Delhi MCD Elections: ಗೆದ್ದ ಎಎಪಿ ಅಭ್ಯರ್ಥಿಗಳನ್ನು ಖರೀದಿಸಲು ಬಿಜೆಪಿ ಯತ್ನ- ಸಿಸೋಡಿಯಾ ಗಂಭೀರ ಆರೋಪ
ನವದೆಹಲಿ, ಡಿಸೆಂಬರ್ 8: ಹೊಸದಾಗಿ ಆಯ್ಕೆಯಾದ ಎಎಪಿ ಕೌನ್ಸಿಲರ್‌ಗಳನ್ನು ಖರೀದಿ ಮಾಡಲು ಬಿಜೆಪಿ ಯತ್ನಿಸುತ್ತಿದೆ ಎಂದು ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಬುಧವಾರ ಆರೋಪಿಸಿದ್ದಾರೆ.
ಬಿಜೆಪಿಯವರ ಕಳ್ಳಾಟಕ್ಕೆ ಯಾರೂ ಬಲಿಯಾಗುವುದಿಲ್ಲ ಎಂದು ಸಿಸೋಡಿಯಾ ಪ್ರತಿಪಾದಿಸಿದ್ದಾರೆ.
ಹೊಸದಾಗಿ ಚುನಾಯಿತರಾದ ಕೌನ್ಸಿಲರ್‌ಗಳಿಗೆ ಒಂದು ವೇಳೆ ಫೋನ್ ಕರೆಗಳು ಬಂದರೆ, ಅದನ್ನು ರೆಕಾರ್ಡ್ ಮಾಡಲು ಸೂಚಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಪ್ರತಿಷ್ಠಿತ ಮುನ್ಸಿಪಲ್ ಕಾರ್ಪೊರೇಷನ್(MCD) ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷವು 134 ಸ್ಥಾನಗಳನ್ನು ಗೆದ್ದಿದೆ. ಬಿಜೆಪಿಯು 104 ಕ್ಷೇತ್ರಗಳಲ್ಲಿ ಜಯ ಗಳಿಸಿದೆ. ಕಾಂಗ್ರೆಸ್ ಒಂಬತ್ತು ಸ್ಥಾನಗಳನ್ನು ಗೆದ್ದಿದೆ.

ದೆಹಲಿ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಹದಿನೈದು ವರ್ಷಗಳಿಂದ ಅಧಿಕಾರದಲ್ಲಿತ್ತು.
'ಬಿಜೆಪಿಯವರ ಕಳ್ಳಾಟ ಶುರುವಾಗಿದೆ. ಹೊಸದಾಗಿ ಆಯ್ಕೆಯಾದ ನಮ್ಮ ಕೌನ್ಸಿಲರ್‌ಗಳಿಗೆ ಫೋನ್ ಕರೆಗಳು ಬರಲಾರಂಭಿಸಿವೆ. ಎಎಪಿಯ ಯಾವುದೇ ಕೌನ್ಸಿಲರ್‌ಗಳು ಮಾರಾಟವಾಗುವುದಿಲ್ಲ. ನಾವು ನಮ್ಮ ಎಲ್ಲಾ ಕೌನ್ಸಿಲರ್‌ಗಳಿಗೆ ಫೋನ್ ಕರೆ ಬಂದರೆ, ಅದನ್ನು ರೆಕಾರ್ಡ್ ಮಾಡಲು ಸೂಚಿಸಿದ್ದೇವೆ' ಎಂದು ಮನೀಶ್ ಸಿಸೋಡಿಯಾ ಟ್ವೀಟ್ ಮಾಡಿದ್ದಾರೆ.
बीजेपी का खेल शुरू हो गया। हमारे नवनिर्वाचित पार्षदों के पास फ़ोन आने शुरू हो गये।
— Manish Sisodia (@msisodia) December 7, 2022
हमारा कोई पार्षद बिकेगा नहीं। हमने सभी पार्षदों से कह दिया है कि इनका फ़ोन आये या ये मिलने आयें तो इनकी रिकॉर्डिंग कर लें।
ಈ ಬಾರಿಯ ದೆಹಲಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಎಎಪಿ ಮತ್ತು ಬಿಜೆಪಿ ನಡುವಿನ ಮತ ಗಳಿಕೆ ಪ್ರಮಾಣದಲ್ಲಿನ ವ್ಯತ್ಯಾಸ ಕೇವಲ ಶೇ.3 ರಷ್ಟಿದೆ.
2017 ರ ದೆಹಲಿ ಪಾಲಿಕೆ ಚುನಾವಣೆಗೆ ಹೋಲಿಸಿದರೆ, AAP ಸರಿಸುಮಾರು ಶೇ 16 ಮತಗಳನ್ನು ಪಾಲನ್ನು ಹೆಚ್ಚಿಸಿಕೊಂಡಿದೆ.

ಎಂಸಿಡಿ ಚುನಾವಣೆಯಲ್ಲಿ ಗೆಲ್ಲಿಸಿದ್ದಕ್ಕಾಗಿ ದೆಹಲಿ ಜನತೆಗೆ ಧನ್ಯವಾದಗಳು ಎಂದು ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
ಕೇಂದ್ರ ಸರ್ಕಾರದ ಬೆಂಬಲ ಹಾಗೂ ಪ್ರಧಾನಿ ಮೋದಿ ಅವರ ಆಶೀರ್ವಾದ ಬೇಕೆಂದು ಕೇಜ್ರಿವಾಲ್ ತಿಳಿಸಿದ್ದಾರೆ. ಸುಂದರ ದೆಹಲಿ ನಗರವನ್ನು ನಿರ್ಮಾಣ ಮಾಡಲು ಸಹಕರಿಸಬೇಕೆಂದು ಜನರಿಗೆ ಕೇಜ್ರಿವಾಲ್ ಹೇಳಿದ್ದಾರೆ.












Click it and Unblock the Notifications