ಯಮುನಾ ನದಿಯಿಂದ 585 ಕೆಜಿ ಕಸ ತೆಗೆದ ಬಿಟ್ಟು ತಬಾಹಿ: ಇದು ಸರ್ಕಾರದ ಕೆನ್ನೆಗೆ ಬಾರಿಸಿದೇಟು ಎಂದ CEO
ನಮ್ಮ ದೇಶದಲ್ಲಿ ನದಿಗಳ ಸ್ವಚ್ಛತೆ ಎನ್ನುವುದು ಕೇವಲ ಸರ್ಕಾರಿ ಯೋಜನೆಗಳಿಗೆ, ಭರವಸೆಗಳಿಗೆ ಮಾತ್ರ ಸೀಮಿತವಾಗುತ್ತಿರುವ ಈ ಕಾಲದಲ್ಲಿ, 21 ವರ್ಷದ ಯುವಕನೊಬ್ಬ ತನ್ನ ಸ್ವಂತ ಇಚ್ಛಾಶಕ್ತಿಯಿಂದ ಬದಲಾವಣೆ ತರಲು ಮುಂದಾಗಿದ್ದಾನೆ. ಸರ್ಕಾರ ಹಾಗೂ ಸ್ಥಳೀಯ ಆಡಳಿತಗಳು ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಮಾಡಬೇಕಾದ ಕೆಲಸವನ್ನ ಕೇವಲ ಕೆಲವು ಗಂಟೆಗಳಲ್ಲಿ ಮಾಡಿ ಮುಗಿಸುವ ಮೂಲಕ ಈ ಯುವಕ ಇದೀಗ ಎಲ್ಲರ ಮೆಚ್ಚುಗೆಗೆ ಪಾತ್ರನಾಗಿದ್ದಾನೆ.
ಹೌದು, ನಿಮಗೆಲ್ಲರಿಗೂ ಗೊತ್ತಿರುವ ಆತನ ಹೆಸರು ಸುರೇಂದ್ರ ಸಿಂಗ್ ಚೌಧರಿ, ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಆತ ಬಿಟ್ಟು ತಬಾಹಿ (Bittu Tabahi) ಎಂದೇ ಫೇಮಸ್. ಇತ್ತೀಚೆಗೆ ದೆಹಲಿಯ ಯಮುನಾ ನದಿಯ ದಡದಲ್ಲಿ ಇವರು ನಡೆಸಿದ ಸ್ವಚ್ಛತಾ ಕಾರ್ಯಕ್ಕೆ ದೇಶಾದ್ಯಂತ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದ್ದು, ದೆಹಲಿ ಮೂಲದ ಉದ್ಯಮಿ, ಐಐಟಿ ಹಳೆಯ ವಿದ್ಯಾರ್ಥಿ ಅಲೋಕ್ ಜೈನ್ ಅವರು ಇದನ್ನ "ಆಡಳಿತದ ಮುಖಕ್ಕೆ ಬಾರಿಸಿದ ಏಟು" ಎಂದು ಬಣ್ಣಿಸಿದ್ದಾರೆ.

