'ಚಿನ್ನಮ್ಮ'ನಿಗೆ ಶಿಕ್ಷೆ ಕಾಯಂ ಆಗಿದ್ರಿಂದ ಬಿಜೆಪಿಗೆ ಆಗೋ 5 ಲಾಭ ಏನು?

Posted By:
Subscribe to Oneindia Kannada

ಆಲ್ ಇಂಡಿಯಾ ಅಣ್ಣಾ ದ್ರಾವಿಡ ಮುನೇತ್ರ ಕಳಗಂ (ಎಐಎಡಿಎಂಕೆ) ಪಕ್ಷದ ನಾಯಕಿ ಶಶಿಕಲಾ ಅವರಿಗೆ ಸುಪ್ರೀಂ ಕೋರ್ಟ್, ಅಕ್ರಮ ಆಸ್ತಿ ಪ್ರಕರಣದಲ್ಲಿ ಈ ಹಿಂದೆ ವಿಚಾರಣಾ ನ್ಯಾಯಾಲಯ ನೀಡಿದ್ದ 4 ವರ್ಷ ಜೈಲು ಶಿಕ್ಷೆಯನ್ನು ಎತ್ತಿ ಹಿಡಿದಿದೆ.

ಇದು ತಮಿಳುನಾಡಿನಲ್ಲಿ ಅನೇಕ ರಾಜಕೀಯ ವಿದ್ಯಮಾನಗಳಿಗೆ ನಾಂದಿ ಹಾಡಿದೆ. ಇದು ಬಿಜೆಪಿಗೆ ಕೊಂಚ ಸಮಾಧಾನ ತಂದಿರಲೂಬಹುದು. ಏಕೆಂದರೆ, ಜಯಲಲಿತಾ ಅವರ ಸಾವಿನ ನಂತರವೇ ಭುಗಿಲೆದ್ದಿದ್ದ ಉತ್ತರಾಧಿಕಾರಿ ಗೊಂದಲದಲ್ಲಿ ಮಧ್ಯೆ ಪ್ರವೇಶಿಸಿ ಸಂಧಾನ ಮಾಡಿ ಪನ್ನೀರ್ ಸೆಲ್ವಂ ಅವರನ್ನು ಮುಖ್ಯಮಂತ್ರಿಯಾಗಿಸುವಲ್ಲಿ ಯಶಸ್ವಿಯಾಗಿದ್ದ ಬಿಜೆಪಿಗೆ ಆ ಮೂಲಕ ಪಕ್ಷದ ಮೇಲೆ ಕೊಂಚ ಹಿಡಿತ ಸಾಧಿಸಲು ಸಾಧ್ಯವಾಗುವುದರಲ್ಲಿತ್ತು.[ಈ ಮಿಲಿಯನ್ ಡಾಲರ್ ಪ್ರಶ್ನೆಗೆ ಉತ್ತರಿಸುವರೆ ರಜನಿ?]

ಆದರೆ, ಅದಕ್ಕೆ ಶಶಿಕಲಾ ಅಡ್ಡಿಯಾದರು. ಶಶಿಕಲಾ ಮುಖ್ಯಮಂತ್ರಿಯಾಗಿದ್ದರೆ ಅಥವಾ ಅವರ ಆಯ್ಕೆಯ ಅಭ್ಯರ್ಥಿ ಅಲ್ಲಿ ಮುಖ್ಯಮಂತ್ರಿಯಾದರೆ, ಎಐಎಡಿಎಂಕೆ ಪಕ್ಷದ ಅಂಗಳದಲ್ಲಿ ಬಿಜೆಪಿಯ ಆಟ ಏನೂ ನಡೆಯದು. ಹಾಗಾಗಿಯೇ, ಅದು ಪನ್ನೀರ್ ಸೆಲ್ವಂ ಕಡೆಗೇ ಮೃದುಭಾವ ಹೊಂದಿದೆ. ಈಗಲೂ ಅವರೇ ಮುಖ್ಯಮಂತ್ರಿಯಾಗಲಿ ಎಂಬುದು ಬಿಜೆಪಿಯ ಲೆಕ್ಕಾಚಾರ.[ರಜನಿ ಕಾಂತ್ ರಾಜಕೀಯಕ್ಕೆ ಬಿಗ್ ಬಿ ಸಲಹೆಯೇನು?]

ಆದರೆ, ಎಐಎಡಿಎಂಕೆ ಪಕ್ಷದೊಳಗೆ ಆಗಿರುವ ಭಾರೀ ಬದಲಾವಣೆಗಳು ಬಿಜೆಪಿಯ ಈ ಆಸೆಯನ್ನು ಕೈಗೂಡಿಸುತ್ತವೋ ಇಲ್ಲವೋ ಕಾದು ನೋಡಬೇಕಿದೆ. ಆದರೂ, ಒಂದು ವೇಳೆ, ಬಿಜೆಪಿಯ ಇಚ್ಛೆಯಂತೆ ಎಐಎಡಿಎಂಕೆ ಜತೆಗೆ ಅದರ ಮೈತ್ರಿ ಕುದುರಿದರೆ ಬಿಜೆಪಿಗೆ ರಾಷ್ಟ್ರಮಟ್ಟದಲ್ಲಿ ಹಾಗೂ ತಮಿಳುನಾಡು ರಾಜ್ಯಮಟ್ಟದಲ್ಲಿ ಆಗಬಹುದಾದ ಪ್ರಮುಖ ಐದು ಲಾಭಗಳ ಬಗ್ಗೆ ಇಲ್ಲಿ ಅಂದಾಜಿಸಲಾಗಿದೆ.

