ಸಿಕ್ಕಿಂ ಹಿಮಪಾತದಲ್ಲಿ ಸಿಲುಕಿ ಇಬ್ಬರು ಯೋಧರು ಹುತಾತ್ಮ
ನವದೆಹಲಿ, ಮೇ 15: ಸಿಕ್ಕಿಂ ಹಿಮಪಾತದಲ್ಲಿ ಸಿಲುಕಿ ಲೆಫ್ಟಿನೆಂಟ್ ಕರ್ನಲ್ ಹಾಗೂ ಯೋಧರೊಬ್ಬರು ಹುತಾತ್ಮರಾಗಿದ್ದಾರೆ.
ಹಿಮಪಾತದಲ್ಲಿ ಲೆಫ್ಟಿನೆಂಟ್ ಕರ್ನಲ್ ರಾಬರ್ಟ್ ಟಿಎ ಮತ್ತು ಸೈನಿಕ ಸಪಾಲ ಸನ್ಮಮುಖ ರಾವ್ ಅವರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಉತ್ತರ ಸಿಕ್ಕಿಂನ ಲುಗ್ನಾಕ್ ಪ್ರದೇಶದಲ್ಲಿ ಇರುವ ಪರ್ವತದಲ್ಲಿ ಈ ಹಿಮಪಾತ ನಡೆದಿದೆ. 16 ಮಂದಿ ಸೈನಿಕರನ್ನು ರಕ್ಷಣೆ ಮಾಡಲಾಗಿದೆ.
ಹಿಮಪಾತದ ನಡುವೆ ಪವಾಡ: 18 ಗಂಟೆ ಹಿಮದಡಿ ಹೂತಿದ್ದರೂ ಬದುಕಿ ಬಂದ ಬಾಲಕಿ
2019ರಲ್ಲಿ ವಿಶ್ವದ ಅತಿ ಎತ್ತರದ ಯುದ್ಧ ಭೂಮಿ ಸಿಯಾಚಿನ್ ಉತ್ತರ ಭಾಗದಲ್ಲಿ ಸಂಭವಿಸಿದ ಹಿಮಪಾತಕ್ಕೆ ನಾಲ್ವರು ಯೋಧರು ಹಾಗೂ ಇಬ್ಬರು ನಾಗರಿಕರು ಬಲಿಯಾಗಿದ್ದರು.
ಯೋಧರು ಎಂದಿನಂತೆ ಗಸ್ತಿನಲ್ಲಿದ್ದಾಗ ಈ ಅವಘಡ ಸಂಭವಿಸಿತ್ತು. ತಕ್ಷಣ ಸೈನಿಕರು ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದು, ಹಿಮದಡಿ ಸಿಲುಕಿದ ದುರ್ಗ ರೆಜಿಮೆಂಟ್‍ನ 6 ಯೋಧರು ಮತ್ತು ಇಬ್ಬರು ನಾಗರಿಕರನ್ನು ಹೊರ ತೆಗೆದು ಹತ್ತಿರದ ಮಿಲಿಟರಿ ಆಸ್ಪತ್ರೆಗೆ ರವಾನಿಸಿದ್ದರು. ಆದರೆ ಅದರಲ್ಲಿ ಆರು ಮಂದಿ ತೀವ್ರವಾಗಿ ಗಾಯಗೊಂಡಿದ್ದ ಕಾರಣ ಮೃತಪಟ್ಟಿದ್ದರು.
ಈ ವಿಚಾರದ ಬಗ್ಗೆ ಮಾಹಿತಿ ನೀಡಿರುವ ಭಾರತೀಯ ಸೇನೆಯ ಹಿರಿಯ ಅಧಿಕಾರಿಗಳು, ಲುಗ್ನಾಕ್ ಪ್ರದೇಶದಲ್ಲಿ ಒಬ್ಬರು ಕರ್ನಲ್ ಒಳಗೊಂಡಂತೆ 18 ಜನ ಭಾರತೀಯ ಸೈನಿಕರ ತಂಡ ಕಾರ್ಯನಿರ್ವಹಿಸುತ್ತಿತ್ತು.
ಈ ವೇಳೆ ಹಿಮಪಾತ ಸಂಭವಿಸಿದೆ. ಆಗ ತಕ್ಷಣ ಸ್ಥಳಕ್ಕೆ ಹೋದ ನಮ್ಮ ರಕ್ಷಣಾ ತಂಡ ಹಿಮಪಾತದಲ್ಲಿ ಸಿಲುಕಿದ್ದ 18 ಜನರ ಪೈಕಿ 16 ಜನರನ್ನು ಕಾಪಾಡಿದ್ದಾರೆ. ಆದರೆ ಕರ್ನಲ್ ಮತ್ತು ಓರ್ವ ಯೋಧ ಹುತಾತ್ಮರಾಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
2016ರಲ್ಲಿ ಸಿಯಾಚಿನ್‍ನಲ್ಲಿ ಸಂಭವಿಸಿದ್ದ ಭಾರೀ ಹಿಮಪಾತದಲ್ಲಿ ಸಿಲುಕಿ ಕರ್ನಾಟಕದ ವೀರಯೋಧ ಹನುಮಂತಪ್ಪ ಕೊಪ್ಪದ್ 6 ದಿನಗಳ ಬಳಿಕ ಪತ್ತೆಯಾಗಿದ್ದರು. ಅವರನ್ನು ಜೀವಂತವಾಗಿ ಪತ್ತೆ ಮಾಡಿದ್ದರೂ ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದರು ಬಳಿಕ ಸಾವನ್ನಪ್ಪಿದ್ದರು.
ಸಾವಿಗೆ ಸವಾಲೊಡ್ಡಿ ಮಂಜುಗಡ್ಡೆಗಳ ಮಧ್ಯೆ ಜೀವನ್ಮರಣ ಹೋರಾಟ ನಡೆಸಿದ್ದ ವೀರಯೋಧ ಹನುಮಂತಪ್ಪ ಅವರಿಗೆ ಮರಣೋತ್ತರ ಶೌರ್ಯ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.