Biryani: ಭರ್ಜನಿ ಬಿರಿಯಾನಿ ಮಾರಾಟವಾದರೂ 70 ಸಾವಿರ ಕೋಟಿ ರೂ. ಮೋಸ GST 2.0: ರಾಜಾರಾಂ ತಲ್ಲೂರು ಬರಹ
Biryani: ಭಾರತದಲ್ಲಿ ಬಿರಿಯಾನಿಗೆ ಭರ್ಜರಿ ಡಿಮ್ಯಾಂಡ್ ಇದೆ. ಆದರೆ ಇದೀಗ ಬಿರಿಯಾನಿ ಮಾರಾಟದಲ್ಲಿ ಆಗಿರುವ ದೊಡ್ಡ ಮೋಸ ಜಾಲವೊಂದು ಬಹಿರಂಗವಾಗಿದೆ. ಭರ್ಜನಿ ಬಿರಿಯಾನಿ ಮಾರಾಟವಾದರೂ 70 ಸಾವಿರ ಕೋಟಿ ರೂ. ಮೋಸ GST 2.0: ಹಿರಿಯ ಪತ್ರಕರ್ತ ರಾಜಾರಾಂ ತಲ್ಲೂರು ಅವರ ಬರಹ ಇಲ್ಲಿದೆ.
ಬಿರಿಯಾನಿ 2025ರ ಆರಂಭದಲ್ಲಿ GST 2.0 ಆವೃತ್ತಿಯಲ್ಲಿ ಅನುಷ್ಠಾನದ ಎರಡನೇ ಹಂತವಾದ ಕ್ಷಮತೆ ಹೆಚ್ಚಳದತ್ತ ಗಮನ ಹರಿಸಿದ್ದು, "ಟ್ರ್ಯಾಕ್ ಅಂಡ್ ಟ್ರೇಸ್" ಮೆಕ್ಯಾನಿಸಂಗೆ ಚಾಲ್ತಿ ನೀಡಿದ್ದನ್ನು ಯಾರೂ ಹೆಚ್ಚು ಗಮನಿಸಿದಂತಿಲ್ಲ. ಆರೆಂಟು ತಿಂಗಳ ಹಿಂದೆ ಬೆಂಗಳೂರಿನಲ್ಲಿ UPI ಮೂಲಕ ಹಣ ಪಾವತಿ ಪಡೆದ ಆಹಾರ ಮಾರಾಟದ ಪುಟ್ಟ ಅಂಗಡಿಗಳಿಗೆ ಲಕ್ಷಾಂತರ ರೂ.ಗಳ GST ಡಿಮಾಂಡ್ ನೊಟೀಸ್ ಬಂದದ್ದು ನೆನಪಿರಬಹುದು. ಅದರದ್ದೇ ಮುಂದುವರಿಕೆ, ಈಗ ಹೈದರಾಬಾದಿನಲ್ಲಿ ಬಿರಿಯಾನಿ ಅಂಗಡಿಗಳ ಮೇಲೆ ದಾಳಿ ನಡೆಸಿ, 70,000 ಕೋಟಿ ರೂ. ವಂಚನೆ ಪತ್ತೆ ಮಾಡಿರುವುದು.

ನಮ್ಮ ಸಾಂಪ್ರದಾಯಿಕ ವ್ಯಾಪಾರಸ್ಥರು ತಮ್ಮ ಸುದ್ದಿಗೆ ಯಾರೂ ಬರುವುದಿಲ್ಲ ಎಂದು GST ಬಂದ ಬಳಿಕವೂ ತಮ್ಮ ಎಂದಿನ ವ್ಯವಹಾರದಲ್ಲಿ ಮುಂದುವರಿಯುತ್ತಲೇ ಬಂದಿದ್ದಾರೆ. ನಮ್ಮವರು ನಮಗೆ ತೊಂದರೆ ಕೊಡಲಾರರು ಎಂಬ ನಂಬಿಕೆಯೂ ಇದಕ್ಕೆ ಕಾರಣ ಇರಬಹುದು. ಅವರಿಗಿನ್ನೂ ಕಂಪ್ಯೂಟರೀಕರಣ, ಫೇಸ್‌ಲೆಸ್ ತೆರಿಗೆ ಇಲಾಖೆಯ ವ್ಯವಹಾರ, ಅವು ಉತ್ಪಾದಿಸುವ ಡೇಟಾದ ಮೇಲೆ AI ಬಳಕೆಯ ಸಾಧ್ಯತೆ... ಇತ್ಯಾದಿಗಳೆಲ್ಲ ಇನ್ನೂ ಅರ್ಥ ಆದಂತಿಲ್ಲ. ಎಲ್ಲೋ ರಿಮೋಟ್ ಆಗಿ ಕಂಪ್ಯೂಟರ್ ಎದುರು ಕುಳಿತು ದೇಶದ ಮೂಲೆಮೂಲೆಯಲ್ಲಿ ತೆರಿಗೆ ಅವ್ಯವಹಾರ ಪತ್ತೆ ಹಚ್ಚುವ ಸಾಮರ್ಥ್ಯವನ್ನು ಹಿಂದಿನ ವ್ಯಾಟ್, ಈಗಿನ GST ಇಂಚಿಂಚಾಗಿ ಇಲಾಖೆಗೆ ತಂದು ಕೊಡುತ್ತಿದೆ. ಒಂದು ಕಚ್ಛಾ ಸರಕು ಹೊರಟಲ್ಲಿಂದ ಅದು ಅಂತಿಮ ಉತ್ಪನ್ನ ಆಗಿ ಗ್ರಾಹಕರ ಕೈ ಸೇರುವ ತನಕ ಅದರ ಚಲನೆಯನ್ನು ನಿಖರವಾಗಿ ಗುರುತಿಸುವ ಸಾಮರ್ಥ್ಯ ಇಂದು ತೆರಿಗೆ ಇಲಾಖೆಯ ಡೇಟಾ ಸಂಗ್ರಹಕ್ಕಿದೆ.
