ಅಸ್ಸಾಂ ಚುನಾವಣೆ 2026: 'ಹಿಮಂತ ಯಾರು?' ತಂದೆ ಹಾದಿಯಲ್ಲಿ ಮಗ ಗೌರವ್ ಗೊಗೊಯ್, ಬಿಜೆಪಿಗೆ ಬಿಸ್ವಾ ವರದಾನ
ಅಸ್ಸಾಂ ವಿಧಾನಸಭಾ ಚುನಾವಣೆ 2026 ಹಿನ್ನೆಲೆ ರಾಜ್ಯದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. "ಯಾರು ಈ ಹಿಮಂತ ಬಿಸ್ವಾ ಶರ್ಮಾ?" ಎಂದು ಪ್ರಶ್ನಿಸುವ ಮೂಲಕ ಕಾಂಗ್ರೆಸ್ ಸಂಸದ ಗೌರವ್ ಗೊಗೊಯ್ ಅವರು ಅಸ್ಸಾಂ ರಾಜಕೀಯದಲ್ಲಿ ಹೊಸ ಸಂಚಲನ ಮೂಡಿಸಿದ್ದಾರೆ. ಸಂಸದರ ತಂದೆ ದಿವಂಗತ ಮಾಜಿ ಮುಖ್ಯಮಂತ್ರಿ ತರುಣ್ ಗೊಗೊಯ್ ಅವರು 2011ರ ಚುನಾವಣೆಯ ಸಮಯದಲ್ಲಿ "ಯಾರು ಈ ಬದ್ರುದ್ದೀನ್ ಅಜ್ಮಲ್?" ಎಂಬ ಹೇಳಿದ್ದರು. ಆ ಐತಿಹಾಸಿಕ ಮಾತನ್ನು ಗೌರವ್ ಇಂದು ನೆನಪಿಸಿದ್ದಾರೆ. ಅಂದು ತರುಣ್ ಗೊಗೊಯ್ ಅವರ ಆ ಒಂದು ಪ್ರಶ್ನೆ ಕಾಂಗ್ರೆಸ್ ಪಕ್ಷದ ಪರವಾಗಿ ಮತದಾರರನ್ನು ಒಗ್ಗೂಡಿಸಲು ಮತ್ತು ಚುನಾವಣಾ ಚಿತ್ರಣವನ್ನೇ ಬದಲಿಸಲು ಸಹಕಾರಿಯಾಗಿತ್ತು. ಈಗ ಮಗ ಗೌರವ್ ಅದೇ ತಂತ್ರವನ್ನು ಅನುಸರಿಸುತ್ತಿದ್ದಾರೆ.
ಮೂರು ಬಾರಿ ಅಸ್ಸಾಂನ ಮಾಜಿ ಮುಖ್ಯಮಂತ್ರಿ ಮತ್ತು ವಕೀಲ, ಹಿರಿಯ ಕಾಂಗ್ರೆಸ್ ನಾಯಕ ತರುಣ್ ಗೊಗೊಯ್ ಅವರು 2011 ರಲ್ಲಿ ಅವರು ಕೈಗೊಂಡ ನಿರ್ಧಾರಗಳು, ಹೇಳಿಕೆಗಳು, ಅವರ ವಾಕ್ಚಾತುರ್ಯವು ಅಸ್ಸಾಂನಲ್ಲಿ ನಾಟಕೀಯ ಬದಲಾವಣೆ ಆಗಲು ಕಾರಣವಾಯಿತು. ತರುಣ್ ಅವರು ತಮ್ಮ 84 ನೇ ವಯಸ್ಸಿನಲ್ಲಿ 2020ರ ನವೆಂಬರ್ 23 ರಂದು ಗುವಾಹಟಿಯ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ (GMCH) ಬಹು ಅಂಗಾಂಗ ವೈಫಲ್ಯದಿಂದ (ಕೋವಿಡ್ ವೇಳೆ) ನಿಧನರಾದರು. ಸದರಿ ಮುಂಬರುವ ಚುನಾವಣೆಯಲ್ಲಿ ಅವರ ಮಗ ಗೌರವ್ ಗೊಗೊಯ್ ತಂದೆಯಂತೆ ವಾಕ್ಚಾತುರ್ಯದ ವಾಕ್ಸಮರ ಆರಂಭಿಸಿದ್ದಾರೆ. ರಾಜ್ಯದ ಸಿಎಂ ಹಿಮಂತ ಬಿಸ್ವಾ ಕುರಿತು ರಾಜಕೀಯ ಬಾಣ ಬಿಟ್ಟಿದ್ದಾರೆ. ಅವರ ಪ್ರಶ್ನೆ ಮತದಾರರನ್ನು ಯೋಚನಾ ಲಹರಿಗೆ ನೂಕಿದೆ. ಬಿಸ್ವಾ ಅವರ ಅಧಿಕಾರ, ಪ್ರಸ್ತುತತೆಯನ್ನು ಪ್ರಶ್ನಿಸುವಂತೆ ಮಾಡಿದೆ.

