Jammu & Kashmir: ಐವರು ಯೋಧರು ಹುತಾತ್ಮ: ಪಾಪಿ ಉಗ್ರರ ದಾಳಿ?
ಶ್ರೀನಗರ: ಕಣಿವೆ ರಾಜ್ಯದಲ್ಲಿ ಉಗ್ರರ ಉಪಟಳ ಮುಂದುವರಿದೆ. ಭಾರತೀಯ ಸೇನೆಯನ್ನೇ ಪದೇಪದೆ ಟಾರ್ಗೆಟ್ ಮಾಡಿ ಪಾಪಿ ಉಗ್ರರ ಪಡೆ ದಾಳಿ ನಡೆಸುತ್ತಿದೆ. ಇದೀಗ ಜಮ್ಮು & ಕಾಶ್ಮೀರದ (jammu and kashmir) ಪೂಂಚ್ ಜಿಲ್ಲೆಯಲ್ಲಿ ಉಗ್ರರು ಮತ್ತೆ ಅಟ್ಟಹಾಸ ಮೆರೆದಿದ್ದು, ಈ ಘಟನೆಯಲ್ಲಿ ಐವರು ಯೋಧರು ಹುತಾತ್ಮರಾಗಿದ್ದಾರೆ. ರಜೌರಿ ಸೆಕ್ಟರ್‌ನಲ್ಲಿ ಈ ಭೀಕರ ಘಟನೆ ನಡೆದಿದೆ.
ಪ್ರಾಥಮಿಕ ಮಾಹಿತಿಗಳ ಪ್ರಕಾರ ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ಭಯೋತ್ಪಾದಕರ ದಾಳಿಯ ಪರಿಣಾಮ ಸೇನಾ ವಾಹನದಲ್ಲಿ ಸ್ಪೋಟ ಸಂಭವಿಸಿದೆ. ಈ ಘಟನೆ ಬಳಿಕ ಬೆಂಕಿ ಹೊತ್ತುಕೊಂಡು ಐವರು ಯೋಧರು ಹುತಾತ್ಮರಾಗಿದ್ದಾರೆ. ಭೀಕರ ಘಟನೆ ಕಣಿವೆ ರಾಜ್ಯದಲ್ಲಿ ಮತ್ತೆ ಸಂಚಲನ ಸೃಷ್ಟಿಮಾಡಿದೆ. ರಜೌರಿ ವಲಯದ ಭಿಂಬರ್ ಗಲ್ಲಿಯಿಂದ ಪೂಂಚ್ ಮಾರ್ಗದಲ್ಲಿ ಸಂಚರಿಸುತ್ತಿದ್ದ ಸೇನಾ ವಾಹನದ ಮೇಲೆ ಭಯೋತ್ಪಾದಕರು ದಾಳಿ ಮಾಡಿದ್ದಾರೆ. ಮತ್ತೊಂದು ಕಡೆ ಉಗ್ರರು ಗ್ರೆನೆಡ್ ದಾಳಿ ನಡೆಸಿರುವ ಸಾಧ್ಯತೆ ಇದೆ ಎಂಬ ಅನುಮಾನ ವ್ಯಕ್ತವಾಗಿದೆ.

ಉಗ್ರರಿಂದಲೇ ನಡೆಯಿತಾ ಭೀಕರ ದಾಳಿ?
ಅಂದಹಾಗೆ ಉಗ್ರರು ಗ್ರೆನೆಡ್ ದಾಳಿ ನಡೆಸಿದ ಕಾರಣಕ್ಕೆ ಸೇನಾ ವಾಹನಕ್ಕೆ ಬೆಂಕಿ ಹೊತ್ತಿಕೊಂಡಿದೆ ಎನ್ನಲಾಗುತ್ತಿದೆ. ಪ್ರಾಥಮಿಕ ಮಾಹಿತಿ ಪ್ರಕಾರ ಐವರು ಯೋಧರು ಸಜೀವ ದಹನರಾಗಿದ್ದಾರೆ. ದರ್ಘಟನೆಯಲ್ಲಿ ಭಯೋತ್ಪಾದನೆ ನಿಗ್ರಹ ಕಾರ್ಯಾಚರಣೆಗೆ ನೇಮಕವಾಗಿದ್ದ ರಾಷ್ಟ್ರೀಯ ರೈಫಲ್ ಯುನಿಟ್‌ನ ಐವರು ಯೋಧರು ಮೃತಪಟ್ಟಿದ್ದಾರೆ. ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಸೇನೆ ಮತ್ತು ಪೊಲೀಸ್ ಸಿಬ್ಬಂದಿ ಭಯೋತ್ಪಾದಕರಿಗಾಗಿ ತೀವ್ರ ಹುಡುಕಾಟ ಆರಂಭಿಸಿದ್ದಾರೆ. ಮತ್ತೊಂದು ಕಡೆ ಗಂಭೀರವಾಗಿ ಗಾಯಗೊಂಡಿದ್ದ ಓರ್ವ ಯೋಧನನ್ನು ರಜೌರಿಯ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಯೋಧ ಒಂದಷ್ಟು ಚೇತರಿಸಿಕೊಂಡ ಬಳಿಕ ಉಗ್ರರ ಅಸಲಿಯತ್ತು ತಿಳಿಯಲಿದೆ.
