ಬೆಂಗಳೂರು-ವಾರಣಾಸಿಗೆ ಹೊರಟಿದ್ದ ಇಂಡಿಗೋ ವಿಮಾನ ತೆಲಂಗಾಣದಲ್ಲಿ ಲ್ಯಾಂಡ್, ಪ್ರಯಾಣಿಕರು ಆತಂಕ, ಏರ್‌ಲೈನ್ಸ್ ಸ್ಪಷ್ಟನೆ?
ಬೆಂಗಳೂರು, ಏಪ್ರಿಲ್ 04: ಇತ್ತೀಚೆಗಷ್ಟೇ ದುಬೈಗೆ ಹೊರಟಿದ್ದ ವಿಮಾನ ಟೇಕ್ ಆಫ್ ಆದ ಕೆಲವೇ ನಿಮಿಷಗಳಲ್ಲಿ ಮರಳಿ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿತ್ತು. ಅದರ ಬೆನ್ನಲ್ಲೇ ಇದೀಗ ಮತ್ತೊಂದು ಘಟನೆ ನಡೆದಿದೆ.
ರಾಜ್ಯ ರಾಜಧಾನಿ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಾರಣಾಸಿಗೆ ಹೊರಟಿದ್ದ ಇಂಡಿಗೋ ವಿಮಾನವು ತಾಂತ್ರಿಕ ದೋಷದಿಂದಾಗಿ ಮಂಗಳವಾರ ತೆಲಂಗಾಣದ ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ.

ಬೆಂಗಳೂರಿನಿಂದ ವಾರಣಾಸಿಗೆ ಹೊರಟಿದ್ದ 6E897 ಸಂಖ್ಯೆ ವಿಮಾನವು ಮಂಗಳವಾರ ಬೆಳಗ್ಗೆ ಪ್ರಯಾಣ ಬೆಳಗ್ಗೆ ಪ್ರಯಾಣ ಬೆಳೆಸಿತ್ತು. ಅದರಲ್ಲಿ ಒಟ್ಟು 137 ಪ್ರಯಾಣಿಕರು ಇದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಅದೃಷ್ಟವಶಾತ್ ಯಾರಿಗೂ ತೊಂದರೆಯಾಗಿಲ್ಲ.
ಬೆಂಗಳೂರಿನಿಂದ ಬೆಳ್ಳಂಬೆಳಗ್ಗೆ ವಾರಣಾಸಿಯತ್ತ ಪ್ರಯಾಣ ಬೆಳೆಸಿದೆ. ಬೆಳಗ್ಗೆ 6:15 ಗಂಟೆಗೆ ಪ್ರಯಾಣದ ವೇಳೆ ವಿಮಾನದಲ್ಲಿ ತಾಂತ್ರಿಕ ಸಮಸ್ಯೆ ಕಂಡು ಬಂದಿದೆ. ಕೂಡಲೇ ಎಚ್ಚೆತ್ತ ಪೈಲಟ್ ವಿಮಾನವನ್ನು ಶಂಶಾಬಾದ್ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ಸುರಕ್ಷಿತವಾಗಿ ತುರ್ತು ಭೂಸ್ಪರ್ಶ ಮಾಡಿದ್ದರಿಂದ ಅದರಲ್ಲಿ ಪ್ರಯಾಣಿಸುತ್ತಿದ್ದ ಅಷ್ಟು ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಎಂದು ನಾಗರಿಕ ವಿಮಾನಯಾನ ನಿರ್ದೇಶನಾಲಯ (DGCA) ತಿಳಿಸಿದೆ.
ಇಂಡಿಗೋ ಏರ್‌ಲೈನ್ಸ್ ಹೇಳಿದ್ದೇನು?
ಘಟನೆ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಇಂಡಿಗೋ ಏರ್‌ಲೈನ್ಸ್, ವಿಮಾನದಲ್ಲಿ ತಾಂತ್ರಿಕ ದೋಷ ಕಂಡು ಬಂದಿದ್ದರಿಂದ ಮುನ್ನೆಚ್ಚರಿಕೆ ಹಾಗೂ ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ಇಂಡಿಗೋ ವಿಮಾನವನ್ನು ಹೈದರಾಬಾದ್‌ಗೆ ತಿರುಗಿಸಲಾಗಿದೆ. ಪ್ರಸ್ತುತ ವಿಮಾನವನ್ನು ತಪಾಸಣೆಗೆ ಒಳಪಡಿಸಲಾಗಿದೆ. ವಿಳಂಬದ ನಂತರ ಪ್ರಯಾಣಿಕರಿಗೆ ಪರ್ಯಾಯ ವಿಮಾನಯಾ ವ್ಯವಸ್ಥೆ ಒದಗಿಸಲಾಗಿದೆ ಎಂದು ಇಂಡಿಗೋ ಏರ್‌ಲೈನ್ಸ್ ಸಂಸ್ಥೆ ತಿಳಿಸಿದೆ.