ಪ್ರತಿಧ್ವನಿಸಿದ್ದ "ಬದ್ರುದ್ದೀನ್ ಅಜ್ಮಲ್ ಯಾರು?" ಹೇಳಿಕೆ
ರಾಜ್ಯದಲ್ಲಿ 2011ರ ವಿಧಾನಸಭಾ ಚುನಾವಣೆ ವೇಳೆ AIUDF ಪಕ್ಷವು ಮೌಲಾನಾ ಬದ್ರುದ್ದೀನ್ ಅಜ್ಮಲ್ ನೇತೃತ್ವದಲ್ಲಿ ಪ್ರಗತಿಯತ್ತ ಹೆಜ್ಜೆ ಇಟ್ಟಿತ್ತು. ಪ್ರಬಲ ಪಕ್ಷವಾಗಿ ಗುರುತಿಸಿಕೊಂಡಿತ್ತು. ಅಂದಿನ ಮುಖ್ಯಮಂತ್ರಿಯಾಗಿದ್ದ ತರುಣ್ ಗೊಗೊಯ್ ಅವರ "ಬದ್ರುದ್ದೀನ್ ಅಜ್ಮಲ್ ಯಾರು?" ಎಂದು ನಿರಾಕರಣೆಯ ಮಾತುಗಳನ್ನು ಬಹಿರಂಗ ಸಭೆಯಲ್ಲಿ ಮಾತನಾಡಿದ್ದರು. ಚುನಾವಣೆ ಹೊತ್ತಿನಲ್ಲಿ ಇದು ಮತದಾರರಲ್ಲಿ ಸಾಕಷ್ಟು ಪ್ರತಿಧ್ವನಿಸಲು ಕಾರಣವಾಯಿತು. ಕಾಂಗ್ರೆಸ್ಸಿನ ಪ್ರಚಾರ ನಿರೂಪಣೆಯನ್ನು ರೂಪಿಸಿತು. ಅಲ್ಲದೇ ಕಾಂಗ್ರೆಸ್‌ನ ಆತ್ಮವಿಶ್ವಾಸ ಹೆಚ್ಚಿಸಿತು. ಕಾಂಗ್ರೆಸ್ ಸೆಟೆದು ನಿಂತಿದ್ದು, ಪಕ್ಷ ಗೆಲ್ಲುವ ಆತ್ಮವಿಶ್ವಾಸ ಬಿತ್ತಿತ್ತು. ಅಲ್ಪಸಂಖ್ಯಾತ-ಸಮುದಾಯ ಮತಗಳನ್ನು ವಿಭಜಿಸಬಹುದೆಂದು ಅನೇಕರು ಭಯಪಡುವ ಪ್ರತಿಸ್ಪರ್ಧಿಯಿಂದ ಗಮನವನ್ನು ಬೇರೆಡೆಗೆ ತಿರುಗಿಸಿತ್ತು. ಅಂದು ತರುಣ್ ಅವರ ನಿರಾಕರಣೆಯ ಹೇಳಿಕೆ ಸಾಕಷ್ಟು ಚರ್ಚೆ ಹುಟ್ಟು ಹಾಕಿತ್ತು.
ಅಂದಿನ ಐತಿಹಾಸಿಕ ಕ್ಷಣವು ಒಂದೂವರೆ ದಶಕದ ಬಳಿಕ ಗೌರವ್ ಗೊಗೊಯ್ ಅವರು ತಂದೆಯ ನಿರಾಕರಣೆಯಲ್ಲಿ ದಾಟಿಯಲ್ಲಿ "ಹಿಮಂತ ಬಿಸ್ವಾ ಯಾರು?"ಎಂದು ಕೇಳಿದ್ದಾರೆ. ಇದು ಹಳೆಯ ನಿರೂಪಣೆ ನೆನಪಿಸುವ ಜೊತೆಗೆ ಮತದಾರರನ್ನು ಸೆಳೆಯುವಲ್ಲಿ ಯಶಸ್ವಿ ಆಯಿತು ಎನ್ನಲಾಗುತ್ತಿದೆ. 2026 ರ ಚುನಾವಣೆಯಲ್ಲಿ ಹಳೆಯ ರಾಜಕೀಯ ಸಂಗತಿಗಳು ನೆನಪಿಸುವಂತಾಗಿದೆ.
