370ನೇ ವಿಧಿ ರದ್ದು; ಕಾಂಗ್ರೆಸ್ ಟೀಕಿಸಿದ ಭೂಪೇಂದ್ರ ಸಿಂಗ್ ಹೂಡಾ
ನವದೆಹಲಿ , ಆಗಸ್ಟ್ 19 : "ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ಕೇಂದ್ರ ಸರ್ಕಾರಕ್ಕೆ ಬೆಂಬಲ ನೀಡುತ್ತೇನೆ. ಸರ್ಕಾರ ಸರಿಯಾಗಿದ್ದನ್ನು ಮಾಡಿದಾಗ ನಾವು ಅದನ್ನು ಒಪ್ಪಿಕೊಳ್ಳಬೇಕು" ಎಂದು ಭೂಪೇಂದ್ರ ಸಿಂಗ್ ಹೂಡಾ ಹೇಳಿದ್ದಾರೆ.
ಹರ್ಯಾಣದ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ಹಿರಿಯ ನಾಯಕ ಭೂಪೇಂದ್ರ ಸಿಂಗ್ ಹೂಡಾ ಹೇಳಿಕೆ ಪಕ್ಷದ ನಾಯಕರ ಅಚ್ಚರಿಗೆ ಕಾರಣವಾಗಿದೆ. "ನನ್ನ ಪಕ್ಷ ಸಣ್ಣ ಪ್ರಮಾಣದಲ್ಲಿ ದಾರಿ ತಪ್ಪಿದೆ" ಎಂದು ಅವರು ನೀಡಿರುವ ಹೇಳಿಕೆ ಹುಬ್ಬೇರುವಂತೆ ಮಾಡಿದೆ.
"ಹರ್ಯಾಣದ ನಮ್ಮ ಸಹೋದರರು ಕಾಶ್ಮೀರದಲ್ಲಿ ನಿಯೋಜನೆಗೊಂಡಿದ್ದಾರೆ. ಈಗ ವಿಶೇಷ ಸ್ಥಾನಮಾನ ರದ್ದುಗೊಳಿಸಿದ್ದರಿಂದ ಅನುಕೂಲವಾಗಿದೆ" ಎಂದು ಹೇಳಿರುವ ಹೂಡಾ, ಕೇಂದ್ರದ ತೀರ್ಮಾನವನ್ನು ಬೆಂಬಲಿಸಿದ್ದಾರೆ.

"ಸರ್ಕಾರ ಸರಿಯಾಗಿದ್ದನ್ನು ಮಾಡಿದಾಗ ನಾವು ಅದನ್ನು ಒಪ್ಪಿಕೊಳ್ಳಬೇಕು. ಆದರೆ, ಇದನ್ನು ನಮ್ಮ ಹಲವು ಸಹೋದ್ಯೋಗಿಗಳು ವಿರೋಧಿಸುತ್ತಿದ್ದಾರೆ. ದೇಶಭಕ್ತಿ ಮತ್ತು ಆತ್ಮ ಗೌರವದ ವಿಚಾರಕ್ಕೆ ಬಂದರೆ ನಾನು ಯಾರೊಂದಿಗೂ ರಾಜಿ ಆಗುವುದಿಲ್ಲ" ಎಂದು ತಿಳಿಸಿದ್ದಾರೆ.
"ನನ್ನ ಪಕ್ಷ ಸಣ್ಣ ಪ್ರಮಾಣದಲ್ಲಿ ದಾರಿ ತಪ್ಪಿದೆ. ಇದು ಹಳೆಯ ಕಾಂಗ್ರೆಸ್ ಆಗಿ ಉಳಿದಿಲ್ಲ" ಎಂದು ಭೂಪೇಂದ್ರ ಸಿಂಗ್ ಹೂಡಾ ಹೇಳಿದ್ದಾರೆ. 4 ದಶಕಗಳಿಂದ ಕಾಂಗ್ರೆಸ್‌ನಲ್ಲಿರುವ ನಾಯಕನ ಹೇಳಿಕೆ ಮುಂದಿನ ನಡೆ ಬಗ್ಗೆ ಕುತೂಹಲ ಹುಟ್ಟು ಹಾಕಿದೆ.












Click it and Unblock the Notifications