ರಾಹುಲ್ ಗಾಂಧಿ ಬಳಿಕ ಮತ್ತೊಬ್ಬ ಸಂಸದ ಅನರ್ಹ!
ನವದೆಹಲಿ: ರಾಹುಲ್ ಗಾಂಧಿ ಲೋಕಸಭೆ ಸದಸ್ಯತ್ವ ಕಳೆದುಕೊಂಡ ಕೆಲವೇ ದಿನದಲ್ಲಿ ಮತ್ತೊಬ್ಬ ಸಂಸದನಿಗೂ ಇದೇ ಸ್ಥಿತಿ ಎದುರಾಗಿದೆ. ಬಹುಜನ ಸಮಾಜ ಪಕ್ಷದ ಸಂಸದ ಅಫ್ಜಲ್ ಅನ್ಸಾರಿ ಲೋಕಸಭೆ ಸದಸ್ಯತ್ವ ರದ್ದುಗೊಳಿಸಲಾಗಿದೆ. ಹಾಗಾದ್ರೆ ಅಫ್ಜಲ್ ಅನ್ಸಾರಿಗೆ ಶಿಕ್ಷೆ ಅಗಿದ್ದೇಕೆ, ಯಾವ ಪ್ರಕರಣದಲ್ಲಿ ಅಫ್ಜಲ್ ಅನ್ಸಾರಿ ಸದಸ್ಯತ್ವ ಕಳೆದುಕೊಂಡಿದ್ದು ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿ ತಿಳಿಯೋಣ.
ಕಳೆದ ಶನಿವಾರ ಉತ್ತರ ಪ್ರದೇಶದ ಜೈಲಿನಲ್ಲಿರುವ ಮಾಫಿಯಾ ಡಾನ್ ಮುಖ್ತಾರ್ ಅನ್ಸಾರಿಗೆ ಘಾಜಿಪುರದ ಜನಪ್ರತಿನಿಧಿಗಳ ನ್ಯಾಯಾಲಯ ಕೊಲೆ ಹಾಗೂ ಅಪಹರಣ ಪ್ರಕರಣ ಒಂದರಲ್ಲಿ 10 ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಈ ಶಿಕ್ಷೆ ಪ್ರಕಟವಾದ ಕೆಲವೇ ಗಂಟೆಗಳ ನಂತರ ಅನ್ಸಾರಿ ಸಹೋದರ ಹಾಗೂ ಬಿಎಸ್‌ಪಿ ಸಂಸದ ಅಫ್ಜಲ್ ಅನ್ಸಾರಿಗೂ ಅದೇ ಕೇಸ್‌ನಲ್ಲಿ 2007ರ ಗ್ಯಾಂಗ್‌ಸ್ಟರ್ಸ್ ಕಾಯ್ದೆಯಡಿ 4 ವರ್ಷ ಸಜೆ ವಿಧಿಸಿ ಆದೇಶ ಹೊರಡಿಸಲಾಗಿತ್ತು. ಈ ಮೂಲಕ ಅಫ್ಜಲ್ ಅನ್ಸಾರಿ ಲೋಕಸಭೆ ಸದಸ್ಯತ್ವ ಕಳೆದುಕೊಳ್ಳುವ ಭೀತಿ ಎದುರಾಗಿತ್ತು. ಈಗ ಅಧಿಕೃತವಾಗಿ ಅಫ್ಜಲ್ ಅನ್ಸಾರಿ ಲೋಕಸಭೆ ಸದಸ್ಯತ್ವ ರದ್ದಾಗಿದೆ.

ಪ್ರಕರಣದ ಹಿನ್ನೆಲೆ ಏನು?
