ಭಾರತದಲ್ಲಿ ಕೊರೊನಾ ನಿರ್ಬಂಧ ಸಡಿಲಿಕೆಗೆ ತಜ್ಞರ ಎಚ್ಚರಿಕೆ
ನವದೆಹಲಿ, ಅಕ್ಟೋಬರ್ 10: ಭಾರತದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಇಳಿಕೆಯಾಗುತ್ತಿದ್ದಂತೆ ಒಂದೊಂದೇ ರಾಜ್ಯಗಳಲ್ಲಿ ಕೊರೊನಾ ನಿರ್ಬಂಧಗಳನ್ನು ಸಡಿಲಿಕೆ ಮಾಡಲಾಗುತ್ತಿದೆ.
ಆದರೆ ಈ ಸಂಬಂಧ ಸೋಂಕು ಶಾಸ್ತ್ರಜ್ಞ ಡಾ. ಡಬ್ಲು. ಲ್ಯಾನ್ ಲಿಪ್ಕಿನ್ ಎಚ್ಚರಿಕೆ ರವಾನಿಸಿದ್ದಾರೆ. 'ಕೊರೊನಾ ಸೋಂಕಿನ ವಿರುದ್ಧ ಭಾರತದಲ್ಲಿ ಲಸಿಕೆ ಪಡೆದ ಜನಸಂಖ್ಯೆ ಪ್ರಮಾಣ ತುಂಬಾ ಕಡಿಮೆಯಿದ್ದು, ಎಲ್ಲಾ ನಿರ್ಬಂಧಗಳನ್ನು ಸಡಿಲಗೊಳಿಸಲು, ಎಲ್ಲಾ ಚಟುವಟಿಕೆಗಳನ್ನು ಪುನರಾರಂಭ ಮಾಡಲು ಅಗತ್ಯವಿರುವ ರಕ್ಷಣೆಯನ್ನು ದೇಶವು ಇನ್ನೂ ಹೊಂದಿಲ್ಲ' ಎಂದು ಲಿಪ್ಕಿನ್ ಎಚ್ಚರಿಸಿದ್ದಾರೆ.
ಭಾರತ ವಿಶ್ವದಲ್ಲೇ ಬೃಹತ್ ಲಸಿಕಾ ತಯಾರಕರನ್ನು ಹೊಂದಿದ್ದು, ದೇಶ ಈ ವಿಷಯದಲ್ಲಿ ಹೆಮ್ಮೆ ಪಡಬೇಕು. ಸೀರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಮುನ್ನಡೆ ಸಾಧಿಸಿದೆ. ಇದು ಭಾರತ ಹೆಮ್ಮೆ ಪಡಬೇಕಾದ ಸಂಗತಿ ಹಾಗೂ ಅದಕ್ಕೆ ಉತ್ತೇಜನ ನೀಡುವ ಅಗತ್ಯವಿದೆ ಎಂದು ಹೇಳಿದರು.

ಭಾರತದಲ್ಲಿ ಕೊರೊನಾ ನಿರ್ಬಂಧಗಳ ಸಡಿಲಿಕೆ ವಿಧಾನದ ಕುರಿತು ಮಾತನಾಡಿದ ಚಿಕಾಗೋ ಮೂಲದ ತಜ್ಞ ಲಿಪ್ಕಿನ್, ಭಾರತದಲ್ಲಿ ಲಸಿಕೆ ಪಡೆದ ಜನಸಂಖ್ಯೆಯ ಶೇಕಡಾವಾರು ಸಂಖ್ಯೆ ಬಹಳ ಕಡಿಮೆ ಇದೆ ಎಂದಿದ್ದಾರೆ.
'ನಿಮ್ಮ ಜನಸಂಖ್ಯೆಯ ಶೇ 20ಕ್ಕಿಂತ ಕಡಿಮೆ ಜನರಿಗೆ ಲಸಿಕೆ ಹಾಕಲಾಗಿದೆ. 18 ವರ್ಷದೊಳಗಿನ 30% ಜನಸಂಖ್ಯೆ ಇನ್ನೂ ಲಸಿಕೆ ಪಡೆಯಲು ಅರ್ಹವಾಗಿಲ್ಲ. ಇದರರ್ಥ, ನೀವು ಸುರಕ್ಷಿತವಾಗಿ ಪುನಃ ಎಲ್ಲ ಚಟುವಟಿಕೆಗಳನ್ನು ತೆರೆಯಲು ಅಗತ್ಯವಾದ ರಕ್ಷಣೆ ನಿಮ್ಮ ಬಳಿ ಇಲ್ಲ ಎಂದರ್ಥ' ಎಂದಿದ್ದಾರೆ.
ಕೊರೊನಾ ದೀರ್ಘಾವಧಿ ಪರಿಣಾಮದ ಬಗ್ಗೆ ಎಚ್ಚರಿಕೆ ನೀಡಿದ ಅವರು 'ಈ ಪರಿಣಾಮ ಅಸಾಮಾನ್ಯ ಎಂದು ಭಾವಿಸುತ್ತೇನೆ' ಎಂದು ಹೇಳಿದ್ದಾರೆ.

