Get Updates
Get notified of breaking news, exclusive insights, and must-see stories!

Expressway: ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇ ಶೀಘ್ರ ಆರಂಭ, 262 ಕಿಮೀ ಪ್ರಯಾಣಕ್ಕೆ ಕೇವಲ 3 ತಾಸು

Bengaluru-Chennai Expressway: ಕರ್ನಾಟಕ ಸೇರಿದಂತೆ ಒಟ್ಟು ಮೂರು ರಾಜ್ಯಗಳಲ್ಲಿ ಹಾದು ಹೋಗುವ ಬೆಂಗಳೂರು-ಚೆನ್ನೈ ಮಾರ್ಗದಲ್ಲಿ ಆರಂಭವಾಗಿರುವ 'ಗ್ರೀನ್‌ಫೀಲ್ಡ್‌ ಎಕ್ಸ್‌ಪ್ರೆಸ್‌ವೇ (NE-7)' (Bengaluru-Chennai Expressway) ಕಾರಿಡಾರ್ ಯೋಜನೆಯ ಉದ್ಘಾಟನೆಗೆ ವರ್ಷಗಳ ವಿಳಂಬ, ಗಡುವುಗಳ ಬಳಿಕ ಮುಹೂರ್ತ ಫಿಕ್ಸ್ ಆಗಿದೆ. ಪ್ರಮುಖ ಮಾರ್ಗದ ನಿರ್ಮಾಣ ಕೆಲಸ ಪೂರ್ಣಗೊಂಡಿದ್ದು, ಒಂದಷ್ಟು ಕಾಮಗಾರಿಗಳು ಬಾಕಿ ಉಳಿದಿವೆ. ಯಾವ ರಾಜ್ಯಗಳಲ್ಲಿ ಎಷ್ಟು ಪ್ರಮಾಣದ ಕೆಲಸ ಉಳಿದಿದೆ, ಯೋಜನೆ ಆರಂಭ, ಅಂತಿಮ ಗಡುವು, ಎಕ್ಸ್‌ಪ್ರೆಸ್‌ವೇ ಪ್ರಯೋಜನಗಳು ಸೇರಿದಂತೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇ ಮಹತ್ವ

ಕರ್ನಾಟಕ ರಾಜಧಾನಿ ಬೆಂಗಳೂರಿನಿಂದ ತಮಿಳುನಾಡಿನ ರಾಜಧಾನಿ ಚೆನ್ನೈವರೆಗೆ ಬರೋಬ್ಬರಿ 347 ಕಿಲೋ ಮೀಟರ್ ಇದೆ. ಇದರಲ್ಲಿ 263 ಕಿಲೋ ಮೀಟರ್‌ನಲ್ಲಿ ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇ (NE-7) ನಿರ್ಮಾಣವಾಗುತ್ತಿದೆ. ಅಂದಾಜು 17,930 ಕೋಟಿ ರೂಪಾಯಿ ವೆಚ್ಚದಲ್ಲಿ ಯೋಜನೆಯನ್ನು ಕೈಗೆತ್ತಿಕೊಂಡು ನಾಲ್ಕು ವರ್ಷಗಳು ಕಳೆದಿವೆ. ಕರ್ನಾಟಕ, ಆಂಧ್ರ ಪ್ರದೇಶ ಮತ್ತು ತಮಿಳುನಾಡು ಮಾರ್ಗವಾಗಿ ಸಾಗುವ 08 ಪಥಗಳ ರಸ್ತೆ ಇದಾಗಿದೆ. ಈಗಾಗಲೇ ಇರುವ ನಾಲ್ಕು ಪಥಗಳ ರಾಷ್ಟ್ರೀಯ ಹೆದ್ದಾರಿಯು ಈ ಗ್ರೀನ್‌ಫೀಲ್ಡ್ ಹೈವೇ ಕಾರಿಡಾರ್ ಯೋಜನೆ ಪೂರ್ಣಗೊಂಡ ಬಳಿಕ ಎಂಟು ಲೈನ್‌ಗಳಾಗಿ ವಿಸ್ತರಣೆ ಆಗಲಿದೆ. ಇದು ಎರಡು ಮಹಾನಗರಗಳಿಗೆ ತ್ವರಿತ ಸಂಚಾರ, ಸರಕು ಸಾಗಣೆಯನ್ನು ಸಾಧ್ಯವಾಗಿಸುತ್ತದೆ. ಹತ್ತಾರು ಜಿಲ್ಲೆಗಳ ಬಹು ಆಯಾಮದ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸಲಿದೆ.

