ಟೈಮ್ ಜನಮತ: ಮೋದಿ ಸೋಲಿಸಿದ ಕೇಜ್ರಿವಾಲ್
ನ್ಯೂಯಾರ್ಕ್, ಏ.24: ಆಮ್ ಆದ್ಮಿ ಪಕ್ಷದ ಮುಖಂಡ, ವಾರಣಾಸಿಯಲ್ಲಿ ಬಿಜೆಪಿ ಪ್ರಧಾನಿ ಅಭ್ಯರ್ಥಿ ಮೋದಿ ಅವರ ಎದುರಾಳಿ ಅರವಿಂದ್ ಕೇಜ್ರಿವಾಲ್ ಅವರು ಮೋದಿಯನ್ನು ಸೋಲಿಸುವಲ್ಲಿ ಸಫಲರಾಗಿದ್ದಾರೆ. ಲೋಕಸಭೆ ಚುನಾವಣೆ ಫಲಿತಾಂಶಕ್ಕೆ ಮೇ.16ರ ತನಕ ಕಾಯಬೇಕು. ಆದರೆ, ಟೈಮ್ ನಿಯತಕಾಲಿಕ ನಡೆಸಿದ ಆನ್ ಲೈನ್ ಮತಗಣನೆಯಲ್ಲಿ ಮೋದಿ ಅವರನ್ನು ಹಿಂದಿಕ್ಕಿ ಪ್ರಭಾವಿ ನಾಯಕರ ಪಟ್ಟಿಯಲ್ಲಿ ಅರವಿಂದ್ ಕೇಜ್ರಿವಾಲ್ ಮುನ್ನಡೆದಿದ್ದಾರೆ.
ವಿಶ್ವದ ಪ್ರಭಾವಿ ನಾಯಕರ ಪಟ್ಟಿಯಲ್ಲಿ ಅಮೆರಿಕ ಗಾಯಕಿ ಕ್ಯಾಟಿ ಪೆರಿ, ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರನ್ನು ಹಿಂದಿಕ್ಕಿ ಆಮ್ ಆದ್ಮಿ ಪಕ್ಷದ ಸಂಸ್ಥಾಪಕ ಅರವಿಂದ್ ಕೇಜ್ರಿವಾಲ್ ಮುಂದಿದ್ದಾರೆ ಎಂದು ಟೈಮ್ ಪ್ರಕಟಿಸಿದೆ. ಅತಿ ಹೆಚ್ಚು ಶೇಕಡಾವಾರು ಜನರು ಕೇಜ್ರಿವಾಲ್ ಪರವಾಗಿ 'ಹೌದು' ಮತಗಳನ್ನು ಚಲಾಯಿಸಿದ್ದಾರೆ.

45 ವರ್ಷದ ಅರವಿಂದ್ ಕೇಜ್ರಿವಾಲ್ ಅವರ ಪರ 261,114 ಪ್ರಭಾವಿ 'ಹೌದು' ಎಂದು ಮತ ಹಾಕಿದ್ದಾರೆ. 63 ವರ್ಷದ ಮೋದಿ ಅವರ ಪರ 164,572 ಮತಗಳು ಬಿದ್ದಿವೆ. ಕುತೂಹಲದ ಸಂಗತಿ ಎಂದರೆ, ಮೋದಿ ಅವರನ್ನು ಟೈಮ್ ಪ್ರಭಾವಿ 100 ಪಟ್ಟಿಯಲ್ಲಿ ಸೇರಿಸಿಕೊಳ್ಳಬೇಕೇ? ಬೇಡವೇ? ಎಂಬ ಸಮೀಕ್ಷೆಯಲ್ಲಿ ಮೋದಿ ವಿರುದ್ಧ 166,260 ಮತ ಬಿದ್ದಿತ್ತು. ಒಟ್ಟಾರೆ ಸುಮಾರು 3.2 ಮಿಲಿಯನ್ ಮತಗಳು ಬಿದ್ದಿದ್ದು, 'yes' ಎಂದು ಯಾರಿಗೆ ಮತ ಬೀಳುವುದೋ ಅವರನ್ನು ವಿಜಯಿ ಎಂದು ಘೋಷಿಸಲಾಗುತ್ತದೆ.
ಇತರ ಎಲ್ಲ ಪ್ರಭಾವಿಗಳಿಗಿಂತಲೂ ಅತಿ ಹೆಚ್ಚಿನ 'ಇಲ್ಲ' ಮತಗಳನ್ನು ಗಳಿಸಿರುವ ಮೋದಿ, ಪ್ರಸಿದ್ಧ ಗಾಯಕರಾದ ಕ್ಯಾಟಿ ಪೆರಿ, ಜಸ್ಟಿನ್ ಬೀಬರ್, ರಿಹಾನಾ ಅವರನ್ನು ಮೀರಿಸಿದ್ದಾರೆ. ಕೇಜ್ರಿವಾಲ್ ಮತ್ತು ಮೋದಿ ಅವರ ನಂತರದ ಸ್ಥಾನವನ್ನು ಈಜಿಪ್ಟ್ ಸೇನಾ ಕಮಾಂಡರ್ ಅಬ್ದುಲ್ ಫತಾಹ್ ಅಲ್ ಸೈಸಿ ಪಡೆದಿದ್ದಾರೆ. ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ (43) ಅವರು 96,070 ಮತಗಳೊಂದಿಗೆ ಪಟ್ಟಿಯಲ್ಲಿ 40ನೇ ಸ್ಥಾನ ಗಳಿಸಿದ್ದಾರೆ. ಉಳಿದಂತೆ ಬಿಯಾನ್ಸ್, ಜರೇಡ್ ಲೆಟೋ, ಲುಪಿತಾ ನ್ಯಾನ್ಗೊ, ಲೇಡಿ ಗಾಗಾ, ಡಾಫ್ಟ್ ಪಂಕ್ ಮುಂತಾದವರು ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.(ಪಿಟಿಐ)












Click it and Unblock the Notifications