ರಾಜಸ್ಥಾನ ಬಿಜೆಪಿಯಲ್ಲಿ ಆಂತರಿಕ ಕಲಹ: ವಸುಂದರಾ ರಾಜೇ ವಿರುದ್ಧ ಸಮರ ಸಾರಿರುವ ಸಚಿನ್ ಪೈಲೆಟ್ ಬೆಂಬಲಿಸಿದ ಕೇಂದ್ರ ಸಚಿವ
ಜೈಪುರ, ಮೇ 23: ರಾಜಸ್ಥಾನದ ರಾಜಕಾರಣ ವಿಚಿತ್ರ ಬೆಳವಣಿಗೆಗಳಿಗೆ ಸಾಕ್ಷಿಯಾಗುತ್ತಿದೆ. ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಅವರು ಪಾದಯಾತ್ರೆ ಕೈಗೊಂಡಿದ್ದಾರೆ. ತಮ್ಮದೇ ಸರ್ಕಾರ ಹಾಗೂ ಬಿಜೆಪಿಯ ಮಾಜಿ ಮುಖ್ಯಮಂತ್ರಿ ವಸುಂದರಾ ರಾಜೇ ವಿರುದ್ಧ ಭ್ರಷ್ಟಾಚಾರ ಆರೋಪಗಳ ತನಿಖೆಗೆ ಒತ್ತಾಯಿಸುತ್ತಿದ್ದಾರೆ. ಇದಕ್ಕೆ ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರು ಬೆಂಬಲ ಸೂಚಿಸುವ ಮೂಲಕ ಹೊಸ ವಿವಾದವನ್ನು ಹುಟ್ಟುಹಾಕಿದ್ದಾರೆ. ಈ ಮೂಲಕ ರಾಜಸ್ಥಾನ ಬಿಜೆಪಿಯಲ್ಲಿನ ಆಂತರಿಕ ಕಲಹ ಬಹಿರಂಗವಾಗಿದೆ.
ವೈರಲ್ ವಿಡಿಯೊವೊಂದರಲ್ಲಿ ಶೇಖಾವತ್ ಅವರು, 'ಯಾರಾದರೂ ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದರೆ, ತನಿಖೆ ನಡೆಸಬೇಕು. ಇದನ್ನು ರಾಜಕೀಯ ಹಸ್ತಕ್ಷೇಪವಿಲ್ಲದೆ ನಡೆಸಬೇಕು' ಎಂದು ಹೇಳುತ್ತಿರುವುದನ್ನು ಕಾಣಬಹುದು. ರಾಜಕೀಯ ಪ್ರೇರಣೆ ಇಲ್ಲದ ನ್ಯಾಯಯುತ ತನಿಖೆಯ ಅಗತ್ಯವನ್ನು ಶೇಖಾವತ್ ಒತ್ತಿ ಹೇಳಿದ್ದಾರೆ.

ಶೇಖಾವತ್ ಅವರ ಹೇಳಿಕೆಯು ರಾಜೇ ಅವರನ್ನು ಮಾತ್ರವಲ್ಲದೆ ಈಗಿನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರನ್ನೂ ಗುರಿಯಾಗಿಸುತ್ತದೆ ಎಂದು ರಾಜಕೀಯ ಪಂಡಿತರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ರಾಜಸ್ಥಾನದ ವಿಧಾನಸಭೆಗೆ ಇದೇ ವರ್ಷ ಚುನಾವಣೆ ನಡೆಸಯಲಿದೆ. ಈ ಚುನಾವಣಾ ವರ್ಷದಲ್ಲಿ ರಾಜಸ್ಥಾನದ ರಾಜಕೀಯವು ವಿಚಿತ್ರ ಬೆಳವಣಿಗೆಗಳಿಗೆ ಸಾಕ್ಷಿಯಾಗುತ್ತಿದೆ. ಅಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ನ ಪ್ರಮುಖ ನಾಯಕರು ತಮ್ಮದೇ ಪಕ್ಷದೊಳಗಿನ ನಾಯಕರನ್ನು ಟೀಕಿಸುತ್ತಿದ್ದಾರೆ. ಪಕ್ಷದೊಳಗಡೆಯೇ ವಿರೋಧ ಪಕ್ಷಗಳು ಹುಟ್ಟಿಕೊಂಡಿರುವುದು ಕುತೂಹಲಕರ ವಾತಾವರಣವನ್ನು ಸೃಷ್ಟಿಸಿದೆ. ಇದೆಲ್ಲವೂ ಬಹಿರಂಗವಾಗಿಯೇ ನಡೆಯುತ್ತಿರುವುದು ಚರ್ಚೆಗೆ ಗ್ರಾಸವಾಗಿದೆ.
ರಾಜಸ್ಥಾನದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಮುಖ್ಯಮಂತ್ರಿ ಸ್ಥಾನಕ್ಕೆ ಇಬ್ಬರು ನಾಯಕರು ಪೈಪೋಟಿ ನಡೆಸುತ್ತಿದ್ದಾರೆ. ಶೆಖಾವತ್ ಮತ್ತು ರಾಜೇ ಅವರು ಪ್ರಮುಖ ಸ್ಪರ್ಧಿಗಳೆಂದು ಗುರುತಿಸಲಾಗಿದೆ. ಅವರು ದೀರ್ಘಕಾಲದಿಂದ ಉತ್ತಮ ಬಾಂಧವ್ಯವನ್ನು ಹೊಂದಿಲ್ಲವೆಂಬುದು ರಹಸ್ಯವಾಗಿ ಉಳಿದಿಲ್ಲ.

ಈ ಹಿಂದೆ, ರಾಜೇ ಅವರ ಅವಧಿಯಲ್ಲಿ ನಡೆದ ಭ್ರಷ್ಟಾಚಾರ ಪ್ರಕರಣಗಳನ್ನು ಗೆಹ್ಲೋಟ್ ನಿರ್ಲಕ್ಷಿಸಿದ್ದಾರೆ ಎಂದು ಪೈಲಟ್ ಆರೋಪಿಸಿದ್ದಾರೆ. ಆ ನಂತರ ಕಾಂಗ್ರೆಸ್ ಕಾರ್ಯಕರ್ತರು ಸಂಜೀವನಿ ಹಗರಣದ ಬಗ್ಗೆಯೂ ಪೈಲಟ್ ಗಮನ ಹರಿಸಬೇಕು ಎಂದು ಒತ್ತಾಯಿಸಿದರು. ಇದರಲ್ಲಿ ಸಚಿವ ಶೇಖಾವತ್ ಅವರನ್ನು ಪ್ರಮುಖ ಆರೋಪಿಯನ್ನಾಗಿ ಮಾಡಲಾಗಿದೆ. ರಾಜ್ಯ ಸರ್ಕಾರವನ್ನು ಉರುಳಿಸಲು 2020 ರಲ್ಲಿ ಪೈಲಟ್ ಮತ್ತು ಅವರ ಬೆಂಬಲಿಗ ಶಾಸಕರು ನಡೆಸಿದ ಬಂಡಾಯದ ಹಿಂದೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಶೇಖಾವತ್ ಇದ್ದಾರೆ ಎಂದು ಸಿಎಂ ಗೆಹ್ಲೋಟ್ ಹೇಳಿದ್ದಾರೆ.
ಶೇಖಾವತ್ ಮತ್ತು ಸಿಎಂ ಗೆಹಲೋಟ್ ನಡುವೆ ಭಾರೀ ಸಂಘರ್ಷವಿದೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ಗೆಹಲೋಟ್ ಪುತ್ರ ವೈಭವ್ ಅವರ ಸೋಲಿಗೆ ಶೇಖಾವತ್ ಶ್ರಮಿಸಿದ್ದರು. ಗೆಹಲೋಟ್ ಅವರ ತವರು ಜಿಲ್ಲೆಯಲ್ಲಿ ಮಾತ್ರವಲ್ಲದೆ ಪಶ್ಚಿಮ ರಾಜಸ್ಥಾನದಲ್ಲೂ ಗಮನಾರ್ಹ ವ್ಯಕ್ತಿಯಾಗಿ ತಮ್ಮನ್ನು ತಾವು ಗುರುತಿಸಿಕೊಳ್ಳುವಲ್ಲಿ ಶೇಖಾವತ್ ಯಶಸ್ವಿಯಾದರು. ಇನ್ನೊಂದೆಡೆ ಶೇಖಾವತ್ ಅವರು ವಸುಂದರಾ ರಾಜೇ ಅವರಿಗೂ ವೈರಿಯೇ ಆಗಿದ್ದಾರೆ.
2018 ರಲ್ಲಿ, ಅಶೋಕ್ ಪರ್ನಾಮಿ ಅವರನ್ನು ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನದಿಂದ ತೆಗೆದುಹಾಕಲಾಯಿತು. ಅಮಿತ್ ಶಾ ಅವರು ರಾಜಸ್ಥಾನ ಬಿಜೆಪಿಯ ಅಧ್ಯಕ್ಷರಾಗಿ ಶೇಖಾವತ್ ಅವರನ್ನು ನೇಮಿಸಲು ಬಯಸಿದ್ದರು. ಆದರೆ, ಆಗಿನ ಸಿಎಂ ರಾಜೇ ಅವರು ಇದಕ್ಕೆ ವಿರೋಧ ವ್ಯಕ್ತಪಡಿಸಿದರು.

ಇದರಿಂದಾಗಿ ಆವಾಗಿನ ಚುನಾವಣಾ ವರ್ಷದಲ್ಲಿ ಎರಡೂವರೆ ತಿಂಗಳುಗಳವರೆಗೆ ಹುದ್ದೆ ಖಾಲಿ ಉಳಿಯಿತು. ನಂತರ ಮದನ್‌ಲಾಲ್ ಸೈನಿ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ನೇಮಿಸಲಾಯಿತು. ಈಗ, ಐದು ವರ್ಷಗಳ ನಂತರ ಶೇಖಾವತ್ ಕೂಡ ಬಿಜೆಪಿಯೊಳಗೆ ಸಿಎಂ ಸ್ಥಾನದ ಸ್ಪರ್ಧಿ ಎಂದು ಪರಿಗಣಿಸಲಾಗಿದೆ.












Click it and Unblock the Notifications