Andhra Train Accident: ಸಾವಿನ ಸಂಖ್ಯೆ 6ಕ್ಕೆ ಏರಿಕೆ: ಘಟನೆಯ ಮಾಹಿತಿ ಪಡೆದ ಪ್ರಧಾನಿ ನರೇಂದ್ರ ಮೋದಿ
ಆಂಧ್ರಪ್ರದೇಶದ ವಿಜಯನಗರಂ ಜಿಲ್ಲೆಯಲ್ಲಿ ಭಾನುವಾರ ಎರಡು ಪ್ಯಾಸೆಂಜರ್ ರೈಲುಗಳು ಡಿಕ್ಕಿ ಹೊಡೆದು ಕನಿಷ್ಠ ಆರು ಜನರು ಸಾವನ್ನಪ್ಪಿದ್ದಾರೆ ಮತ್ತು 25 ಮಂದಿ ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಪೊಲೀಸರನ್ನು ಉಲ್ಲೇಖಿಸಿ ಅಧಿಕಾರಿಗಳು ತಿಳಿಸಿದ್ದಾರೆ.
ರೈಲ್ವೆಯು ಒಳಗೊಂಡಿರುವ ಎರಡು ರೈಲುಗಳನ್ನು ವಿಶಾಖಪಟ್ಟಣಂ-ಪಲಾಸ ಪ್ಯಾಸೆಂಜರ್ ರೈಲು ಸಂಖ್ಯೆ 08532 ಮತ್ತು ವಿಶಾಖಪಟ್ಟಣಂ-ರಾಯಗಡ ಪ್ಯಾಸೆಂಜರ್ ಸಂಖ್ಯೆ 08504 ನಡುವೆ ಅಪಘಾತ ಸಂಭವಿಸಿದೆ.

ರಾತ್ರಿ 7 ಗಂಟೆ ಸುಮಾರಿಗೆ ಪಲಾಸಕ್ಕೆ ತೆರಳುತ್ತಿದ್ದ ರೈಲಿಗೆ ಡಿಕ್ಕಿ ಹೊಡೆದಿದ್ದು, ರಾಯಗಡಕ್ಕೆ ತೆರಳುತ್ತಿದ್ದ ರೈಲು ಸಿಗ್ನಲ್ ಜಂಪ್ ಮಾಡಿರುವ ಸಾಧ್ಯತೆಯಿರುವ ಕಾರಣ ಮಾನವ ದೋಷದಿಂದ ಅವಘಡ ಸಂಭವಿಸಿರಬಹುದು ಎಂದು ಅಂದಾಜಿಸಲಾಗಿದೆ.
ರಾತ್ರಿ 7.10ರ ಸುಮಾರಿಗೆ ಅಪಘಾತ ಸಂಭವಿಸಿದೆ ಎಂದು ವಾಲ್ಟೇರ್ ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಸೌರಭ್ ಪ್ರಸಾದ್ ತಿಳಿಸಿದ್ದಾರೆ. "ವಿಶಾಖಪಟ್ಟಣಂ-ಪಲಾಸ ರೈಲು ಕೋತವಲಸ ಬ್ಲಾಕ್‌ನ ಅಲಮಂಡ ಮತ್ತು ಕಂಟಕಪಲ್ಲಿ ರೈಲು ನಿಲ್ದಾಣಗಳ ನಡುವಿನ ಹಳಿಯಲ್ಲಿ ಕಾಯುತ್ತಿದ್ದಾಗ ಡಿಕ್ಕಿ ಸಂಭವಿಸಿದೆ." ಎಂದು ಮಾಹಿತಿ ನೀಡಿದ್ದಾರೆ.
ಅಪಘಾತದಿಂದಾಗಿ ಎರಡನೇ ರೈಲಿನ ನಾಲ್ಕು ಬೋಗಿಗಳು ಪಕ್ಕದ ಹಳಿಯಲ್ಲಿ ಹಳಿ ತಪ್ಪಿದವು. ಬೋಗಿಗಳು ವಿದ್ಯುತ್ ತಂತಿ ಮೇಲೆ ಬಿದ್ದ ಪರಿಣಾಮ, ಅಪಘಾತದ ಸ್ಥಳದಲ್ಲಿ ವಿದ್ಯುತ್ ಪೂರೈಕೆ ಸ್ಥಗಿತ ಮಾಡಲಾಗಿದ್ದು ಕತ್ತಲೆ ಆವರಿಸಿತು, ಇದು ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಯಿತು. ರೈಲ್ವೆ ಅಧಿಕಾರಿಗಳ ಪ್ರಕಾರ, ಎರಡೂ ರೈಲುಗಳು ತಲಾ 14 ಬೋಗಿಗಳನ್ನು ಹೊಂದಿದ್ದವು.