ಹಿಮಂತ ಕಳೆದುಕೊಂಡ ಕಾಂಗ್ರೆಸ್‌ಗೆ ಕಾರ್ಯತಂತ್ರದ ನಷ್ಟ
ಇಲ್ಲಿ ಗಮನಿಸಬೇಕಾದ ಇನ್ನೊಂದು ವಿಷಯವೆಂದರೆ 2011 ರಲ್ಲಿ ಅಜ್ಮಲ್ ಪ್ರಭಾವಿ ನಾಯಕರಾಗಿದ್ದರು. ಪಕ್ಷಕ್ಕಾಗಿ ಅವರ ಅವಿರತ ಶ್ರಮದಿಂದಲೇ AIUDF ಒಂದು ಶಕ್ತಿಯಾಗಿ ಹೊರ ಹೊಮ್ಮಿತ್ತು. ಆದರೆ ಇಂದಿನ ಬಿಜೆಪಿ ನಾಯಕ ಅಸ್ಸಾಂ ಸಿಎಂ ಆಗಿರುವ ಹಿಮಂತ ಬಿಸ್ವಾ ಶರ್ಮಾ ಪ್ರತಿಸ್ಪರ್ಧಿಯಲ್ಲ. ಅವರು ಈಶಾನ್ಯದಲ್ಲಿ ಬಿಜೆಪಿ ನಾಯಕತ್ವದಲ್ಲಿ ಕೇಂದ್ರದ ವ್ಯಕ್ತಿ ಮತ್ತು ಇಂದು ರಾಜ್ಯದಲ್ಲಿ ಅತ್ಯಂತ ಗೋಚರ ರಾಜಕೀಯ ನಟರಲ್ಲಿ ಒಬ್ಬರು. ಅಜ್ಮಲ್‌ಗಿಂತ ಭಿನ್ನರನ್ನಾಗಿಲ್ಲ ಎಂಬಂತೆ ಗೌರವ್ ಕಾಣುತ್ತಿದ್ದಾರೆ.
ಸಿಎಂ ಹಿಮಂತ ಬಿಸ್ವಾ ಶರ್ಮಾನ ಅವರು ಒಂದು ಕಾಲದಲ್ಲಿ ಅಸ್ಸಾಂನಲ್ಲಿ ಕಾಂಗ್ರೆಸ್ ಪಕ್ಷದ ಅತ್ಯಂತ ಪ್ರಭಾವಿ ನಾಯಕರಾಗಿದ್ದರು. ಉತ್ತಮ ಆಡಳಿತಗಾರರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದರು. ಇನ್ನೂ 2006 ಮತ್ತು 2011ರ ಚುನಾವಣೆ ವೇಳೆ ತರುಣ್ ಗೊಗೊಯ್ ಅವರ ವಿಶ್ವಾಸಾರ್ಹ ಲೆಫ್ಟಿನೆಂಟ್ ಆಗಿ ಹಿಮಂತ ಅವರು ಅಸ್ಸಾಂನಲ್ಲಿ ಕಾಂಗ್ರೆಸ್ ಅನ್ನು ಗೆಲುವಿನತ್ತ ಕೊಂಡೊಯ್ದಿದ್ದರು. ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವಲ್ಲಿ ಸದಾ ಮುಂದಿರುತ್ತಿದ್ದರು. ಬದಲಾದ ರಾಜಕೀಯ ಸನ್ನಿವೇಶದಲ್ಲಿ ಅವರು ಕಾಂಗ್ರೆಸ್ ತೊರೆದು 2015ರಲ್ಲಿ ಬಿಜೆಪಿ ಸೇರಿದರು.
