ಕಾವೇರಿ ನೀರಿಗಾಗಿ ತಮಿಳುನಾಡು ಮತ್ತೆ ಕ್ಯಾತೆ: ನೀರಿಗಾಗಿ ಒತ್ತಾಯಿಸಿ ಮೋದಿ ಪತ್ರ ಬರೆದ ಸ್ಟಾಲಿನ್!
ಚೆನ್ನೈ, ಆಗಸ್ಟ್ 05: ನಿಗದಿತ ವೇಳಾಪಟ್ಟಿಯಂತೆ ತಮಿಳುನಾಡು ಪಾಲಿನ ಕಾವೇರಿ ನೀರನ್ನು ತಕ್ಷಣವೇ ಬಿಡುಗಡೆ ಮಾಡಲು ಮತ್ತು ಜೂನ್ ಮತ್ತು ಜುಲೈ ಕೊರತೆಯನ್ನು ನೀಗಿಸಲು ಕರ್ನಾಟಕಕ್ಕೆ ಸಲಹೆ ನೀಡಬೇಕು ಎಂದು ಸಿಎಂ ಎಂ ಕೆ ಸ್ಟ್ಯಾಲಿನ್ ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.
ತಮಿಳುನಾಡಿಗೆ ಕಾವೇರಿ ನೀರು ಹಂಚಿಕೆಗೆ ಕರ್ನಾಟಕಕ್ಕೆ ಸೂಚನೆ ನೀಡಿ. ತಮ್ಮ ಕುರುವಾಯಿ ಭತ್ತದ ಬೆಳೆ ಉಳಿಸಲು ಕಾವೇರಿ ಡೆಲ್ಟಾದ ರೈತರು ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಹೀಗಾಗಿ ನಮ್ಮ ಪಾಲಿನ ಕಾವೇರಿ ನೀರು ಬಿಡುಗಡೆಗೆ ಕರ್ನಾಟಕಕ್ಕೆ ಸೂಚಿಸಿ ಎಂದು ಸ್ಟಾಲಿನ್ ಪತ್ರದ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದ್ದಾರೆ.

ಕರ್ನಾಟಕ ರಾಜ್ಯ ಸರ್ಕಾರವು ಸುಪ್ರೀಂ ಕೋರ್ಟ್ ಆದೇಶವನ್ನು ಪಾಲನೆ ಮಾಡುತ್ತಿಲ್ಲ ಎಂದು ತಮಿಳುನಾಡು ಸಿಎಂ ಎಂ. ಕೆ. ಸ್ಟಾಲಿನ್ ಆರೋಪ ಮಾಡಿದ್ದಾರೆ. ಈ ಸಂಬಂಧ ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದಿರುವ ಸ್ಟಾಲಿನ್, ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶದ ಅನ್ವಯ ಕರ್ನಾಟಕ ಸರ್ಕಾರ ನಡೆದುಕೊಳ್ಳಬೇಕು ಎಂದು ಪ್ರತಿಪಾದಿಸಿದ್ಧಾರೆ.
ಇನ್ನೂ 2023 - 24ರಲ್ಲಿ ಕರ್ನಾಟಕ ರಾಜ್ಯದಿಂದ ಕೇವಲ 11.6 ಟಿಎಂಸಿ ನೀರು ಬಿಡುಗಡೆ ಆಗಿದೆ. ಆದರೆ, ಬಿಳಿಗುಂಡ್ಲು ಜಲ ಮಾಪಕ ಕೇಂದ್ರದಿಂದ ತಮಿಳುನಾಡಿಗೆ 40.4 ಟಿಎಂಸಿ ನೀರು ಹರಿದು ಬರಬೇಕು. ಅಂತಾರಾಜ್ಯ ಗಡಿಯಿಂದ ಜೂನ್ 1 ರಿಂದ ಜುಲೈ 31ರವರೆಗೆ ಬರಬೇಕಾದ ನೀರಿನ ಪ್ರಮಾಣದಲ್ಲಿ ಕೊರತೆ ಆಗಿದೆ ಎಂದು ಸ್ಟಾಲಿನ್ ವಿವರಿಸಿದ್ದಾರೆ. ಅಲ್ಲದೇ ತಮಿಳುನಾಡಿಗೆ ಕಳೆದ 2 ತಿಂಗಳಿನಿಂದ ಬಾಕಿ ಇರುವ 28.8 ಟಿಎಂಸಿ ನೀರು ಬಿಡುಗಡೆ ಆಗಿಲ್ಲ. ಕರ್ನಾಟಕ ರಾಜ್ಯದಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ಕಟ್ಟಿರುವ ನಾಲ್ಕು ಪ್ರಮುಖ ಅಣೆಕಟ್ಟುಗಳಿಗೆ 91 ಟಿಎಂಸಿ ನೀರಿನ ಕೊರತೆ ಎದುರಾಗಿದೆ.
