ಭಾರತ ಮತ್ತು ಬಾಂಗ್ಲಾ ಸಂಬಂಧ ಸುಧಾರಣೆ, ತಾರಿಕ್ ರೆಹಮಾನ್ ಸರ್ಕಾರದ ಮೇಲೆ ನಿರೀಕ್ಷೆಯ ಭಾರ... Bangladesh Election
ಬಾಂಗ್ಲಾದೇಶಕ್ಕೆ ಒಂದು ರೀತಿ ಭಾರತ ತಂದೆ ಇದ್ದಂತೆ, ಏಕೆಂದರೆ ಪಾಕಿಸ್ತಾನದ ಹಿಡಿತಕ್ಕೆ ಸಿಲುಕಿದ್ದ ಬಾಂಗ್ಲಾದೇಶ ಎಂಬ ಪುಟಾಣಿ ಪ್ರದೇಶವನ್ನ ಸ್ವತಂತ್ರ ದೇಶವಾಗಿ ರೂಪುಗೊಳ್ಳಲು ಸಹಾಯ ಮಾಡಿದ್ದೇ ಭಾರತ. ಆದರೆ ಭಾರತ ಮಾಡಿದ್ದ ಈ ಸಹಾಯ ಮರೆತು ಕಳೆದ 2 ವರ್ಷಗಳಿಂದ ಬಾಂಗ್ಲಾದೇಶದಲ್ಲಿ ಅಸ್ತಿತ್ವದಲ್ಲಿದ್ದ ಹಂಗಾಮಿ ಸರ್ಕಾರ, ಪದೇ ಪದೇ ಕಿರಿಕ್ ತೆಗೆಯುತ್ತಿತ್ತು. ಭಾರತ ಕೂಡ ಇದನ್ನೆಲ್ಲಾ ಸೂಕ್ತವಾಗಿ ನಿಭಾಯಿಸಿ, ಬಾಂಗ್ಲಾ ನೆಲದಲ್ಲಿ ಏನು ಮಾಡಬೇಕೋ ಅದನ್ನೇ ಮಾಡಿದೆ. ಈಗ ಭಾರತದ ಜೊತೆಗೆ ಸಂಬಂಧ ಸುಧಾರಣೆ ಮಾಡಲು ಕಾಯುತ್ತಿರುವ ವ್ಯಕ್ತಿಯೇ ಬಾಂಗ್ಲಾದೇಶದ ಪ್ರಧಾನಿ ಆಗುತ್ತಾ ಇದ್ದು, ತಾರಿಕ್ ರೆಹಮಾನ್ ಸರ್ಕಾರದ ಮೇಲೆ ನಿರೀಕ್ಷೆಯ ಭಾರ ಹೆಚ್ಚಾಗಿದೆ.
ತಾರಿಕ್ ರೆಹಮಾನ್ ಈಗಾಗಲೇ ಭಾರತದ ಜೊತೆಗೆ ಸಂಬಂಧ ಸುಧಾರಣೆ ಬಗ್ಗೆ ಒಲವು ತೋರಿದ್ದಾರೆ. ಬಾಂಗ್ಲಾದೇಶ 1971ರ ಸಮಯದಲ್ಲಿ ಹೋರಾಡಿ, ಪಾಕಿಸ್ತಾನದ ಹಿಡಿತದಿಂದ ತಪ್ಪಿಸಿಕೊಂಡು ಹೊಸ ಸ್ವತಂತ್ರ ರಾಷ್ಟ್ರವಾಗಿ ಹೊರಹೊಮ್ಮಲು ಭಾರತವೇ ಕಾರಣ. ಹೀಗೆ ಬಾಂಗ್ಲಾದೇಶ ಎಂದೆಂದಿಗೂ ಈ ಸಹಾಯವನ್ನು ಮತ್ತು ಭಾರತ ಕೊಟ್ಟಿದ್ದ ಬೆಂಬಲವನ್ನು ಮರೆಯಬಾರದು ಕೂಡ. ಇದನ್ನು ತಾರಿಕ್ ರೆಹಮಾನ್ ಅವರ ಆಡಳಿತ ನೆನಪು ಮಾಡಿಕೊಳ್ಳುವುದು ಗ್ಯಾರಂಟಿ, ಅದರಲ್ಲೂ ನೆರೆ ದೇಶದ ಜೊತೆ ಸ್ನೇಹ ಸಂಬಂಧ ಗಟ್ಟಿ ಮಾಡಿಕೊಂಡರೆ ಅದು ಬಾಂಗ್ಲಾದೇಶ ಆರ್ಥಿಕತೆ ಬೆಳವಣಿಗೆಗೆ ಕೂಡ ಪೂರಕ ಎಂಬುದು ಚನ್ನಾಗಿ ತಿಳಿದಿದೆ. ಇದೇ ನಿರೀಕ್ಷೆಯಲ್ಲಿ ಈಗ ಆದಷ್ಟು ಬೇಗ ಎರಡೂ ದೇಶಗಳು ಮಹತ್ವದ ಮಾತುಕತೆ ನಡೆಸುವ ನಿರೀಕ್ಷೆ ಇದೆ.

ಬಾಂಗ್ಲಾ ಭಾವಿ ಪ್ರಧಾನಿ ಹೇಳಿಕೆ
ಬಾಂಗ್ಲಾದೇಶದ ಮುಂದಿನ ಪ್ರಧಾನಿ ಪಟ್ಟಕ್ಕೆ ಬಹುತೇಕ ತಾರಿಕ್ ರೆಹಮಾನ್ ಆಯ್ಕೆ ಖಚಿತವಾಗಿದ್ದು, ಇದೀಗ ಬಾಂಗ್ಲಾದ ಭವಿಷ್ಯದ ವಿದೇಶಾಂಗ ನೀತಿ ಕುರಿತು ತಾರಿಕ್ ರೆಹಮಾನ್ ನೀಡಿರುವ ಹೇಳಿಕೆಗಳು ಗಮನ ಸೆಳೆದಿದೆ. ನನಗೆ ರಾಷ್ಟ್ರೀಯ ಹಿತಾಸಕ್ತಿಯೇ ಅತಿಮುಖ್ಯ ಮತ್ತು ಅದರಲ್ಲಿ ರಾಜಿ ಆಗುವ ಮಾತಿಲ್ಲ ಎಂದು ಹೇಳಿರುವುದು ಮತ್ತೊಂದು ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದೆ. ಅದರಲ್ಲೂ, ಭಾರತದ ಜೊತೆ ಸಂಬಂಧ ಸುಧಾರಣೆ ವಿಚಾರದಲ್ಲಿ ನಮಗೆ ಬಾಂಗ್ಲಾದೇಶ & ಬಾಂಗ್ಲಾದೇಶದ ಜನರೇ ಮೊದಲು ಎಂದು ಹೇಳಿರುವುದು ಚರ್ಚೆಗೆ ಗ್ರಾಸವಾಗಿದೆ. ಆದರೆ ಇದೆಲ್ಲವನ್ನೂ ಮೀರಿ ತಾರಿಕ್ ರೆಹಮಾನ್ ಈಗ ಭಾರತದ ಜೊತೆಗೆ ಉತ್ತಮ ಸಂಬಂಧ ಕಾಯ್ದುಕೊಳ್ಳುವ ನಿರೀಕ್ಷೆ ಇದೆ.
