Ayodhya Ram Mandir: ವಿದೇಶಿ ದೇಣಿಗೆ ಪಡೆಯಲು ಅಯೋಧ್ಯೆ ರಾಮ ಮಂದಿರ ಟ್ರಸ್ಟ್‌ಗೆ ಅನುಮತಿ
ಅಯೋಧ್ಯೆ ಶ್ರೀರಾಮ ಮಂದಿರ ನಿರ್ಮಾಣ ಕಾರ್ಯ ವೇಗವಾಗಿ ನಡೆಯುತ್ತಿದ್ದು, 2024ರ ಜನವರಿಯಲ್ಲಿ ಉದ್ಘಾಟನೆಯಾಗಲು ಸಜ್ಜಾಗುತ್ತಿದೆ. ಈ ಬೆನ್ನಲ್ಲೇ ಅಯೋಧ್ಯೆ ರಾಮ ಮಂದಿರ ಟ್ರಸ್ಟ್ ಅಕ್ಟೋಬರ್ 18 ರಂದು ವಿದೇಶಿ ಕೊಡುಗೆ ನಿಯಂತ್ರಣ ಕಾಯ್ದೆ (ಎಫ್‌ಸಿಆರ್‌ಎ) ಅಡಿಯಲ್ಲಿ ವಿದೇಶಿ ದೇಣಿಗೆ ಪಡೆಯಲು ಪರವಾನಗಿ ಪಡೆದಿದೆ ಎಂದು ವರದಿಯಾಗಿದೆ.
ಅಯೋಧ್ಯೆ ರಾಮ ಮಂದಿರ ನಿರ್ಮಾಣಕ್ಕಾಗಿ ಈಗಾಗಲೇ ಟಸ್ಟ್ ₹ 3,500 ಕೋಟಿ ಸಂಗ್ರಹಿಸಿದೆ. ಈಗ ವಿದೇಶದಿಂದ ಕೂಡ ಹಣ ಸ್ವೀಕರಿಸಲು ಪರವಾನಗಿ ಸಿಕ್ಕಿದ್ದು, ಮುಂದಿನ ದಿನಗಳಲ್ಲಿ ವಿಶ್ವದ ಮೂಲೆ ಮೂಲೆಯಿಂದ ರಾಮ ಮಂದಿರ ನಿರ್ಮಾಣಕ್ಕೆ ಹಣ ಹರಿದು ಬರಲಿದೆ.

"ಭಾರತ ಸರ್ಕಾರದ ಗೃಹ ಸಚಿವಾಲಯದ ಎಫ್‌ಸಿಆರ್‌ಎ ವಿಭಾಗವು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ಗೆ ವಿದೇಶಿ ಮೂಲಗಳಿಂದ ಸ್ವಯಂಪ್ರೇರಿತ ಕೊಡುಗೆಯನ್ನು ಸ್ವೀಕರಿಸಲು ಎಫ್‌ಸಿಆರ್‌ಎ ಪರವಾನಗಿಯನ್ನು ನೀಡಿದೆ" ಎಂದು ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರೈ ಹೇಳಿದ್ದಾರೆ ಎಂದು ದಿ ಹಿಂದೂ ವರದಿ ಮಾಡಿದೆ.
ನವದೆಹಲಿಯ 11 ಸಂಸದ್ ಮಾರ್ಗದಲ್ಲಿರುವ ಒಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಶಾಖೆಯಲ್ಲಿ ಮಾತ್ರ ವಿದೇಶಿ ದೇಣಿಗೆಗಳನ್ನು ಸ್ವೀಕರಿಸಲಾಗುವುದು ಎಂದು ಚಂಪತ್ ರೈ ಹೇಳಿದ್ದಾರೆ. 2023ರ ಆರಂಭದಲ್ಲಿ ಎಫ್‌ಸಿಆರ್‌ಎ ಪರವಾನಗಿಗಾಗಿ ಟ್ರಸ್ಟ್ ಅರ್ಜಿ ಸಲ್ಲಿಸಿತ್ತು.
67.3 ಎಕರೆಯಲ್ಲಿ ದೇವಾಲಯ ನಿರ್ಮಾಣ
1992ರಲ್ಲಿ ಅಯೋಧ್ಯೆಯಲ್ಲಿ 450 ವರ್ಷಗಳಷ್ಟು ಹಳೆಯದಾದ ಬಾಬರಿ ಮಸೀದಿಯನ್ನು ಕೆಡವಿದ ಬಳಿಕ, ಈ ಪ್ರಕರಣ ಸುಪ್ರೀಂಕೋರ್ಟ್ ಅಂಗಳದಲ್ಲಿತ್ತು. 2019ರಲ್ಲಿ ಸುಪ್ರೀಂಕೋರ್ಟ್ ತೀರ್ಪಿನ ಬಳಿಕ ಇಲ್ಲಿ ರಾಮ ಮಂದಿರ ನಿರ್ಮಾಣ ಮಾಡಲಾಗುತ್ತಿದೆ.
