ಸಂಸದ, ಕೇಂದ್ರ ಸಚಿವರನ್ನ ಫೀಲ್ಡ್‌ಗೆ ಇಳಿಸಿ ಹೊಸ ಆಟ ತೋರಿಸಿದ ಬಿಜೆಪಿ!
ಬಿಜೆಪಿ ನೇತೃತ್ವದ ಎನ್‌ಡಿಎಗೆ ಈ ಬಾರಿ ಸೋಲಿನ ಕಹಿ ಗ್ಯಾರಂಟಿ ಅಂತಾ ಹೇಳುವಾಗಲೇ ಹೊಸ ಅಲೆ ಮೂಡಿದೆ. ಪಂಚರಾಜ್ಯ ಚುನಾವಣೆ ಪೈಕಿ, ಸಮೀಕ್ಷೆಗಳು ಹೇಳಿದ್ದಂತೆ ಪಕ್ಕಾ ಕಾಂಗ್ರೆಸ್ ಗೆಲ್ಲುತ್ತೆ ಅನ್ನೋ ವಾತಾವರಣ ಸೃಷ್ಟಿಯಾಗಿತ್ತು. ಆದರೆ ಅದನ್ನು ಬದಲಾಯಿಸಿ ಇತಿಹಾಸ ಬರೆಯೋಕೆ ಬಿಜೆಪಿ ಕೇಂದ್ರ ನಾಯಕರು ಆಯ್ಕೆ ಮಾಡಿಕೊಂಡಿದ್ದು 'ಕ್ರಾಂತಿಕಾರಿ ಹೆಜ್ಜೆ'ಯನ್ನ. ಹಾಗಾದರೆ ಬಿಜೆಪಿ ಇದನ್ನೆಲ್ಲಾ ಎದುರಿಸಿದ್ದು ಹೇಗೆ?
ಅಂದಹಾಗೆ ಕರ್ನಾಟಕದಲ್ಲಿ ಬಿಜೆಪಿ ಹೀನಾಯ ಸೋಲು ಕಂಡ ಬಳಿಕ, ಕೇಂದ್ರದ ಬಿಜೆಪಿ ನಾಯಕರು ಬೆಚ್ಚಿಬಿದ್ದರು. ಅಲ್ಲದೆ ಲೋಕಸಭೆ ಚುನಾವಣೆಗೆ ಮೊದಲು ಕರ್ನಾಟಕದಲ್ಲಿನ ಸೋಲು ಬಿಜೆಪಿಗೆ ಆಘಾತ ನೀಡಿತ್ತು. ಇದರ ಜೊತೆಗೆ ಪಂಚರಾಜ್ಯ ಚುನಾವಣೆ ಕೂಡ ಈಗ ಎದುರಾಗಿತ್ತು. ಛತ್ತೀಸ್‌ಗಢ, ಮಧ್ಯಪ್ರದೇಶ, ರಾಜಸ್ಥಾನ, ತೆಲಂಗಾಣ, ಮಿಜೋರಾಂನಲ್ಲಿ ವಿಧಾನಸಭೆಗೆ ಎಲೆಕ್ಷನ್ ಫಿಕ್ಸ್ ಆಗಿತ್ತು. ಹೀಗಿದ್ದಾಗಲೇ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ವರಿಷ್ಠ ಪಡೆ ಹೊಸ ಕ್ರಾಂತಿಕಾರಿ ನಿರ್ಧಾರ ಕೈಗೊಂಡಿತ್ತು.

ಸಂಸದರು, ಕೇಂದ್ರ ಸಚಿವರು ಅಖಾಡಕ್ಕೆ!
ಹೌದು ಛತ್ತೀಸ್‌ಗಢ, ಮಧ್ಯಪ್ರದೇಶ, ರಾಜಸ್ಥಾನ, ತೆಲಂಗಾಣ ವಿಧಾನಸಭೆ ಚುನಾವಣೆಯ ಬಗ್ಗೆ ಬಿಜೆಪಿ ತುಂಬಾ ಸೀರಿಯಸ್ ಆಗಿತ್ತು. ಅದ್ರಲ್ಲೂ ಲೋಕಸಭೆ ಚುನಾವಣೆಗೆ ಮೊದಲು ನಡೆಯುವ ಪಂಚರಾಜ್ಯ ಚುನಾವಣೆ ಬಹುಮುಖ್ಯ ಕೂಡ ಆಗಿತ್ತು. ಈ ಕಾರಣಕ್ಕೆ ಬಿಜೆಪಿಗೆ ದೊಡ್ಡ ನಿರ್ಧಾರ ಕೈಗೊಳ್ಳುವ ಅನಿವಾರ್ಯತೆ ಇತ್ತು. ಅಲ್ಲದೆ ಕಾಂಗ್ರೆಸ್ ಸೇರಿ ವಿರೋಧ ಪಕ್ಷಗಳನ್ನು ಎದುರಿಸಲು ಸ್ವತಃ ಸಂಸದರು & ಕೇಂದ್ರ ಸಚಿವರ ಫೀಲ್ಡ್‌ಗೆ ಇಳಿಸಿತ್ತು ಬಿಜೆಪಿ.
