ATM Withdrawals: ಎಟಿಎಂ ಬಳಕೆದಾರರಿಗೆ ಶಾಕ್, ಮೇ 1ರಿಂದ ಹಣ ವಿತ್‌ಡ್ರಾಗೆ ಹೊಸ ನಿಯಮ
ಈಗಾಗಲೇ ಹಲವು ವಸ್ತುಗಳ ಬೆಲೆ ಏರಿಕೆಯಿಂದ ಜನ ಕಂಗೆಟ್ಟಿದ್ದಾರೆ. ಇದೀಗ ಮತ್ತೊಂದು ದುಬಾರಿ ಶಾಕ್ ಜನರ ಮುಂದಿದೆ. ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಎಟಿಎಂ ಇಂಟರ್‌ಚೇಂಜ್ ಶುಲ್ಕವನ್ನು ಹೆಚ್ಚಿಸಿದ್ದು, ಮೇ 1ರಿಂದ ದೇಶದ ಎಲ್ಲ ಎಟಿಎಂಗಳಲ್ಲಿ ಹಣ ವಿತ್‌ಡ್ರಾ ದುಬಾರಿಯಾಗಲಿದೆ. ಇನ್ನು ಹಣಕಾಸಿನ ವಹಿವಾಟುಗಳಿಗಾಗಿ ಎಟಿಎಂಗಳನ್ನು ಅವಲಂಬಿಸಿರುವ ಗ್ರಾಹಕರು ತಮ್ಮ ಉಚಿತ ವಹಿವಾಟು ಮಿತಿಯನ್ನು ಮೀರಿದಾಗ ಹೆಚ್ಚುವರಿ ಶುಲ್ಕಗಳನ್ನು ಪಾವತಿಸಬೇಕಾಗುತ್ತದೆ ಎಂದು ಆರ್‌ಬಿಐ ತಿಳಿಸಿದೆ.
ಎಟಿಎಂ ಸೇವೆಗಳನ್ನು ಒದಗಿಸಲು ಒಂದು ಬ್ಯಾಂಕ್ ಮತ್ತೊಂದು ಬ್ಯಾಂಕ್‌ಗೆ ಪಾವತಿಸುವ ಶುಲ್ಕವೇ ಎಟಿಎಂ ಇಂಟರ್‌ಚೇಂಜ್ ಶುಲ್ಕ. ಇದು ಸಾಮಾನ್ಯವಾಗಿ ಪ್ರತಿ ವಹಿವಾಟಿಗೆ ನಿಗದಿತ ಮೊತ್ತವಾಗಿದ್ದು, ಇದನ್ನು ಸಾಮಾನ್ಯವಾಗಿ ಗ್ರಾಹಕರಿಗೆ ಅವರ ಬ್ಯಾಂಕಿಂಗ್ ವೆಚ್ಚದ ಭಾಗವಾಗಿ ವರ್ಗಾಯಿಸಲಾಗುತ್ತದೆ. ಈಗ ಹೆಚ್ಚುತ್ತಿರುವ ಕಾರ್ಯಾಚರಣೆಯ ವೆಚ್ಚಗಳು ತಮ್ಮ ವ್ಯವಹಾರದ ಮೇಲೆ ಪರಿಣಾಮ ಬೀರುತ್ತಿವೆ ಎಂದು ವೈಟ್-ಲೇಬಲ್ ಎಟಿಎಂ ಆಪರೇಟರ್‌ಗಳ ವಿನಂತಿಗಳನ್ನು ಅನುಸರಿಸಿ, ಆರ್‌ಬಿಐ ಈ ಶುಲ್ಕಗಳನ್ನು ಪರಿಷ್ಕರಿಸಲು ನಿರ್ಧರಿಸಿದೆ. ಹಾಗಾಗಿ ಮೇ 1ರಿಂದ ಎಟಿಎಂ ವಿತ್‌ಡ್ರಾ ದುಬಾರಿಯಾಗಲಿದ್ದು, ಆರ್‌ಬಿಐ ಶುಲ್ಕ ಹೆಚ್ಚಳಕ್ಕೆ ಅನುಮೋದನೆಯೂ ನೀಡಿದೆ.