ನಮ್ಮ ಇಂಡಿಗೋ ವಿಮಾನವು ಹೈದರಾಬಾದ್ ನಲ್ಲಿದ್ದು, ತಜ್ಞರು ವಿಮಾನವನ್ನು ಅಗತ್ಯ ತಪಾಸಣೆಗೆ ಒಳಪಡಿಸಿದ್ದಾರೆ. ಹೀಗಾಗಿ ಪ್ರಯಾಣಿಕರಿಗೆ ಪ್ರಯಾಣ ವಿಳಂಭವಾಗದಂತೆ ನೋಡಿಕೊಳ್ಳಲಾಗಿದೆ. ಬದಲಿ ವಿಮಾನ ವ್ಯವಸ್ಥೆ ಸಹ ಮಾಡಿದ್ದು, ಆದ ಅಡಚಣೆಗೆ ಇಂಡಿಗೋ ಏರ್‌ಲೈನ್ಸ್ ವಿಷಾಧ ವ್ಯಕ್ತಪಡಿಸಿದೆ.
ದುಬೈ ವಿಮಾನದಲ್ಲೂ ತಾಂತ್ರಿಕ ದೋಷ
ಒಂದು ದಿನದ ಹಿಂದೆ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ (KIA) ದುಬೈನ ತಲುಪಬೇಕಿದ್ದ ವಿಮಾನವು ಟೇಕ್ ಆಪ್ ಕೆಲವೇ ಕ್ಷಣಗಳಲ್ಲಿ ಮರಳಿ ಬೆಂಗಳೂರು ಏರ್‌ಪೋರ್ಟ್‌ನಲ್ಲೇ ಲ್ಯಾಂಡ್ ಆದ ಘಟನೆ ಭಾನುವಾರ ರಾತ್ರಿ ನಡೆದಿದೆ.
ಬೆಂಗಳೂರಿನಿಂದ ದುಬೈಗೆ ತೆರಳುತ್ತಿದ್ದ EY 237 ಸಂಖ್ಯೆಯ 'ಎತಿಹಾದ್ ಏರ್‌ಲೈನ್ಸ್'ನ ವಿಮಾನದಲ್ಲಿ ಸರಿ ಸುಮಾರು 200 ಜನರು ಪ್ರಯಾಣಿಸುತ್ತಿದ್ದರು. ಭಾನುವಾರ ರಾತ್ರಿ 9ಗಂಟೆ ಸುಮಾರಿಗೆ ವಿಮಾನ ತನ್ನ ಪ್ರಯಾಣ ಆರಂಭಿಸಿತು. ಟೇಕ್ ಆಪ್ ಕೆಲವೇ ನಿಮಿಷಗಳಲ್ಲಿ ವಿಮಾನದಲ್ಲಿ ತಾಂತ್ರಿಕ ತೋಷ ಕಂಡು ಬಂದಿತ್ತು.
ಎಚ್ಚೆತ್ತ ಪೈಲಟ್ ಕೂಡಲೇ ಮರಳಿ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಮಾಡುವಲ್ಲಿ ಯಶಸ್ವಿಯಾದರು. ಈ ವೇಳೆ ನಂದಿ ಬೆಟ್ಟ ಸುತ್ತುವರಿದ ವಿಮಾನ ಮರಳಿ ಕೆಐಎನಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ಪ್ರಯಾಣಿಕರೆಲ್ಲರೂ ಕೆಲ ಕಾಲ ಆತಂಕಕ್ಕೆ ಒಳಗಾಗಿದ್ದರು. ಅದೃಷ್ಟವಶಾತ್ ಯಾರಿಗೂ ತೊಂದರೆ ಆಗಿಲ್ಲ.
ಇದರ ಬೆನ್ನಲ್ಲೆ ಇದೀಗ ಅಂತದ್ದೇ ಘಟನೆ ನಡೆದಿದ್ದು, ಬೆಂಗಳೂರಿನಿಂದ ವಾರಣಾಸಿಗೆ ತೆರಳುವ ವಿಮಾನ ನಿಲ್ದಾಣವು ಇಂತದ್ದೇ ಕಾರಣದಿಂದ ಹೈದರಾಬಾದ್ ನಲ್ಲಿ ತುರ್ತು ಭೂಸ್ಪರ್ಶ ಮಾಡಿದೆ.












Click it and Unblock the Notifications