ಪ್ರೇಮಿಗಳ ದಿನದಂದು 'Cow Hug Day' ಆಚರಣೆ ಇಲ್ಲ: ಆದೇಶ ಹಿಂಪಡೆದ ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿ- ಏಕೆ ಈ ನಿರ್ಧಾರ?
ಪ್ರೇಮಿಗಳ ದಿನದಂದು 'Cow Hug Day' ಆಚರಣೆಯ ಆದೇಶವನ್ನು ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿ (AWBI) ಹಿಂಪಡೆದಿದೆ
ನವದೆಹಲಿ, ಫೆಬ್ರವರಿ 10: ಪ್ರೇಮಿಗಳ ದಿನದಂದು 'Cow Hug Day' ಆಚರಣೆಯ ಆದೇಶವನ್ನು ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿ (AWBI) ಹಿಂಪಡೆದಿದೆ. ನೆಟಿಜನ್‌ಗಳು ಮತ್ತು ಇತರ ಪ್ರಾಣಿ ಹಕ್ಕುಗಳ ಸಂಘಟನೆಗಳು ಸೇರಿದಂತೆ ವಿವಿಧ ವಲಯಗಳಿಂದ ಟೀಕೆಗಳು ಕೇಳಿಬಂದ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಬಂದಿದೆ. ಶುಕ್ರವಾರ ಫೆಬ್ರವರಿ 14 ರಂದು 'Cow Hug Day' ಆಚರಿಸಲು ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿ ಆದೇಶಿಸಿತ್ತು.
'ಸಕ್ಷಮ ಪ್ರಾಧಿಕಾರ ಮತ್ತು ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯದ ನಿರ್ದೇಶನದಂತೆ, ಫೆಬ್ರವರಿ 14 ರಂದು Cow Hug Day ಆಚರಿಸಲು AWBI ಹೊರಡಿಸಿದ ಮನವಿಯನ್ನು ಹಿಂಪಡೆಯಲಾಗಿದೆ' ಎಂದು ಮಂಡಳಿಯ ಕಾರ್ಯದರ್ಶಿ ಎಸ್ ಕೆ ದತ್ತಾ ಅವರು ಪೋಸ್ಟ್ ಮಾಡಿದ್ದಾರೆ. ಇದು AWBI ವೆಬ್‌ಸೈಟ್‌ನಲ್ಲಿ ಪ್ರಕಟಗೊಂಡಿದೆ.
ಪ್ರಾಣಿ ಕಲ್ಯಾಣ ಕಾನೂನುಗಳ ಶಾಸನಬದ್ಧ ಸಲಹಾ ಸಂಸ್ಥೆಯಾದ ಮಂಡಳಿಯು ಫೆಬ್ರುವರಿ 6 ರಂದು ಹಸು ಪ್ರೇಮಿಗಳಿಗೆ ಫೆಬ್ರುವರಿ 14 ರ ಪ್ರೇಮಿಗಳ ದಿನದಂದು 'Cow Hug Day' ಎಂದು ಆಚರಿಸಲು ಮನವಿ ಮಾಡಿತು. ವೈದಿಕ ಸಂಪ್ರದಾಯಗಳು ಬಹುತೇಕ ಅಳಿವಿನ ಅಂಚಿನಲ್ಲಿವೆ ಎಂದು ಹೇಳಿತ್ತು.