ಹಿಮಂತ ಕಾಂಗ್ರೆಸ್ ತೊರೆಯಲು ಕಾರಣ ಗೌರವ್ ಗೊಗೊಯ್
2011ರಲ್ಲಿ ದಿ.ತರುಣ್ ಗೊಗೊಯ್ ಅವರ ಮಗ ಹಾಲಿ ಸಂಸದ ಗೌರವ್ ಗೊಗೊಯ್ ರಾಜ್ಯ ರಾಜಕೀಯ ಪ್ರವೇಶಿಸಿದರು. ಆಗಿನ್ನು ಕಾಂಗ್ರೆಸ್‌ನಲ್ಲಿಯೇ ಇದ್ದ ಹಿಮಂತ ಅವರ ಸ್ಥಾನಮಾನ ಕ್ಷೀಣಿಸಲು ಪ್ರಾರಂಭವಾಯಿತು. ಮಗನಿಗೆ ಹೆಚ್ಚಿನ ಪ್ರಾಶಸ್ತ್ಯ ದೊರೆಯುತ್ತಾ ಬಂತು. ಮುಂದೆ ಪಕ್ಷದ 78 ಶಾಸಕರಲ್ಲಿ 54 ಶಾಸಕರ ಬೆಂಬಲವನ್ನು ಬಿಸ್ವಾ ಅವರು ಘೋಷಿಸಿಕೊಂಡರು. ಈ ವೇಳೆ ಹಿರಿಯರಾದ ತರುಣ್ ಗೊಗೊಯ್ ಅವರನ್ನು ಸಿಎಂ ಆಗಿ ಮಾಡಬೇಕೆಂಬ ಪ್ರಯತ್ನ ನಡೆಯಿತು. ಅಂದು ಕಾಂಗ್ರೆಸ್ ಉಪಾಧ್ಯಕ್ಷರಾಗಿದ್ದ ರಾಹುಲ್ ಗಾಂಧಿ ಅದನ್ನು ತಿರಸ್ಕರಿಸಿದ್ದ ನಡೆ ಒಂದಷ್ಟು ರಾಜಕೀಯ ಬೆಳವಣಿಗೆಗೆ ಕಾರಣವಾಯಿತು.
ಮರುಕುಳಿಸಿದ ರಾಹುಲ್ ಗಾಂಧಿಯ ಸಾಕು ನಾಯಿ 'ಪಿಡಿ' ಬಿಸ್ಕತ್ತು ಘಟನೆ
2010ರಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭೇಟಿ ಮಾಡಲು ಇತರ ಹಿರಿಯ ನಾಯಕರೊಂದಿಗೆ ಹಿಮಂತ ಬಿಸ್ವಾ ಶರ್ಮಾ ಅವರು ತೆರಳಿದ್ದರು. ಸಭೆಯಲ್ಲಿ ನಾಯಕರಿಗಾಗಿ ತಟ್ಟೆಯಲ್ಲಿ ಚಹಾ ಬಿಸ್ಕತ್ ಇಡಲಾಗಿತ್ತು. ರಾಹುಲ್ ಗಾಂಧಿಯವರು ತಮ್ಮ ಸಾಕು ನಾಯಿ 'ಪಿ'ಡಿ ಜೊತೆ ಆಟವಾಡುತ್ತಿದ್ದರು. ತಟ್ಟೆಯಲ್ಲಿದ್ದ ಬಿಸ್ಕತ್ತನ್ನು ಸಾಕು ನಾಯಿ 'ಪಿಡಿ' ಎಳೆದು ತಿಂದಿತ್ತು. ಆಗ ಹಿಮಂತ ಬಿಸ್ವಾ ಶರ್ಮಾ ಅವರನ್ನು ನೋಡಿ ನಕ್ಕ ರಾಹುಲ್ ಗಾಂಧಿ ಅವರು ತಟ್ಟೆ ಬದಲಾಯಿಸುವಂತೆ ಹೇಳಲಿಲ್ಲ. ನಾಯಕರೆಲ್ಲ ಅವರ ಮನೆಯ ಸಾಕು ನಾಯಿಗಳೇ ಎಂಬ ಲೇವಡಿ ಮಾತುಗಳು ಕೇಳಿ ಬಂದಿದ್ದವು. ಬದಲಾಯಿಸದ ತಟ್ಟೆಯಲ್ಲಿದ್ದ ಬಿಸ್ಕತ್ತನ್ನು ಕೆಲವರು ತಿಂದರು ಎನ್ನಲಾಗಿದೆ. ನಂತರ ಇದೇ ವಿಚಾರ ಕುರಿತು ಪ್ರತಿಕ್ರಿಯಿಸಿದ್ದ ಹಿಮಂತ ಬಿಸ್ವಾ ಅವರು, ಇದು ಕೇಂದ್ರ ನಾಯಕತ್ವದ ಗಂಭೀರತೆಯ ಕೊರತೆಯನ್ನು ತೋರಿಸುತ್ತದೆ' ಅಸಮಾಧಾನ ಹೊರ ಹಾಕಿದ್ದರು. ಇದೀಗ ಮತ್ತೆ ಅಂದಿನ ಘಟನೆಗಳು ಮುನ್ನೆಲೆ ಬರುತ್ತಿವೆ. ವೈರಲ್ ಸಹ ಆಗುತ್ತಿವೆ.