ತಮಿಳುನಾಡಿನಲ್ಲಿ ಕಾವೇರಿ ನದಿ ಪಾತ್ರದ ಕೃಷಿಕರು ನೀರಿನ ಅಭಾವ ಎದುರಿಸುತ್ತಿದ್ದಾರೆ. ಈಗಾಗಲೇ ತಮಿಳುನಾಡಿನಲ್ಲಿ ಬರದ ಛಾಯೆ ಮೂಡಿದೆ. ಕಾವೇರಿ ನದಿ ಪಾತ್ರದಲ್ಲಿ ಕುರುವೈ ಬೆಳೆಗೆ ನೀರಿನ ಕೊರತೆ ಎದುರಾಗಿದೆ. ಭತ್ತ ಬೆಳೆಗಾರರು ಸಂಕಷ್ಟದಲ್ಲಿದ್ದಾರೆ. ತಮಿಳುನಾಡಿನಲ್ಲಿ ಇರುವ ಮೆಟ್ಟೂರು ಅಣೆಕಟ್ಟು ಕಾವೇರಿ ನದಿ ಪಾತ್ರದ ಜನತೆಯ ಜೀವನಾಡಿ ಆಗಿದೆ. ಈ ಅಣೆಕಟ್ಟಿನ ಒಟ್ಟು ಸಂಗ್ರಹಣಾ ಸಾಮರ್ಥ್ಯ 93.6 ಟಿಎಂಸಿ. ಆದರೆ, ಈ ಡ್ಯಾಂನಲ್ಲಿ ಒಟ್ಟು 26.6 ಟಿಎಂಸಿ ನೀರು ಮಾತ್ರ ಇದೆ ಎಂದು ಸ್ಟಾಲಿನ್ ಹೇಳಿದ್ದಾರೆ.
ಕಾವೇರಿ ನದಿನ ಕುರಿತು ತಮಿಳುನಾಡು ಸರ್ಕಾರವು ಕೇಂದ್ರ ಜಲ ಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರ ಗಮನಕ್ಕೂ ತಂದಿದ್ದೇವೆ. ಜುಲೈ 5 ಹಾಗೂ 19 ರಂದು ಅವರ ಗಮನಕ್ಕೆ ತರಲಾಗಿದೆ. ಕರ್ನಾಟಕ ಸರ್ಕಾರಕ್ಕೆ ಸೂಚನೆ ನೀಡಿ ಹಾಗೂ ಸುಪ್ರೀಂ ಕೋರ್ಟ್, ಕಾವೇರಿ ನದಿ ನೀರು ಪ್ರಾಧಿಕಾರದ ಆದೇಶಕ್ಕೆ ಬದ್ಧರಾಗಿರುವಂತೆ ಸೂಚಿಸಿ ಎಂದು ಸಿಎಂ ಸ್ಟಾಲಿನ್ ಹೇಳಿದ್ದಾರೆ.
ತಮಿಳುನಾಡಿನ ನದಿ ಪಾತ್ರದ ಜಿಲ್ಲೆಗಳ ಕುಡಿಯುವ ನೀರು ಹಾಗೂ ಇನ್ನಿತರ ಅಗತ್ಯತೆಗಳನ್ನು ಪೂರೈಸಿದ ಬಳಿಕ ಮೆಟ್ಟೂರು ಅಣೆಕಟ್ಟಿನಲ್ಲಿ ಕುರುವೈ ಬೆಳೆಗೆ ಕೇವಲ 15 ದಿನಗಳ ಕಾಲ ನೀರು ಪೂರೈಸುವಷ್ಟು ಇದೆ. ಆದರೆ, ಮುಂದಿನ ದಿನಗಳಲ್ಲಿ ನಮಗೆ ಇನ್ನೂ 45 ದಿನಗಳ ಅಗತ್ಯತೆಯಷ್ಟು ನೀರು ಬೇಕಿದೆ. ಬೆಳೆಗಳಿಗೆ ಸೂಕ್ತ ಕಾಲಕ್ಕೆ ನೀರು ಸಿಗದೆ ಫಸಲು ಕೈಗೆ ಸಿಗದಂತೆ ಆಗುತ್ತೆ ಎಂದು ಸಿಎಂ ಸ್ಟಾಲಿನ್ ಹೇಳಿದ್ದಾರೆ.












Click it and Unblock the Notifications