ಅಪಘಾತದ ಬಳಿಕ ಹಳಿಗಳ ಮೇಲೆ ರೈಲು ಬೋಗಿಗಳು ಬಿದ್ದ ಪರಿಣಾಮ ಕನಿಷ್ಠ 13 ರೈಲುಗಳನ್ನು ರದ್ದುಗೊಳಿಸಲಾಗಿದೆ, ಬೇರೆಡೆಗೆ ತಿರುಗಿಸಲಾಗಿದೆ ಅಥವಾ ಕೊನೆಗೊಳಿಸಲಾಗಿದೆ ಎಂದು ರೈಲ್ವೆ ಇಲಾಖೆ ಮಾಹಿತಿ ನೀಡಿದೆ.
ಸಹಾಯವಾಣಿ ಸ್ಥಾಪನೆ
ಭಾನುವಾರ ರಾತ್ರಿ, ವಿಜಯನಗರ ಜಿಲ್ಲಾಧಿಕಾರಿ ಎಸ್ ನಾಗಲಕ್ಷ್ಮಿ ಅವರು ಅಪಘಾತ ವರದಿಯಾದ ಕೆಲವೇ ನಿಮಿಷಗಳಲ್ಲಿ ರಕ್ಷಣಾ ತಂಡಗಳ ಜೊತೆ ಧಾವಿಸಿದರು. ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಟೋಲ್‌ಫ್ರೀ ಸಂಖ್ಯೆ 9493589157 ನೊಂದಿಗೆ ಕಂಟ್ರೋಲ್ ರೂಂ ಅನ್ನು ಸ್ಥಾಪಿಸಲಾಗಿದೆ ಎಂದು ಅವರು ಹೇಳಿದರು, ವಿಚಾರಣೆ ಮಾಡಲು ರೈಲ್ವೆ ಸಹಾಯವಾಣಿ ಸಂಖ್ಯೆ 8978080006 ಸಹ ಲಭ್ಯವಿದೆ ಮತ್ತು ಎಂಟು ಆಂಬ್ಯುಲೆನ್ಸ್‌ಗಳನ್ನು ನಿಯೋಜನೆ ಮಾಡಲಾಗಿದೆ.
ಆಂಧ್ರಪ್ರದೇಶದ ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ಘಟನೆಯ ಬಗ್ಗೆ ಆಘಾತ ವ್ಯಕ್ತಪಡಿಸಿದ್ದಾರೆ ಮತ್ತು ತುರ್ತು ಪರಿಹಾರ ಕ್ರಮಗಳನ್ನು ಜಾರಿಗೆ ತರಲು ಜಿಲ್ಲಾ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಘಟನೆ ಬಗ್ಗೆ ಮಾಹಿತಿ ಪಡೆದ ಪ್ರಧಾನಿ ಮೋದಿ
ಘಟನೆ ಬಗ್ಗೆ ಮಾತನಾಡಿದ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ, ಪ್ರಧಾನಿ ನರೇಂದ್ರ ಮೋದಿ ಅವರು ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ ಎಂದು ಹೇಳಿದರು.
"ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿವೆ, ಎಲ್ಲರನ್ನೂ ರಕ್ಷಿಸಲಾಗಿದೆ ಮತ್ತು ತಂಡಗಳನ್ನು ಸಜ್ಜುಗೊಳಿಸಲಾಗಿದೆ. ಪ್ರಧಾನಿ ಮೋದಿ ಪರಿಸ್ಥಿತಿಯನ್ನು ಪರಿಶೀಲಿಸಿದ್ದಾರೆ. ನಾನು ಆಂಧ್ರಪ್ರದೇಶ ಸಿಎಂ ಜೊತೆ ಮಾತನಾಡಿದ್ದೇನೆ. ಪ್ರಸ್ತುತ ಪರಿಸ್ಥಿತಿ ನಿಯಂತ್ರಣದಲ್ಲಿದೆ" ಎಂದು ವೈಷ್ಣವ್ ಹೇಳಿದ್ದಾರೆ.












Click it and Unblock the Notifications