Pawan Kalyan vs Udhayanidhi Stalin: ಈ ಕಾರಣಕ್ಕೆ ಶುರುವಾಯ್ತು ಆಂಧ್ರ - ತಮಿಳುನಾಡು ಡಿಸಿಎಂಗಳ ಫೈಟ್
ಆಂಧ್ರಪ್ರದೇಶ ಹಾಗೂ ತಮಿಳುನಾಡಿನ ಡಿಸಿಎಂಗಳ ನಡುವೆ ಹೊಸ ಫೈಟ್ ಶುರುವಾಗಿದೆ. ನಟ ಹಾಗೂ ಆಂಧ್ರಪ್ರದೇಶದ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಹಾಗೂ ತಮಿಳುನಾಡಿನ ಉಪ ಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್‌ನ ನಡುವೆ ಸನಾತನ ಧರ್ಮದ ಟಾಕ್ ಫೈಟ್ ಶುರುವಾಗಿದೆ. ತಮಿಳುನಾಡಿನ ಉಪ ಮುಖ್ಯಮಂತ್ರಿಯಾಗಿ ಈಚೆಗಷ್ಟೇ ಉದಯನಿಧಿ ಸ್ಟಾಲಿನ್ ಅಧಿಕಾರ ಸ್ವೀಕರಿಸಿದ್ದಾರೆ. ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ತಮಿಳುನಾಡಿನಲ್ಲಿ ಅಧಿಕಾರದಲ್ಲಿ ಇದೆ. ತಮಿಳುನಾಡಿನ ಮುಖ್ಯಮಂತ್ರಿ ಹಾಗೂ ಡಿಎಂಕೆ ಮುಖ್ಯಸ್ಥ ಎಂ.ಕೆ ಸ್ಟಾಲಿನ್ ಆಗಿದ್ದಾರೆ. ಎಂ.ಕೆ ಸ್ಟಾಲಿನ್ ಅವರ ಪುತ್ರ ಉದಯನಿಧಿ ಸ್ಟಾಲಿನ್..
ತಮಿಳುನಾಡು ಕುಟುಂಬ ರಾಜಕೀಯಕ್ಕೆ ಫೇಮಸ್ ಆಗಿದೆ. ಅದರಲ್ಲೂ ತಮಿಳುನಾಡಿನ ಡಿಎಂಕೆ ಪಾರ್ಟಿಯ ಹಲವು ತಲೆಮಾರಿನಿಂದ ಅಧಿಕಾರವನ್ನು ಅನುಭವಿಸುತ್ತಿದೆ. ಈ ಹಿಂದೆ ಎಂ. ಕರುಣಾನಿಧಿ ಅವರು ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದರು. ಅವರ ಸರ್ಕಾರದಲ್ಲಿ ಎಂ.ಕೆ ಸ್ಟಾಲಿನ್ ಅವರು ತಮಿಳುನಾಡಿನ ಮೊದಲ ಉಪ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು.

ಇದೀಗ ಎಂ.ಕೆ ಸ್ಟಾಲಿನ್ ಅವರು ಅಧಿಕಾರದಲ್ಲಿದ್ದು, ಐದು ವರ್ಷದ ಒಳಗೆ ಉದಯನಿಧಿ ಸ್ಟಾಲಿನ್‌ಗೆ ಸಚಿವ ಸ್ಥಾನ ಹಾಗೂ ಉಪ ಮುಖ್ಯಮಂತ್ರಿಯಂತಹ ಉನ್ನತ ಹುದ್ದೆಗಳು ಸಿಕ್ಕಿವೆ. ಉದಯನಿಧಿ ಸ್ಟಾಲಿನ್ ಅವರನ್ನು ಉಪ ಮುಖ್ಯಮಂತ್ರಿ ಮಾಡಿರುವುದಕ್ಕೆ ವಿರೋಧ ಪಕ್ಷಗಳು ಹಾಗೂ ತಮಿಳುನಾಡಿನ ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ.
