ಹುಟ್ಟಿದ ಆರು ನಿಮಿಷಕ್ಕೆ ಈ ಹೆಣ್ಣುಮಗುವಿನ ಹೆಸರಿಗೆ ಆಧಾರ್
ಉಸ್ಮಾನಾಬಾದ್ (ಮಹಾರಾಷ್ಟ್ರ), ಸೆಪ್ಟೆಂಬರ್ 25: ಆಧಾರ್ ಮಾಡಿಸಿ ಎಂದು ಸರಕಾರ ಪೂಸಿ ಹೊಡೆಯುತ್ತಿದೆ, ಹೆದರಿಸ್ತಿದೆ ಒಟ್ಟಿನಲ್ಲಿ ಎಲ್ಲ ಪ್ರಯತ್ನವನ್ನೂ ಮಾಡ್ತಿದೆ. ಭಾವನಾ ಸಂತೋಷ ಜಾಧವ್ ಎಂಬ ಈ ಹೆಣ್ಣುಮಗುವಿನ ಆಧಾರ್ ಹುಟ್ಟಿದ ಆರೇ ನಿಮಿಷದಲ್ಲಿ ಮಾಡಿಸಲಾಗಿದೆ.
ಈ ಹೆಣ್ಣುಮಗುವಿನ ಪೋಷಕರು ಆಧಾರ್ ಗೆ ನೋಂದಣಿ ಮಾಡಿಸಿ, ಸಂಖ್ಯೆಯನ್ನೂ ಪಡೆದಿದ್ದಾರೆ. ಭಾನುವಾರ ಜನಿಸಿದ ಈ ಹೆಣ್ಣುಮಗುವಿನ ಆಧಾರ್ ಸಂಖ್ಯೆ ಹುಟ್ಟಿದ ಆರು ನಿಮಿಷದಲ್ಲಿ ಸಿಕ್ಕಿರುವುದು ಅಪರೂಪದಲ್ಲಿ ಅಪರೂಪ. ಮಹಾರಾಷ್ಟ್ರದ ಉಸ್ಮಾನಾಬಾದ್ ಜಿಲ್ಲೆಯ ಆಸ್ಪತ್ರೆಯಲ್ಲಿ ಭಾನುವಾರ ಮಧ್ಯಾಹ್ನ 12.03ಕ್ಕೆ ಈ ಹೆಣ್ಣುಮಗು ಜನಿಸಿತು.

12.09ಕ್ಕೆ ಆನ್ ಲೈನ್ ಜನನ ಪ್ರಮಾಣ ಪತ್ರ ಹಾಗೂ ಆಧಾರ್ ಪೋಷಕರ ಕೈ ಸೇರಿತು ಎಂದು ಜಿಲ್ಲಾಧಿಕಾರಿ ರಾಧಾಕೃಷ್ಣ ಮಾಹಿತಿ ನೀಡಿದ್ದಾರೆ. ಇದು ಉಸ್ಮಾನಾಬಾದ್ ಗೆ ಹೆಮ್ಮೆಯ ವಿಚಾರ. ಶೀಘ್ರದಲ್ಲೇ ಎಲ್ಲ ಮಕ್ಕಳಿಗೂ ಆಧಾರ್ ಮಾಡಿಸಿ, ಅದನ್ನು ಪೋಷಕರ ಆಧಾರ್ ಜತೆಗೆ ಜೋಡಣೆ ಮಾಡಿಸ್ತೀವಿ ಎಂದು ಅವರು ತಿಳಿಸಿದ್ದಾರೆ.
ಉಸ್ಮಾನಾಬಾದ್ ನ ಜಿಲ್ಲಾ ಮಹಿಳಾ ಆಸ್ಪತ್ರೆಯಲ್ಲಿ ಕಳೆದ ಒಂದು ವರ್ಷದಲ್ಲಿ ಸಾವಿರದ ಮುನ್ನೂರರಷ್ಟು ಮಕ್ಕಳು ಆಧಾರ್ ಪಡೆದಿದ್ದಾರೆ ಎಂದು ವೈದ್ಯ ಏಕನಾಥ್ ಮಾಹಿತಿ ನೀಡಿದ್ದಾರೆ.












Click it and Unblock the Notifications