ಸರ್ಕಾರದ ಮೇಲೆ ಪರೋಕ್ಷ ಹಿಡಿತ

ಸರ್ಕಾರದ ಮೇಲೆ ಪರೋಕ್ಷ ಹಿಡಿತ

ಪಕ್ಷದ ಅಧಿನಾಯಕಿಯಾಗಿದ್ದ ಜಯಲಲಿತಾ ಅವರು ನಿಧನರಾದಾಗಲೇ ಅವರ ಉತ್ತರಾಧಿಕಾರಿ ಯಾರೂ ಎಂಬ ಕೂಗು ಕೇಳಿಬಂದಿತ್ತು. ಆಗ, ಪಕ್ಷದಲ್ಲಿ ಶಶಿಕಲಾ ಅವರೇ ಸೂಕ್ತ ಉತ್ತರಾಧಿಕಾರಿ ಎಂದು ಪಕ್ಷದ ಒಂದು ಬಣ ಹೇಳಿತ್ತು. ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಅವರ ಮೂಲಕ ಎಐಎಡಿಎಂಕೆ ಶಾಸಕರ ಮನವೊಲಿಸುವಲ್ಲಿ ಯಶಸ್ವಿಯಾಗಿ ಪನ್ನೀರ್ ಸೆಲ್ವಂ ಅವರೇ ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರಿಯುವಂತೆ ನೋಡಿಕೊಂಡಿತ್ತು. ಹಾಗಾಗಿ, ಪನ್ನೀರ್ ಅವರೇ ಸಿಎಂ ಆದರೆ, ಬಿಜೆಪಿಗೆ ತಮಿಳುನಾಡು ಸರ್ಕಾರದ ಮೇಲೆ ಪರೋಕ್ಷವಾಗಿ ಹಿಡಿತ ಇರಲಿದೆ.

ಇನ್ನು, ಮತ್ತಷ್ಟು ಸುಲಭ

ಇನ್ನು, ಮತ್ತಷ್ಟು ಸುಲಭ

ರಾಷ್ಟ್ರಪತಿ ಆಯ್ಕೆ ವಿಚಾರದಲ್ಲಿ ಪ್ರತಿಯೊಂದು ರಾಜ್ಯಗಳ ನಿರ್ದಿಷ್ಟ ಸಂಖ್ಯೆಯ ಎಂಎಲ್ಎ, ಎಂಪಿಗಳಿಗೆ ಮತದಾನದ ಅವಕಾಶವಿರುತ್ತದೆ. ಕಳೆದ ಬಾರಿಯ ರಾಷ್ಟ್ರಪತಿ ಚುನಾವಣೆಯಲ್ಲಿ ಬಿಜೆಪಿ ತನ್ನ ಕಡೆಯಿಂದ ಪಿಎ ಸಂಗ್ಮಾ ಅವರನ್ನು ಕಣಕ್ಕಿಳಿಸಿತ್ತು. ಆದರೆ, ಆಗ ಅಗಾಧ ಶಾಸಕರ ಹಾಗೂ ಎಂಪಿಗಳ ಸಂಖ್ಯಾಬಲ ಹೊಂದಿದ್ದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಹಾಗೂ ಹಾಲಿ ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರೇ ಜಯ ಸಾಧಿಸಿದ್ದರು. ಅವರ ಅಧಿಕಾರಾವಧಿ ಈ ವರ್ಷ ಮುಗಿಯಲಿದೆ. ಈ ಹಿನ್ನೆಲೆಯಲ್ಲಿ, ತಮಿಳುನಾಡಿನ ಸರ್ಕಾರದ ಮೇಲೆ ಹತೋಟಿ ಸಾಧಿಸಿದರೆ ಹೊಸ ರಾಷ್ಟ್ರಪತಿ ಚುನಾವಣೆ ವೇಳೆ ತನಗೆ ಈಗಿರುವ ಉತ್ತಮ ಸಂಖ್ಯಾಬಲಕ್ಕೆ (1126 ಶಾಸಕರು, 282 ಸಂಸದರು) ಮತ್ತಷ್ಟು ಶಕ್ತಿ ತುಂಬಿಕೊಳ್ಳಲು ಸಾಧ್ಯವಾಗಲಿದೆ.