ಬಿಜೆಪಿ ಶಾಸಕ ಕೃಷ್ಣಾನಂದ ರೈ ಅಪಹರಣ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ಯಾಂಗ್‌ಸ್ಟರ್, ರಾಜಕಾರಣಿಗಳಿಗೆ ಶಿಕ್ಷೆ ನೀಡಲಾಗಿತ್ತು. ಮುಖ್ತಾರ್ ಅನ್ಸಾರಿಗೆ 5 ಲಕ್ಷ ರೂಪಾಯಿ ಹಾಗೂ ಅವರ ಸಹೋದರ ಅಫ್ಜಲ್ ಅನ್ಸಾರಿಗೆ 1 ಲಕ್ಷ ರೂಪಾಯಿ ದಂಡ ಕೂಡ ವಿಧಿಸಲಾಗಿತ್ತು. ಮತ್ತೊಂದ್ಕಡೆ ಸಂಸತ್ ನಿಯಮದ ಪ್ರಕಾರ 2 ವರ್ಷ ಅಥವಾ ಅದಕ್ಕಿಂತ ಹೆಚ್ಚು ಜೈಲು ಶಿಕ್ಷೆಗೆ ಗುರಿಯಾಗುವ ಸದಸ್ಯ ಸ್ವಯಂಚಾಲಿತವಾಗಿ ಸಂಸತ್ ಸದಸ್ಯತ್ವದಿಂದ ಅನರ್ಹನಾಗುತ್ತಾರೆ. ಹೀಗಾಗಿ 4 ವರ್ಷ ಸೆರೆವಾಸಕ್ಕೆ ಗುರಿಯಾಗಿರುವ ಅಫ್ಜಲ್ ಅನ್ಸಾರಿ ಲೋಕಸಭೆ ಸದಸ್ಯತ್ವ ಈಗ ರದ್ದುಗೊಂಡಿದೆ.
ರಾಹುಲ್ ಬಳಿಕ ಮತ್ತೊಬ್ಬ ಸಂಸದ ಅನರ್ಹ
ಇತ್ತೀಚೆಗಷ್ಟೇ ರಾಹುಲ್ ಗಾಂಧಿ ವಿಚಾರದಲ್ಲಿ ಹೀಗೆ ಆಗಿತ್ತು. ಮಾನಹಾನಿ ಪ್ರಕರಣದಲ್ಲಿ ಇತ್ತೀಚೆಗಷ್ಟೇ 2 ವರ್ಷ ಜೈಲು ಶಿಕ್ಷೆಗೆ ಗುರಿಯಾದ ಬಳಿಕ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಇದೇ ನಿಯಮದ ಅಡಿಯಲ್ಲಿ ಲೋಕಸಭೆ ಸದಸ್ಯತ್ವ ಕಳೆದುಕೊಂಡಿದ್ದರು. ಈ ಘಟನೆ ನಡೆದ ಕೆಲವೇ ದಿನದಲ್ಲಿ ಮತ್ತೊಂದು ಘಟನೆ ನಡೆದಿದೆ. 4 ವರ್ಷ ಸಜೆ ಶಿಕ್ಷೆಗೆ ಗುರಿ ಆಗಿರುವ ಅಫ್ಜಲ್ ಅನ್ಸಾರಿ ಲೋಕಸಭೆ ಸದಸ್ಯತ್ವ ರದ್ದಾಗಿದೆ.
ಯಾವೆಲ್ಲಾ ಸಂಸದರು ಅನರ್ಹ?