Bengaluru Chennai Expressway

ಎಕ್ಸ್‌ಪ್ರೆಸ್ ವೇ ಉದ್ಘಾಟನೆ ಯಾವಾಗ?

'ಭಾರತ್ ಮಾಲಾ ಪರಿಯೋಜನೆ' ಅಡಿಯಲ್ಲಿ 263 ಕಿಲೋ ಮೀಟರ್ ಉದ್ದದ ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇ ನಿರ್ಮಾಣದ ಜವಾಬ್ದಾರಿಯನ್ನು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ವಹಿಸಿಕೊಂಡಿದೆ. ಪ್ರಾಧಿಕಾರವು 2027ರ ಆರಂಭದಲ್ಲಿ ಎಕ್ಸ್‌ಪ್ರೆಸ್‌ವೇ ತೆರೆಯಲು ಪ್ಲಾನ್ ಮಾಡಿಕೊಂಡಿದೆ. ಆದರೆ ಬಾಕಿ ಉಳಿದ ಕಾಮಗಾರಿಗಳು ವಿಳಂಬವಾದರೆ ಕಾರ್ಯಾಚರಣೆ ಮತ್ತೆ ತಡವಾಗಲೂಬಹುದು. ಸದ್ಯ ಮುಂದಿನ ವರ್ಷದ ಆರಂಭದಲ್ಲಿ ಈ ಎಕ್ಸ್‌ಪ್ರೆಸ್‌ವೇ ಸಾರ್ವಜನಿಕ ಬಳಕೆಗೆ ಮುಕ್ತಗೊಳ್ಳುವ ನಿರೀಕ್ಷೆ ಇದೆ.

ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇ ಪ್ರಯೋಜನಗಳೇನು?

ಎಕ್ಸ್‌ಪ್ರೆಸ್‌ವೇ ಸಾರ್ವಜನಿಕರಿಗೆ ತೆರೆದಲ್ಲಿ ಬೆಂಗಳೂರು ಮತ್ತು ಚೆನ್ನೈ ನಗರಗಳ ನಡುವಿನ ವೇಗದ ರಸ್ತೆ ಪ್ರಯಾಣ ಬದಲಾಗಲಿದೆ. ಮತ್ತಷ್ಟು ಸುರಕ್ಷಿತ ಹಾಗೂ ವೇಗದ ಸಂಚಾರ ಸಾಧ್ಯವಾಗುತ್ತದೆ. ಪ್ರಯಾಣ ಸಮಯ ಕಡಿಮೆ ಆಗುತ್ತದೆ. ಗಂಟೆಗಳ ಸಮಯ ಪ್ರಯಾಣಿಕರಿಗೆ ಉಳಿತಾಯವಾಗುತ್ತದೆ. ಮುಖ್ಯವಾಗಿ ಮೂರು ರಾಜ್ಯಗಳ ಹಲವು ಜಿಲ್ಲೆಗಳು, ಅನೇಕ ತಾಲೂಕುಗಳ ನೂರಾರು ಗ್ರಾಮೀಣ ಭಾಗಗಳು ಅಭಿವೃದ್ಧಿಗೆ ತೆರೆದುಕೊಳ್ಳಲು ಅವಕಾಶ ಸಿಕ್ಕಂತಾಗುತ್ತದೆ.

