ್ಸ್ ಇಲಾಖೆಗೆ ಈಗಾಗಲೇ ಹಸ್ತಾಂತರಿಸಲಾದ ಮತ್ತು ರಫ್ತಿಗೆ ಸಿದ್ಧವಾಗಿರುವ ಭೌತಿಕ ಸಾಗಣೆಗಳಿಗೆ ಈ ಆದೇಶ ಅನ್ವಯಿಸುವುದಿಲ್ಲ. ಈ ಸಾಗಣೆಗಳು ಎಂದಿನಂತೆ ತಮ್ಮ ಗಮ್ಯಸ್ಥಾನವನ್ನು ತಲುಪಲಿವೆ.
The Central Government bans the export of sugar with immediate effect till September 30, 2026, or until further orders. Directorate General of Foreign Trade (DGFT) issues a notification amending the export policy from 'Restricted' to 'Prohibited'.
— ANI (@ANI) May 14, 2026
The prohibition will not apply… pic.twitter.com/TwafGBuXRl
ಪರಿಣಾಮ
ಭಾರತವು ವಿಶ್ವದ ಅತಿದೊಡ್ಡ ಸಕ್ಕರೆ ಉತ್ಪಾದಕ ಮತ್ತು ಪ್ರಮುಖ ರಫ್ತುದಾರ ರಾಷ್ಟ್ರಗಳಲ್ಲಿ ಒಂದಾಗಿದೆ. ಈ ರಫ್ತು ನಿಷೇಧದಿಂದಾಗಿ ದೇಶೀಯ ಮಾರುಕಟ್ಟೆಯಲ್ಲಿ ಸಕ್ಕರೆಯ ಪೂರೈಕೆ ಹೆಚ್ಚಾಗಲಿದ್ದು, ಬೆಲೆಗಳಲ್ಲಿ ಸ್ಥಿರತೆ ಕಾಯ್ದುಕೊಳ್ಳಲು ಸಹಾಯವಾಗಲಿದೆ. ಅಂತರರಾಷ್ಟ್ರೀಯ ಒಪ್ಪಂದಗಳನ್ನು ಗೌರವಿಸುವ ಜೊತೆಗೆ ದೇಶೀಯ ಹಿತಾಸಕ್ತಿಗಳನ್ನು ಕಾಪಾಡುವಲ್ಲಿ ಡಿಜಿಎಫ್ಟಿ ಅಧಿಸೂಚನೆಯು ಸಮತೋಲನ ಕಾಯ್ದುಕೊಂಡಿದೆ. ದೇಶದ ಆಹಾರ ಭದ್ರತೆ ಮತ್ತು ಬೆಲೆ ನಿಯಂತ್ರಣಕ್ಕೆ ಸರ್ಕಾರವು ಹೆಚ್ಚಿನ ಆದ್ಯತೆ ನೀಡಿದೆ ಎಂಬುದನ್ನು ಈ ಕಟ್ಟುನಿಟ್ಟಿನ ನಿರ್ಧಾರವು ಸ್ಪಷ್ಟಪಡಿಸುತ್ತದೆ.












Click it and Unblock the Notifications