ಇದೇ ನಾಯಿ ಬಿಸ್ಕತ್ತು ವಿಚಾರವಾಗಿ 2024ರಲ್ಲೂ ಪ್ರತಿಕ್ರಿಯಿಸಿದ್ದ ಹಿಮಂತ ಬಿಸ್ವಾ ಅವರು, ಮತ್ತೊಮ್ಮೆ ಅಂದಿನ ಘಟನೆ ನೆನಪಿಸಿಕೊಂಡು ಕಿಡಿ ಕಾರಿದ್ದರು. ಕೇವಲ ರಾಹುಲ್ ಗಾಂಧಿ ಮಾತ್ರವಲ್ಲದೇ ಅವರ ಇಡೀ ಕುಟುಂಬವೂ ನನ್ನನ್ನು ಆ ನಾಯಿ ಪ್ಲೇಟಿನಲ್ಲಿದ್ದ ಬಿಸ್ಕತ್ತು ತಿನ್ನಿಸಲು ಒತ್ತಾಯಿಸಲು ಸಾಧ್ಯವಾಗಲಿಲ್ಲ. ನಾನು ಹೆಮ್ಮೆಯ ಅಸ್ಸಾಮಿ ಮತ್ತು ಭಾರತೀಯ ಪ್ರಜೆ. ನಾನು ಆ ಬಿಸ್ಕತ್ತು ತಿನ್ನಲು ನಿರಾಕರಿಸಿದೆ. ನಂತರ ಕಾಂಗ್ರೆಸ್ ಪಕ್ಷಕ್ಕೂ ರಾಜೀನಾಮೆ ನೀಡಿ ಹೊರ ಬಂದೆ ಎಂದು ಎಕ್ಸ್ ಪೋಸ್ಟ್ ಮಾಡಿದ್ದರು.
ಬಿಜೆಪಿಗೆ ವರದಾನವಾದ ಹಿಮಂತ ಬಿಸ್ವಾ ಶರ್ಮಾ
2015 ರಲ್ಲಿ ಬಿಜೆಪಿ ಸೇರಿದ ಹಿಮಂತ ಬಿಸ್ವಾ ಶರ್ಮಾ ಅವರ ನಿರ್ಧಾರವು ಅಸ್ಸಾಂನಲ್ಲಿ ಮಾತ್ರವಲ್ಲದೆ ಈಶಾನ್ಯ ಪ್ರದೇಶದಾದ್ಯಂತ ಕಾಂಗ್ರೆಸ್ ಪಕ್ಷದ ಪತನಕ್ಕೆ ನಾಂದಿ ಹಾಡಿದಂತಾಯಿತು. ಏಕೆಂದರೆ ಅವರು ಕಾಂಗ್ರೆಸ್‌ನಲ್ಲೂ ರಾಜಕೀಯ ತಜ್ಞರಂತೆ ಕೆಲಸ ಮಾಡಿದ್ದರು. ಪಕ್ಷದ ತಂತ್ರಗಾರಿಕೆ ಗೊತ್ತಿತ್ತು. ಅದನ್ನೆ ಬಿಜೆಪಿಯಲ್ಲಿ ಮುಂದುವರಿಸಿದರು. ಇದು ಕಾಂಗ್ರೆಸ್ ನಿರ್ನಾಮಕ್ಕೂ ಕಾರಣವಾಯಿತು. 2016 ಮತ್ತು 2021 ರಲ್ಲಿ ಅಸ್ಸಾಂನಲ್ಲಿ ಬಿಜೆಪಿ ಗೆಲುವು ಸಾಧಿಸುವಲ್ಲಿ ಅವರು ನಿರ್ಣಾಯಕ ಪಾತ್ರ ವಹಿಸಿದರು. ಮಾತ್ರವಲ್ಲದೇ ಅರುಣಾಚಲ ಪ್ರದೇಶ, ನಾಗಾಲ್ಯಾಂಡ್, ಮಣಿಪುರ, ತ್ರಿಪುರ ಮತ್ತು ಮೇಘಾಲಯದಲ್ಲಿ ಬಿಜೆಪಿ ಬಲಗೊಳ್ಳುವಲ್ಲಿ ಹಾಗೂ ಸರ್ಕಾರ ರಚನೆಯಲ್ಲಿ ಅವರು ಬಹುಮುಖ್ಯ ಪಾತ್ರ ನಿರ್ವಹಿಸಿದರು.