'ಗೋವಿನ ಅಪಾರ ಪ್ರಯೋಜನದ ದೃಷ್ಟಿಯಿಂದ, ಹಸುವನ್ನು ತಬ್ಬಿಕೊಳ್ಳುವುದು ಭಾವನಾತ್ಮಕ ಶ್ರೀಮಂತಿಕೆಯನ್ನು ತರುತ್ತದೆ. ಇದು ನಮ್ಮ ವೈಯಕ್ತಿಕ ಮತ್ತು ಸಾಮೂಹಿಕ ಸಂತೋಷವನ್ನು ಹೆಚ್ಚಿಸುತ್ತದೆ. ಆದ್ದರಿಂದ, ಎಲ್ಲಾ ಹಸು ಪ್ರೇಮಿಗಳು ಫೆಬ್ರವರಿ 14 ಅನ್ನು Cow hug day ಎಂದು ಆಚರಿಸಬಹುದು. ತಾಯಿ ಹಸುಗಳ ಪ್ರಾಮುಖ್ಯತೆಯನ್ನು ಗಮನದಲ್ಲಿಟ್ಟುಕೊಂಡು ನಮ್ಮ ಜೀವನವನ್ನು ಸಕಾರಾತ್ಮಕ ಶಕ್ತಿಯಿಂದ ತುಂಬಬಹುದು' ಎಂದು ಮಂಡಳಿಯು ಸೋಮವಾರ ಹೊರಡಿಸಿದ ತನ್ನ ಮನವಿಯಲ್ಲಿ ತಿಳಿಸಿತ್ತು.
AWBI ಸಹಾಯಕ ಕಾರ್ಯದರ್ಶಿ ಪ್ರಾಚಿ ಜೈನ್ ಅವರು ಮಾತನಾಡಿ, ಹಸು ಪ್ರೇಮಿಗಳಿಗೆ ಇಂತಹ ಮನವಿಯನ್ನು ಮಂಡಳಿಯಿಂದ ಮೊದಲ ಬಾರಿಗೆ ನೀಡಲಾಗಿದೆ. ಈ ವರ್ಷ ಸಮಯದ ಕೊರತೆಯಿಂದಾಗಿ ಈ ಸಂದರ್ಭದಲ್ಲಿ ಯಾವುದೇ ವಿಶೇಷ ಕಾರ್ಯಕ್ರಮವನ್ನು ಯೋಜಿಸಿಲ್ಲ ಎಂದು ಹೇಳಿದ್ದಾರೆ. ಮಂಡಳಿಯು ಮುಂದಿನ ವರ್ಷದಿಂದ ಅದರ ಸುತ್ತಲೂ ಕೆಲವು ಕಾರ್ಯಕ್ರಮಗಳನ್ನು ಯೋಜಿಸಬಹುದು ಎಂದು ಅವರು ಹೇಳಿದ್ದಾರೆ.

ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯಿದೆ, 1960 ರ ಸೆಕ್ಷನ್ 4 ರ ಅಡಿಯಲ್ಲಿ 1962 ರಲ್ಲಿ ಸ್ಥಾಪಿತವಾದ ಮಂಡಳಿಯು ಪ್ರಾಣಿ ಕಲ್ಯಾಣ ಸಂಸ್ಥೆಗಳಿಗೆ ಅನುದಾನವನ್ನು ನೀಡುತ್ತದೆ. ಪ್ರಾಣಿ ಕಲ್ಯಾಣ ಸಮಸ್ಯೆಗಳ ಬಗ್ಗೆ ಕೇಂದ್ರ ಸರ್ಕಾರಕ್ಕೆ ಸಲಹೆ ನೀಡುತ್ತದೆ.

'ಗೋವು ಭಾರತೀಯ ಸಂಸ್ಕೃತಿ ಮತ್ತು ಗ್ರಾಮೀಣ ಆರ್ಥಿಕತೆಯ ಬೆನ್ನೆಲುಬು, ನಮ್ಮ ಜೀವನವನ್ನು ಉಳಿಸಿಕೊಳ್ಳುತ್ತದೆ. ಗೋ ಸಂಪತ್ತು ಮತ್ತು ಜೀವವೈವಿಧ್ಯತೆಯನ್ನು ಪ್ರತಿನಿಧಿಸುತ್ತದೆ ಎಂಬುದು ನಮಗೆಲ್ಲರಿಗೂ ತಿಳಿದಿದೆ. ಮನುಕುಲಕ್ಕೆ ಸಕಲ ಸಂಪತ್ತನ್ನು ನೀಡುವ ತಾಯಿಯಂತಹ ಪೋಷಣೆಯ ಸ್ವಭಾವದಿಂದಾಗಿ ಇದನ್ನು 'ಕಾಮಧೇನು' ಮತ್ತು 'ಗೌಮಾತಾ' ಎಂದು ಕರೆಯಲಾಗುತ್ತದೆ ಎಂಬುದಾಗಿ ಮಂಡಳಿಯು ಫೆಬ್ರವರಿ 6 ರಂದು ತನ್ನ ಮನವಿಯಲ್ಲಿ ತಿಳಿಸಿತ್ತು.












Click it and Unblock the Notifications