ಯಾರೆಲ್ಲಾ ಅಖಾಡ ಪ್ರವೇಶ ಮಾಡಿದ್ದರು?
ಕೇಂದ್ರ ಕೃಷಿ ಸಚಿವರಾದ ನರೇಂದ್ರ ಸಿಂಗ್ ತೋಮರ್, ಕೇಂದ್ರ ಸಚಿವ ಪ್ರಹ್ಲಾದ್ ಪಟೇಲ್, ಇನ್ನೊಬ್ಬ ಕೇಂದ್ರ ಸಚಿವರಾದ ಫಗ್ಗನ್ ಸಿಂಗ್ ಕುಲಸ್ತೆ ಅವರು ಮಧ್ಯಪ್ರದೇಶ ವಿಧಾನಸಭೆಗೆ ಸ್ಪರ್ಧೆ ಮಾಡಿದ್ದರು. ಜೊತೆಗೆ ಹಾಲಿ ಸಂಸದರಾದ ರಾಕೇಶ್ ಸಿಂಗ್, ಉದಯ್ ಪ್ರತಾಪ್ ಸಿಂಗ್, ಗಣೇಶ್ ಸಿಂಗ್, ರಿತಿ ಪಾಟಕ್ ಮಧ್ಯಪ್ರದೇಶ ಅಖಾಡದಲ್ಲಿ ಮಿಂಚಿದ್ದಾರೆ. ಹೀಗಾಗಿ ಇನ್ನೇನು ಮಧ್ಯಪ್ರದೇಶ ಅಧಿಕಾರ ಕೈತಪ್ಪಿ ಹೋಗುತ್ತಿದೆ ಎನ್ನುವಾಗಲೇ ಬಿಜೆಪಿಗೆ ಭರ್ಜರಿ ದಿಗ್ವಿಜಯ ಸಿಕ್ಕಿದೆ. ಕಾಂಗ್ರೆಸ್ ಮಧ್ಯಪ್ರದೇಶ ಗೆಲ್ಲುವ ಅವಕಾಶ ಮಿಸ್ ಮಾಡಿಕೊಂಡಿದೆ.
ರಾಜಸ್ಥಾನದಲ್ಲೂ ಇದೇ ಅಸ್ತ್ರ ಪ್ರಯೋಗ!
ಇದರ ಜೊತೆಗೆ ರಾಜಸ್ಥಾನದಲ್ಲೂ ಸಂಸದರಾದ ರಾಜ್ಯವರ್ಧನ್ ಸಿಂಗ್ ರಾಥೋಡ್, ದಿವ್ಯಾ ಕುಮಾರಿ, ಬಾಬಾ ಬಾಲಕ್‌ನಾಥ್, ನರೇಂದ್ರ ಕುಮಾರ್, ಭಗೀರಥ್ ಚೌಧರಿ & ಕಿರೋರಿ ಲಾಲ್ ಮೀನಾ, ದೇವಿಜಿ ಪಟೇಲ್ ಸ್ಪರ್ಧೆ ಮಾಡಿದ್ದರು. ಈ ಪೈಕಿ ಬಹುತೇಕರು ಯಶಸ್ಸು ಗಳಿಸುವ ಮೂಲಕ ಬಿಜೆಪಿ ವರಿಷ್ಠರ ಲೆಕ್ಕಾಚಾರಕ್ಕೆ ನೆರವಾದರು. ಹಾಗೇ ಛತ್ತೀಸ್‌ಗಢದಲ್ಲಿ ಇದೇ ಸ್ಟ್ರಾಟಜಿ ಬಳಸಲಾಗಿತ್ತು. ಸಂಸದರಾದ ವಿಜಯ್ ಬಘೇಲ್ ಕೇಂದ್ರ ಸಚಿವರಾಗಿರುವ ರೇಣುಕಾ ಸಿಂಗ್, ಗೋಮತಿ ಸಾಯಿ ಸ್ಪರ್ಧೆ ಮಾಡಿದ್ರು. ಹೀಗೆ ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಛತ್ತೀಸ್‌ಗಢದಲ್ಲಿ ಬಿಜೆಪಿ ಸಂಸದರು, ಕೇಂದ್ರ ಸಚಿವರು ಕಮಾಲ್ ಮಾಡಿರುವುದು ಗಮನ ಸೆಳೆದಿದೆ.












Click it and Unblock the Notifications