ಅಫ್ಜಲ್ ಅನ್ಸಾರಿ ಎಪ್ರಿಲ್ 29 ರಿಂದ ಸಂಸದ ಸ್ಥಾನದಿಂದ ಅನರ್ಹಗೊಂಡಿದ್ದಾರೆ ಎಂದು ಲೋಕಸಭಾ ಕಾರ್ಯಾಲಯ ಈಗ ಪ್ರಕಟಣೆ ಹೊರಡಿಸಿದೆ. 1951ರ ಜನಪ್ರತಿನಿಧಿ ಕಾಯ್ದೆ ಅನ್ವಯ ಈ ಕ್ರಮ ಕೈಗೊಳ್ಳಲಾಗಿದೆ. ಇನ್ನು ರಾಹುಲ್ ಗಾಂಧಿಗೂ ಮೊದಲು ಉತ್ತರಪ್ರದೇಶದ ಶಾಸಕರಾಗಿದ್ದ ಆಜಂ ಖಾನ್, ಅವರ ಪುತ್ರ ಅಬ್ದುಲ್ಲಾ ಆಜಂ ಹಾಗೂ ವಿಕ್ರಮ ಸೈನಿ ತಮ್ಮ ಸದಸ್ಯತ್ವ ಕಳೆದುಕೊಂಡಿದ್ದಾರೆ. ಈಗ ಅಫ್ಜಲ್ ಅನ್ಸಾರಿ ಲೋಕಸಭೆ ಸದಸ್ಯತ್ವ ರದ್ದಾಗಿದೆ.
ಕೃಷ್ಣಾನಂದ ರೈ ತೀರ್ಪಿಗೆ ಸ್ವಾಗತ
2005ರಲ್ಲಿ ಘಾಜಿಪುರದಲ್ಲಿ ಬಿಜೆಪಿ ಶಾಸಕ ಕೃಷ್ಣಾನಂದ ರೈ ಹತ್ಯೆಯಾಗಿತ್ತು. ಇದೇ ಪ್ರಕರಣದ ಸಂಬಂಧ ಶನಿವಾರ ತೀರ್ಪು ಪ್ರಕಟವಾಗಿತ್ತು. ಇನ್ನು ತೀರ್ಪಿನ ಹಿನ್ನೆಲೆ ಉತ್ತರ ಪ್ರದೇಶದಲ್ಲಿ ಮಾಫಿಯಾ ಆಡಳಿತ ಕೊನೆಗೊಂಡಿದೆ ಎಂದು ಕೃಷ್ಣಾನಂದ ಅವರ ಪತ್ನಿ ಹೇಳಿದ್ದರು. ಅಲ್ಲದೆ ತಮಗೆ ನ್ಯಾಯಾಂಗದಲ್ಲಿ ನಂಬಿಕೆ ಇದೆ ಎಂದಿದ್ದರು. ಹೀಗೆ ತೀರ್ಪು ಪ್ರಕಟವಾಗಿ 2 ದಿನದ ಒಳಗೆ ಲೋಕಸಭಾ ಕಾರ್ಯಾಲಯ ಕ್ರಮ ಕೈಗೊಂಡಿದೆ. ಅಫ್ಜಲ್ ಅನ್ಸಾರಿ ಲೋಕಸಭೆ ಸದಸ್ಯತ್ವ ರದ್ದಗೊಳಿಸಿ ಆದೇಶ ಹೊರಡಿಸಲಾಗಿದೆ.
ಒಟ್ನಲ್ಲಿ ಲೋಕಸಭಾ ಚುನಾವಣೆಗೆ ಕೇವಲ 1 ವರ್ಷ ಇರುವಾಗಲೇ, ಕೆಲವೇ ತಿಂಗಳ ಅಂತರದಲ್ಲಿ ದೇಶದ ಇಬ್ಬರು ಸಂಸದರ ಲೋಕಸಭಾ ಸದಸ್ಯತ್ವ ರದ್ದಾಗಿದೆ. ರಾಹುಲ್ ಗಾಂಧಿ ಬಳಿಕ ಈಗ ಅಫ್ಜಲ್ ಅನ್ಸಾರಿ ಲೋಕಸಭೆ ಸದಸ್ಯತ್ವ ರದ್ದುಗೊಂಡಿದ್ದು, 1951ರ ಜನಪ್ರತಿನಿಧಿ ಕಾಯ್ದೆ ಅನ್ವಯ ಈ ಕ್ರಮ ಕೈಗೊಳ್ಳಲಾಗಿದೆ.












Click it and Unblock the Notifications