ಸರಳವಾಗಿ ವಿವರಿಸಬೇಕೆಂದರೆ, ಒಬ್ಬ ನಿರ್ದಿಷ್ಟ ವ್ಯಾಪಾರಿ ಒಂದು ತಿಂಗಳಿನಲ್ಲಿ 1000 ರೂ. ಕಚ್ಛಾಸಾಮಗ್ರಿ ಖರೀದಿಸಿ, ಕೇವಲ 400 ರೂ. ಮಾರಾಟ ತೋರಿಸಿದ ಎಂದಿಟ್ಟುಕೊಳ್ಳಿ. ಇದು ಒಂದು ವರ್ಷ ನಡೆದರೆ, 12,000 ರೂ. ಖರೀದಿ, 4800 ಮಾರಾಟ ಎಂದು ತೆರಿಗೆ ಇಲಾಖೆಗೆ ತೋರಿಸಿದಂತಾಗುತ್ತದೆ (ಬೇರೆ ಮೂಲಗಳಿಂದ ಕಾಣಿಸುತ್ತದೆ). ಅಂದರೆ ಆ ಅಂಗಡಿ ನಷ್ಟವಾಗಿ ಮುಚ್ಚಲೇ ಬೇಕು.
ಇನ್ನೂ ಅಂಗಡಿ ಜಬರ್ದಸ್ತ್ ವ್ಯಾಪಾರ ನಡೆಸ್ತಿದೆ ಎಂದರೆ, ಎಲ್ಲೋ ಏನೋ ಸರಿ ಇಲ್ಲ ಎಂದೇ ಅರ್ಥ. ಸರಬರಾಜು ಸರಪಣಿಯ ಉದ್ದಕ್ಕೂ ಈ ಲೆಕ್ಕಾಚಾರ ಪಕ್ಕಾ ಇರುವುದರಿಂದ, ಯಾವುದಾದರೊಂದು ಹಂತದಲ್ಲಿ, ಈ ಗೋಲ್‌ಮಾಲ್ ಸಿಕ್ಕಿಹಾಕಿಕೊಳ್ಳಲೇ ಬೇಕು. ಒಂದೊಂದಾಗಿ ಇವೆಲ್ಲ ಇನ್ನು ನಾಲ್ಕೈದು ವರ್ಷಗಳಲ್ಲಿ ಸಿಕ್ಕಿಹಾಕಿಕೊಳ್ಳಲಿವೆ. GST ಸರಪಣಿಗೆ ಸಿಕ್ಕಿಕೊಳ್ಳುವ ತನಕ ಈ ಲೆಕ್ಕಾಚಾರ ಹೇರಾಫೇರಿಗಳಿಗೆಲ್ಲ ಅವಕಾಶ ಇದ್ದವು. ಈಗ ಅದಕ್ಕೆ ಅವಕಾಶ ಇಲ್ಲ.
ಇಂದಲ್ಲ ನಾಳೆ, ವ್ಯವಹಾರ ಮುಚ್ಚಿಕೊಂಡು ಹೋದರೆ, ಮುಚ್ಚಿದ ಬಳಿಕವೂ ಈ GST ವಂಚನೆ ಭೂತ ಬೆನ್ನು ಹತ್ತುವುದು ಗ್ಯಾರಂಟಿ. ಕುಳಿತು ಉಣ್ಣುವ ದೇಶ ಭಕ್ತಿಗೆ ಇಂತಹದೊಂದು ವ್ಯವಸ್ಥೆಯ ಚಾಟಿ ಅಗತ್ಯವಿತ್ತು. ಈ ಚಾಟಿ ಸೆಲೆಕ್ಟಿವ್ ಆಗದಿರುವ ಎಚ್ಚರಿಕೆಯನ್ನು ನಮ್ಮ ರಾಜಕೀಯ ವ್ಯವಸ್ಥೆ ಖಚಿತಪಡಿಸಿಕೊಳ್ಳಬೇಕು.













Click it and Unblock the Notifications