ಪುಲ್ವಾಮಾ ದಾಳಿಯ ಭೀಕರತೆ
4 ವರ್ಷಗಳ ಹಿಂದೆ ನಡೆದಿದ್ದ ಪುಲ್ವಾಮಾ ದಾಳಿ ಕೂಡ ಉಗ್ರರ ಇಂತಹದ್ದೇ ಭೀಕರ ಕೃತ್ಯಗಳಿಗೆ ಸಾಕ್ಷಿಯಾಗಿತ್ತು. ಫೆಬ್ರವರಿ 14, 2019ರಂದು ಭಾರತೀಯ ಸೇನಾ ವಾಹನದ ಮೇಲೆ ದಾಳಿ ನಡೆದ ಪರಿಣಾಮ 40 ಭಾರತೀಯ ಯೋಧರು ಹುತಾತ್ಮರಾಗಿದ್ದರು. ಜೊತೆಗೆ ಪದೇಪದೆ ಕಣಿವೆ ರಾಜ್ಯದಲ್ಲಿ ಭಾರತೀಯ ಸೇನೆಯನ್ನೇ ಗುರಿಯಾಗಿಸಿಕೊಂಡು ಉಗ್ರರು ಅಟ್ಯಾಕ್ ಮಾಡುತ್ತಿದ್ಧಾರೆ. ಈಗಲೂ ಅಂತಹದ್ದೇ ಕೃತ್ಯ ನಡೆದಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಹೀಗಾಗಿ ಸುತ್ತಮುತ್ತಲ ಪ್ರದೇಶಗಳಲ್ಲಿ ತಪಾಸಣೆ ತೀವ್ರಗೊಂಡಿದೆ. ಘಟನೆ ನಡೆದ ಪ್ರದೇಶದ ಸಮೀಪದಲ್ಲೇ ಉಗ್ರರು ಅಡಗಿರುವ ಸಾಧ್ಯತೆ ಇದ್ದು, ಪಾಪಿ ಉಗ್ರರ ಹೆಡೆಮುರಿ ಕಟ್ಟಲು ಭಾರತೀಯ ಸೇನಾಧಿಕಾರಿಗಳು ಮುಂದಾಗಿದ್ದಾರೆ.
ಪಾಪಿ ಪಾಕಿಸ್ತಾನದ ಬೆಂಬಲ
ಕಣಿವೆ ರಾಜ್ಯದಲ್ಲಿ ಉಗ್ರರು ಇಷ್ಟೊಂದು ಗಾಢವಾಗಿ ಬೇರೂರಲು ಪಾಪಿ ಪಾಕಿಸ್ತಾನದ ಕೈವಾಡ ಕೂಡ ಇದೆ. ಅದರಲ್ಲೂ ಭಾರತಕ್ಕೆ ಉಪಟಳ ನೀಡಲೆಂದೇ ಉಗ್ರರನ್ನ ಪಾಕಿಸ್ತಾನ ಬೆಳೆಸುತ್ತಿದೆ. ಪಾಕ್ ಆಕ್ರಮಿತ ಕಾಶ್ಮೀರ ಉಗ್ರರ ಸ್ವರ್ಗವಾಗುತ್ತಿದೆ. ಇಲ್ಲಿ ತರಬೇತಿ ಪಡೆಯುವ ಉಗ್ರರ ಪಡೆ ಭಾರತದ ಗಡಿಯೊಳಗೆ ನುಸುಳಿ, ಭಾರತೀಯ ಸೇನೆ ಹಾಗೂ ಸೈನಿಕರ ಮೇಲೆ ದಾಳಿ ಮಾಡುತ್ತಿದೆ. ಪುಲ್ವಾಮಾ ದಾಳಿ ಬಳಿಕ ಭಾರತ ಕೂಡ ಸರಿಯಾಗೇ ಪಾಠ ಕಲಿಸಿದೆ. ಆದರೂ ಉಗ್ರರು ಮಾತ್ರ ತಮ್ಮ ಬುದ್ಧಿ ಬಿಡುತ್ತಿಲ್ಲ. ಪಾಕಿಸ್ತಾನದ ರಾಜಕೀಯ ವ್ಯವಸ್ಥೆ ಹಾಳಾಗಿ ಹೋಗಿರುವುದು ಉಗ್ರರಿಗೆ ಮತ್ತಷ್ಟು ಬಲ ನೀಡಿದಂತಾಗಿದೆ.
ಒಟ್ನಲ್ಲಿ ಉಗ್ರರು ಮಾಡಿರುವ ಕಿತಾಪತಿ ಮೇಲ್ನೋಟಕ್ಕೆ ಗೊತ್ತಾಗಿದೆ. ಹೀಗಾಗಿ ಕೃತ್ಯ ಎಸಗಿರುವ ಉಗ್ರರು ಅಲ್ಲಿಂದ ಯಾವುದೇ ಹಂತದಲ್ಲೂ ತಪ್ಪಿಸಿಕೊಂಡು ಹೋಗಬಾರದು ಎಂಬ ಉದ್ದೇಶದಿಂದ ಕಠಿಣ ತಪಾಸಣೆ ನಡೆಸಲಾಗುತ್ತಿದೆ. ಉಗ್ರರು ಕೈಗೆ ಸಿಕ್ಕ ತಕ್ಷಣ ಹೆಡೆಮುರಿ ಕಟ್ಟಲು ಭಾರತೀಯ ಸೈನಿಕರು ಸಜ್ಜಾಗಿದ್ದಾರೆ. ಕಣಿವೆಯಲ್ಲಿ ಮತ್ತೆ ಸೂಕ್ಷ್ಮ ವಾತಾವರಣ ನಿರ್ಮಾಣವಾಗಿ, ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡವಾಗಿದೆ.












Click it and Unblock the Notifications