ಅದೂ ಆಗಲಿದೆ ಸುಲಲಿತ

ಅದೂ ಆಗಲಿದೆ ಸುಲಲಿತ

ಇದೇ ರೀತಿ ಉಪ ರಾಷ್ಟ್ರಪತಿ ಆಯ್ಕೆ ವಿಚಾರದಲ್ಲೂ ಬಿಜೆಪಿಯದ್ದು ಅದೇ ಮಂತ್ರ. ರಾಜ್ಯಸಭೆಯಲ್ಲಿ 55 ಹಾಗೂ ಲೋಕಸಭೆಯಲ್ಲಿ 282 ಸಂಸದರನ್ನು ಈಗಗಲೇ ಹೊಂದಿರುವ ಬಿಜೆಪಿಗೆ ತಮಿಳುನಾಡಿನ ಎಐಡಿಎಂಕೆ ಪಕ್ಷದ ಸಂಸದರ ಬೆಂಬಲ ಸಿಕ್ಕರೆ ಮತ್ತಷ್ಟು ಪ್ರಾಬಲ್ಯ ಸಾಧಿಸಲು ಸಾಧ್ಯವಾಗುತ್ತದೆ.

ಮುಂದಿನ ಚುನಾವಣೆಗೆ ಇಂದಿನಿಂದಲೇ ಸಜ್ಜು?

ಮುಂದಿನ ಚುನಾವಣೆಗೆ ಇಂದಿನಿಂದಲೇ ಸಜ್ಜು?

ಬಿಜೆಪಿಯ ಮುಂದಿನ ಬೃಹತ್ ಗುರಿ 2019ರ ಲೋಕಸಭೆ ಚುನಾವಣೆ. ಈವರೆಗೆ ತಮಿಳುನಾಡಿನ ಚುನಾವಣೆಗಳಲ್ಲಿ ಬಿಜೆಪಿ ಸಾಧನೆ ನಿರಾಶಾದಾಯಕವಾಗಿದೆ. ಮುಂದಿನ ದಿನಗಳಲ್ಲಿಯೂ ಅದು ಅಲ್ಲಿ ಗಣನೀಯವಾಗಿ ಮೇಲೇರುವ ಸೂಚನೆಗಳಂತೂ ಸಧ್ಯಕ್ಕಿಲ್ಲ. 2014ರ ಮಹಾ ಚುನಾವಣೆಯಲ್ಲಿ ತಮಿಳುನಾಡಿನಲ್ಲಿ ಬಿಜೆಪಿಯದ್ದು ಶೇ. 5.56ರಷ್ಟು ಸಾಧನೆ. ಇನ್ನು, 2016ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಈ ಸಾಧನೆ ಮತ್ತಷ್ಟು ಕುಸಿತ ಕಂಡು ಶೇ. 2.8ಕ್ಕೆ ಇಳಿದಿತ್ತು. ಇಂಥ ಕಳಪೆ ಸಾಧನೆ ಮೀರಿ ಮೇಲೇರಲು ಅದು ಈಗಾಗಲೇ ಜಲ್ಲಿಕಟ್ಟು ಪ್ರಸಂಗ ಉಪಯೋಗಿಸಿಕೊಂಡಿದೆ. ಮುಂದೆ, ಎಐಎಡಿಎಂಕೆ ಪಕ್ಷದೊಂದಿಗೆ ಗೆಳೆತನ ಬೆಳೆಸಿದರೆ ಅದು ಭವಿಷ್ಯದಲ್ಲಿ ಬಿಜೆಪಿಗೆ ನೆರವಾಗಬಹುದು.

ಮೋದಿ ಸರ್ಕಾರಕ್ಕೆ ಆಗಲಿದೆ ಅನುಕೂಲ

ಮೋದಿ ಸರ್ಕಾರಕ್ಕೆ ಆಗಲಿದೆ ಅನುಕೂಲ

ಕೇಂದ್ರ ಸರ್ಕಾರದ ಬಹು ನಿರೀಕ್ಷಿತ ಜಿಎಸ್ ಟಿಗೆ (ಗೂಡ್ಸ್ ಮತ್ತು ಸೇವಾ ತೆರಿಗೆ) ಈ ಹಿಂದೆ ಜಯಲಲಿತಾ ಅಪಸ್ವರ ಎತ್ತಿದ್ದರು. ಆದರೂ, ರಾಜ್ಯಸಭೆಯಲ್ಲಿ ಜಿಎಸ್ ಟಿ ಮಸೂದೆ ಪರವಾಗಿಯೇ ತಮ್ಮ ಪಕ್ಷದ ಸಂಸದರು ಮತ ಹಾಕುವಂತೆ ಜಯಲಲಿತಾ ಮುತುವರ್ಜಿ ವಹಿಸಿದ್ದರು. ಹಾಗೆಯೇ, ಮೋದಿ ಸರ್ಕಾರವು ಮುಂದೆ ಮಂಡಿಸಬಹುದಾದ ಮಹತ್ವದ ಮಸೂದೆಗಳಿಗೆ ಈಗ ಎಐಎಡಿಎಂಕೆ ಜತೆ ಬೆಳೆಸುವ ಮೈತ್ರಿ ನೆರವಾಗಬಹುದು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
By supporting AIADMK leader Panneer Selvem for Chief Minister post of Tamilnadu, BJP eyes on long term benefits such as raising its MLAs, MPs support during Presidential Election this year, to get clear route for GST etc.
Please Wait while comments are loading...