ಉದಯನಿಧಿ ಸ್ಟಾಲಿನ್ ಅವರು ಪ್ರಮಾಣ ವಚನ ಸ್ವೀಕರಿಸುವ ಸಂದರ್ಭದಲ್ಲಿ ತಮಿಳುನಾಡಿನಲ್ಲಿ "ಅನ್‌ಫಿಟ್ ಎನ್ನುವ ನಾನು" ಎನ್ನುವ ವಾಕ್ಯವು ಟ್ವಿಟ್ಟರ್‌ನಲ್ಲಿ ಭಾರೀ ಟ್ರೆಂಡ್ ಆಗಿತ್ತು. ಈಗಲೂ ಅವರ ಬಗ್ಗೆ ತಮಿಳುನಾಡಿನಲ್ಲಿ ಅಸಮಾಧಾನ ಇದೆ (ಏಕಾಏಕಿ ಉನ್ನತ ಹುದ್ದೆಗೆ ನೇಮಕವಾಗಿರುವುದು). ಈ ನಡುವೆ ಆಂಧ್ರ ಪ್ರದೇಶದ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರು ತಮಿಳುನಾಡಿನ ಉಪ ಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಅವರನ್ನು ಗುರಿಯಾಗಿಸಿಕೊಂಡು ನೀಡಿರುವ ಹೇಳಿಕೆಯು ಉದಯ ನಿಧಿ ಸ್ಟಾಲಿನ್‌ಗೆ ಮೈಲೇಜ್ ತಂದು ಕೊಡುತ್ತಾ ಎನ್ನುವ ಪ್ರಶ್ನೆ ಮೂಡಿದೆ. ಅದಕ್ಕೂ ಕಾರಣವಿದೆ.

ಪವನ್ ಕಲ್ಯಾಣ್ ಗುಡುಗು: ನಟ ಹಾಗೂ ಆಂಧ್ರಪ್ರದೇಶದ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರು, ಇತ್ತೀಚಿನ ದಿನಗಳಲ್ಲಿ ಸನಾತನ ಧರ್ಮದ ಬಗ್ಗೆ ಹೆಚ್ಚು ಮಾತನಾಡುತ್ತಿದ್ದಾರೆ. ಬದ್ಧತೆಯನ್ನೂ ಪ್ರದರ್ಶಿಸುತ್ತಿದ್ದಾರೆ. ತಿರುಪತಿ ಲಡ್ಡು ವಿವಾದದ ನಂತರದಲ್ಲಿ ಪವನ್ ಕಲ್ಯಾಣ್ ಅವರು ನೀಡಿರುವ ಹೇಳಿಕೆಗಳು ನ್ಯಾಷನಲ್ ಲೆವೆಲ್‌ನಲ್ಲಿ ಚರ್ಚೆಯಾಗುತ್ತಿದೆ.
ಈಚೆಗೆ ಸನಾತನ ಧರ್ಮದ ಬಗ್ಗೆ ತಮಿಳುನಾಡಿನಲ್ಲಿ ತಮಿಳುನಲ್ಲೇ ಗುಡುಗಿದ್ದ ಪವನ್ ಕಲ್ಯಾಣ್ ಅವರು, ನಮ್ಮ ಸನಾತನ ಧರ್ಮವನ್ನು ಯಾರಿಂದಲೂ ನಿರ್ನಾಮ ಮಾಡಲು ಸಾಧ್ಯವಿಲ್ಲ. ಆದರೆ, ಈ ರೀತಿ ಹೇಳಿಕೆಗಳು ನೀಡುವವರನ್ನು ನಿರ್ಮೂಲನೆ ಮಾಡಬೇಕು ಎಂದು ಹೆಸರು ಉಲ್ಲೇಖಿಸದೆ ಉದಯನಿಧಿ ಸ್ಟಾಲಿನ್ ವಿರುದ್ಧ ಗುಡುಗಿದ್ದರು. ಇದರ ಬೆನ್ನಲ್ಲೇ ತಮಿಳುನಾಡು ಹಾಗೂ ಆಂಧ್ರ ರಾಜಕಾರಣಿಗಳು ಸಹ ಕೆಲವು ಸ್ಟೇಟ್‌ಮೆಂಟ್ಸ್ ಕೊಡುತ್ತಿದ್ದಾರೆ.
