Delhi Election: ಚುನಾವಣೆಗೂ ಮುನ್ನ ಅರವಿಂದ್ ಕೇಜ್ರಿವಾಲ್‌ಗೆ ಶಾಕ್ ಕೊಟ್ಟ ಹರಿಯಾಣ ಪೊಲೀಸರು
ದೆಹಲಿ ವಿಧಾನಸಭಾ ಚುನಾವಣೆಗೆ ಒಂದು ದಿನ ಇರುವಾಗಲೇ ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಹರಿಯಾಣ ಪೊಲೀಸರು ಶಾಕ್ ಕೊಟ್ಟಿದ್ದಾರೆ. ಯಮುನಾ ನದಿ ನೀರಿನ ವಿಚಾರದಲ್ಲಿ ಹರಿಯಾಣ ವಿರುದ್ಧ ಆರೋಪ ಮಾಡಿದ್ದ ಅರವಿಂದ್ ಕೇಜ್ರಿವಾಲ್ ಹೇಳಿಕೆಯನ್ನು ಹರಿಯಾಣ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು ಇದೀಗ ಎಫ್‌ಐಆರ್ ದಾಖಲು ಮಾಡಿದೆ.
ಹರಿಯಾಣ ಯಮುನಾ ನದಿಯ ನೀರನ್ನು ಉದ್ದೇಶಪೂರ್ವಕವಾಗಿಯೇ ವಿಷಪೂರಿತಗೊಳಿಸುತ್ತದೆ ಎಂದು ಅವರು ನೀಡಿರುವ ಹೇಳಿಕೆ ವಿರುದ್ಧ ಹರಿಯಾಣ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಭಾರತೀಯ ನ್ಯಾಯ ಸಂಹಿತೆಯ ವಿವಿಧ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಗಲಭೆಯನ್ನು ಪ್ರಚೋದಿಸುವುದು, ದ್ವೇಷ ಹರಡುವುದು, ಹಾನಿ ಮಾಡುವ ಉದ್ದೇಶಿಂದ ಯಾರ ಮೇಲಾದರೂ ಅಪರಾಧದ ಆರೋಪ ಹೊರಿಸುವುದು ಮತ್ತು ನಾಗರಿಕರ ಧಾರ್ಮಿಕ ಭಾವನೆಗಳನ್ನು ಅವಮಾನಿಸಲು ದುರುದ್ದೇಶಪೂರಿತ ಕೃತ್ಯಗಳನ್ನು ಎಸಗುವುದು ಪ್ರಮುಖ ಆರೋಪಗಳಾಗಿವೆ.
ಅರವಿಂದ್ ಕೇಜ್ರಿವಾಲ್ ಹೇಳಿಕೆ ವಿವಾದ
ದೆಹಲಿ ಚುನಾವಣೆ ಪ್ರಚಾರ ಸಂದರ್ಭದಲ್ಲಿ ಅರವಿಂದ್ ಕೇಜ್ರಿವಾಲ್ ನೀಡಿದ ಹೇಳಿಕೆ ಇದೀಗ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ಹರಿಯಾಣ ಸರ್ಕಾರವು ದೆಹಲಿಗೆ ವಿಷಪೂರಿತ ನೀರನ್ನು ಪೂರೈಕೆ ಮಾಡುತ್ತಿದೆ, ಹರಿಯಾಣದಲ್ಲಿ ಬಿಜೆಪಿ ಸರ್ಕಾರವಿದ್ದು ದೆಹಲಿಗೆ ಸರಬರಾಜು ಮಾಡುವ ನೀರಿನಲ್ಲಿ ವಿಷ ಬೆರೆಸಲಾಗುತ್ತಿದೆ ಎನ್ನುವ ಅರ್ಥದ ಹೇಳಿಕೆಗಳನ್ನ ನೀಡಿದ್ದರು.
ಅರವಿಂದ್ ಕೇಜ್ರಿವಾಲ್ ಅವರ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿದ್ದ ಚುನಾವಣಾ ಆಯೋಗವು ತಮ್ಮ ಆರೋಪಗಳಿಗೆ ಸರಿಯಾದ ಸಾಕ್ಷಿ ಒದಗಿಸುವಂತೆ ನೋಟಿಸ್ ಕೊಟ್ಟಿತ್ತು. ಇದಕ್ಕೆ ಉತ್ತರ ಕೊಟ್ಟಿದ್ದ ಅರವಿಂದ್ ಕೇಜ್ರಿವಾಲ್ ನಮ್ಮಲ್ಲಿ ನಾಲ್ಕು ಬಾಟಲಿಗಳಲ್ಲಿ ನೀರು ಇದ್ದು, ಪ್ರತಿಯೊಬ್ಬರಿಗೂ ಕಳಿಸುತ್ತೇನೆ ನೀವು ಕುಡಿದು ನಮಗೆ ತೋರಿಸಿ ಆಗ ನಾವು ನಂಬುತ್ತೇನೆ ಎಂದು ಬರೆದಿದ್ದರು.
ದೆಹಲಿ ಜಲಮಂಡಳಿತಿಂದ ಬಂದ ಪತ್ರವನ್ನು ಉಲ್ಲೇಖಿಸಿದ್ದ ಅವರು, ಯಮುನಾ ನದಿಯಲ್ಲಿ ಅಮೋನಿಯಾ ಮಟ್ಟವು ಸಾಮಾನ್ಯಕ್ಕಿಂತ 700 ಪಟ್ಟು ಹೆಚ್ಚಿಗೆ ಇದ್ದು ಅದು ಮಾನವನ ಆರೋಗ್ಯಕ್ಕೆ ಅತ್ಯಂತ ವಿಷಕಾರಿ ಎಂದು ಹೇಳಿದ್ದರು.
ಅಮೋನಿಯಾ ಮಟ್ಟ ಹೆಚ್ಚಿರುವುದನ್ನು ಒಪ್ಪಿಕೊಂಡಿರುವ ಚುನಾವಣಾ ಆಯೋಗವು, "ದೆಹಲಿಯಲ್ಲಿ ನರಮೇಧ ಉಂಟುಮಾಡಲು ಹರಿಯಾಣ ಸರ್ಕಾರ ಯಮುನಾ ನದಿಗೆ ವಿಷವನ್ನು ಸೇರಿಸಿದೆ" ಎನ್ನುವ ಅರವಿಂದ್ ಕೇಜ್ರಿವಾಲ್ ಅವರ ಹೇಳಿಕೆಯು ಎರಡು ರಾಷ್ಟ್ರಗಳ ನಡುವಿನ ಯುದ್ಧದ ಕೃತ್ಯಕ್ಕೆ ಸಮನಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿತ್ತು.
ಯಮುನಾ ನದಿ ಸ್ವಚ್ಛತೆ ವಿಚಾರದಲ್ಲಿ ಎಎಪಿ, ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಈ ಬಾರಿ ಕೂಡ ಚುನಾವಣಾ ಅಸ್ತ್ರವನ್ನಾಗಿ ಮಾಡಿಕೊಂಡಿವೆ. ದೆಹಲಿ ಮತದಾರ ಬುಧವಾರ ಮತಯಂತ್ರದಲ್ಲಿ ಜನತಾ ತೀರ್ಪು ಕೊಡಲಿದ್ದಾನೆ.












Click it and Unblock the Notifications