Train Accident: ಹಳಿತಪ್ಪಿದ ಬೆಂಗಳೂರು-ಕಾಮಾಕ್ಯ ಎಕ್ಸ್‌ಪ್ರೆಸ್‌ನ 11 ಬೋಗಿಗಳು
ದೇಶದೆಲ್ಲೆಡೆ ಯುಗಾದಿ ಸಂಭ್ರಮದಲ್ಲಿದ್ದರೆ, ಹಬ್ಬದ ದಿನವೇ ಘೋರ ದುರಂತವೊಂದು ಸಂಭವಿಸಿದೆ. ಒಡಿಶಾದ ಕಟಕ್‌ನ ನೆರ್ಗುಂಡಿ ನಿಲ್ದಾಣದ ಬಳಿ ಬೆಂಗಳೂರು-ಕಾಮಾಕ್ಯ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್‌ನ ಹನ್ನೊಂದು ಬೋಗಿಗಳು ಹಳಿತಪ್ಪಿವೆ. ಈಸ್ಟ್ ಕೋಸ್ಟ್ ರೈಲ್ವೆ ವ್ಯಾಪ್ತಿಯ ಖುರ್ದಾ ರಸ್ತೆ ವಿಭಾಗದ ಕಟಕ್-ನೆರ್ಗುಂಡಿ ರೈಲ್ವೆ ವಿಭಾಗದಲ್ಲಿ ಭಾನುವಾರ ಬೆಳಿಗ್ಗೆ ಸುಮಾರು 11:54 ರ ಸುಮಾರಿಗೆ ಈ ಘಟನೆ ಸಂಭವಿಸಿದೆ ಎಂದು ವರದಿಯಾಗಿದೆ.
ಈವರೆಗೆ ಯಾವುದೇ ಸಾವುನೋವುಗಳು ವರದಿಯಾಗಿಲ್ಲ. ಎಲ್ಲ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಎಂದು ಪೂರ್ವ ಕರಾವಳಿ ರೈಲ್ವೆಯ ಹಿರಿಯ ಅಧಿಕಾರಿ ಅಶೋಕ ಕುಮಾರ್ ಮಿಶ್ರಾ ಹೇಳಿದ್ದಾರೆ. 12551 ಕಾಮಾಕ್ಯ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್‌ನ ಕೆಲವು ಬೋಗಿಗಳು ಹಳಿತಪ್ಪಿದ ಬಗ್ಗೆ ನಮಗೆ ಮಾಹಿತಿ ಬಂದಿದೆ. ಪ್ರಸ್ತುತ 11 ಎಸಿ ಬೋಗಿಗಳು ಹಳಿತಪ್ಪಿರುವ ಮಾಹಿತಿ ಬಂದಿದೆ ಎಂದಿದ್ದಾರೆ.

ಈ ಘಟನೆಯಲ್ಲಿ ಯಾವ ಪ್ರಯಾಣಿಕರಿಗೂ ಗಾಯಗಳಾಗಿಲ್ಲ, ಎಲ್ಲ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ. ಸ್ಥಳಕ್ಕೆ ಅಪಘಾತ ಪರಿಹಾರ ರೈಲು, ತುರ್ತು ವೈದ್ಯಕೀಯ ಉಪಕರಣಗಳನ್ನು ರವಾನಿಸಲಾಗಿದೆ. ಅಧಿಕಾರಿಗಳು ಶೀಘ್ರದಲ್ಲೇ ಘಟನಾ ಸ್ಥಳ ತಲುಪಲಿದ್ದಾರೆ. ವಿಚಾರಣೆಯ ನಂತರ ಹಳಿತಪ್ಪಿದ ಕಾರಣವನ್ನು ನಾವು ಪತ್ತೆಹಚ್ಚಲಿದ್ದೇವೆ. ಇದೇ ಮಾರ್ಗದಲ್ಲಿ ಕಾಯುತ್ತಿರುವ ರೈಲುಗಳನ್ನು ಬೇರೆಡೆಗೆ ಮಾರ್ಗ ಬದಲಿಸುವುದು ಹಾಗೂ ಮತ್ತೆ ರೈಲುಗಳ ಸಂಚಾರಕ್ಕೆ ವ್ಯವಸ್ಥೆ ಮಾಡುವುದು ನಮ್ಮ ಮೊದಲ ಆದ್ಯತೆ ಎಂದು ಹೇಳಿದ್ದಾರೆ.
ಒಡಿಶಾದ ಕಟಕ್ ಜಿಲ್ಲೆಯಲ್ಲಿ ಎಕ್ಸ್‌ಪ್ರೆಸ್ ರೈಲು ಹಳಿತಪ್ಪಿ ಜನರು ಗಾಯಗೊಂಡಿದ್ದಾರೆ. ಗಾಯಗೊಂಡ ಏಳು ಜನರನ್ನು ರಕ್ಷಿಸಿ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಒಡಿಶಾ ಅಗ್ನಿಶಾಮಕ ಸೇವೆಯ ಮಹಾನಿರ್ದೇಶಕ ಸುಧಾಂಶು ಸಾರಂಗಿ ತಿಳಿಸಿದ್ದಾರೆ.
ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಕೂಡ ಪ್ರತಿಕ್ರಿಯಿಸಿದ್ದಾರೆ. ಒಡಿಶಾದಲ್ಲಿ 12551 ಕಾಮಾಕ್ಯ ಎಕ್ಸ್‌ಪ್ರೆಸ್‌ಗೆ ಸಂಬಂಧಿಸಿದ ಘಟನೆಯ ಬಗ್ಗೆ ನನಗೆ ತಿಳಿದಿದೆ. ಒಡಿಶಾ ಸರ್ಕಾರ ಮತ್ತು ರೈಲ್ವೆಯೊಂದಿಗೆ ಸಂಪರ್ಕದಲ್ಲಿದೆ. ಘಟನೆ ಸಂಬಂಧ ಪ್ರತಿಯೊಬ್ಬ ವ್ಯಕ್ತಿಯನ್ನು ನಾವು ಸಂಪರ್ಕಿಸುತ್ತೇವೆ ಎಂದಿದ್ದಾರೆ. ಪ್ರಯಾಣಿಕರ ಸಹಾಯಕ್ಕಾಗಿ ರೈಲ್ವೆ ಭುವನೇಶ್ವರ ಸಹಾಯವಾಣಿ 8455885999 ಮತ್ತು ಕಟಕ್ ಸಹಾಯವಾಣಿ 8991124238 ಅನ್ನು ತೆರೆಯಲಾಗಿದೆ.
ಈ ಘಟನೆ ಬೆನ್ಲಲ್ಲೇ ಈ ಮಾರ್ಗದಲ್ಲಿ ಸಂಚರಿಸಬೇಕಿದ್ದ ಹಲವಾರು ರೈಲುಗಳ ಮಾರ್ಗವನ್ನು ಬದಲಾಯಿಸಲಾಗಿದೆ. ಇವುಗಳಲ್ಲಿ ರೈಲು ಸಂಖ್ಯೆಗಳು 12822 (BRAG), 12875 (BBS) ಮತ್ತು 22606 (RTN) ಕೂಡ ಸೇರಿವೆ. ಹೆಚ್ಚುವರಿ ಬೆಂಬಲಕ್ಕಾಗಿ ಎನ್‌ಡಿಆರ್‌ಎಫ್ ಮತ್ತು ಅಗ್ನಿಶಾಮಕ ಸೇವೆಗಳಿಗೆ ಮಾಹಿತಿಯೂ ನೀಡಲಾಗಿದೆ.












Click it and Unblock the Notifications