ಉದಯನಿಧಿ ಟಾಂಗ್: ಪವನ್ ಕಲ್ಯಾಣ್ ಮಾತಿಗೆ ಇದೇ ಸಂದರ್ಭದಲ್ಲಿ ಉದಯನಿಧಿ ಸ್ಟಾಲಿನ್ ಅವರೂ ಟಾಂಗ್ ಕೊಟ್ಟಿದ್ದಾರೆ. ಕಾದು ನೋಡಿ ಅವಸರವೇಕೆ ಎಂದಷ್ಟೇ ಹೇಳಿದ್ದಾರೆ. ಈ ಹಿಂದೆ ಉದಯನಿಧಿ ಸ್ಟಾಲಿನ್ ಅವರು (ಲೋಕಸಭೆ ಚುನಾವಣೆಗೂ ಪೂರ್ವ) ಸನಾತನ ಧರ್ಮ ಎನ್ನುವುದು ಸಾಂಕ್ರಾಮಿಕ ರೋಗವಾಗಿದೆ. ಅದನ್ನು ಭಾರತದಲ್ಲಿ ಬುಡಸಮೇತ ಕಿತ್ತು ಬಿಸಾಕಬೇಕು ಎಂದು ಹೇಳಿದ್ದರು.
ಇದು ರಾಷ್ಟ್ರೀಯ ಮಟ್ಟದಲ್ಲಿ ಭಾರೀ ವಿರೋಧಕ್ಕೆ ಕಾರಣವಾಗಿತ್ತು. ಅಲ್ಲದೇ ಇಂಡಿಯಾ ಮೈತ್ರಿಕೂಟ ಹಾಗೂ ಕಾಂಗ್ರೆಸ್‌ಗೂ ಇದರಿಂದ ಡ್ಯಾಮೇಜ್ ಆಗಿತ್ತು. ಇದನ್ನೇ ಅಸ್ತ್ರವನ್ನಾಗಿ ಇರಿಸಿಕೊಂಡಿದ್ದ ಬಿಜೆಪಿಯು ಹಿಂದೂ ಧರ್ಮದ ಬಗ್ಗೆ ಕಾಂಗ್ರೆಸ್‌ಗೆ ಇರುವ ಬದ್ಧತೆಯನ್ನು ಪ್ರಶ್ನೆ ಮಾಡಿತ್ತು. ಇದೀಗ ಪವನ್ ಕಲ್ಯಾಣ್ ಅವರು ಉದಯನಿಧಿಗೆ ಟಾಂಗ್ ಕೊಟ್ಟಿದ್ದಾರೆ. ಉದಯನಿಧಿ ಪೊಲಿಟಿಕಲ್ ಆಗಿ ಉನ್ನತ ಹುದ್ದೆಗೇರಿದರೂ ತಮಿಳುನಾಡಿನಲ್ಲಿ ಮೈಲೇಜ್ (ಪ್ರಚಾರ) ಕಡಿಮೆ ಇದೆ. ಹೀಗಾಗಿ, ಇದೇ ಹೇಳಿಕೆಯನ್ನು ಇಟ್ಟುಕೊಂಡು ಪವನ್‌ಗೆ ಟಾಂಗ್ ಕೊಟ್ಟು ಮೈಲೇಜ್ ಹೆಚ್ಚಿಸಿಕೊಳ್ಳುತ್ತಾರೆಯೇ ಎನ್ನುವ ಕುತೂಹಲ ಹೆಚ್ಚಾಗಿದೆ.











Click it and Unblock the Notifications