Haryana election results: ತಲೆಕೆಳಗಾದ ಫಲಿತಾಂಶ, ಹರಿಯಾಣ ಜನತೆಗೆ ರಾಹುಲ್ ಗಾಂಧಿ ಥ್ಯಾಂಕ್ಸ್!
ಹರಿಯಾಣ ವಿಧಾನಸಭೆ ಚುನಾವಣೆಯ ಫಲಿತಾಂಶ ನಿನ್ನೆ ಹೊರಬಿದ್ದಿದೆ. ಮೊದಲು ಗೆಲುವಿನ ಹಾದಿಯಲ್ಲೇ ಬೀಗುತ್ತಿದ್ದ ಕಾಂಗ್ರೆಸ್ ಮಧ್ಯಾಹ್ನದ ವೇಳೆ ಮಕಾಡೆ ಮಲಗಿತು. ಮತ್ತೊಂದೆಡೆ ಬಿಜೆಪಿ ಪಕ್ಷವು ತನ್ನ ಹ್ಯಾಟ್ರಿಕ್ ಗೆಲುವನ್ನು ಸಾಧಿಸಿ, ಸರ್ಕಾರ ರಚಿಸಲು ಫುಲ್ ತಯಾರಿ ನಡೆಸಿದೆ. ಹರಿಯಾಣದಲ್ಲಿ ಕಾಂಗ್ರೆಸ್ ಸೋಲಿನ ಬಗ್ಗೆ ರಾಹುಲ್ ಗಾಂಧಿ ಮಾತನಾಡಿದ್ದಾರೆ.
ಹರಿಯಾಣ ವಿಧಾನಸಭೆ ಚುನಾವಣೆಯ ಅನಿರೀಕ್ಷಿತ ಫಲಿತಾಂಶದ ಬಗ್ಗೆ ನಮ್ಮ ಕಾಂಗ್ರೆಸ್ ಪಕ್ಷ ಅವಲೋಕನ ಮಾಡಲಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ರಾಹುಲ್, ನಾವು ಹರಿಯಾಣದ ಅನಿರೀಕ್ಷಿತ ಫಲಿತಾಂಶದ ಬಗ್ಗೆ ಅವಲೋಕನ ನಡೆಸುತ್ತೇವೆ. ಅಲ್ಲಿ ವಿವಿಧ ಕ್ಷೇತ್ರಗಳಿಂದ ದೂರುಗಳು ಬಂದಿದ್ದು, ಇದರ ಬಗ್ಗೆಯೂ ಚುನಾವಣಾ ಆಯೋಗಕ್ಕೆ ಮಾಹಿತಿ ನೀಡುತ್ತೇವೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.

ಹರಿಯಾಣದ ಜನರ ಬೆಂಬಲಕ್ಕೆ ಹಾಗೂ ಬಿಡುವಿಲ್ಲದೆ ಪಕ್ಷಕ್ಕಾಗಿ ದುಡಿದ ಕಾಂಗ್ರೆಸ್ ಕಾರ್ಯಕರ್ತರಿಗೆ ಧನ್ಯವಾದಗಳನ್ನು ಹೇಳಲು ಬಯಸುತ್ತೇನೆ. ನಾವು ಎಂದಿನಂತೆ ದೇಶದ ಜನರ ಹಕ್ಕುಗಳು, ಸತ್ಯಕ್ಕಾಗಿ, ಸಾಮಾಜಿಕ ನ್ಯಾಯಕ್ಕಾಗಿ ಹೋರಾಟವನ್ನು ಮುಂದುವರಿಸುತ್ತೇವೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲೂ ಕಾಂಗ್ರೆಸ್‌ಗೆ ತಕ್ಕಮಟ್ಟಿಗೆ ಜಯ ಸಿಕ್ಕಿದೆ. ಈ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಕಾಂಗ್ರೆಸ್, ಜಮ್ಮುಕಾಶ್ಮೀರದ ಜನತೆಗೆ ಧನ್ಯವಾದಗಳು ಎಂದಿದ್ದಾರೆ. ಕಣಿವೆ ರಾಜ್ಯದಲ್ಲಿ ನಮ್ಮ ಇಂಡಿಯಾ ಮೈತ್ರಿಕೂಟಕ್ಕೆ ಸಿಕ್ಕಿರುವ ಜನಾದೇಶವು ಸಂವಿಧಾನ ಹಾಗೂ ಪ್ರಜಾಪ್ರಭುತ್ವಕ್ಕೆ ಸಿಕ್ಕಿರುವ ಜಯ ಎಂದಿದ್ದಾರೆ.
ಚುನಾವಣೋತ್ತರ ಸಮೀಕ್ಷೆಗಳೆಲ್ಲವೂ ಹರಿಯಾಣದಲ್ಲಿ ಕಾಂಗ್ರೆಸ್ ಗದ್ದುಗೆಯೇರುವುದು ನಿಶ್ಚಿತ ಎಂದು ಭವಿಷ್ಯ ನುಡಿದಿದ್ದವು. ಅದರಂತೆ ಮತ ಎಣಿಕೆ ಆರಂಭದಲ್ಲಿ ಕಾಂಗ್ರೆಸ್ ಮುನ್ನಡೆಯೂ ಸಾಧಿಸಿತ್ತು. ಬರೋಬ್ಬರಿ 90 ಸದಸ್ಯ ಬಲದ ಹರಿಯಾಣ ವಿಧಾನಸಭಾ ಕ್ಷೇತ್ರಗಳ ಪೈಕಿ ಕಾಂಗ್ರೆಸ್ ಅರ್ಧಕ್ಕಿಂತಲೂ ಹೆಚ್ಚು ಸ್ಥಾನಗಳಲ್ಲಿ ಮುನ್ನಡೆ ಸಾಧಿಸುವ ಮೂಲಕ ಗೆಲುವಿನ ನಗೆಬೀರಿತ್ತು. ಬಹುತೇಕ ಕಾಂಗ್ರೆಸ್ ಗೆಲ್ಲುವುದು ಖಚಿತ ಎನ್ನುವಷ್ಟರಲ್ಲಿ ಅಂಕಿಗಳು ತಲೆಕೆಳಗಾಗಿದ್ದವು.