ಯಮುನಾ ನದಿ ಸ್ವಚ್ಛತಾ ಅಭಿಯಾನ: 585 ಕೆಜಿ ಕಸ ತೆರವು
ಸೆಪ್ಟೆಂಬರ್ 20ರಂದು ವಿಶ್ವ ಸ್ವಚ್ಛತಾ ದಿನದ ಅಂಗವಾಗಿ ಬಿಟ್ಟು ತಬಾಹಿ ಹಾಗೂ ಅವರ ತಂಡ ದೆಹಲಿ ಎನ್‌ಸಿಆರ್ ವ್ಯಾಪ್ತಿಯ ಯಮುನಾ ನದಿ ದಡದಲ್ಲಿ ಬೃಹತ್ ಸ್ವಚ್ಛತಾ ಅಭಿಯಾನವನ್ನ ಹಮ್ಮಿಕೊಂಡಿತ್ತು. ಬರೋಬ್ಬರಿ ನಾಲ್ಕೂವರೆ ಗಂಟೆಗಳ ಕಾಲ ಸತತವಾಗಿ ಶ್ರಮದಾನ ಮಾಡಿದ ಈ ಯುವಕರ ಪಡೆ, ನದಿ ತೀರದಲ್ಲಿದ್ದ ಸುಮಾರು 585 ಕೆಜಿಗೂ ಅಧಿಕ ತ್ಯಾಜ್ಯವನ್ನ ತೆರವುಗೊಳಿಸಿದೆ.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡಿರುವ ಸುರೇಂದ್ರ ಸಿಂಗ್ ಚೌಧರಿ, "ಸೆಪ್ಟೆಂಬರ್ 20, ಯಮುನಾ ದಡದಲ್ಲಿ ನಾಲ್ಕೂವರೆ ಗಂಟೆಗಳ ಕಾಲ ಸ್ವಚ್ಛತೆ ಮಾಡಿದ್ದೇವೆ. ಹೂವಿನ ಹಾರಗಳು, ಪೂಜಾ ಸಾಮಗ್ರಿಗಳು, ಪ್ಲಾಸ್ಟಿಕ್ ಸೇರಿದಂತೆ ಎಲ್ಲೆಡೆ ಕಸ ಹರಡಿತ್ತು. ಸುತ್ತಮುತ್ತಲಿನ ಜನರೂ ನಮ್ಮೊಂದಿಗೆ ಕೈಜೋಡಿಸಿದರು, ಇಡೀ ನದಿ ತೀರ ಈಗ ಸಂಪೂರ್ಣ ಸ್ವಚ್ಛವಾಗಿದೆ" ಎಂದು ಸಂತಸ ಹಂಚಿಕೊಂಡಿದ್ದಾರೆ.
ಅಧಿಕಾರಿಗಳ ನಿರ್ಲಕ್ಷ್ಯ, ಆಡಳಿತಕ್ಕೆ ತಕ್ಕ ಶಾಸ್ತಿ ಎಂದ ಸಿಇಒ
ಬಿಟ್ಟು ತಬಾಹಿ ಯಮುನಾ ಸ್ವಚ್ಛತೆ ಕಾರ್ಯದ ವಿಡಿಯೋ ವೈರಲ್ ಆಗುತ್ತಿದ್ದಂತೆ, ವೀಕೆಂಡ್ ಇನ್ವೆಸ್ಟಿಂಗ್ ಸಂಸ್ಥಾಪಕ ಹಾಗೂ ಸಿಇಒ ಅಲೋಕ್ ಜೈನ್ ಅವರು ಎಕ್ಸ್ ಖಾತೆಯಲ್ಲಿ ಯುವಕನನ್ನ ಹಿಂಬಾಲಿಸಿದ್ದಾರೆ. "ಇದು ನಿಜಕ್ಕೂ ಅದ್ಭುತ ಕಾರ್ಯ. ಇದು ಸ್ಥಳೀಯ ಆಡಳಿತದ ಮುಖಕ್ಕೆ ಬಾರಿಸಿದ ಏಟು" ಎಂದು ಜೈನ್ ಟ್ವೀಟ್ ಮಾಡಿದ್ದಾರೆ.
ಅಲೋಕ್ ಜೈನ್ ಅವರ ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ 40,000ಕ್ಕೂ ಹೆಚ್ಚು ಜನರನ್ನ ತಲುಪಿದ್ದು, ನೆಟ್ಟಿಗರು ಕೂಡ ಆಡಳಿತ ವ್ಯವಸ್ಥೆಯ ನಿರ್ಲಕ್ಷ್ಯದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. "ಸಾರ್ವಜನಿಕರ ಹಣದಲ್ಲಿ ಸಂಬಳ ಪಡೆದು ಯಾವುದೇ ಕೆಲಸ ಮಾಡದ ಸರ್ಕಾರಿ ಅಧಿಕಾರಿಗಳ ಸ್ಥಾನದಲ್ಲಿ ಇಂತಹ ಯುವಕರನ್ನು ಕೂರಿಸಬೇಕು," ಎಂದು ಒಬ್ಬರು ಕಮೆಂಟ್ ಮಾಡಿದರೆ, "ನಮ್ಮ ತೆರಿಗೆ ಹಣವನ್ನು ನೇರವಾಗಿ ಈ ಯುವಕನಿಗೆ ನೀಡಬಹುದೇ?" ಎಂದು ಮತ್ತೊಬ್ಬರು ಪ್ರಶ್ನಿಸಿದ್ದಾರೆ.