ಈ ಶುಲ್ಕ ಹೆಚ್ಚಳವು ದೇಶದಾದ್ಯಂತ ಅನ್ವಯವಾಗಲಿದ್ದು, ವಿಶೇಷವಾಗಿ ಸಣ್ಣ ಬ್ಯಾಂಕ್‌ಗಳ ಗ್ರಾಹಕರ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಈ ಬ್ಯಾಂಕುಗಳು ಎಟಿಎಂ ಮತ್ತು ಸಂಬಂಧಿತ ಸೇವೆಗಳಿಗಾಗಿ ದೊಡ್ಡ ಹಣಕಾಸು ಸಂಸ್ಥೆಗಳನ್ನು ಅವಲಂಬಿಸಿವೆ. ಇದರಿಂದಾಗಿ ಅವು ಹೆಚ್ಚುತ್ತಿರುವ ವೆಚ್ಚಗಳಿಗೆ ಹೆಚ್ಚು ಗುರಿಯಾಗಲಿವೆ. ಹಾಗಾಗಿ ಮೇ 1ರಿಂದ ಗ್ರಾಹಕರು ತಮ್ಮ ಉಚಿತ ಮಿತಿಯನ್ನು ಮೀರಿದ ಪ್ರತಿ ಹಣಕಾಸು ವಹಿವಾಟಿಗೆ ಹೆಚ್ಚುವರಿಯಾಗಿ 2 ರೂಪಾಯಿ ಪಾವತಿಸಬೇಕು.
ಬ್ಯಾಲೆನ್ಸ್ ಪರಿಶೀಲನೆಯಂತಹ ಹಣಕಾಸುಯೇತರ ವಹಿವಾಟುಗಳಿಗೆ ಶುಲ್ಕವು 1 ರೂಪಾಯಿ ಹೆಚ್ಚಾಗಲಿದೆ. ಇದರ ಪರಿಣಾಮವಾಗಿ ಎಟಿಎಂನಿಂದ ಹಣವನ್ನು ಹಿಂಪಡೆಯಲು ಪ್ರತಿ ವಹಿವಾಟಿಗೆ 19 ರೂಪಾಯಿ ವೆಚ್ಚವಾಗಲಿದೆ. ಈ ಹಿಂದೆ 17 ರೂಪಾಯಿ ಇತ್ತು. ಖಾತೆಯ ಬ್ಯಾಲೆನ್ಸ್ ಪರಿಶೀಲಿಸಲು ಈಗ ಪ್ರತಿ ವಹಿವಾಟಿಗೆ 7 ರೂಪಾಯಿ ವೆಚ್ಚವಾಗಲಿದೆ ಎಂದು ಅಧಿಕೃತ ಅಧಿಸೂಚನೆಯಲ್ಲಿ ತಿಳಿಸಿದೆ. ಮೊದಲಿಗೆ ಕ್ರಾಂತಿಕಾರಿ ಬ್ಯಾಂಕಿಂಗ್ ಸೇವೆ ಎಂದು ಪರಿಗಣಿಸಲಾಗಿದ್ದ ಈ ಎಟಿಎಂಗಳು, ಡಿಜಿಟಲ್ ಪಾವತಿಗಳ ಏರಿಕೆಯಿಂದಾಗಿ ಭಾರತದಲ್ಲಿ ಸಂಕಷ್ಟಕ್ಕೆ ಸಿಲುಕಿವೆ.

ಆನ್‌ಲೈನ್ ವ್ಯಾಲೆಟ್‌ಗಳು ಮತ್ತು ಯುಪಿಐ ವಹಿವಾಟುಗಳ ಅನುಕೂಲತೆಯು ನಗದು ಹಿಂಪಡೆಯುವಿಕೆಯ ಅಗತ್ಯವನ್ನು ಇತ್ತೀಚೆಗೆ ಕಡಿಮೆ ಮಾಡಿದೆ. ಸರ್ಕಾರಿ ದತ್ತಾಂಶವು ಭಾರತದಲ್ಲಿ ಡಿಜಿಟಲ್ ಪಾವತಿಗಳ ಮೌಲ್ಯವು ಮೊದಲಿಗೆ 952 ಲಕ್ಷ ಕೋಟಿ ರೂ.ಗಳಷ್ಟಿತ್ತು. ಆರ್ಥಿಕ ವರ್ಷ 23ರ ಹೊತ್ತಿಗೆ ಈ ಅಂಕಿ ಅಂಶವು 3,658 ಲಕ್ಷ ಕೋಟಿ ರೂಪಾಯಿಗಳಿಗೆ ಏರಿತು. ಇದು ನಗದುರಹಿತ ವಹಿವಾಟಿನತ್ತ ಭಾರಿ ಬದಲಾವಣೆಗೆ ಸಾಕ್ಷಿ ಎನ್ನಲಾಗಿದೆ. ಈ ಹೊಸ ಶುಲ್ಕ ಹೆಚ್ಚಳದೊಂದಿಗೆ ಇನ್ನೂ ನಗದು ವಹಿವಾಟುಗಳನ್ನು ಅವಲಂಬಿಸಿರುವ ಗ್ರಾಹಕರು ಹೊರೆಯನ್ನು ಅನುಭವಿಸಬಹುದು ಎಂದೂ ಹೇಳಲಾಗುತ್ತಿದೆ.












Click it and Unblock the Notifications