ಬಿಜೆಪಿ ಪಕ್ಚದೊಳಗೆ ಅಸ್ಥಿರತೆ, ಆಡಳಿತದಲ್ಲಿ ಬಿಕ್ಕಟ್ಟನ್ನು ಎದುರಿಸಿದಾಗಲೆಲ್ಲಾ ಹಿಮಂತ ಶರ್ಮಾ ಅವರು ಗಟ್ಟಿಯಾಗಿ ನಿಂತು ಪಕ್ಷದ ಹಡಗು ಮುಳುಗದಂತೆ ಕಾರ್ಯ ನಿರ್ವಹಿಸಿದ್ದಾರೆ. ಕಾಂಗ್ರೆಸ್‌ನ ಮುಂಚೂಣಿ ನಾಯಕ ಹಿಮಂತ ಬಿಸ್ವಾ ಬಿಜೆಪಿಯಲ್ಲೂ ತಮ್ಮ ತಂತ್ರಗಾರಿಕೆ, ಎದೆಗಾರಿಕೆ ಬಿಟ್ಟು ಕೊಡಲಿಲ್ಲ. ಹೀಗಾಗಿಯೇ ಅವರು ಬಿಜೆಪಿ ಪ್ರಮುಖ ನಾಯಕರಾಗಿ ಹೊರ ಹೊಮ್ಮಿದರು, ಮುಂದೆ ಅಸ್ಸಾಂನ ಮುಖ್ಯಮಂತ್ರಿ ಆದರು. ಬಿಜೆಪಿ ಬಂದ ಅವರು ಪಕ್ಷಕ್ಕೆ ವರದಾನವೇ ಆಗಿದ್ದಾರೆ.
ಹಿಮಂತ ಅವರ ರಾಜಕೀಯ ನಡೆ ಅಸ್ಸಾಂನ ಆಡಳಿತ ಮತ್ತು ಚುನಾವಣಾ ಪ್ರಚಾರದ ನಿರೂಪಣೆಗಳ ಕೇಂದ್ರ ಬಿಂದುವಾಗಿದೆ ಅವರ ವಿರುದ್ಧ ಕಾಂಗ್ರೆಸ್ ಸಂಸದರು ತೊಡೆ ತಟ್ಟಿದ್ದಾರೆ. ಯಾರು ಈ ಹಿಮಂತ? ಎಂದು ಹೇಳುವ ಮೂಲಕ ಹೊಸ ಅಧ್ಯಾಯ ಆರಂಭಿಸಲು ಮುಂದಾಗಿದ್ದಾರೆ. ಅವರ ಹೇಳಿಕೆಗಳು ರಾಜಕೀಯ ಚರ್ಚೆಗಳಿಗೂ ಕಾರಣವಾಗಿದೆ. ಆರೋಪಗಳು ಎಷ್ಟರ ಮಟ್ಟಿಗೆ ಗುರಿ ತಲುಪಿವೆ ಎಂಬುದು ಮತದಾರರು ಮಾರ್ಚ್ ಅಂತ್ಯ ಇಲ್ಲವೇ ಏಪ್ರಿಲ್ ನಲ್ಲಿ ತಿಳಿಸಲಿದ್ದಾರೆ.
ಅಸ್ಸಾಂ ಚುನಾವಣೆ ಬಗ್ಗೆ ಜನರು ಕೇಳುವ ಪ್ರಶ್ನೋತ್ತರಗಳು
1. ಅಸ್ಸಾಂ ವಿಧಾನಸಭೆ ಚುನಾವಣೆ ಯಾವಾಗ ನಡೆಯಲಿದೆ?