ಎಕ್ಸ್‌ಪ್ರೆಸ್‌ವೇ ಹಾದು ಹೋಗುವ ಭಾಗದಲ್ಲಿ ಭೂಮಿಗೆ ಬಂಗಾರದ ಬೆಲೆ ಬರಲಿದೆ. ಅಲ್ಲಿನ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಪ್ರಗತಿಗೆ ಮುನ್ನೂಡಿ ಬರೆದಂತಾಗುತ್ತದೆ. ಸಂಚಾರ ಸುಧಾರಣೆ ಆಗುತ್ತಿದ್ದಂತೆ ಕ್ರಮೇಣ ಆಯಾ ಭಾಗಗಳ ಚಿತ್ರಣ ಬದಲಾಗುತ್ತದೆ. ಕೈಗಾರಿಕೆ ವಿಚಾರದಲ್ಲಿ ಒಂದಷ್ಟು ಬದಲಾವಣೆಯಾಗಿ ಕಾರ್ಖಾನೆ, ಸಣ್ಣ ಸಣ್ಣ ಉದ್ಯಮಗಳು ತಲೆ ಎತ್ತಲಿವೆ. ಒಟ್ಟಾರೆ ಈ ಎಕ್ಸ್‌ಪ್ರೆಸ್‌ವೇ ಹಾದು ಹೋಗುವ ಮಾರ್ಗದ ಜನರಿಗೆ ಸಾಕಷ್ಟು ಪ್ರಯೋಜನ ಸಿಗಲಿದೆ.

Bengaluru Chennai Expressway

ಎರಡು ಗಂಟೆಗಳ ಸಮಯ ಉಳಿತಾಯ

ಗ್ರೀನ್‌ಫೀಲ್ಡ್ ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇ ಕರ್ನಾಟಕ, ಆಂಧ್ರಪ್ರದೇಶ ಮತ್ತು ತಮಿಳುನಾಡಿನ ಲಕ್ಷಾಂತರ ಪ್ರಯಾಣಿಕರಿಗೆ ಸಾರಿಗೆ ಸೇವೆ ನೀಡುತ್ತದೆ. ಇದು ಕರ್ನಾಟಕದ ಹೊಸಕೋಟೆಯಿಂದ ಆರಂಭವಾಗಿ ತಮಿಳುನಾಡಿನ ಶ್ರೀಪೆರಂಬದೂರ್‌ನಲ್ಲಿ ಕೊನೆಗೊಳ್ಳುತ್ತದೆ. ಪ್ರತಿ ಗಂಟೆಗೆ 120 ಕಿಮೀ ವೇಗದಲ್ಲಿ ಸಂಚಾರ ಮಾಡುವಂತೆ ಈ ಕಾರಿಡಾರ್ ವಿನ್ಯಾಸಗೊಳಿಸಲಾಗಿದೆ. ಎರಡು ಮಹಾನಗರಗಳ ಮಧ್ಯದ 347 ಕಿ.ಮೀ ಮಾರ್ಗದ ಹಾಲಿ ಪ್ರಯಾಣಕ್ಕೆ 6 ರಿಂದ 7 ಗಂಟೆಗಳ ಸಮಯ ಹಿಡಿಯುತ್ತದೆ. ಎಕ್ಸ್‌ಪ್ರೆಸ್‌ವೇ ಆರಂಭದ ಬಳಿಕ ಸುಮಾರು 03 ಗಂಟೆಗಳಲ್ಲಿ ಕರ್ನಾಟಕ-ಚೆನ್ನೈ ಸಂಪರ್ಕ ಸಾಧ್ಯವಾಗಲಿದೆ.

ನಿಗದಿತ ಕಾಲಮಿತಿಯೊಳಗೆ ಲೋಕಾರ್ಪಣೆ ಆಗುತ್ತಾ?

ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇ ಯೋಜನೆಗೆ 2021ರಲ್ಲಿ ಶಂಕುಸ್ಥಾಪನೆ ನೆರವೇರಿತಾದರೂ, ಕಾಮಗಾರಿಯು 2022ರಲ್ಲಿ ಶುರುವಾಯಿತು. ಆರಂಭದಲ್ಲಿ ಎರಡೇ ವರ್ಷದಲ್ಲಿ ಯೋಜನೆ ಮುಗಿಸಿ 2024 ರಲ್ಲಿ ಸವಾರರಿಗೆ ಮುಕ್ತಗೊಳಿಸಲು ಯೋಜಿಸಲಾಗಿತು. ನಂತರ ವಿವಿಧ ಕಾರಣಗಳಿಂದಾಗಿ ಜೂನ್ 2026ಕ್ಕೆ ಉದ್ಘಾಟನೆ ಮುಂದೂಡಲಾಯಿತು. ಆದರೆ ನಿರೀಕ್ಷೆಯಂತೆ ಎರಡನೇ ಗಡುವಿನೊಳಗೆ ಎಕ್ಸ್‌ಪ್ರೆಸ್‌ವೇ ಸಾರ್ವಜನಿಕ ಬಳಕೆಗೆ ಲಭ್ಯವಾಗಲಿಲ್ಲ. ಇದೀಗ ಎನ್‌ಎಚ್‌ಎಐ ಅಧಿಕಾರಿಗಳು 2027ರ ಆರಂಭದಲ್ಲಿ ಕಾರ್ಯಾರಣೆ ಮಾಡುವುದಾಗಿ ತಿಳಿಸಿ ಮೂರನೇ ಗಡುವು ಪಡೆದಿದ್ದಾರೆ. ಈ ಬಾರಿ ಅಂದುಕೊಂಡಂತೆ ನಿಗದಿತ ಕಾಲಮಿತಿಯೊಳಗೆ ಎಕ್ಸ್‌ಪ್ರೆಸ್‌ವೇ ತೆರೆಯುವ ಲಕ್ಷಣಗಳು ಕಾಣುತ್ತಿವೆ.

ಕಾಮಗಾರಿ ವಿಳಂಬಕ್ಕೆ ಕಾರಣಗಳೇನು?

ಯಾವುದೇ ರಸ್ತೆ ಯೋಜನೆಗಳಾಗಲಿ ಅಗತ್ಯ ಭೂಮಿ ಸ್ವಾಧೀನ ವಿಚಾರದಲ್ಲಿ ಪರಿಸರವಾದಿಗಳು, ರೈತರಿಂದ ಸಮಸ್ಯೆಗಳು ಎದುರಾದರೆ ಅಥವಾ ಕಾನೂನು ತೊಡಕು ಸಂಭವಿಸಿದರೆ ಅದು ಯೋಜನೆಗೆ ಆರಂಭಿಕ ಹಿನ್ನೆಡೆ ತಂದೊಡ್ಡುತ್ತದೆ. ಅದೆಲ್ಲ ನಿವಾರಣೆ ಮಾಡಿಕೊಂಡು ಬರುವಷ್ಟರಲ್ಲಿ ಅಂದಾಜು ವೆಚ್ಚದ ಮಿತಿ ಹೆಚ್ಚಾಗಿರುತ್ತದೆ. ಜೊತೆಗೆ ಗುತ್ತಿಗೆದಾರರ ನಗದು ಸಮಸ್ಯೆಗಳು ಮತ್ತು ಕಠಿಣ ನೆಲದ ಪರಿಸ್ಥಿತಿಗಳು ಸೇರಿಕೊಂಡು ಬಿಟ್ಟರೆ ಯೋಜನೆ ಕೆಲಸ ನಿಧಾನವಾಗಿ ಬಿಡುತ್ತದೆ. ಈ ಎಲ್ಲ ಸಮಸ್ಯೆಗಳು ಸದರಿ ಎಕ್ಸ್‌ಪ್ರೆಸ್‌ವೇಗೆ ಎದುರಾದ ಹಿನ್ನೆಲೆಯಲ್ಲಿ 2024 ಅಥವಾ 2026ಕ್ಕೆ ಬದಲಾಗಿ 2027ರಲ್ಲಿ ಉದ್ಘಾಟನೆ ಮಾಡಲು ಪ್ಲಾನ್ ಮಾಡಿಕೊಳ್ಳಲಾಗಿದೆ.

ರಾಜ್ಯವಾರು ರಸ್ತೆ ನಿರ್ಮಾಣ ಆಗಿದ್ದೆಷ್ಟು? ಬಾಕಿ ಕಾಮಗಾರಿ ಉಳಿದಿದ್ದೆಷ್ಟು?