'ಸೋಂಕಿನಿಂದ ಜನರು ತೀವ್ರತರ ರೋಗಕ್ಕೆ ತುತ್ತಾಗುವುದಿಲ್ಲ. ಆದರೆ ಸೌಮ್ಯ ಸ್ವರೂಪದ ಪರಿಣಾಮಗಳನ್ನು ಹೊಂದಬಹುದು. ಕೆಲವರಲ್ಲಿ ಇದು ದೀರ್ಘಕಾಲ ಉಳಿಯಬಹುದು. ಉಸಿರಾಟ ತೊಂದರೆ, ಆಯಾಸ, ದುರ್ಬಲತೆ ಹೆಚ್ಚಿನ ಕಾಲ ಮುಂದುವರೆಯಬಹುದು. ಕೆಲವೊಮ್ಮೆ ಇವು ಶಾಶ್ವತವಾಗಿಯೂ ಪರಿಣಾಮ ಬೀರಬಹುದು. ಸೋಂಕಿಗೆ ಒಳಗಾದ 30% ಜನರಲ್ಲಿ ಈ ಸಮಸ್ಯೆಗಳು ಕಂಡುಬರುತ್ತದೆ' ಎಂದಿದ್ದಾರೆ.
ಈ ವ್ಯಕ್ತಿಗಳು ಮತ್ತೆ ಸೋಂಕಿಗೆ ಒಳಗಾಗಬಹುದು ಹಾಗೂ ಮುಂದಿನ ಕೆಲವು ವರ್ಷಗಳವರೆಗೂ ಅವರ ಜೀವನದ ಮೇಲೆ ದೊಡ್ಡ ಪರಿಣಾಮ ಬೀರಬಹುದು ಎಂದು ಹೇಳಿದ್ದಾರೆ.
'ಭವಿಷ್ಯದಲ್ಲಿ ನಾವು ಕೊರೊನಾ ನಿರ್ವಹಣೆಯ ವಿಧಾನವನ್ನು ಪರಿಷ್ಕರಿಸಬೇಕಿದೆ. ಆದರೆ ಸಂಭಾವ್ಯ ಸಾಂಕ್ರಾಮಿಕಗಳ ಬಗ್ಗೆ ಊಹಿಸಲು ಸಾಧ್ಯವಿಲ್ಲ. ನಾವು ಈಗ ಕಲಿತಿದ್ದನ್ನು ಮುಂದೆ ಅಳವಡಿಸಿಕೊಳ್ಳುತ್ತೇವೆ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು' ಎಂದು ತಿಳಿಸಿದ್ದಾರೆ.
ಕೊರೊನಾ ಸೋಂಕಿನ ಇನ್ನಷ್ಟು ರೂಪಾಂತರಗಳು ನಮ್ಮ ಸುತ್ತಲೇ ಸುಳಿದಾಡುತ್ತಿವೆ ಎಂದು ಎಚ್ಚರಿಕೆ ನೀಡಿರುವ ಅವರು, ಈಗಾಗಲೇ ಹಲವು ರೂಪಾಂತರಗಳು ನಮ್ಮ ಸುತ್ತ ಸುಳಿದಾಡುತ್ತಿವೆ. ಆದರೆ ಅವು ಹೆಚ್ಚು ಪರಿಣಾಮಕಾರಿಯೇ? ಹೆಚ್ಚಿನ ಸಂಖ್ಯೆಯಲ್ಲಿ ಹರಡುವುದೇ? ಇವುಗಳು ತಿಳಿದಿಲ್ಲ. ಸದ್ಯ ಡೆಲ್ಟಾ ರೂಪಾಂತರ ಮನುಷ್ಯರಲ್ಲಿ ಅತಿ ಹೆಚ್ಚಿನ ಪರಿಣಾಮ ಬೀರಬಲ್ಲದು ಎಂದು ತಿಳಿಸಲಾಗಿದೆ ಎಂದಿದ್ದಾರೆ.
ಗಂಭೀರ ಸೋಂಕನ್ನು ತಡೆಯುವತ್ತ ಲಸಿಕೆಗಳ ಕುರಿತು ಮಾತ್ರ ವಿಜ್ಞಾನಿಗಳು ಚಿಂತಿಸಬಾರದು. ಸೋಂಕು ಹರಡುವಿಕೆ ತಡೆಯುವತ್ತಲೂ ಯೋಚಿಸಬೇಕಿದೆ ಎಂದು ಹೇಳಿದ್ದಾರೆ.
ಈ ನಿಟ್ಟಿನಲ್ಲಿ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಸುಧಾರಿಸಬೇಕು. ಇದರಿಂದ ಲಸಿಕಾ ಕಾರ್ಯಸೂಚಿಯನ್ನು ಟ್ರ್ಯಾಕ್ ಮಾಡಬಹುದಾಗಿದೆ. ಸೋಂಕು ನಿಯಂತ್ರಣ ಸಾಧ್ಯವಾಗಲಿದೆ ಎಂದು ತಿಳಿಸಿದ್ದಾರೆ.
ಭಾರತದಲ್ಲಿ ಕೊರೊನಾ ಪ್ರಕರಣ:
ಭಾರತದಲ್ಲಿ ಭಾನುವಾರ 18,166 ಹೊಸ ಕೋವಿಡ್ ಪ್ರಕರಣ ದಾಖಲಾಗಿದೆ. ಕಳೆದ 24 ಗಂಟೆಯಲ್ಲಿ 23,624 ಜನರು ಗುಣಮುಖರಾಗಿದ್ದು, ಒಂದು ದಿನದಲ್ಕಿ 214 ಜನರು ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಸದ್ಯಕ್ಕೆ ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 2,30,971 ಆಗಿದೆ. ಒಟ್ಟು ಗುಣಮುಖರ ಸಂಖ್ಯೆ 3,32,71,915 ಆಗಿದ್ದು, ಸೋಂಕಿನಿಂದ ಇದುವರೆಗೂ ಒಟ್ಟು 4,50,589 ಮಂದಿ ಸಾವನ್ನಪ್ಪಿದ್ದಾರೆ.












Click it and Unblock the Notifications