ಸುಪ್ರೀಂಕೋರ್ಟ್ ತೀರ್ಪಿನಲ್ಲಿ ಟ್ರಸ್ಟ್‌ಗೆ ನೀಡಲಾದ 67.3 ಎಕರೆ ಭೂಮಿಯಲ್ಲಿ ದೇವಾಲಯ ನಿರ್ಮಾಣವಾಗಲಿದೆ. ದೇವಸ್ಥಾನದ ಬಳಿ ಸಾರ್ವಜನಿಕರಿಗೆ ಸೌಲಭ್ಯಗಳನ್ನು ನಿರ್ಮಿಸಲು, ದೇವಾಲಯ ನಿರ್ಮಾಣ ಸಮಿತಿಯು ಹೆಚ್ಚುವರಿಯಾಗಿ 71 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿದೆ.
ಸಾರ್ವಜನಿಕರು ದೇಣಿಗೆಯ ಮೂಲಕ ದೇವಾಲಯದ ನಿರ್ಮಾಣಕ್ಕೆ ಹಣವನ್ನು ನೀಡುತ್ತಿದ್ದಾರೆ, ಇದುವರೆಗೆ ಸುಮಾರು ₹ 3,500 ಕೋಟಿ ಸಂಗ್ರಹಿಸಲಾಗಿದೆ ಎಂದು ರಾಮ ಜನ್ಮಭೂಮಿ ಟ್ರಸ್ಟ್‌ನ ನಿರ್ಮಾಣ ಸಮಿತಿಯ ಅಧ್ಯಕ್ಷರಾದ ನೃಪೇಂದ್ರ ಮಿಶ್ರಾ ಹೇಳಿರುವುದಾಗಿ ದಿ ಹಿಂದೂ ವರದಿ ಮಾಡಿತ್ತು.
ಜನವರಿಯಲ್ಲಿ ಉದ್ಘಾಟನೆ
2024 ರ ಜನವರಿ 14 ರಿಂದ 24ರ ನಡುವೆ ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಯಾಗಲಿದೆ ಎಂದು ಟ್ರಸ್ಟ್ ಹೇಳಿದೆ. ದೇವಾಲಯದ ಆವರಣದಲ್ಲಿ ಸುಮಾರು 10,000 ಜನರು ಭಾಗವಹಿಸುವ ನಿರೀಕ್ಷೆಯಿದೆ. ಮಹಾಮಸ್ತಕಾಭಿಷೇಕದ ದಿನದಂದು ಅಯೋಧ್ಯೆಯಲ್ಲಿ ಯಾತ್ರಾರ್ಥಿಗಳ ಸಂಖ್ಯೆ ಲಕ್ಷ ಮೀರಬಹುದು ಮತ್ತು ಭಕ್ತರ ಸುಗಮ ಸಂಚಾರ ಮತ್ತು ಜನಸಂದಣಿಯನ್ನು ನಿಭಾಯಿಸಲು ಜಿಲ್ಲಾಡಳಿತಕ್ಕೆ ಮನವಿ ಮಾಡಲಾಗಿದೆ.
ಎಫ್‌ಸಿಆರ್‌ಎ ನೋಂದಣಿ
ವಿದೇಶದಿಂದ ದೇಣಿಗೆ ಸ್ವೀಕರಿಸಲು ಎಫ್‌ಸಿಆರ್‌ಎ ಅಡಿಯಲ್ಲಿ ನೋಂದಣಿ ಕಡ್ಡಾಯವಾಗಿದೆ. ಪರವಾನಗಿ ಪಡೆಯಲು ಅರ್ಜಿ ಸಲ್ಲಿಸುವ ಎನ್‌ಜಿಒಗಳು ಸಾಂಸ್ಕೃತಿಕ, ಆರ್ಥಿಕ, ಶೈಕ್ಷಣಿಕ, ಧಾರ್ಮಿಕ ಅಥವಾ ಸಾಮಾಜಿಕ ಕಾರ್ಯಕ್ರಮಗಳಂತಹ ವರ್ಗದ ಅಡಿಯಲ್ಲಿ ಚಟುವಟಿಕೆ ನಡೆಸುವ ಭರವಸೆ ನೀಡಬೇಕು.
ಈ ಕಾಯಿದೆಯು ಎನ್‌ಜಿಒಗಳಿಂದ ವಿದೇಶಿ ಕೊಡುಗೆಯ ಸ್ವೀಕಾರ ಮತ್ತು ಬಳಕೆಯನ್ನು ನಿಯಂತ್ರಿಸುವ ಗುರಿಯನ್ನು ಹೊಂದಿದೆ ಮತ್ತು "ರಾಷ್ಟ್ರೀಯ ಹಿತಾಸಕ್ತಿಗೆ ಹಾನಿಕಾರಕವಾದ ಯಾವುದೇ ಚಟುವಟಿಕೆಗಳಲ್ಲಿ" ತೊಡಗಿಸಿಕೊಂಡಿರುವ ಸಂಸ್ಥೆಗಳಿಗೆ ವಿದೇಶಿ ಹಣವನ್ನು ಬರುವುದನ್ನು ತಡೆಯುತ್ತದೆ.












Click it and Unblock the Notifications