1. ಕರ್ನಾಟಕ: 72 ಕಿ.ಮೀ. (ಹೊಸಕೋಟೆ-ಕೆಜಿಎಫ್) - ಒಂದು ವರ್ಷದ ಹಿಂದೆ ಕಾರ್ಯಾಚರಣೆ ಶುರು

2. ಆಂಧ್ರಪ್ರದೇಶ: 85 ಕಿ.ಮೀ. (ಆಂಧ್ರ ಪ್ರದೇಶದ ವ್ಯಾಪ್ತಿ)- 92% ಕಾಮಗಾರಿ ಪೂರ್ಣ

3. ತಮಿಳುನಾಡು: 25.5 ಕಿ.ಮೀ. (ಅರಕ್ಕೋಣಂ-ಕಾಂಚಿಪುರಂ )-80% ಕೆಲಸ ಮುಕ್ತಾಯ

4. ತಮಿಳುನಾಡು: 106 ಕಿ.ಮೀ. (ತಮಿಳುನಾಡು ವ್ಯಾಪ್ತಿ)- 2025ರ ಮೇ ನಲ್ಲಿ ಕೆಲಸ ಸ್ಥಗಿತ, ಮುಂದೆ ಆರಂಭ ನಿರೀಕ್ಷೆ.

ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇ 263 ಕಿಲೋ ಮೀಟರ್ ಉದ್ದವಿದ್ದು ಆಂಧ್ರಪ್ರದೇಶ ಮತ್ತು ತಮಿಳುನಾಡು ವಿವಿಧ ಪ್ರದೇಶಗಳು ಅರಕ್ಕೋಣಂ-ಕಾಂಚಿಪುರಂ ಮಾರ್ಗ ಸೇರಿ ವಿವಿಧ ಪ್ರದೇಶಗಳನ್ನು ಸಂಪರ್ಕಿಸುತ್ತದೆ. ಕರ್ನಾಟಕದ ಹೊಸಕೋಟೆ-ಕೆಜಿಎಫ್ ಮೂಲಕ ಸಾಗುತ್ತದೆ. ನಿಧಾನಗತಿಯ ಕಾಮಗಾರಿ ನಿರ್ಮಾಣವು ಸಂಪೂರ್ಣ ಎಕ್ಸ್‌ಪ್ರೆಸ್‌ ವೇ ಉದ್ಘಾಟನೆಗೆ ಅಡಚಣೆ ಉಂಟು ಮಾಡಿದೆ.

ಕರ್ನಾಟಕ ವಿಭಾಗದಲ್ಲಿ ಸಂಚಾರ ಶುರು

ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇ ರಸ್ತೆಯಲ್ಲಿ ಕರ್ನಾಟಕದ 72 ಕಿ.ಮೀ ಹೊಸಕೋಟೆ-ಕೆಜಿಎಫ್ ವಿಭಾಗದಲ್ಲಿ ವಾಹನಗಳಿಗೆ ಸಂಚಾರ ಮುಕ್ತಗೊಳಿಸಿ ಒಂದು ವರ್ಷವಾಗಿದೆ. ರಾಜ್ಯದ ವಾಹನ ಸವಾರರಿಗೆ ಈಗಾಗಲೇ ಹೆದ್ದಾರಿ ಸೇವೆ ಲಭ್ಯವಾಗಿದೆ. ಆದರೆ ಸಂಪೂರ್ಣ ವೇಗದ ಪ್ರಯಾಣ ಆನಂದಿಸಲು ಸಾಧ್ಯವಾಗಿಲ್ಲ. ಕಾರಣ ಆಂಧ್ರಪ್ರದೇಶ ಮತ್ತು ತಮಿಳುನಾಡು ವಿಭಾಗದಲ್ಲಿ ಕೆಲಸ ನಡೆಯುತ್ತಿದೆ, ಅದು ಪೂರ್ಣಗೊಂಡು ಉದ್ಘಾಟನೆ ಅಗದ ಹೊರತು ಪೂರ್ಣ ಎಕಸ್‌ಪ್ರೆಸ್‌ವೇನಲ್ಲಿ ಸುಗಮ ಸಂಚಾರ ಅಸಾಧ್ಯವಾಗಿದೆ.