ಮೊದಲಿಗೆ ಮುನ್ನಡೆ ಬಂದ ಕೂಡಲೇ ಎಲ್ಲೆಡೆ ಕಾಂಗ್ರೆಸ್ ಕಾರ್ಯಕರ್ತರು ಸಿಹಿ ವಿತರಿಸಿ, ಪಟಾಕಿ ಸಿಡಿಸಿ ಸಂಭ್ರಮದಲ್ಲಿ ತೊಡಗಿದ್ದರು. ಆದರೆ, ಮಧ್ಯಾಹ್ನದ ವೇಳೆಗೆ ಮುನ್ನಡೆಯಲ್ಲಿದ್ದ ಕಾಂಗ್ರೆಸ್ ಬಲ ಕುಸಿಯುತ್ತಾ ಹೋಯಿತು. ಮತ್ತೊಂದೆಡೆ ಮಕಾಡೆ ಮಲಗಿದ್ದ ಬಿಜೆಪಿ ಪುಟಿದೆದ್ದು ನಿಂತಿತ್ತು. ಸದ್ಯ ಬಿಜೆಪಿ 48 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿ ಎಕ್ಸಿಟ್ ಪೋಲ್‌ಗೆ ಸೆಡ್ಡು ಹೊಡೆದಿತ್ತು.
ಕೊನೆಗೆ ಹರಿಯಾಣದಲ್ಲಿ ಬಿಜೆಪಿ 48 ಸ್ಥಾನಗಳಲ್ಲಿ ಗೆದ್ದು ಬೀಗಿತು. ಕಾಂಗ್ರೆಸ್ 37, ಐಎನ್‌ಎಲ್‌ಡಿ 2, ಪಕ್ಷೇತರರು 3 ಸ್ಥಾನಗಳಲ್ಲಿ ಗೆದ್ದಿದೆ. ಇದರಿಂದ ಕಾಂಗ್ರೆಸ್‌ಗೆ ಭಾರಿ ಮುಖಭಂಗವಾಗಿದೆ.
ಮೊದಲಿಗೆ ರಿಪಬ್ಲಿಕ್ ಭಾರತ್ ಮ್ಯಾಟ್ರಿಜ್ ಮತದಾನೋತ್ತರ ಸಮೀಕ್ಷೆ ಹೇಳಿದಂತೆ ಹರಿಯಾಣದ 90 ಸ್ಥಾನಗಳಲ್ಲಿ ಕಾಂಗ್ರೆಸ್ 55-62 ಸ್ಥಾನಗಳನ್ನು ಪಡೆಯುವ ಮೂಲಕ ಗೆಲುವು ಸಾಧಿಸಲಿದೆ. ಇನ್ನು ಬಿಜೆಪಿ ಕೇವಲ 18-24 ಸ್ಥಾನಗಳನ್ನು ಪಡೆದು ಭಾರೀ ಮುಖಭಂಗ ಅನುಭವಿಸಲಿದೆ. ಇತರರು 2-5 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದ್ದರೆ ಎಂದು ಹೇಳಿತ್ತು.
ಆಕ್ಸಿಸ್ ಮೈ ಇಂಡಿಯಾ ಸಮೀಕ್ಷೆ ಕೂಡ ಕಾಂಗ್ರೆಸ್ 53-65 ಸ್ಥಾನಗಳನ್ನು ಪಡೆದು ಗೆಲುವು ಸಾಧಿಸಲಿದೆ. ಬಿಜೆಪಿ 18-28 ಸ್ಥಾನಗಳನ್ನು ಪಡೆಯುವ ಮೂಲಕ ಸೋಲನ್ನು ಅನುಭವಿಸಲಿದೆ ಎಂದು ಭವಿಷ್ಯ ನುಡಿದಿತ್ತು. ಆದರೆ, ನಿನ್ನೆಯ ಮತ ಎಣಿಕೆಯಲ್ಲಿ ಅಂತಿಮವಾಗಿ ಕಮಲ ಅರಳಿತು.












Click it and Unblock the Notifications