ಸರ್ಕಾರದ ಪ್ರಯತ್ನದಿಂದ ಸ್ವಿಸ್ ಬ್ಯಾಂಕ್ ಕಪ್ಪು ಹಣ ಇಳಿಕೆ: ಮೋದಿ
ಕೇಂದ್ರ ಕ್ರಮಗಳಿಂದಾಗಿ ಸ್ವಿಸ್ ಬ್ಯಾಂಕುಗಳಲ್ಲಿನ ಭಾರತೀಯರ ಕಪ್ಪು ಹಣ ಕರಗುತ್ತಿದೆ. ಕಳೆದ ಮೂರು ವರ್ಷಗಳಿಂದ ಆರಂಭವಾದ ಈ ಕರಗುವಿಕೆಯ ಪರಿಣಾಮವಾಗಿ ಶೇ. 45ರಷ್ಟು ಹಣ ಈಗ ಅಲ್ಲಿ ಮಾಯವಾಗಿದೆ. ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹೇಳಿಕೆ.
ನವದೆಹಲಿ, ಜುಲೈ 1: ಕಳೆದ ಮೂರು ವರ್ಷಗಳಲ್ಲಿ ಕಾಳಧನ ದಂಧಯನ್ನು ಮೆಟ್ಟಲು ಭಾರತ ಸರ್ಕಾರವು ಸತತವಾಗಿ ಕೈಗೊಂಡ ಪ್ರಯತ್ನದಿಂದಾಗಿ ಸ್ವಿಸ್ ಬ್ಯಾಂಕ್ ನಲ್ಲಿ ಇದ್ದ ಭಾರತೀಯರ ಹಣದಲ್ಲಿ ಶೇ. 45ರಷ್ಟು ಕಾಳಧನ ಪ್ರಮಾಣ ಇಳಿಕೆಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು.
ದೆಹಲಿಯ ಇಂದಿರಾಗಾಂಧಿ ಕ್ರೀಡಾಂಗಣದಲ್ಲಿ ಶನಿವಾರ ಸಂಜೆ ನಡೆದ, ಇನ್ಸಿಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟಂಟ್ಸ್ ಆಫ್ ಇಂಡಿಯಾ (ಐಸಿಎಐ) ಸದಸ್ಯರು ಹಾಗೂ ಉದ್ಯಮಿಗಳ ಸೇರಿದ್ದ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಅವರು, ಜುಲೈ 1ರಿಂದ ತಮ್ಮ ನೇತೃತ್ವದ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಸರಕು ಮತ್ತು ಸೇವಾ ತೆರಿಗೆಯನ್ನು (ಜಿಎಸ್ ಟಿ) ಸಮರ್ಥಿಸಿಕೊಂಡರು.
ಭಾರತದಲ್ಲಿ ಸ್ವಚ್ಛತಾ ಅಭಿಯಾನದ ಜತೆಜತೆಯಲ್ಲೇ ಇದೀಗ ದೇಶದ ತೆರಿಗೆ ಕ್ಷೇತ್ರದಲ್ಲೂ ಸ್ವಚ್ಛತಾ ಅಭಿಯಾನವನ್ನು ಆರಂಭಿಸಿದ್ದೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಕಳೆದ ವರ್ಷ ನವೆಂಬರ್ ನಲ್ಲಿ ಅಪನಗದೀಕರಣ ನಿರ್ಧಾರ ಕೈಗೊಂಡಿದ್ದು, ಅನೇಕ ಕಾಳ ದಂಧೆಕೋರರ ನಿದ್ದೆಗೆಡಿಸಿತ್ತು. ಆಗಿನಿಂದ ನೀವು (ಚಾರ್ಟರ್ಡ್ ಅಕೌಂಟಂಟ್ ಗಳು) ಪುರುಸೊತ್ತಿಲ್ಲದೆ ದುಡಿದಿರಿ. ನಮ್ಮ ಸಮಾಜದ ಹುಳುಕುಗಳನ್ನು ಹೋಗಲಾಡಿಸುವ ನಿಮ್ಮ ಕರ್ತವ್ಯಕ್ಕೆ ನಾನು ಆಭಾರಿ ಎಂದರು.
(ಚಿತ್ರ ಕೃಪೆ: ಎಎನ್ಐ)












Click it and Unblock the Notifications