ಇನ್ನೂ ತಮಿಳುನಾಡಿನ ಅರಕ್ಕೋಣಂ ಮತ್ತು ಕಾಂಚೀಪುರಂ ನಡುವಿನ 25.5 ಕಿಲೋ ಮಿಟರ್ ಕಾಮಗಾರಿ ಕೆಲಸ ಆರ್ಥಿಕ ತೊಂದರೆ ಕಾರಣಕ್ಕೆ ಕಳೆದ ವರ್ಷ 2025 ಮೇ ತಿಂಗಳಿನಿಂದ ಸ್ಥಗಿತಗೊಂಡಿದೆ. ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದೊಂದಿಗೆ ಒಪ್ಪಂದ ಸುಲಲಿತವಾದಲ್ಲಿ ಗುತ್ತಿಗೆದಾರರನ್ನು ನಿಯೋಜಿಸಿ ಕಾಮಗಾರಿ ಆರಂಭಿಸಲಾಗುತ್ತದೆ ಎಂದು ಪ್ರಾಧಿಕಾರದ ಮೂಲಗಳು ಮಾಹಿತಿ ನೀಡಿವೆ.

ಜನ ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇ ಬಗ್ಗೆ ಪದೇ ಪದೇ ಕೇಳುವ ಪ್ರಶ್ನೆಗಳು (FAQs)

1. ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇ ಒಟ್ಟು ಉದ್ದ ಎಷ್ಟು?

ಈ ಎಕ್ಸ್‌ಪ್ರೆಸ್‌ವೇ ಒಟ್ಟು 262 ಕಿಲೋಮೀಟರ್ ಉದ್ದವಿದೆ. ಇದು ಕರ್ನಾಟಕದ ಹೊಸಕೋಟೆಯಿಂದ ಆರಂಭವಾಗಿ ತಮಿಳುನಾಡಿನ ಶ್ರೀಪೆರಂಬದೂರ್‌ನಲ್ಲಿ ಕೊನೆಗೊಳ್ಳುತ್ತದೆ.

2. ಈ ರಸ್ತೆಯಿಂದ ಬೆಂಗಳೂರು ಮತ್ತು ಚೆನ್ನೈ ನಡುವಿನ ಪ್ರಯಾಣದ ಸಮಯ ಎಷ್ಟು ಕಡಿಮೆಯಾಗಲಿದೆ?

ಪ್ರಸ್ತುತ ಈ ಎರಡು ನಗರಗಳ ನಡುವಿನ ಪ್ರಯಾಣಕ್ಕೆ ಸುಮಾರು 6 ರಿಂದ 7 ಗಂಟೆ ಬೇಕಾಗುತ್ತದೆ. ಈ ಎಕ್ಸ್‌ಪ್ರೆಸ್‌ವೇ ಪೂರ್ಣಗೊಂಡ ನಂತರ ಪ್ರಯಾಣದ ಸಮಯ ಕೇವಲ 2.5 ರಿಂದ 3 ಗಂಟೆಗೆ ಇಳಿಕೆಯಾಗಲಿದೆ.

3 ಈ ಎಕ್ಸ್‌ಪ್ರೆಸ್‌ವೇ ಯಾವ ರಾಜ್ಯಗಳ ಮೂಲಕ ಹಾದುಹೋಗುತ್ತದೆ?

ಈ ರಸ್ತೆಯು ಮೂರು ರಾಜ್ಯಗಳ ಮೂಲಕ ಹಾದುಹೋಗುತ್ತದೆ. ಅದರಲ್ಲಿ ಕರ್ನಾಟಕದಲ್ಲಿ 71 ಕಿ.ಮೀ., ಆಂಧ್ರಪ್ರದೇಶದಲ್ಲಿ 85 ಕಿ.ಮೀ. ಮತ್ತು ತಮಿಳುನಾಡಲ್ಲಿ 106 ಕಿ.ಮೀ. ಹಾದು ಹೋಗುತ್ತದೆ.

4. ಈ ಯೋಜನೆಯನ್ನು ಯಾರು ನಿರ್ಮಿಸುತ್ತಿದ್ದಾರೆ ಮತ್ತು ಇದರ ವೆಚ್ಚವೆಷ್ಟು?