ಭಾರತಕ್ಕೆ ಕೂಡ ಇದರಿಂದ ಲಾಭ
ಬಾಂಗ್ಲಾದೇಶ ಜೊತೆಗೆ ಭಾರತಕ್ಕೆ ಕೂಡ ಸಂಬಂಧ ಸುಧಾರಣೆ ಮುಖ್ಯವಾಗಿದೆ, ಏಕೆಂದರೆ ಭಾರತ & ಬಾಂಗ್ಲಾ ನಡುವೆ ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ಅಕ್ಕಪಕ್ಕದಲ್ಲೇ ಗಡಿ ಪ್ರದೇಶ ಇದೆ. ಹೀಗಿದ್ದಾಗ ಶತ್ರು ದೇಶಗಳು ಈ ಅವಕಾಶ ಬಳಸಿಕೊಂಡು, ಬಾಂಗ್ಲಾ ನಾಯಕರನ್ನು ಬುಟ್ಟಿಗೆ ಹಾಕಿಕೊಳ್ಳೋದಕ್ಕೆ ಪ್ರಯತ್ನ ಮಾಡುತ್ತಲೇ ಬಂದಿದ್ದಾರೆ. ಆದರೆ ಇದನ್ನು ಭಾರತ ಪದೇ ಪದೇ ತಪ್ಪಿಸುತ್ತಿದ್ದು, ಈಗಲೂ ಅಷ್ಟೇ ಭಾರತಕ್ಕೆ ಮತ್ತೊಂದು ಗೆಲುವು ಸಿಕ್ಕಿದ್ದು, ಬಾಂಗ್ಲಾದೇಶ ಪ್ರಧಾನಿ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಿಶೇಷ ಆಹ್ವಾನ ಬಂದಿದೆ. ಈ ಮೂಲಕ ಸದ್ಯ ಎರಡೂ ದೇಶಗಳು ಶೀಘ್ರದಲ್ಲೇ ಒಂದು ಮಹತ್ವದ ಸಭೆ ನಡೆಸುವ ನಿರೀಕ್ಷೆ ಇದೆ.
ಬೃಹತ್ ಕಾರ್ಯಕ್ರಮದಲ್ಲಿ ಪ್ರಮಾಣ ವಚನ
ಫೆಬ್ರವರಿ 17ಕ್ಕೆ ಪ್ರಮಾಣ ವಚನ ಸ್ವೀಕಾರಕ್ಕಾಗಿ, ಬಹುದೊಡ್ಡ ಕಾರ್ಯಕ್ರಮ ಆಯೋಜನೆ ಮಾಡಿದೆ ಬಾಂಗ್ಲಾದೇಶ. ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿ ಪೂರ್ಣ ಬಹುಮತ ಪಡೆದು 212 ಸ್ಥಾನ ಗೆದ್ದಿದೆ. ಈ ಮೂಲಕ 300 ಸ್ಥಾನಗಳ ಬಲವನ್ನು ಹೊಂದಿರುವ ಬಾಂಗ್ಲಾದೇಶ ಸಂಸತ್‌ನಲ್ಲಿ ಭಾರತದ ಜೊತೆಯಲ್ಲಿ ಉತ್ತಮ ಸಂಬಂಧವನ್ನ ಹೊಂದಿರುವ ವ್ಯಕ್ತಿ, ಎಂದರೆ ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿಯ ನಾಯಕ ತಾರಿಕ್ ರಹ್ಮಾನ್ ಪ್ರಧಾನಿ ಆಗುತ್ತಿದ್ದಾರೆ. ಪಾಕ್‌ಗೆ ಇದು ಮತ್ತೆ ನುಂಗಲಾರದ ತುತ್ತಾಗಿ ಪರಿಣಮಿಸಿದ್ದು, ಇನ್ಯಾವ ಕುತಂತ್ರ ಮಾಡಲಿದೆ? ಎಂಬ ಪ್ರಶ್ನೆ ಮೂಡಿದೆ. ಎಲ್ಲವನ್ನೂ ಮೀರಿ ಇದೀಗ ಭಾರತ ಕೂಡ ಚಾಣಾಕ್ಷ್ಯ ಹೆಜ್ಜೆ ಇಟ್ಟು, ಶತ್ರು ದೇಶಗಳಿಗೆ ಆಘಾತ ನೀಡಿದೆ.












Click it and Unblock the Notifications