"ಇಂದಿನ ಜನ್-ಝೀ ಪೀಳಿಗೆ ಬದಲಾವಣೆಯ ಬಗ್ಗೆ ಗಂಭೀರವಾಗಿದೆ. ಇವರು ಆಡಳಿತ ಸೇವೆಗಳಿಗೆ ಬಂದರೆ ವ್ಯವಸ್ಥೆ ಖಂಡಿತ ಬದಲಾಗಲಿದೆ," ಎಂದು ಹಲವರು ಆಶಯ ವ್ಯಕ್ತಪಡಿಸಿದ್ದಾರೆ.
ಸುರೇಂದ್ರ ಸಿಂಗ್ ಚೌಧರಿ ಕೆಲಸ
ಮಧ್ಯಪ್ರದೇಶದ ಬಿಯಾವೊರಾದ ತಮ್ಮ ತವರೂರಿನಲ್ಲಿ ಕಸದಿಂದ ತುಂಬಿದ್ದ ನದಿಯನ್ನ ಒಂಟಿಯಾಗಿ ಸ್ವಚ್ಛಗೊಳಿಸುವ ಮೂಲಕ ಬಿಟ್ಟು ತಬಾಹಿ ಮೊದಲ ಬಾರಿಗೆ ರಾಷ್ಟ್ರಮಟ್ಟದಲ್ಲಿ ಜನಪ್ರಿಯತೆ ಪಡೆದಿದ್ದರು. ಇದೀಗ ದೆಹಲಿಯ ಯಮುನಾ ನದಿಯ ಬಳಿಕ, ತಾವು ನೀಡಿದ್ದ ಭರವಸೆಯಂತೆಯೇ ಗುರುಗ್ರಾಮದ ಖೇಡ್ಕಿ ದೌಲಾ ಪ್ರದೇಶವನ್ನೂ ಸಹ ಅವರು ಸ್ವಚ್ಛಗೊಳಿಸಿದ್ದಾರೆ.
ತಮ್ಮ ಈ ಸ್ವಚ್ಛತಾ ಅಭಿಯಾನ ಕೇವಲ ಒಂದೆರಡು ದಿನಗಳಿಗೆ ಮಾತ್ರ ಸೀಮಿತವಾಗಿಲ್ಲ, ಇದು ಸತತವಾಗಿ 3 ದಿನಗಳ ಕಾಲ ಮುಂದುವರಿಯಲಿದೆ ಎಂದು ಬಿಟ್ಟು ತಿಳಿಸಿದ್ದಾರೆ. ಜೊತೆಗೆ, ನೈರ್ಮಲ್ಯ ಮತ್ತು ಪರಿಸರ ಸಂರಕ್ಷಣೆಯ ಮಹತ್ವದ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಮುಂದಿನ ದಿನಗಳಲ್ಲಿ ದೇಶದ ವಿವಿಧ ರಾಜ್ಯಗಳಿಗೆ ಭೇಟಿ ನೀಡುವ ದೊಡ್ಡ ಯೋಜನೆಯನ್ನೂ ಅವರು ಹೊಂದಿದ್ದಾರೆ. ಕೇವಲ 21 ವರ್ಷದ ಯುವಕನೊಬ್ಬ ತೋರುತ್ತಿರುವ ಈ ಅದ್ಭುತ ಪರಿಸರ ಕಾಳಜಿ, ಭ್ರಷ್ಟ ವ್ಯವಸ್ಥೆಯ ವಿರುದ್ಧದ ಕ್ರಾಂತಿಯಾಗಿದ್ದು, ಪ್ರತಿಯೊಬ್ಬ ನಾಗರಿಕನಿಗೂ ಮಾದರಿ.


Click it and Unblock the Notifications