ಅಸ್ಸಾಂ ವಿಧಾನಸಭೆಯ ಹಾಲಿ ಅವಧಿಯು 2026ರ ಮೇ 20ಕ್ಕೆ ಮುಕ್ತಾಯಗೊಳ್ಳಲಿದ್ದು, ಚುನಾವಣೆಗಳು ಸಾಮಾನ್ಯವಾಗಿ 2026ರ ಮಾರ್ಚ್ ಅಥವಾ ಏಪ್ರಿಲ್ ತಿಂಗಳಿನಲ್ಲಿ ನಡೆಯುವ ನಿರೀಕ್ಷೆಯಿದೆ.
2. ಅಸ್ಸಾಂ ವಿಧಾನಸಭೆಯಲ್ಲಿ ಒಟ್ಟು ಎಷ್ಟು ಕ್ಷೇತ್ರಗಳಿವೆ?
ಅಸ್ಸಾಂ ವಿಧಾನಸಭೆಯು ಒಟ್ಟು 126 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದೆ. ಅಧಿಕಾರ ಹಿಡಿಯಲು ಯಾವುದೇ ಪಕ್ಷ ಅಥವಾ ಮೈತ್ರಿಕೂಟಕ್ಕೆ ಕನಿಷ್ಠ 64 ಸ್ಥಾನಗಳ ಅಗತ್ಯವಿರುತ್ತದೆ.
3. ಪ್ರಸ್ತುತ ಅಸ್ಸಾಂನ ಮುಖ್ಯಮಂತ್ರಿ ಯಾರು ಮತ್ತು ಯಾವ ಪಕ್ಷ ಅಧಿಕಾರದಲ್ಲಿದೆ?
ಪ್ರಸ್ತುತ ಹಿಮಂತ ಬಿಸ್ವಾ ಶರ್ಮಾ ಅವರು ಮುಖ್ಯಮಂತ್ರಿಯಾಗಿದ್ದು, ಭಾರತೀಯ ಜನತಾ ಪಾರ್ಟಿ (ಬಿಜೆಪಿ) ನೇತೃತ್ವದ ಎನ್‌ಡಿಎ (NDA) ಮೈತ್ರಿಕೂಟ ಅಧಿಕಾರದಲ್ಲಿದೆ.
4. ಈ ಬಾರಿಯ ಚುನಾವಣೆಯಲ್ಲಿ ಕಣದಲ್ಲಿರುವ ಪ್ರಮುಖ ಮೈತ್ರಿಕೂಟಗಳು ಯಾವುವು?
ಮುಖ್ಯವಾಗಿ ಎನ್‌ಡಿಎ (NDA): ಬಿಜೆಪಿ, ಅಸೋಮ್ ಗಣ ಪರಿಷತ್ (AGP) ಮತ್ತು ಯುಪಿಪಿಎಲ್ (UPPL) ಹಾಗೂ ಅಸೋಮ್ ಸನ್ಮಿಲಿಟೋ ಮೋರ್ಚಾ (ASOM): ಕಾಂಗ್ರೆಸ್ ನೇತೃತ್ವದ ವಿರೋಧ ಪಕ್ಷಗಳ ಮೈತ್ರಿಕೂಟ. ಗೌರವ್ ಗೊಗೊಯ್ ಅವರು ಕಾಂಗ್ರೆಸ್‌ನ ಪ್ರಮುಖ ನಾಯಕರಾಗಿದ್ದಾರೆ.
5. 2026ರ ಚುನಾವಣೆಯ ಪ್ರಮುಖ ವಿಷಯಗಳು ಯಾವುವು?
ಅಭಿವೃದ್ಧಿ, ಎನ್ಆರ್‌ಸಿ (NRC) ಮತ್ತು ಸಿಎಎ (CAA) ಅನುಷ್ಠಾನ, ಉದ್ಯೋಗ ಸೃಷ್ಟಿ, ಪ್ರವಾಹ ನಿಯಂತ್ರಣ ಮತ್ತು ಸ್ಥಳೀಯ ಬುಡಕಟ್ಟು ಸಮುದಾಯಗಳ ಭೂ ಹಕ್ಕುಗಳು ಈ ಬಾರಿಯ ಚುನಾವಣೆಯ ನಿರ್ಣಾಯಕ ವಿಷಯಗಳಾಗಿವೆ.