ಇದನ್ನು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) 'ಭಾರತ್ ಮಾಲಾ ಪರಿಯೋಜನೆ' ಅಡಿಯಲ್ಲಿ ನಿರ್ಮಿಸುತ್ತಿದೆ. ಇದರ ಅಂದಾಜು ವೆಚ್ಚ ಸುಮಾರು 17,000 ಕೋಟಿ ರೂಪಾಯಿಗಳಿಗಿಂತಲೂ ಅಧಿಕವಿದೆ.

5. ಈ ರಸ್ತೆಯ ವಿನ್ಯಾಸ ಮತ್ತು ವೇಗದ ಮಿತಿ ಎಷ್ಟು?

ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇ ಆರಂಭದಲ್ಲಿ 4 ಲೇನ್‌ಗಳ (ನಂತರ 8 ಲೇನ್‌ಗಳಿಗೆ ವಿಸ್ತರಿಸಬಹುದಾದ) ಪ್ರವೇಶ ನಿಯಂತ್ರಿತ (Access-controlled) ರಸ್ತೆಯಾಗಿದೆ. ಈ ರಸ್ತೆಯಲ್ಲಿ ಗಂಟೆಗೆ ಗರಿಷ್ಠ 120 ಕಿ.ಮೀ. ವೇಗದಲ್ಲಿ ಚಲಿಸುವಂತೆ ವಿನ್ಯಾಸಗೊಳಿಸಲಾಗಿದೆ.

6. ಈ ಎಕ್ಸ್‌ಪ್ರೆಸ್‌ವೇ ಸಂಚಾರಕ್ಕೆ ಯಾವಾಗ ಮುಕ್ತವಾಗುವ ನಿರೀಕ್ಷೆಯಿದೆ?

ಯೋಜನೆಯ ಬಹುತೇಕ ಕಾಮಗಾರಿಗಳು ಅಂತಿಮ ಹಂತದಲ್ಲಿದ್ದು, 2027ರ ಆರಂಭದಲ್ಲಿ ಇದು ಸಾರ್ವಜನಿಕ ಸಂಚಾರಕ್ಕೆ ಪೂರ್ಣ ಪ್ರಮಾಣದಲ್ಲಿ ಲಭ್ಯವಾಗುವ ನಿರೀಕ್ಷೆಯಿದೆ.

7. ಈ ಯೋಜನೆಯಿಂದ ಆಗುವ ಪ್ರಮುಖ ಪ್ರಯೋಜನಗಳೇನು?

ಪ್ರಯಾಣದ ಸಮಯ ಮತ್ತು ಇಂಧನ ಉಳಿತಾಯವಾಗಲಿದೆ. ಬೆಂಗಳೂರು ಮತ್ತು ಚೆನ್ನೈ ನಡುವಿನ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ, ವಾಣಿಜ್ಯ ಸರಕು ಸಾಗಣೆಯ ವೆಚ್ಚದಲ್ಲಿ ಇಳಿಕೆ. ರಸ್ತೆಯುದ್ದಕ್ಕೂ ಹೊಸ ಉದ್ಯೋಗಾವಕಾಶಗಳು ಮತ್ತು ಆರ್ಥಿಕ ಚಟುವಟಿಕೆಗಳ ವೃದ್ಧಿಯಾಗಲಿವೆ.

8. ಚೆನ್ನೈ ಎಕ್ಸ್‌ಪ್ರೆಸ್‌ವೇ ಕರ್ನಾಟಕದ ಯಾವೆಲ್ಲ ತಾಲೂಕುಗಳನ್ನು ಹಾದು ಹೋಗುತ್ತದೆ?

ಈ ಹೆದ್ದಾರಿ ಒಟ್ಟು ನಾಲ್ಕು ತಾಲೂಕುಗಳ ಮೇಲೆ ಹಾದು ಹೋಗುತ್ತದೆ. ಹೊಸಕೋಟೆ, ಮಾಲೂರು, ಬಂಗಾರಪೇಟೆ ಮತ್ತು ಕೋಲಾರ ಗೋಲ್ಡ್‌ ಫಿಲ್ಡ್ (ಕೆಜಿಎಫ್) ಮೂಲಕ ರಸ್ತೆ ಸಾಗುತ್ತದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+