Ayodhya: ಶ್ರೀರಾಮಮಂದಿರದ ಪ್ರಧಾನ ಅರ್ಚಕರಾದ ಆಚಾರ್ಯ ಸತ್ಯೇಂದ್ರ ದಾಸ್ ವಿಧಿವಶ
ಅಯೋಧ್ಯೆ, ಫೆಬ್ರವರಿ 12: ಅಯೋಧ್ಯೆ ಶ್ರೀರಾಮಮಂದಿರದ ಪ್ರಧಾನ ಅರ್ಚಕರಾದ ಆಚಾರ್ಯ ಸತ್ಯೇಂದ್ರ ದಾಸ್ ಇಂದು(ಫೆಬ್ರವರಿ 12) ಬುಧವಾರ ಮಾಘ ಹುಣ್ಣಿಮೆಯ ದಿನದಂದು ವಿಧಿವಶರಾಗಿದ್ದಾರೆ. ಕಳೆದ ಕೆಲ ದಿನಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೇ ಇಂದು ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾರೆ.
ಆಚಾರ್ಯ ಸತ್ಯೇಂದ್ರ ದಾಸ್ ಅವರು ಕಳೆದ 34 ವರ್ಷಗಳಿಂದ ಅಯೋಧ್ಯೆಯ ಶ್ರೀರಾಮಲಾಲ್ಲಾಗೆ ಸೇವೆ ಸಲ್ಲಿಸಿದ್ದರು. ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿಯಲ್ಲಿ ಮೊದಲಿದ್ದ ತಾತ್ಕಾಲಿಕ ದೇವಾಲಯದಿಂದ ಇಂದಿನ ಭವ್ಯ ದೇವಾಲಯ ಶ್ರೀರಾಮಮಂದಿರದಲ್ಲಿಯೂ ಆಚಾರ್ಯ ಸತ್ಯೇಂದ್ರ ದಾಸ್ ಅವರು ಶ್ರೀರಾಮನ ಸೇವೆ ಮಾಡಿದ್ದರು.

85 ವರ್ಷದ ಆಚಾರ್ಯ ಸತ್ಯೇಂದ್ರ ದಾಸ್ ಅವರು ಕಳೆದ ತಿಂಗಳಲ್ಲಿ ಪಾರ್ಶ್ವವಾಯುವಿಗೆ ಒಳಗಾಗಿದ್ದರು. ಚಿಕಿತ್ಸೆಗೆ ಸ್ಪಂದಿಸದ ಕಾರಣ ಹಾಗೂ ಅರೋಗ್ಯ ತೀವ್ರ ಹದಗೆಟ್ಟ ಕಾರಣ ಫೆಬ್ರವರಿ 3ರಂದು ಲಕ್ನೋದ ಎಸ್‌ಜಿಪಿಜಿಐನ ನರವಿಜ್ಞಾನ ವಿಭಾಗಕ್ಕೆ ದಾಖಲಿಸಲಾಗಿತ್ತು. ಅಧಿಕ ರಕ್ತದೊತ್ತಡ ಮತ್ತು ಮಧುಮೇಹದಿಂದ ಕೂಡ ಬಳಲುತ್ತಿದ್ದ ಅವರು ಮೆದುಳಿನಲ್ಲಿ ರಕ್ತಸ್ರಾವವಾಗಿ ಚಿಕಿತ್ಸೆಗೆ ಸ್ಪಂದಿಸದೇ ಇಂದು ವಿಧಿವಶರಾಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.












Click it and Unblock the Notifications