ಬರಹ: ಕೀರ್ತಿ ಪಾಂಡೆ
(ಕೀರ್ತಿ ಪಾಂಡೆ ಅವರು ಹಿರಿಯ ಪತ್ರಕರ್ತೆ ಮತ್ತು ಲೇಖಕಿ. ಅವರು ರಾಜಕೀಯ, ಸಮಾಜ, ಸಂಸ್ಕೃತಿ ಮತ್ತು ಸಾರ್ವಜನಿಕ ನೀತಿ ವಿಷಯಗಳಲ್ಲಿ ಸಂಶೋಧನಾ ಆಧಾರಿತ ವಿಶ್ಲೇಷಣೆಗಳನ್ನು ಬರೆಯುತ್ತಾರೆ. ಟೆಲಿವಿಷನ್ ಮತ್ತು ಡಿಜಿಟಲ್ ಮಾಧ್ಯಮಗಳಲ್ಲಿ ಅನುಭವ ಹೊಂದಿರುವ ಅವರು ಆಡಳಿತ, ಆರೋಗ್ಯ, ಲಿಂಗ ಸಮಾನತೆ ಮತ್ತು ಆರ್ಥಿಕತೆ ಕುರಿತ ವರದಿಗಳನ್ನು ನೀಡಿದ್ದಾರೆ. ಗಂಭೀರ ವಿಷಯಗಳನ್ನು ಸರಳ ಹಾಗೂ ಕಥನಶೈಲಿಯಲ್ಲಿ ಓದುಗರಿಗೆ ತಲುಪಿಸುವುದು ಅವರ ಲೇಖನಗಳ ವೈಶಿಷ್ಟ್ಯವಾಗಿದೆ)
-
ಸೋಷಿಯಲ್ ಮೀಡಿಯಾಗೆ ವಯೋಮಿತಿ ಫಿಕ್ಸ್?: ಕಠಿಣ 'ಎಐ' ಕಾನೂನು ಜಾರಿಗೆ ಸಂಸದೀಯ ಸಮಿತಿ ಶಿಫಾರಸು -
ಕುಕ್ಕರ್ ಬಾಂಬ್ ಬ್ಲಾಸ್ಟ್ ಕೇಸ್: ಕಾಂಗ್ರೆಸ್ ಉಗ್ರರಿಗೆ 'ಗ್ಯಾರಂಟಿ ಭಾಗ್ಯ' ನೀಡಿದರೂ ಅಚ್ಚರಿಯಿಲ್ಲ; ವಿಜಯೇಂದ್ರ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
Price Hike: ಕೇಂದ್ರದಿಂದ ಪೆಟ್ರೋಲ್-ಡೀಸೆಲ್ ಬೆಲೆ ಹೆಚ್ಚಳ ಹೇಳಿಕೆ, ದರ ಹೆಚ್ಚಿಸಿದ್ದೇ ಕಾಂಗ್ರೆಸ್; ಡಿಕೆಶಿಗೆ ತಿರುಗೇಟು -
Gen Z ಪ್ರತಿಭಟನೆಯಲ್ಲಿ 'ಪಾತ್ರ': ಬಲೆನ್ ಪ್ರಮಾಣ ವಚನ ಸ್ವೀಕರಿಸಿದ ಮರುದಿನವೇ ನೇಪಾಳ ಮಾಜಿ ಪ್ರಧಾನಿ ಕೆಪಿ ಶರ್ಮಾ ಒಲಿ ಬಂಧನ -
Bengaluru: ಶಾಲೆಗಳಿಗೂ BWSSB ನೀರಿನ ಬಿಲ್ ಶಾಕ್; ಡಿಸಿಎಂ ಡಿ.ಕೆ. ಶಿವಕುಮಾರ್ ಮೊರೆ ಹೋದ ಖಾಸಗಿ ಶಿಕ್ಷಣ ಸಂಸ್ಥೆಗಳು -
By Election: ಸಿದ್ದರಾಮಯ್ಯರಿಂದ ಅಹಿಂದ ಜೊತೆಗೆ ಗುತ್ತಿಗೆ ರಾಜಕಾರಣ: ಮಾಜಿ ಸಿಎಂ ಗಡುಗು -
Jowar Price Today: ಕರ್ನಾಟಕದಲ್ಲಿ ಕ್ವಿಂಟಾಲ್ ಜೋಳದ ಬೆಲೆ ಎಷ್ಟಿದೆ, ಮಾರುಕಟ್ಟೆವಾರು ಪಟ್ಟಿ ಇಲ್ಲಿದೆ. -
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು












Click it and Unblock the Notifications